
ದಾಸರೆಂದರೆ ದಾಸರು, ಮಹಾಕವಿ ಎಂದರೆ ಮಹಾಕವಿ.. ಇವರು ಕನಕದಾಸರು. ಕನ್ನಡ ಸಾಹಿತ್ಯದಲ್ಲಿ ಮುಂಡಿಗೆ (ಒಗಟು) ಎಂಬ ವಿಶಿಷ್ಟ ಪ್ರಕಾರವನ್ನು ಜನಪ್ರಿಯಗೊಳಿಸಿದ ಕನಕದಾಸರು ಭತ್ತ-ರಾಗಿಯ ಸಂವಾದ ರೂಪದಲ್ಲಿ ಷಟ್ಪದಿ ಕಾವ್ಯವೊಂದನ್ನು ಬರೆದು, ಜಾತಿ ಸಂವಾದಕ್ಕೆ ಬಹುಹಿಂದೆಯೇ ಚಾಲನೆ ಕೊಟ್ಟಿದ್ದರು. ಇವರ ಬಹುತೇಕ ಕೀರ್ತನೆಗಳು ಅಧ್ಯಾತ್ಮದ ನೆಲೆಗಟ್ಟಿನಲ್ಲಿ ಸಾಮಾಜಿಕ ನಡವಳಿಕೆಗಳನ್ನು ವಿಮರ್ಶೆ ಮಾಡಿರುವುದು ವಿಶೇಷ.
ಇವತ್ತು ಬೆಳಗ್ಗೆ ಫೇಸ್ಬುಕ್ ಸ್ಕ್ರಾಲ್ ಮಾಡುವಾಗ ಸವಿತಾ ನಾಗಭೂಷಣ ಅವರು ಬರೆದ ಕವಿತೆಯೊಂದು ಕಣ್ಣಿಗೆ ಬಿತ್ತು.
ಕುಲದ ನೆಲೆಯಿಲ್ಲ…ಕಾಲದ ಹಂಗಿಲ್ಲ
ಕನಕ ಮಣ್ಣಾದ ಕೃಷ್ಣ ಕಲ್ಲಾದ
ಇದೊಂದು ಕಲ್ಲು ಮಣ್ಣಿನ ಕತೆ ಹೆಚ್ಚೇನಿಲ್ಲ..
ಎಂಬ ಕವಿಯ ಸಾಲುಗಳನ್ನು ಧಾರವಾಡದ ಕವಿ, ಲೇಖಕ ರಾಜಕುಮಾರ್ ಮಡಿವಾಳರ ಶೇರ್ ಮಾಡಿಕೊಂಡಿದ್ದರು.
ಕೃಷ್ಣ ಕಲ್ಲಾದ ಅಂದರೆ ಅವ ದೇವರು. ಕನಕ ಮಣ್ಣಾದ ಅಂದರೆ ಮಣ್ಣು ಜೀವಂತಿಕೆ. ಕನಕದಾಸರ ಬದುಕಿನ ಸಾರವೇ ಅದು ಎನ್ನುವುದು ರಾಜಕುಮಾರ್ ಮಡಿವಾಳರ ಪ್ರತಿಕ್ರಿಯೆ.
ಕನಕದಾಸರು ವಿಶ್ವ ಮಾನವ. ಅವರು ವಿಶ್ವಕ್ಕೇ ಬೇಕಾದವರು. ಆದರೆ ನಾವು ಇಂದು ಅವರನ್ನು ಒಂದು ಫ್ರೇಮ್ನಲ್ಲಿ ಕಟ್ಟಿಹಾಕಿದ್ದೇವೆ. ಜಾತಿಯನ್ನು ಮೀರಿ ಬೆಳೆದ ವ್ಯಕ್ತಿಯೊಬ್ಬನನ್ನು ಇವ ನಮ್ಮವ ಎಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಿದಾಗ ಆತ ಒಂದು ಜಾತಿಗೆ ಮಾತ್ರ ಸೀಮಿತ ಆಗಿ ಬಿಡುತ್ತಾನೆ.
ಕನಕದಾಸರು ಭಕ್ತಿಯಿಂದ ಉಡುಪಿ ಕೃಷ್ಣನನ್ನು ಕೂಗಿದಾಗ ಭಗವಂತನೇ ಅವರ ಕರೆಗೆ ಓಗೊಟ್ಟು ತಿರುಗಿ ದರುಶನ ಕೊಟ್ಟ ಎಂಬುದನ್ನು ನಾವು ಕೇಳಿದ್ದೇವೆ. ಭಗವಂತನ ದರುಶನ ಪಡೆದ ಆ ಮಹಾನ್ ಚೇತನವನ್ನು ನಾವು ಇಂದು ಜಾತಿಯ ಹೆಸರು ಹೇಳಿ ಗುರುತಿಸುತ್ತಿರುವುದು ವಿಪರ್ಯಾಸ. ಕನಕದಾಸರು ‘ದೀನ ನಾನು’ ಎಂದು ಹೇಳಿದರೇ ಹೊರತು ನಾನು ಇಂಥಾ ಜಾತಿಯವನು ಎಂದು ಹೇಳಿಲ್ಲ. ಆಧ್ಯಾತ್ಮದಲ್ಲಿ ಎಲ್ಲರೂ ದೀನರೇ. ವಿಶ್ವಮಾನವರಾಗಿ ಬೆಳೆದ ವ್ಯಕ್ತಿಯನ್ನು ಜಾತಿ ಗುರುತಿಸಿ ಸ್ಮರಿಸುವುದು ನಮ್ಮ ಸಣ್ಣತನ ಎಂದು ಅವರು ಅಭಿಪ್ರಾಯಪಟ್ಟರು.
ಪ್ರೇರಣೆಯಾಗಲಿ ಸಾತ್ವಿಕತೆ
ತುಮಕೂರಿನಲ್ಲಿ ಭಾವಾಲಯ ಸಂಗೀತ ಸಂಸ್ಥೆಯ ಕಾರ್ಯದರ್ಶಿಯಾಗಿರುವ ನಾಗೇಂದ್ರ ವೈಯಕ್ತಿಕವಾಗಿ ಕನಕದಾಸರ ಅಭಿಮಾನಿ.
ಕನಕದಾಸರ ಜಯಂತಿ ಪ್ರಯುಕ್ತ ಆಚರಿಸುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಕುರುಬ ಸಮುದಾಯಕ್ಕೆ ಅನುದಾನ ಕೊಟ್ಟಿರುವ/ಕೊಡುವ ಬಗ್ಗೆ ಮಾತನಾಡುತ್ತಾರೆಯೇ ಹೊರತು ಕನಕದಾಸರು ಸಾರಿದ ಮಹತ್ವದ ಸಂದೇಶಗಳ ಬಗ್ಗೆ ಅಲ್ಲ. ಕನಕದಾಸರ ಕೀರ್ತನೆಗಳನ್ನು ಹಾಡಿಸುವ ಬದಲು ಅವರ ಸಿನಿಮಾದಲ್ಲಿ ಬಳಕೆಯಾಗಿರುವ ಅವರ ಕೃತಿಗಳ ಗಾಯನಗಳನ್ನು ಹಾಡಿಸುತ್ತಾರೆ. ಅಂದರೆ ಕನಕದಾಸ ಜಯಂತಿ ಸಾಂಕೇತಿಕ ಆಚರಣೆಯಾಗಿಯೇ ನಡೆದುಬರುತ್ತಿದೆ. ಕನಕದಾಸರ ಸಾತ್ವಿಕತೆ ಮತ್ತು ಭಕ್ತಿಭಾವಗಳು ನಮಗೆ ಪ್ರೇರಣೆಯಾಗಬೇಕೇ ಹೊರತು, ಅವರು ಯಾವ ಜಾತಿಯಲ್ಲಿ ಹುಟ್ಟಿದವರು ಎನ್ನುವುದಲ್ಲ ಎನ್ನುವುದು ಅವರ ಮನದ ಮಾತು.
ಕನಕದಾಸರ ಗುರುಗಳು ವ್ಯಾಸತೀರ್ಥರು ತಾಮ್ರದ ತಂಬಿಗೆಯೊಂದನ್ನು ತೊಳೆದುಕೊಂಡು ಬರಲು ಹೇಳಿದಾಗ ಇತರ ಶಿಷ್ಯರು ತೊಳೆದ ತಂಬಿಗೆ ಮೇಲ್ಗಡೆ ಹೊಳೆಯುತ್ತಿತ್ತು. ಕನಕದಾಸರು ತೊಳೆದುಕೊಂಡು ಬಂದ ತಂಬಿಗೆ ಹೊಳೆಯುತ್ತಿರಲಿಲ್ಲ. ಕನಕ ಸರಿಯಾಗಿ ತೊಳೆದಿರಲಿಕ್ಕಿಲ್ಲ ಎಂದು ಇತರ ಶಿಷ್ಯರು ಅಂದುಕೊಂಡರೆ, ಕನಕ ತೊಳೆದ ತಂಬಿಗೆ ಒಳಗಡೆ ಸ್ವಚ್ಛವಾಗಿತ್ತು. ಅಂದರೆ ಹೊರಗೆ ಮಾತ್ರ ಹೊಳೆಯುವುದಕ್ಕಿಂತ ಎಲ್ಲ ಕಡೆ ಸ್ವಚ್ಛವಾಗಿರಬೇಕು ಎಂಬ ಸಂದೇಶವನ್ನು ಕನಕದಾಸರು ಇಲ್ಲಿ ಸಾರಿದ್ದರು.
ಆದರೆ ಈಗ ಕನಕ ಜಯಂತಿ ಅಂದರೆ ರಜಾ ದಿನ. ವಿದ್ಯಾಲಯಗಳಲ್ಲಿ ಕನಕದಾಸರ ಫೋಟೊವನ್ನು ಧೂಳು ಒರೆಸಿ ಇಡಲಾಗುತ್ತದೆಯೇ ಹೊರತು ಅವರ ತತ್ವಗಳನ್ನು ಮಕ್ಕಳಿಗೆ ಬೋಧನೆ ಮಾಡುವುದಿಲ್ಲ. ವರ್ಷದಲ್ಲಿ ಒಂದು ದಿನ, ಒಂದರ್ಧ ಗಂಟೆಯಾದರೂ ಮಕ್ಕಳಿಗೆ ಕನಕದಾಸರ ಕೀರ್ತನೆ, ತತ್ವಗಳ ಬಗ್ಗೆ ಹೇಳಿಕೊಡುವ ಕಾರ್ಯಗಳು ನಡೆಯುವುದಿಲ್ಲ. ಹೀಗಿರುವಾಗ ಮುಂದಿನ ಪೀಳಿಗೆಗೆ ಕನಕದಾಸರ ಮಹತ್ವದ ಅರಿವು ಹೇಗೆ ಬರುತ್ತದೆ ಎಂದು ಪ್ರಶ್ನಿಸುತ್ತಾರೆ ಅವರು.
ನಾವೆಷ್ಟು ಅಳವಡಿಸಿಕೊಂಡಿದ್ದೇವೆ
ಆತ್ಮ ಯಾವ ಕುಲ ಜೀವ ಯಾವ ಕುಲ | ತತ್ವೇಂದ್ರಿಯಗಳ ಕುಲ ಪೇಳಿರಯ್ಯ | ಆತ್ಮಾಂತಾರಾತ್ಮ ನೆಲೆಯಾದಿ ಕೇಶವ | ಆತನೊಲಿದ ಮೇಲೆ ಯಾತರ ಕುಲವಯ್ಯಾ… ಎಂದ ಹೇಳಿದ ದಾಸ ಸಾಹಿತ್ಯದ ಮಹಾನ್ ಚೇತನ ಕನಕದಾಸರು. ಹಿಂದೆ ಕನಕದಾಸರು ಎಂದ ಕೂಡಲೇ ಅವರ ಕೇಶವ ಭಕ್ತಿ, ಕೀರ್ತನೆಗಳು ನಮ್ಮ ಕಣ್ಣಮುಂದೆ ಬರುತ್ತಿದ್ದವು. ಕುಲದ ನೆಲೆಯನೇನಾದರೂ ಬಲ್ಲಿರಾ ಎಂದು ಗುಣ ಮುಖ್ಯವೇ ಹೊರತು ಕುಲವಲ್ಲ ಎಂಬ ನೀತಿ ನೆನಪಾಗುತ್ತಿತ್ತು. ಆದರೆ ಈಗ ಕನಕದಾಸ ಜಯಂತಿ ಅಂದರೆ ರಜಾ ದಿನ ಮಾತ್ರ ಎನ್ನುವಂತಾಗಿರುವುದು ವಿಪರ್ಯಾಸ.
ಹೃದಯ ಹೊಲವನು ಮಾಡಿ | ತನುವ ನೇಗಿಲು ಮಾಡಿ | ನಾಲಗೆಯ ಕೊರಿಗೆ ಮಾಡಿ | ಬಿತ್ತಿರಯ್ಯ… ಎಂದು ನೈತಿಕ ಮೌಲ್ಯಗಳನ್ನು ಹೇಳಿಕೊಟ್ಟ ಮಹಾನ್ ಸಂತ ಕನಕದಾಸರನ್ನು ನಾವು ಜಯಂತಿ ಆಚರಣೆಗೆ ಮಾತ್ರ ನೆನಪಿಸಿಕೊಳ್ಳುತ್ತಿರುವುದು ದುರದೃಷ್ಟಕರ.
ಕನಕದಾಸರ ಜಯಂತಿ ಆಚರಣೆ ಎಂದ ಕೂಡಲೇ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ತತ್ವಪದ, ಕೀರ್ತನೆಯ ಸಾಲುಗಳೊಂದಿಗೆ ಶುಭಾಶಯ ಪೋಸ್ಟ್ಗಳು ಹರಿದಾಡುತ್ತವೆ. ಆದರೆ ಈ ಸಾಲುಗಳನ್ನು ನಾವು ಸರಿಯಾಗಿ ಅರ್ಥೈಸಿಕೊಂಡಿದ್ದೇವೆಯೇ? ಅದನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಿದ್ದೇವೆಯೇ ಎಂಬುದಕ್ಕೆ ನಮ್ಮಲ್ಲಿ ಉತ್ತರವಿಲ್ಲ.
ಕನಕದಾಸರನ್ನು ಜಾತಿ, ರಾಜಕಾರಣದ ದೃಷ್ಟಿಯಿಂದ ಮಾತ್ರ ಗುರುತಿಸುವ ಕಾಲಘಟ್ಟದಲ್ಲಿ ನಾವು ಬದುಕುತ್ತಿದ್ದೇವೆ. ತಾವು ಕಂಡದ್ದನ್ನು, ಅನುಭವಕ್ಕೆ ದಕ್ಕಿದ್ದನ್ನು ಅಭಿವ್ಯಕ್ತಿಪಡಿಸುತ್ತಾ ಸಾರಿದ ಕನಕದಾಸರ ಸಂದೇಶಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆದಿವೆ.
ಜಾತಿ, ಪ್ರದೇಶ, ಭಾಷೆಗೆ ಸೀಮಿತವಾಗದೆ ವಿಶ್ವಮಾನವರಾಗಿ ಬೆಳೆದು ನಿಂತ ಅವರನ್ನು ನಾವು ಯಾವ ರೀತಿ ಹೈಜಾಕ್ ಮಾಡಿಕೊಂಡಿದ್ದೇವೆ ಎಂಬುದಕ್ಕೆ ಜಯಂತಿ ಆಚರಣೆ ನೆಪದಲ್ಲಿ ರಜೆ ಘೋಷಣೆ ಮಾಡಿರುವುದೇ ನಿದರ್ಶನ.
-ರಶ್ಮಿ
ಕನಕ ಗುರು ಸ್ವಾಮೀಜಿ ವಾಕ್ ಕ್ರಾಂತಿ! ಸೂರ್ಯ ದಿಕ್ಕು ಬದಲಿಸುವ ದಿನ.. ಕುರುಬರ ದಿಕ್ಕು ಬದಲಿಸಲು ಪಣ