ನಾನು, ನನ್ನಿಂದ ಅಂದವರೆಲ್ಲ ಹೆಸರು ಇಲ್ಲದಂಗೆ ಹೋಗಿದ್ದಾರೆ.. ರಮೇಶ್ ಜಾರಕಿಹೊಳಿಗೆ ತಿರುಗೇಟು ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್
Lakshmi Hebbalkar | ರಮೇಶ್ ಜಾರಕಿಹೊಳಿಯನ್ನು ನಾವೇ ಮಂತ್ರಿ ಮಾಡಿದ್ದೇವೆ. ನಾವೇ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದೇವೆ. ನಾನು, ನನ್ನಿಂದ ಅಂದವರೆಲ್ಲ ಹೆಸರು ಇಲ್ಲದಂಗೆ ಹೋಗಿದ್ದಾರೆ. ಅವರು ಎಷ್ಟು ವಿರೋಧಿಸ್ತಾರೆ, ನಾನು ಅಷ್ಟು ಗಟ್ಟಿಯಾಗುತ್ತೇನೆ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಗೆಲ್ಲಿಸಿದ್ದು ನಾನೇ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಸಚಿವ ರಮೇಶ್ ಜಾರಕಿಹೊಳಿಗೆ, ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ. ರಮೇಶ್ ಜಾರಕಿಹೊಳಿಯನ್ನು ನಾವೇ ಮಂತ್ರಿ ಮಾಡಿದ್ದೇವೆ. ನಾವೇ ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದೇವೆ. ನಾನು, ನನ್ನಿಂದ ಅಂದವರೆಲ್ಲ ಹೆಸರು ಇಲ್ಲದಂಗೆ ಹೋಗಿದ್ದಾರೆ. ಅವರು ಎಷ್ಟು ವಿರೋಧಿಸ್ತಾರೆ, ನಾನು ಅಷ್ಟು ಗಟ್ಟಿಯಾಗುತ್ತೇನೆ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ನಾನು ಅಹಂ ಬ್ರಹ್ಮಾಸ್ಮಿ, ನಾನು ನನ್ನಿಂದ ಅಂದವರೆಲ್ಲ ಹೆಸರು ಇಲ್ಲದಂಗೆ ಹೋಗಿದ್ದಾರೆ. ನಾನು ನಗಣ್ಯ, ಲಕ್ಷ್ಮೀ ಹೆಬ್ಬಾಳ್ಕರ್‌ನ ಮತದಾರರು ಮಾಡಿದ್ದಾರೆ. ಯಾಕೆ ಇಷ್ಟೊಂದು ಟಾರ್ಗೆಟ್ ಮಾಡುತ್ತಿದ್ದಾರೆ ಅಂತಾ ಅವರನ್ನೇ ಕೇಳಿ. ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಉದ್ಘಾಟನೆ ಕಾರ್ಯಕ್ರಮ ನಮ್ಮ ಅಧ್ಯಕ್ಷತೆಯಲ್ಲಿ ಆಗಬೇಕು. ಯಾರನ್ನೋ ಎಲ್ಲೆಲ್ಲೋ ಕರೆದುಕೊಂಡು ಹೋಗ್ತಾರೆ ಅದಕ್ಕೆಲ್ಲಾ ನಾನು ಬಾಯಿ ಬಡೆದುಕೊಳ್ಳಲು ಆಗುತ್ತಾ. ಗೋಕಾಕ್ ಮತದಾರರು ಕೈಜೋಡಿಸುವುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ನೀವು ಎಷ್ಟು ವಿರೋಧ ಮಾಡ್ತೀರಿ ನಾನು ಅಷ್ಟು ಗಟ್ಟಿಯಾಗ್ತೀನಿ. ಯಾರು ಎನೇ ಒದ್ರಾಡಿದ್ರೂ ದೇವಸ್ಥಾನ ಹಾಳಾಗುವುದಿಲ್ಲ ಎಂದು ರಮೇಶ್ ಜಾರಕಿಹೊಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.
ಸತೀಶ್ ನನ್ನ ಜಾಯಿಂಟ್ ವೆಂಚರ್ ಗೋಕಾಕ್‌ನಲ್ಲಿ ಲಿಂಗಾಯತ ಮುಖಂಡರಿಗೆ ಕಾಂಗ್ರೆಸ್ ಪಕ್ಷಕ್ಕೆ ಸತೀಶ್ ಜಾರಕಿಹೊಳಿ ಆಹ್ವಾನಿಸಿದ ವಿಚಾರಕ್ಕೆ ಸಂಬಂಧಿಸಿ ಇದು ನನ್ನ ಮತ್ತು ಸತೀಶ್ ಜಾರಕಿಹೊಳಿಯವರ ಜಾಯಿಂಟ್ ವೆಂಚರ್ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿ ಹೆಬ್ಬಾಳ್ಕರ್ ಸೋಲಿಸುತ್ತೇನೆ ಅಂದಿದ್ದ ಸಾಹುಕಾರ್ ಗೆ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ. ಬೆಳಗಾವಿ ಕುಂದಾ ಜತೆ ಗೋಕಾಕ್ ಕರದಂಟು ತಿನ್ನಬಾರದಾ? ಕಾಲ ಒಂದೇ ತರ ಇರುವುದಿಲ್ಲ ಇಂದು ಅವರ ಸರ್ಕಾರ ಇದೆ, ನಾಳೆ ನಮ್ಮ ಸರ್ಕಾರ ಇರುತ್ತೆ. ದ್ವೇಷದ ರಾಜಕಾರಣ ಯಾರಿಗೂ ಶೋಭೆ ತರುವುದಿಲ್ಲ. ಅಭಿವೃದ್ಧಿ ಪರ ರಾಜಕಾರಣ ಬೆಂಬಲಿಸಬೇಕು. ದೇವರು ಅವರಿಗೆ ಒಳ್ಳೆಯದನ್ನ ಮಾಡಲಿ ಎಂದು ಹೇಳಿದ್ದಾರೆ.
ನಾನು ರಾಮನ ಭಕ್ತೆ, ರಾಮಮಂದಿರಕ್ಕೆ ₹2 ಲಕ್ಷ ಕೊಟ್ಟಿದ್ದೇನೆ ಬೆಳಗಾವಿ ಗ್ರಾಮೀಣ ಕ್ಷೇತ್ರ ಟಾರ್ಗೆಟ್ ಮಾಡ್ತಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ರಾಜಕೀಯದಲ್ಲಿ ಇದೆಲ್ಲ ಸಹಜ, ನಿಭಾಯಿಸುವ ಶಕ್ತಿ ನನಗಿದೆ. ಪಿಡಿಒಗಳ ಮಟ್ಟಕ್ಕೆ ಇಳಿದು ರಾಜಕಾರಣ ಅವಶ್ಯಕತೆ ಇರಲಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದು ಬಯಸುತ್ತೇನೆ ಎಂದರು. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್‌ನ ಬಸ್ ನಿಲ್ದಾಣದಲ್ಲಿ ಹುಡುಕಬೇಕಾಗುತ್ತೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ನಾನು ರಾಮನ ಭಕ್ತೆ, ರಾಮಮಂದಿರಕ್ಕೆ ₹2 ಲಕ್ಷ ಕೊಟ್ಟಿದ್ದೇನೆ. ರಾಮನ ಪಕ್ಷದಲ್ಲಿ ಒಬ್ಬ ಮಹಿಳೆ ಬಗೆಗಿನ ಮಾತು ನೋಡ್ತಿದ್ದಾರೆ. ರಾಜ್ಯದ ಜನರು ಅವರ ಮಾತುಗಳನ್ನು ನೋಡುತ್ತಿದ್ದಾರೆ. ಆಕೆ, ಈಕೆ ಎನ್ನುವುದು, ಬಸ್ ನಿಲ್ದಾಣದಲ್ಲಿ ಹುಡುಕಬೇಕು, ಹಾಸ್ಪಿಟಲ್‌ಗೆ ಅಡ್ಮಿಟ್ ಮಾಡಬೇಕು ಎನ್ನುವುದು ಶೋಭೆ ತರಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಬಿ ಟೀಮ್, ಬಿಜೆಪಿ ಎ ಟೀಮ್ ಎಂಬುದೆಲ್ಲಾ ಇಲ್ಲ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿಗಾಗಿ ಹೋರಾಟಕ್ಕೆ ಸಂಬಂಧಿಸಿ ಯತ್ನಾಳ್ ಕಾಂಗ್ರೆಸ್ನ ಬಿ ಟೀಮ್ ಎಂದು ಹೇಳಿಕೆ ನೀಡಿದ್ದ ಸಚಿವ ನಿರಾಣಿ ವಿರುದ್ಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ತಪ್ಪು ಕಲ್ಪನೆ, ಪಕ್ಷಾತೀತವಾಗಿ ಹೋರಾಟ ಮಾಡ್ತಿದ್ದೇವೆ. ಕಾಂಗ್ರೆಸ್ ಬಿ ಟೀಮ್, ಬಿಜೆಪಿ ಎ ಟೀಮ್ ಎಂಬುದೆಲ್ಲಾ ಇಲ್ಲ. ಹಾಗಿದ್ದರೆ ಹೋರಾಟಕ್ಕೆ ನಿರಾಣಿ ಬೆಂಬಲ ಸೂಚಿಸಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ. ಹೋರಾಟದ ಮುಂಚೂಣಿಯಲ್ಲಿದ್ದವರು ಈ ರೀತಿ ಆರೋಪ ಮಾಡುವುದು ಸರಿಯಲ್ಲ.
ಗುರುಗಳ ಬಗ್ಗೆ ಹಗುರವಾಗಿ ಮಾತನಾಡುವುದು ತಪ್ಪು. ಸಮಾಜಕ್ಕೋಸ್ಕರ ಹೋರಾಟ ಮಾಡುತ್ತಿದ್ದಾರೆ ಹೊರತು ಇದು ಸ್ವಂತಕ್ಕಲ್ಲ. ಯಾರ ಕಪಿಮುಷ್ಟಿಯಲ್ಲೂ ಗುರುಗಳಿಲ್ಲ ಸಮಾಜಕ್ಕೆ ಒಳ್ಳೆಯದಾಗಬೇಕು ಅಂತಾ ಮಾಡುತ್ತಿದ್ದಾರೆ. ಈ ಹೋರಾಟವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಪಂಚಮಸಾಲಿ ಸಮುದಾಯದಲ್ಲಿ ಒಗ್ಗಟ್ಟಿದೆ ವಿಚಾರಧಾರೆ ಬೇರೆ ಬೇರೆ ಇದೆ. ಸಚಿವರು ಸರ್ಕಾರದಲ್ಲಿರುವುದರಿಂದ ಒತ್ತಡ ಇರಬಹುದು. ಸರ್ಕಾರವನ್ನ ಪ್ರತಿನಿಧಿಸುತ್ತಿರುವುದರಿಂದ ಸಚಿವರ ಧ್ವನಿ ಕಡಿಮೆಯಾಗಿದೆ. ಯಾರ ಒತ್ತಡ ಇದೆ ಗೊತ್ತಿಲ್ಲ ನಿರಾಣಿಯವರನ್ನೇ ಕೇಳಿದ್ರೇ ಗೊತ್ತಾಗುತ್ತೆ ಎಂದು ಮುರುಗೇಶ್ ನಿರಾಣಿ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನು ಗೋಕಾಕ್‌ನಿಂದ ಸ್ಪರ್ಧೆ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಪುನರುಚ್ಚಾರ ಮಾಡಿದ್ದಾರೆ. ಗೋಕಾಕ್‌ನಿಂದ ಸ್ಪರ್ಧಿಸುವಂತೆ ಅಲ್ಲಿಯ ಜನರೇ ಹೇಳ್ತಿದ್ದಾರೆ. ನನಗೆ ಕರೆ ಮಾಡಿ, ನನ್ನನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ. ಪಕ್ಷ ಏನು ಆದೇಶ ಕೊಡುತ್ತೋ ಅದನ್ನ ನಾನು ಪಾಲಿಸುತ್ತೇನೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಜವಾಬ್ದಾರಿ ನನಗೂ ಕೊಟ್ಟಿದ್ದಾರೆ. ಹೈಕಮಾಂಡ್ ಎದುರು ಕಾರ್ಯಕರ್ತರಂತೆ ಕೆಲಸ ಮಾಡ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಪಡೆಯದೆ ಬೆಂಗಳೂರನ್ನು ಬಿಟ್ಟು ತೆರಳುವುದಿಲ್ಲ – ಜಯಮೃತ್ಯುಂಜಯ ಸ್ವಾಮೀಜಿ