ಮಂಡ್ಯದ ಆರೆಸ್ಸೆಸ್ ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ಚೆಡ್ಡಿಗಳನ್ನು ಪಾರ್ಸೆಲ್ ಮೂಲಕ ಕಳಿಸಿದ್ದಾರೆ

ಮಂಡ್ಯದ ಆರೆಸ್ಸೆಸ್ ಕಾರ್ಯಕರ್ತರು ಸಿದ್ದರಾಮಯ್ಯನವರಿಗೆ ಚೆಡ್ಡಿಗಳನ್ನು ಪಾರ್ಸೆಲ್ ಮೂಲಕ ಕಳಿಸಿದ್ದಾರೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 06, 2022 | 4:37 PM

ಇಬ್ಬರು ಕಾರ್ಯಕರ್ತರು ನೇರವಾಗಿ ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಮಾತಾಡಿದ್ದಾರೆ. ಚೆಡ್ಡಿಗಳನ್ನು ಸುಟ್ಟು ಹಾಕುತ್ತೇವೆ ಎಂದಿರುವ ನಿಮಗೆ ಅವುಗಳನ್ನು ಹುಡುಕುವುದು ಕಷ್ಟವಾಗದಿರಲಿ ಅಂತ ಪಾರ್ಸೆಲ್ ಕಳಿಸುತ್ತಿದ್ದೇವೆ ಅಂತ ಅವರು ಹೇಳಿದ್ದಾರೆ,

ಮಂಡ್ಯ: ಕಾಂಗ್ರೆಸ್ ಮತ್ತು ಆರೆಸ್ಸೆಸ್ (RSS) ನಡುವೆ ಚೆಡ್ಡಿ ಕಲಹ ಶುರುವಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಇತ್ತೀಚಿಗೆ ಶಿಕ್ಷಣ ಸಚಿವ ಬಿ ಸಿ ನಾಗೇಶ (BC Nagesh) ಅವರ ಮನೆ ಎದುರು ಪ್ರತಿಭಟನೆ ನಡೆಸುವಾಗ ರಾಷ್ಟ್ರೀಯ ಸ್ವಯಂ ಸೇವಕರು ಮೊದಲು ಧರಿಸುತ್ತಿದ್ದ ಚೆಡ್ಡಿಯನ್ನು (nicker) ಸುಟ್ಟು ಹಾಕಿದ್ದರು. ಎಲ್ಲ ಜಿಲ್ಲೆಗಳಲ್ಲೂ ಚೆಡ್ಡಿಗಳನ್ನು ಸುಟ್ಟು ಹಾಕುವ ಅಭಿಯಾನವನ್ನು ಶುರುಮಾಡುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ಹೇಳಿದ್ದಾರೆ. ಇದೇ ಹಿನ್ನೆಲೆಯಲ್ಲಿ ಮಂಡ್ಯದ ಕೆ ಆರ್ ಪೇಟೆಯ ಅರೆಸ್ಸೆಸ್ ಕಾರ್ಯಕರ್ತರು ಒಂದು ಕಾರ್ಟನಲ್ಲಿ ಚೆಡ್ಡಿಗಳನ್ನು ಪ್ಯಾಕ್ ಮಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಾರ್ಸಲ್ ಮಾಡಿದ್ದಾರೆ. ಪಾರ್ಸೆಲ್ ಮಾಡುವ ಮೊದಲು ಅವರು ಕಾಂಗ್ರೆಸ್ ನಾಯಕನಿಗೆ ಒಂದೆರಡು ಸಲಹೆ-ಸೂಚನೆಗಳನ್ನು ಸಹ ನೀಡಿದ್ದಾರೆ.

ಇಬ್ಬರು ಕಾರ್ಯಕರ್ತರು ನೇರವಾಗಿ ಸಿದ್ದರಾಮಯ್ಯನವರನ್ನು ಉದ್ದೇಶಿಸಿ ಮಾತಾಡಿದ್ದಾರೆ. ಚೆಡ್ಡಿಗಳನ್ನು ಸುಟ್ಟು ಹಾಕುತ್ತೇವೆ ಎಂದಿರುವ ನಿಮಗೆ ಅವುಗಳನ್ನು ಹುಡುಕುವುದು ಕಷ್ಟವಾಗದಿರಲಿ ಅಂತ ಪಾರ್ಸೆಲ್ ಕಳಿಸುತ್ತಿದ್ದೇವೆ. ಹಳ್ಳಿಹಳ್ಳಿಗಳಿಗೂ ಚೆಡ್ಡಿಗಳನ್ನು ಕಳಿಸುತ್ತೇವೆ. ಆರೆಸ್ಸೆಸ್ ಮೂಲದ ಬಗ್ಗೆ ನೀವು ಅವಹೇಳನಕಾರಿಯಾಗಿ ಮಾತಾಡುತ್ತಿರುವಿರಿ. ಅಸಲಿಗೆ, ನಿಮಗೆ ಸಂಘದ ಬಗ್ಗೆ ಏನೂ ಗೊತ್ತಿಲ್ಲ. ಹಾಗಾಗಿ ಅದರ ಮೂಲದ ಬಗ್ಗೆ ಮಾತಾಡುವಾಗ ಹಗುರವಾಗಿ ಮಾತಾಡಬೇಡಿ ಎಂದು ಒಬ್ಬರು ಹೇಳಿದ್ದಾರೆ.

ಇನ್ನೊಬ್ಬ ಸದಸ್ಯರು ಮಾತಾಡಿ ಸಿದ್ದರಾಮಯ್ಯನವರು ಒಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿ ಆರೆಸ್ಸೆಸ್ ಕುರಿತು ಅವಹೇಳನಕಾರಿಯಾಗಿ ಮಾತಾಡುತ್ತಾರೆ. ಕೋಟ್ಯಾಂತರ ಜನರ ತ್ಯಾಗ ಬಲಿದಾನಗಳ ಮೂಲಕ ಸಂಘವನ್ನು ಕಟ್ಟಲಾಗಿದೆ ಅಂತ ಅವರಿಗೆ ಗೊತ್ತಿಲ್ಲ. ಅಸಲಿಗೆ ಅವರಿಗೆ ಅರೆಸ್ಸೆಸ್ ಅಂದರೇನು ಅಂತ ಅರ್ಥವಾಗಿಲ್ಲ. ಹಾಗಾಗಿ ನಾವೊಂದು ಸಲಹೆ ನೀಡುತ್ತೇವೆ. ಬೆಂಗಳೂರಿನ ರಾಮೋಹಳ್ಳಿ ಬಳಿ ಸಂಘದ ವತಿಯಿಂದ 20 ದಿನಗಳ ಒಟಿಸಿ ಕ್ಯಾಂಪ್ ಏರ್ಪಡಿಸಲಾಗಿದೆ. ಅವರು ಈ ಕ್ಯಾಂಪ್ ನಲ್ಲಿ ಭಾಗವಹಿಸಲಿ ಎಂದು ಹೇಳಿದ ಅವರು ಚೆಡ್ಡಿಗಳ ಬಗ್ಗೆ ಸಿದ್ದರಾಮಯ್ಯ ಯೋಚಿಸುವುದು ಬೇಡ, ಅವರಿಗೆ ಸಾಕಾಗುವಷ್ಟು ಕಳಿಸ್ತೀವಿ ಎಂದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.