ಬಾಗಲಕೋಟೆ: ಹೂತಿಟ್ಟಿದ್ದ ಶವವನ್ನು ದುಷ್ಕರ್ಮಿಗಳು ಹೊತ್ತೊಯ್ದಿರುವ ಘಟನೆ ಮುಧೋಳ ತಾಲೂಕಿನ ರೂಗಿ ಗ್ರಾಮದಲ್ಲಿ ನಡೆದಿದೆ. ಜುಲೈ 20ರಂದು ಈ ಘಟನೆ ನಡೆದಿದೆ.
ಹೂತಿದ್ದ ಶವ ಏಕಾ ಏಕಿ ಮಾಯವಾಗಿದೆ. ದುಷ್ಕರ್ಮಿಗಳು ಶವವನ್ನು ಹೊತ್ತೊಯ್ದಿದ್ದಾರೆ. ವಾಮಾಚಾರ, ನಿಧಿಗಾಗಿ ಶವ ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ. ರಾಮಣ್ಣ ತುಮ್ಮರಮಟ್ಟಿ ಐದು ತಿಂಗಳ ಹಿಂದೆ ಶಿವರಾತ್ರಿ ಶಿವಯೋಗದ ದಿನ ಕ್ಯಾನ್ಸರ್ನಿಂದ ಮೃತಪಟ್ಟಿದ್ದರು. ಅಂದ್ರೆ
ಫೆಬ್ರವರಿ 21ರಂದು ಅವರು ಮೃತಪಟ್ಟಿದ್ದರು. ನಂತರ ಮಾರನೆ ದಿನ ಅಂದ್ರೆ ಫೆಬ್ರವರಿ 22 ರಂದು ಅವರ ಹೊಲದಲ್ಲೇ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆದರೆ ಮೊನ್ನೆ ಅಂದ್ರೆ ನಾಗರ(ಭೀಮನ) ಅಮಾವಾಸ್ಯೆ ದಿನ ದುಷ್ಕರ್ಮಿಗಳು ಶವ ಹೊತ್ತೊಯ್ದಿದ್ದಾರೆ.
ಅಮಾವಾಸ್ಯೆ ಆದ ಕಾರಣ ರಾತ್ರೋರಾತ್ರಿ ಶವ ಹೊತ್ತೊಯ್ದಿದ್ದಾರೆ. ವಾಮಾಚಾರ ಅಥವಾ ನಿಧಿಗಾಗಿ ಈ ಕೆಲಸ ಮಾಡಿದ್ದಾರೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಸತ್ತು, ಮಣ್ಣಾಗಿ 5 ತಿಂಗಳಾಗಿರುವುದರಿಂದ ರಾಮಣ್ಣ ತುಮ್ಮರಮಟ್ಟಿ ಅವರ ದೇಹ ಅಸ್ಥಿಪಂಜರವಾಗಿರಬಹುದು. ಸದ್ಯ ರೂಗಿ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಲೋಕಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.