ಸಂಪುಟ ಸಂಕಟ: ಥರಗುಟ್ಟುವ ಚಳಿಯಲ್ಲಿ ದೆಹಲಿಯತ್ತ ಪ್ರಯಾಣ ಬೆಳೆಸಿದ ರೇಣುಕಾಚಾರ್ಯ
‘ಆರಕ್ಕಿಂತ ಹೆಚ್ಚು ಸಲ ಗೆದ್ದವರನ್ನು ಬಿಟ್ಟು ನಾಯಕತ್ವ ಬದಲಾವಣೆಗಾಗಿ ಓಡಾಡುತ್ತಿದ್ದವರಿಗೆ, ಶಾಸಕರಲ್ಲಿ ವಿಷಬೀಜ ಬಿತ್ತಿ ಹುಳಿಹಿಂಡಲು ಯತ್ನಿಸಿದವರಿಗೆ ಮಣೆ ಹಾಕಿದ್ದಾರೆ’ ಎಂದು ಬೇಸರ ತೋಡಿಕೊಂಡರು.
ಬೆಂಗಳೂರು: ಮಂತ್ರಿಸ್ಥಾನ ಸಿಗದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದಿರುವ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಶಾಸಕ ಎಂ.ಪಿ.ರೇಣುಕಾಚಾರ್ಯ ತರಾತುರಿಯಲ್ಲಿ ದೆಹಲಿಗೆ ಹೊರಟಿದ್ದಾರೆ. ದೆಹಲಿಯಲ್ಲಿ ಉಷ್ಣಾಂಶ ತೀವ್ರವಾಗಿ ಕುಸಿದಿದ್ದು, ಈ ಸುದ್ದಿ ಬರೆಯುವ ಹೊತ್ತಿಗೆ (ಜ.14ರ ಬೆಳಿಗ್ಗೆ 8.40ಕ್ಕೆ) 8 ಡಿಗ್ರಿಸೆಲ್ಷಿಯಸ್ ಉಷ್ಣಾಂಶ ದಾಖಲಾಗಿತ್ತು. ದೆಹಲಿಯಲ್ಲಿ ಚಳಿ ಥರಗುಟ್ಟಿಸುತ್ತಿದ್ದರೂ, ರೇಣುಕಾಚಾರ್ಯ ಮಾತ್ರ ಸಿಟ್ಟಿನ ಬಿಸಿಯಲ್ಲಿ ಬುಸುಗುಡುತ್ತಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬ್ಲ್ಯಾಕ್ಮೇಲ್ ಮಾಡಿದವರಿಗೆ, ನಾಯಕತ್ವ ಬದಲಾವಣೆ ಮಾಡಲು ಹೊರಟವರಿಗೆ ಮಂತ್ರಿಗಿರಿ ಕೊಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಯಾವುದೇ ಹಿರಿಯ ನಾಯಕರ ಭೇಟಿಗೆ ಸಮಯ ಕೇಳಿಲ್ಲ. ಸಿಕ್ಕ ನಾಯಕರನ್ನು ಭೇಟಿಯಾಗಿ ಮಾತನಾಡಿಕೊಂಡು ಬರುವೆ. ನಾನು ಎಂದಿಗೂ ಪಕ್ಷ ಸಂಘಟನೆ ವಿರುದ್ಧವಾಗಲೀ, ನಾಯಕತ್ವದ ಬಗ್ಗೆಯಾಗಲೀ ಮಾತನಾಡಿಲ್ಲ. 6ಕ್ಕಿಂತ ಹೆಚ್ಚು ಸಲ ಗೆದ್ದವರನ್ನು ಬಿಟ್ಟು ನಾಯಕತ್ವ ಬದಲಾವಣೆಗಾಗಿ ಓಡಾಡುತ್ತಿದ್ದವರಿಗೆ, ಶಾಸಕರಲ್ಲಿ ವಿಷಬೀಜ ಬಿತ್ತಿ ಹುಳಿಹಿಂಡಲು ಯತ್ನಿಸಿದವರಿಗೆ ಮಣೆ ಹಾಕಿದ್ದಾರೆ’ ಎಂದು ಬೇಸರ ತೋಡಿಕೊಂಡರು.
‘ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರ ಮುಖ ನೋಡಿ ವಿವಿಧ ಪಕ್ಷಗಳ ಶಾಸಕರು ಬಿಜೆಪಿಗೆ ಬಂದರು. ಸಿ.ಪಿ.ಯೋಗೇಶ್ವರ್ ಮುಖ ನೋಡಿ ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್ ಬರಲಿಲ್ಲ. ಪಕ್ಷಕ್ಕೆ, ಸರ್ಕಾರಕ್ಕೆ ಯೋಗೇಶ್ವರ್ ಕೊಡುಗೆ ಏನು’ ಎಂದು ಪ್ರಶ್ನಿಸಿದರು.
‘ತಮ್ಮ ಕ್ಷೇತ್ರದಲ್ಲಿಯೇ ಅವರಿಗೆ ಗೆಲ್ಲಲು ಆಗಲಿಲ್ಲ. ಲೋಕಸಭೆ ಚುನಾವಣೆ, ರಾಮನಗರ ಉಪಚುನಾವಣೆಯಲ್ಲಿ ತಾವು ಸ್ಪರ್ಧಿಸದೇ ಬೇರೆಯವರನ್ನು ನಿಲ್ಲಿಸಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರು. ಮೆಗಾಸಿಟಿ ಯೋಜನೆಯಲ್ಲಿ ದೊಡ್ಡ ಹಗರಣ ಆಗಿದೆ. ನಮ್ಮ ನಾಯಕರಿಗೆ ಈ ಬಗ್ಗೆ ದೂರು ಹೇಳುವೆ. ಸಮಯ ಬಂದಾಗ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ’ ಎಂದರು.