ಕರ್ನಾಟಕದಿಂದ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಅನೇಕ ಶಾಸಕರು ಮತ್ತು ಸಚಿವರುಗಳ ನಿಕಟ ಸಂಬಂಧಿಕರು ಸ್ಪರ್ಧೆಗೆ ಇಳಿದಿದ್ದಾರೆ. ಹಾಲಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಗಾಗಿ ಭಾರೀ ಕಿತ್ತಾಟ ನಡೆದಿದ್ದು, ಭಾರತೀಯ ಜನತಾ ಪಕ್ಷದ ವರಿಷ್ಠರಿಗೆ ಟಿಕೆಟ್ ಹಂಚಿಕೆ ಇನ್ನೂ ಕಾಡತೊಡಗಿತ್ತಿದೆ. ಆದರೆ ಅದೇ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ವಿಭಿನ್ನ ರೀತಿಯ ಸಮಸ್ಯೆ ಎದುರಿಸುತ್ತಿರುವಂತೆ ಕಂಡುಬಂದಿದೆ. ಸಾಮಾನ್ಯ ಅಭ್ಯರ್ಥಿಗಳು ಯಾರೂ ಟಿಕೆಟ್ ಕೇಳಿಕೊಂಡು ಮುಂದೆಬಂದಿಲ್ಲ. ಸೋಲುವ ಯುದ್ಧದಲ್ಲಿ ಬಡಿದಾಡುವುದುರ ಫಲವೇನು ಎಂಬ ಲೆಕ್ಕಾಚಾರ ಹಾಕಿ ಕಣಕ್ಕೆ ಇಳಿಯದೆ, ದೂರ ಸರಿದಿದ್ದಾರೆ. ಆ ಒಂದು ಮೇಲ್ವರ್ಗ ಅಂದರೆ ಶಾಸಕರು ಮತ್ತು ಸಚಿವರುಗಳ ನಿಕಟ ಸಂಬಂಧಿಕರು ಅದಮ್ಯ ಉತ್ಸಾಹದಿಂದ ಟಿಕೆಟ್ ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಬಹುಶಃ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಬಾಂಧವರು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರಬೇಕು.
ಅಂದರೆ ಕರ್ನಾಟಕದಿಂದ ಕಾಂಗ್ರೆಸ್‌ನ ಅಭ್ಯರ್ಥಿಗಳ ಪಟ್ಟಿಯು ರಾಜ್ಯ ಸಚಿವರು ಮತ್ತು ಶಾಸಕರ ಸಂಬಂಧಿಕರ ಹೆಸರನ್ನು ಒಳಗೊಂಡಿದೆ. ಇವರಲ್ಲಿ ಪುತ್ರರು, ಪುತ್ರಿಯರು, ಪತ್ನಿಯರು ಮತ್ತು ಸಮೀಪದ ಸಂಬಂಧಿಕರು ಇದ್ದಾರೆ. ಸುಮಾರು 20 ಮಂದಿ ‘ಕೌಟುಂಬಿಕ ಅಭ್ಯರ್ಥಿಗಳು’ 2024 ರ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಸರ್ಕಾರದಲ್ಲಿ ಸಕ್ರಿಯವಾಗಿರುವ, ಪ್ರಭಾವಿಯಾಗಿರುವ ಯಾವುದೇ ನಾಯಕರೊಂದಿಗೆ ಕೌಟುಂಬಿಕ ಸಂಪರ್ಕವನ್ನು ಹೊಂದಿದ್ದಾರೆ.
ಇದರರ್ಥ ಕರ್ನಾಟಕದ 28 ಲೋಕಸಭಾ ಅಭ್ಯರ್ಥಿಗಳ ಪೈಕಿ 18 ಅಭ್ಯರ್ಥಿಗಳು ಸ್ವಜನಪಕ್ಷಪಾತದ ಸಂಕೋಲೆಯೊಳಗೆ ಬಂಧಿಯಾಗಿ ಟಿಕೆಟ್ ಪಡೆದ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಆರೋಪವು ಈಗಾಗಲೇ ಕಾಂಗ್ರೆಸ್‌ನ ಇಮೇಜ್ ಅನ್ನು ಕಳಂಕಗೊಳಿಸಿದೆ.
ಹಾಲಿ ಶಾಸಕರು ಮತ್ತು ಸಚಿವರು ಯಾರೂ ಕಣಕ್ಕೆ ಇಳಿದು ತಮ್ಮ ಶಾಸಕ ಸ್ಥಾನಗಳನ್ನು ಬಿಟ್ಟುಕೊಡಲು ಅಥವಾ ಮಂತ್ರಿಗಿರಿ ಕಳೆದುಕೊಳ್ಳಲು ಬಯಸುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಹಾಗಾಗಿ ಅವರವರ ಕುಟುಂಬದ ಸದಸ್ಯರನ್ನು ನಾನಾ ಕ್ಷೇತ್ರಗಳಿಂದ ಕಣಕ್ಕಿಳಿಸಲು ಇದು ಒಂದು ಪ್ರಮುಖ ಕಾರಣವಾಗಿದೆ.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಸಹೋದರ, ಬೆಂಗಳೂರು ಗ್ರಾಮಾಂತರದಿಂದ ಹಾಲಿ ಸಂಸದ ಡಿ ಕೆ ಸುರೇಶ್ ಎಂದಿನಂತೆ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಇವರನ್ನು ಹೊರತುಪಡಿಸಿ ಇನ್ನೂ ಅನೇಕ ಅಭ್ಯರ್ಥಿಗಳು ಸಿಎಂ ಸಿದ್ದರಾಮಯ್ಯ ಸಂಪುಟದ ಹಾಲಿ ಸಚಿವರಿಗೆ ಸಂಬಂಧಿಗಳೇ ಆಗಿದ್ದಾರೆ. ಅವರ ಪಟ್ಟಿ ನೋಡಿದಾಗ:
1. ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಸ್ಪರ್ಧಿಸುತ್ತಿರುವ ಸೌಮ್ಯಾ ರೆಡ್ಡಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಪುತ್ರಿ.
2. ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿಯಿಂದ ಸ್ಪರ್ಧಿಸುತ್ತಿದ್ದಾರೆ. ಇವರು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ.
3. ಇತ್ತೀಚೆಗೆ ಬಿಜೆಪಿಗೆ ಮರಳಿದ ಕರ್ನಾಟಕದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ಬೆಳಗಾವಿಯಿಂದ ಲಕ್ಷ್ಮೀ ಹೆಬ್ಬಾಳ್ಕರ್ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ) ಪುತ್ರ ಮೃಣಾಲ್ ರವೀಂದ್ರ ಹೆಬ್ಬಾಳ್ಕರ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.
4. ಬೀದರ್ ಲೋಕಸಭಾ ಕ್ಷೇತ್ರದಿಂದ ಈಶ್ವರ ಖಂಡ್ರೆ ಪುತ್ರ ಸಾಗರ್ ಖಂಡ್ರೆ ಸ್ಪರ್ಧಿಸಿದ್ದಾರೆ. ಹಿರಿಯ ಖಂಡ್ರೆ ಅವರು ಅರಣ್ಯ, ಪರಿಸರ ಮತ್ತು ಪರಿಸರ ಸಚಿವರಾಗಿದ್ದಾರೆ.
5. ಬಾಗಲಕೋಟೆ ಅಭ್ಯರ್ಥಿ ಸಂಯುಕ್ತಾ ಎಸ್ ಪಾಟೀಲ್, ಶಿವಾನಂದ ಪಾಟೀಲ್ ಅವರ ಪುತ್ರಿ. ಶಿವಾನಂದ ಪಾಟೀಲ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವರು.
ಉಳಿದವರು ಕಂಡಂತೆ:
6. ತಮ್ಮ ಸಹೋದರಿ ಗೀತಾ ಶಿವರಾಜಕುಮಾರ್‌ಗಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಟ್ಟು ಹಿಡಿದು ಟಿಕೆಟ್ ಪಡೆದಿದ್ದಾರೆ. ಅಂದಹಾಗೆ ಗೀತಾ, ಮಧು ಅವರ ಸಹೋದರಿ ಮತ್ತು ಕನ್ನಡದ ಜನಪ್ರಿಯ ನಟ ಶಿವರಾಜಕುಮಾರ್ ಅವರ ಪತ್ನಿ.
7. ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಗುಲ್ಬರ್ಗ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಅವರ ಪುತ್ರ ಪ್ರಿಯಾಂಕ್ ಖರ್ಗೆ ಈಗಾಗಲೇ ಕರ್ನಾಟಕ ಸರ್ಕಾರದಲ್ಲಿ ಶಾಸಕ ಮತ್ತು ಸಚಿವರಾಗಿದ್ದಾರೆ.
8. ದಾವಣಗೆರೆಯ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್ ಅವರು ಗಣಿ ಮತ್ತು ಭೂವಿಜ್ಞಾನ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ.
9. ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪುಟ್ಟಸ್ವಾಮಿಗೌಡ ಅವರ ಮೊಮ್ಮಗ. ಪುಟ್ಟಸ್ವಾಮಿ ಅವರು ಈ ಹಿಂದೆ ಸಚಿವರಾಗಿದ್ದರು.
10. ಕೊಪ್ಪಳದಿಂದ ರಾಘವೇಂದ್ರ ಹಿಟ್ನಾಳ್ ಸಹೋದರ ರಾಜಶೇಖರ್ ಹಿಟ್ನಾಳ್ ಕಣಕ್ಕಿಳಿದಿದ್ದಾರೆ. ಹಿಟ್ನಾಳ್ ಪಕ್ಷದ ಶಾಸಕ.
11. ಆನಂದಸ್ವಾಮಿ ಗಡ್ಡದೇವರಮಠ ಅವರು ಮಾಜಿ ಶಾಸಕ ಜಿ ಎಸ್ ಗಡ್ಡದೇವರಮಠ ಅವರ ಪುತ್ರ. ಜಿ ಎಸ್ ಗಡ್ಡದೇವರಮಠ ಅವರು ಶಿರಟ್ಟಿ ಶಾಸಕರಾಗಿದ್ದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಆನಂದಸ್ವಾಮಿ ಹಾವೇರಿಯಿಂದ ಸ್ಪರ್ಧಿಸುತ್ತಿದ್ದಾರೆ.
12. ವೆಂಕಟರಾಮೇಗೌಡ (ಜನಪ್ರಿಯವಾಗಿ ಸ್ಟಾರ್ ಚಂದ್ರು ಎಂದು ಕರೆಯುತ್ತಾರೆ) ಕಾಂಗ್ರೆಸ್ ಶಾಸಕ ಶರತ್ ಬಚ್ಚೇಗೌಡ ಅವರ ಸಂಬಂಧಿ. ಸ್ಟಾರ್ ಚಂದ್ರು ಮಂಡ್ಯದಿಂದ ಕಣಕ್ಕಿಳಿದಿದ್ದಾರೆ.
13. ಬೆಂಗಳೂರು ಉತ್ತರ ಅಭ್ಯರ್ಥಿ ಪ್ರೊ. ರಾಜೇಗೌಡ ಈ ಹಿಂದೆ ರಾಜ್ಯಸಭಾ ಸಂಸದರಾಗಿದ್ದರು. ಅವರ ತಂದೆ ಎಂ ವಿ ವೆಂಕಟಪ್ಪ ಅವರು ಕರ್ನಾಟಕದಲ್ಲಿ ವಿಧಾನಸಭೆಯ ಸ್ಪೀಕರ್ ಮತ್ತು ವಿಧಾನ ಪರಿಷತ್ತಿನ ಅಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದರು.
14. ಬೆಂಗಳೂರು ಸೆಂಟ್ರಲ್ ಅಭ್ಯರ್ಥಿ ಮನ್ಸೂರ್ ಖಾನ್ ಅವರ ತಂದೆ ಮಾಜಿ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್. ಅವರು ನಗರದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ.
ಕಣಕ್ಕೆ ಇಳಿದಿರುವ ಮಂತ್ರಿಗಳು, ಶಾಸಕರ ನಿಕಟ ಸಂಬಂಧಿಗಳು ಹೊಸ ಮುಖಗಳಾಗಿದ್ದು, ಅವರನ್ನು ಪರಿಚಯಿಸಲು ಪಕ್ಷವು ಬಯಸಿದೆ. ‘ಗಟ್ಟಿಯಾದ ಹಿನ್ನೆಲೆಯುಳ್ಳ ಯುವ ನಾಯಕರಿಗೆ’ ಪಕ್ಷ ಮಣೆ ಹಾಕಿದೆ ಎಂದು ಹೇಳುವ ಮೂಲಕ ಸಚಿವರು ಮತ್ತು ಶಾಸಕರ ಸಂಬಂಧಿಕರಿಗೆ ಟಿಕೆಟ್ ನೀಡುವ ಕಾಂಗ್ರೆಸ್ ನಿರ್ಧಾರವನ್ನು ಕೆಪಿಸಿಸಿ ಅಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ತನ್ಮೂಲಕ ಇವರ ಗೆಲುವು ಖಚಿತವಾಗಿದ್ದು, ಈ ಬಾಬತ್ತಿನಿಂದಲೇ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಂದಾಜು 20 ಸೀಟುಗಳನ್ನು ಗೆಲ್ಲಲಿದೆ ಎಂಬುದು ಡಿಕೆಶಿ ಲೆಕ್ಕಾಚಾರವಾಗಿದೆ.
ಸಚಿವ ಸ್ಥಾನ ಕಳೆದುಕೊಳ್ಳಲು ಬಯಸುವುದಿಲ್ಲ:
ಕರ್ನಾಟಕ ಕಾಂಗ್ರೆಸ್‌ನ ಒಳ ಮೂಲಗಳ ಕಣಕ್ಕಿಳಿದಿರುವ ಈ ಅಭ್ಯರ್ಥಿಗಳ ಸಂಬಂಧಿಗಳು ಸಿದ್ದರಾಮಯ್ಯ ಸಂಪುಟದಲ್ಲಿ ಪ್ರಭಾವಿ ಮಂತ್ರಿಗಳಾಗಿದ್ದು, ಸ್ವತಃ ಅವರೇ ಕಣಕ್ಕಿಳಿದಿದ್ದರೂ ಈ ಬಾರಿ ಪಕ್ಷಕ್ಕೆ ಗೆಲುವು ತಂದುಕೊಡಬಲ್ಲ ಉತ್ತಮ ಅಭ್ಯರ್ಥಿಗಳಾಗುತ್ತಿದ್ದರು. ಆದರೆ ಒಂದು ವೇಳೆ ಸೋತರೆ ಸಚಿವ/ಶಾಸಕ ಸ್ಥಾನಗಳನ್ನು ಸೂಖಾಸುಮ್ಮನೆ ಕಳೆದಕೊಲ್ಳಬೇಕಾದೀತು ಎಂದು ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ವ್ಯಾಖ್ಯಾನಿಸಿವೆ.
“ಕೆಲವು ಕ್ಷೇತ್ರಗಳಲ್ಲಿ ಹಣ ಬಹುಮುಖ್ಯ ಪಾತ್ರ ಹೊಂದಿದೆ. ಆದರೆ ಅದೊಂದೇ ಪ್ರಾಥಮಿಕ ಅಂಶವಲ್ಲವಾಗುವುದಿಲ್ಲ. ಮಂತ್ರಿಗಳು ಮತ್ತು ಶಾಸಕರು ತಮ್ಮ ಮಕ್ಕಳಿಗೆ ಟಿಕೆಟ್ ನೀಡಿದರೆ ಕಡ್ಡಾಯವಾಗಿ ಅವರನ್ನೇ ಪ್ರಚಾರಕ್ಕೆ ಎಳೆಯಬಹುದು ಎಂದು ಪಕ್ಷ ಭಾವಿಸುತ್ತದೆ. ಏಕೆಂದರೆ ತಮ್ಮ ಸಂಬಂಧಿಗಳನ್ನು ಗೆಲ್ಲಿಸಿಕೊಡುವುದು ಅವರ ಪ್ರತಿಷ್ಠೆಯ ವಿಷಯವಾಗುತ್ತದೆ. ಅವರಾಗಿಯೇ ಹಣ ಖರ್ಚು ಮಾಡುತ್ತಾರೆ. ಸ್ವತಃ ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಚುನಾವಣೆಯಲ್ಲಿ ಅತ್ಯುತ್ತಮವಾಗಿ ಪ್ರಯತ್ನ ಪಡುತ್ತಾರೆ ಎಂಬ ಸಿದ್ಧಾಂತವೂ ಇದೆ.
ಅದರೆ ಮೋದಿ ಅಲೆಯಲ್ಲಿ ತೇಲುತ್ತಾ, ಗೆಲುವಿನ ಹುಮ್ಮಸ್ಸಿನಲ್ಲಿರುವ ಕರ್ನಾಟಕ ಬಿಜೆಪಿ ಮುಖ್ಯಸ್ಥ ಬಿ ವೈ ವಿಜಯೇಂದ್ರ ಅವರು ಕಾಂಗ್ರೆಸ್ ಲೆಕ್ಕಾಚಾರವನ್ನು ಅಪಹಾಸ್ಯ ಮಾಡಿದ್ದಾರೆ. ಚುನಾವಣೆ ಎದುರಿಸುವುದಕ್ಕಾಗಿ ಅಭ್ಯರ್ಥಿಗಳನ್ನು ಹುಡುಕಲು ಕಾಂಗ್ರೆಸ್‌ಗೆ ಸಾಧ್ಯವಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ. ಸಚಿವರು/ ಶಾಸಕರ ಮನವೊಲಿಸಿ ಅವರ ಸಂಬಂಧಿಕರನ್ನಾದರೂ ಕಣಕ್ಕೆ ಇಳಿಸುವಂತೆ ಪಕ್ಷವು ಅವರ ಕೈಕಾಲು ಹಿಡಿದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದೆಲ್ಲದರ ಫಲವಾಗಿ ಕಾಂಗ್ರೆಸ್ ಈ ಬಾರಿಯೂ ಭಾರಿ ಅಂತರದಿಂದ ಸೋಲಿಸಲ್ಪಡುತ್ತದೆ ಎಂದು ಬಿವೈವಿ ಭವಿಷ್ಯ ನುಡಿದಿದ್ದಾರೆ.
ಏತನ್ಮಧ್ಯೆ, ಕನಿಷ್ಠ 20 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂಬುದು ಕಾಂಗ್ರೆಸ್ ಆಶಯವಾಗಿದೆ. 1999 ರಲ್ಲಿ ಪಕ್ಷವು ಕರ್ನಾಟಕದಲ್ಲಿ 18 ಸ್ಥಾನಗಳನ್ನು ಗೆದ್ದಾಗಿನಿಂದ ಅವರು ಮತ್ತೆಂದೂ ಅಂತಹ ಪ್ರದರ್ಶನ ನೀಡಿಲ್ಲ. ಕಳೆದ ಚುನಾವಣೆಯಲ್ಲಿ ಒಂದೇ ಸೀಟಿಗೆ ಸೀಮಿತವಾಗಿತ್ತು.
ಕಣದಲ್ಲಿರುವ ಇತರೆ ಹತ್ತಿರದ ಸಂಬಂಧಿಗಳು:
ಕಾಂಗ್ರೆಸ್ ಇನ್ನೂ ನಾಲ್ಕು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಇವುಗಳಲ್ಲಿ ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಾಮರಾಜನಗರ ಸೇರಿವೆ.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ರಕ್ಷಾ ರಾಮಯ್ಯ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ ಪಕ್ಷದೊಳಗೆ ಒಳಜಗಳ ಮಡುವುಗಟ್ಟಿದೆ. ಅವರು ಪ್ರತಿಷ್ಠಿತ ಮನೆತನದ, ಮಾಜಿ ಕಾಂಗ್ರೆಸ್ ಸಚಿವ ಎಂ ಆರ್ ಸೀತಾರಾಮ್ ಅವರ ಪುತ್ರ ಎಂಬುದು ಗಮನಾರ್ಹ.
ಇನ್ನು, ಬಳ್ಳಾರಿ ಟಿಕೆಟ್ ಈ ಬಾರಿ ಸಂಡೂರು ಶಾಸಕ ಇ ತುಕಾರಾಂ ಕೈಗೆ ಕೊಟ್ಟಿದೆ. ಒಳೇಟು/ ಭಿನ್ನಮತ ಭುಗಿಲೇಳದಿರಲಿ ಎಂಬುದು ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರವಾಗಿದೆ. ತುಕಾರಾಂ ತಮ್ಮ ಮಗಳು ಸೌಪರ್ಣಿಕಾಗೆ ಕೇಳಿದ್ದರಾದರೂ ಟಿಕೆಟ್ ನೇರವಾಗಿ ಬಂದು ಅವರ ಬಾಯಿಗೆ ಬಿದ್ದಿದೆ.
ಅತ್ತ ಮತ್ತೊಂದು ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಲೋಕ ಟಿಕೆಟ್ ಸುನೀಲ್ ಬೋಸ್ ಪಾಲಾಗಿದೆ. ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ತಮ್ಮ ಪುತ್ರ ಬೋಸ್ ಪರವಾಗಿ ಮೊದಲಿಂದಲೂ ಬ್ಯಾಟ್ ಬೀಸುತ್ತಿದ್ದರು ಎಂಬುದು ಗಮನಾರ್ಹ.