AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಕಂಗೆಟ್ಟ ವರ್ಷದಲ್ಲಿ ಸೋಂಕಿಗಿಂತಲೂ ವೇಗವಾಗಿ ಹರಡಿದ್ದು ಕೋವಿಡ್-19 ರೋಗದ ಬಗ್ಗೆ ತಪ್ಪು ಮಾಹಿತಿ

ಕೊರೊನಾ ವೈರಸ್ ಸೋಂಕು ವ್ಯಾಪಿಸುವುದಕ್ಕಿಂತ ವೇಗವಾಗಿ ರೋಗದ ಬಗ್ಗೆ ತಪ್ಪಾದ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಸೋಂಕು ಬಗ್ಗೆ ತಜ್ಞರು ಮಾಹಿತಿ ನೀಡುವುದಕ್ಕಿಂತ ಹೆಚ್ಚಾಗಿ ರಾಜಕಾರಣಿಗಳು, ಧಾರ್ಮಿಕ ಮುಖಂಡರು, ದೇವ ಮಾನವರು ತಮ್ಮದೇ ಆದ ಸಲಹೆ ಸೂಚನೆ ಪರಿಹಾರಗಳನ್ನು ನೀಡುವಲ್ಲಿ ಮೇಲುಗೈ ಸಾಧಿಸಿದರು.

ಕೊರೊನಾದಿಂದ ಕಂಗೆಟ್ಟ ವರ್ಷದಲ್ಲಿ ಸೋಂಕಿಗಿಂತಲೂ ವೇಗವಾಗಿ ಹರಡಿದ್ದು ಕೋವಿಡ್-19 ರೋಗದ ಬಗ್ಗೆ ತಪ್ಪು ಮಾಹಿತಿ
ಪ್ರಾತಿನಿಧಿಕ ಚಿತ್ರ (ಪಿಟಿಐ)
ರಶ್ಮಿ ಕಲ್ಲಕಟ್ಟ
| Edited By: |

Updated on: Dec 31, 2020 | 8:44 PM

Share

ಚೀನಾದಲ್ಲಿ ಡಿಸೆಂಬರ್ 31, 2019ರಂದು ಕಾಣಿಸಿಕೊಂಡ ಕೊರೊನಾವೈರಸ್​ ಸೋಂಕು ಇಲ್ಲಿಯವರೆಗೆ 8.2 ಕೋಟಿಗಿಂತಲೂ ಹೆಚ್ಚು ಜನರನ್ನು ಬಾಧಿಸಿದೆ. 18 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಈ ಸಾಂಕ್ರಾಮಿಕ ರೋಗಕ್ಕೆ ಕಡಿವಾಣ ಹಾಕಲು ತಜ್ಞರ ಪ್ರಯತ್ನ ಮುಂದುರಿದಿದೆ. ಕೊರೊನಾವೈರಸ್ ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ 2020 ಮಾರ್ಚ್ 11ರಂದು ಘೋಷಿಸಿತ್ತು. 2020ರಲ್ಲಿ ಕೊರೊನಾವೈರಸ್ ಇಡೀ ವಿಶ್ವವನ್ನೇ ನಡುಗಿಸಿ ಬಿಟ್ಟಿತ್ತು. ಜನರ ನಿರೀಕ್ಷೆ ಮತ್ತು ಬದುಕು ಬುಡಮೇಲಾಯಿತು. ಈ ನಡುವೆ ಕೊರೊನಾ ವೈರಸ್ ಸೋಂಕು ವ್ಯಾಪಿಸುವುದಕ್ಕಿಂತ ವೇಗವಾಗಿ ರೋಗದ ಬಗ್ಗೆ ತಪ್ಪಾದ ಮಾಹಿತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು.

ಸೋಂಕಿನ ಬಗ್ಗೆ ತಜ್ಞರು ಮಾಹಿತಿ ನೀಡುವುದಕ್ಕಿಂತ ಹೆಚ್ಚಾಗಿ ರಾಜಕಾರಣಿಗಳು, ಧಾರ್ಮಿಕ ಮುಖಂಡರು, ದೇವ ಮಾನವರು ತಮ್ಮದೇ ಆದ ಸಲಹೆ ಸೂಚನೆ ಪರಿಹಾರಗಳನ್ನು ನೀಡುವಲ್ಲಿ ಮೇಲುಗೈ ಸಾಧಿಸಿದರು. ಆರೋಗ್ಯದ ಬಗ್ಗೆ ತಪ್ಪಾದ ಮಾಹಿತಿಯ ಜತೆಗೆ ಭಾರತದಲ್ಲಿ ಕೊರೊನಾವೈರಸ್ ಧಾರ್ಮಿಕ ವಿಷಯವಾಗಿ ಮಾರ್ಪಟ್ಟಿತು. ನಿರ್ದಿಷ್ಟ ಧರ್ಮದವರು ಸೋಂಕು ಹರಡಲು ಕಾರಣ ಎಂದು ವೈರಸ್​ಗೂ ಧರ್ಮದ ಲೇಪ ಹಚ್ಚಲಾಯಿತು. ಕುತಂತ್ರ, ಸುಳ್ಳು ವಿಜ್ಞಾನ, ರೋಗ ಚಿಕಿತ್ಸೆ ಮಾಡುವುದಾಗಿ ಹುಸಿ ಭರವಸೆ, ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳು ಲಾಕ್ ಡೌನ್ ವೇಳೆ ಸಿಕ್ಕಾಪಟ್ಟೆ ಹರಿದಾಡಿದವು. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ತಪ್ಪು ಮಾಹಿತಿಗಳ ಬಗ್ಗೆ ಬೂಮ್ ಲೈವ್ ಪ್ರಕಟಿಸಿದ ವರದಿ ಇಲ್ಲಿದೆ.

1. ಕೊರೊನಾವೈರಸ್ ಎಂಬುದು ಚೀನಾದ ಜೈವಿಕಾಸ್ತ್ರ ಕೊರೊನಾ ವೈರಸ್ SARS-CoV-2 ಎಂಬುದು ಚೀನಾದ ಲ್ಯಾಬ್​ನಲ್ಲಿ ತಯಾರಾದ ಜೈವಿಕಾಸ್ತ್ರ (bioweapons) ಎಂಬ ಸುಳ್ಳುಸುದ್ದಿ ಮೊದಲುಹಬ್ಬಿತ್ತು. ವೈರಸ್ ಸೋಂಕು ಹರಡುವಿಕೆಯೂ ಕುತಂತ್ರ ಎಂಬ ಹೇಳಿಕೆಗಳು ಕೇಳಿ ಬರುತ್ತಿದ್ದಂತೆ ಈ ರೋಗವನ್ನು ನಿಯಂತ್ರಿಸಲು ಮುಂದೆ ನಿಂತು ಹೋರಾಡುತ್ತಿರುವ ವೈದ್ಯರ ಗುಂಪು ಇದನ್ನು ಖಂಡಿಸಿತು. ಕೆಲವು ವೈದ್ಯರ ಸಂಘಟನೆಗಳು ವಿಶ್ವ ಆರೋಗ್ಯ ಸಂಸ್ಥೆ ನೀತಿಗಳನ್ನು ಟೀಕಿಸಿದವು. ಇದರ ಪರಿಣಾಮ ಆ್ಯಂಟಿ ಮಾಸ್ಕ್ ಅಭಿಯಾನವೂ ಆರಂಭವಾಯಿತು. ಭಾರತದಲ್ಲಿ ಲಾಕ್​ಡೌನ್ ಸಡಿಲಗೊಳಿಸಿದ ಬೆನ್ನಲ್ಲೇ ಮಾಸ್ಕ್ ವಿರೋಧಿ ಚಳವಳಿ ಆರಂಭವಾದರೂ ಮಾಸ್ಕ್ ಕಡ್ಡಾಯ ಎಂಬ ಸರ್ಕಾರದ ಆದೇಶದಿಂದಾಗಿ ಈ ಚಳವಳಿ ಹೆಚ್ಚು ಪ್ರಚಾರ ಗಿಟ್ಟಿಸಲಿಲ್ಲ. ಜಪಾನಿನ ನೋಬೆಲ್ ಪುರಸ್ಕೃತ ತಸಕು ಹೊಂಜೊ ಅವರು ಕೊರೊನಾವೈರಸ್ ಮಾನವ ನಿರ್ಮಿತ ಎಂದು ಹೇಳಿರುವುದಾಗಿ ಸುಳ್ಳೇಸುಳ್ಳು ಪೋಸ್ಟ್ ಗಳು ಹರಿದಾಡಿದ್ದವು. ಅಷ್ಟೇ ಅಲ್ಲದೆ 5ಜಿ ಟೆಕ್ನಾಲಜಿಯಿಂದಲೂ ಕೊರೊನಾವೈರಸ್ ಹರಡುತ್ತದೆ ಎಂಬ ಸುಳ್ಳುಸುದ್ದಿ ಹರಿದಾಡಿತ್ತು. ಚೀನಾದಲ್ಲಿ ಪೊಲೀಸರು ಕೊರೊನಾವೈರಸ್ ರೋಗಿಗಳನ್ನು ಹತ್ಯೆ ಮಾಡುತ್ತಿದ್ದಾರೆ ಎಂದು ಬಿಂಬಿಸುವ ತಿರುಚಿದ ವಿಡಿಯೊ, ತಪ್ಪು ಮಾಹಿತಿಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದವು.

ಇದನ್ನೂ ಓದಿ: Fact Check | ‘ಪಾಕ್ ಪತ್ರಕರ್ತ ಮೋದಿಯನ್ನು ವರ್ಣಿಸಿದ ರೀತಿ’; ಶೀರ್ಷಿಕೆಯ ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?

2. ಸುಳ್ಳು ವೈಜ್ಞಾನಿಕ ಹೇಳಿಕೆ, ರೋಗ ಚಿಕಿತ್ಸೆ ಬಗ್ಗೆ ಸುಳ್ಳು ಮಾಹಿತಿ ಜನವರಿ 30ರಂದು ಭಾರತದಲ್ಲಿ ಕೊರೊನಾವೈರಸ್ ಮೊದಲ ಪ್ರಕರಣ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಬ್ರಾಯ್ಲರ್ ಕೋಳಿಗಳು ಕೊರೊನಾವೈರಸ್ ವಾಹಕಗಳು ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತು. ಅಷ್ಟೇ ಅಲ್ಲ ಮದ್ಯ ಕುಡಿದರೆ ವೈರಸ್ ಸೋಂಕು ತಗಲುವುದಿಲ್ಲ ಎಂಬ ಪೋಸ್ಟ್ ಕೂಡಾ ವೈರಲ್ ಆಯ್ತ. ಸೋಂಕು ವ್ಯಾಪಿಸುತ್ತಿದ್ದಂತೆ ಭಾರತ ಸರ್ಕಾರವು ರೋಗ ಪ್ರತಿರೋಧಕ್ಕಾಗಿ ಸೇವನೆ ಮಾಡಬಹುದಾದ ಆಯುರ್ವೇದ ಮತ್ತು ಹೋಮಿಯೋಪತಿ ಔಷಧಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿತು. ಇದಕ್ಕೆ ಯಾವುದೇ ವೈಜ್ಞಾನಿಕ ಅಧ್ಯಯನದ ಆಧಾರವಿರಲಿಲ್ಲ. ಈ ಔಷಧಿಗಳ ಬಳಕೆಯನ್ನು ಹಲವಾರು ವಿಜ್ಞಾನಿಗಳು, ಅಲೋಪಥಿ ವೈದ್ಯರು ಪ್ರಶ್ನಿಸಿದ್ದರು. ಇತ್ತ ಯೋಗ ಗುರು ಬಾಬಾ ರಾಮ್ ದೇವ್ ಅವರ ಪತಂಜಲಿ ಕಂಪನಿಯು ಕೋವಿಡ್ -19 ಗುಣಪಡಿಸಲು ಕೊರೊನಿಲ್ ಎಂಬ ಹರ್ಬಲ್ ಉತ್ಪನ್ನವನ್ನು ಪರಿಚಯಿಸಿತು. ಕೋವಿಡ್​ಗಿರುವ ಔಷಧಿ ಎಂದು ಅದನ್ನು ಮಾರುವಂತಿಲ್ಲ ಎಂಬ ಸರ್ಕಾರದ ಆದೇಶದ ಹಿನ್ನಲೆಯಲ್ಲಿ ಈ ಉತ್ಪನ್ನವು ಮಾರುಕಟ್ಟೆಯಿಂದ ಹಿಂದೆ ಸರಿಯಿತು. ಕೊರೊನಾಸೋಂಕು ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು 14 ಗಂಟೆಗಳ ಕರ್ಫ್ಯೂ ವಿಧಿಸಿದ ಬೆನ್ನಲ್ಲೇ ಕೊರೊನಾ ವೈರಸ್ 12 ಗಂಟೆ ಮಾತ್ರ ಜೀವಂತವಾಗಿರುತ್ತದೆ ಎಂಬ ಸುಳ್ಳು ಸುದ್ದಿ ಹರಿದಾಡಿತ್ತು. ಇದರೊಂದಿಗೆ ಜೇನು ತುಪ್ಪ, ಕಷಾಯದಿಂದಲೂ ಕೋವಿಡ್-19ರೋಗಿಗಳು ಗುಣಮುಖರಾಗುತ್ತಾರೆ ಎಂಬ ವಾದವೂ ಕೇಳಿ ಬಂತು.

3. ಲಾಕ್​ಡೌನ್ ಮತ್ತು ಸರ್ಕಾರದ ಆದೇಶಗಳು ಮಾರ್ಚ್ 24ರಂದು ಭಾರತ ಸರ್ಕಾರ ದೇಶವ್ಯಾಪಿ ಲಾಕ್​​ಡೌನ್ ಘೋಷಿಸಿತು. ಲಾಕ್​ಡೌನ್ ಘೋಷಣೆಯಾದ ಕೂಡಲೇ ವಲಸೆ ಕಾರ್ಮಿಕರು ತಮ್ಮ ಊರುಗಳತ್ತ ನಡೆಯುತ್ತಾ ಹೊರಟರು. ಈ ನಡುವೆಯೇ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಲಸೆ ಕಾರ್ಮಿಕರಿಗಾಗಿ ಬಸ್ ವ್ಯವಸ್ಥೆ ಮಾಡಿದ್ದಾರೆ ಎಂಬ ತಪ್ಪು ಮಾಹಿತಿಯು ಹರಿದಾಡಿತು. ಲಾಕ್​ಡೌನ್​​ನಿಂದಾಗಿ ಬಹುತೇಕ ಜನರು ಕೆಲಸ ಕಳೆದುಕೊಂಡಿರುವಾಗ ಸರ್ಕಾರ ಕೋವಿಡ್ -19 ಲಾಕ್​ಡೌನ್ ಫಂಡ್ ಮೂಲಕ ಪ್ರತಿಯೊಬ್ಬರಿಗೂ 5,000 ಹಣ ವಿತರಣೆ ಮಾಡುತ್ತಾರೆ ಎಂಬ ಸಂದೇಶ ವಾಟ್ಸಾಪ್​ನಲ್ಲಿ ಹರಿದಾಡಿತು. ಸುದ್ದಿವಾಹಿನಿಗಳ ಗ್ರಾಫಿಕ್ಸ್ ಅನ್ನು ಫೋಟೊಶಾಪ್ ಮಾಡಿ ತಪ್ಪಾದ ಮಾಹಿತಿಯನ್ನು ಹರಡಲಾಯಿತು. ಹಳೇ ಫೋಟೊ, ವಿಡಿಯೊಗಳು ಬೇರೆ ಬೇರೆ ರೀತಿಯಲ್ಲಿ ತಪ್ಪು ಮಾಹಿತಿಗಳೊಂದಿಗೆ ಹರಿದಾಡಿ ಲಾಕ್​ಡೌನ್ ಬದುಕನ್ನು ಮತ್ತಷ್ಟು ಗೊಂದಲಕ್ಕೀಡು ಮಾಡಿದವು.

ಇದನ್ನೂ ಓದಿ: Fact Check: ಅದಾನಿ ಪತ್ನಿಗೆ ನಮಸ್ಕಾರ ಮಾಡಿದ್ರಾ ಪ್ರಧಾನಿ ನರೇಂದ್ರ ಮೋದಿ?

4. ವೈರಸ್​​ಗೂ ಅಂಟಿಕೊಂಡಿತು ಧರ್ಮದ ಲೇಪ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆದ ತಬ್ಲೀಘಿ ಜಮಾತ್ ನೆಪದಿಂದ ದೆಹಲಿ ನಿಜಾಮುದ್ದೀನ್ ಪ್ರದೇಶ ಕೋವಿಡ್ ಹಾಟ್​ಸ್ಪಾಟ್ ಆಗಿ ಬಿಟ್ಟಿತು. ಜಮಾತ್​ನಲ್ಲಿ ಭಾಗಿಯಾದ ಹಲವಾರು ಮಂದಿಗೆ ಸೋಂಕು ತಗುಲಿದ ನಂತರ ಕೊರೊನಾವೈರಸ್ ಹರಡಲು ಮುಸ್ಲಿಮರೇ ಕಾರಣ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿತು. ತಬ್ಲೀಘಿ ಜಮಾತ್​ನ ಸದಸ್ಯರೊಬ್ಬರು ಆಸ್ಪತ್ರೆಯಲ್ಲಿ ಬೆತ್ತಲೆಯಾಗಿ ಓಡುತ್ತಿದ್ದಾರೆ ಎಂಬ ಶೀರ್ಷಿಕೆಯಲ್ಲಿ ಕರಾಚಿಯ ವಿಡಿಯೊವೊಂದು ವೈರಲ್ ಆಯ್ತು. ಮುಸ್ಲಿಮರು ನಮಾಜ್ ಮಾಡುತ್ತಿರುವ ಹಳೇ ಫೋಟೊ ವಿಡಿಯೊಗಳು ಶೇರ್ ಆಗಿ, ಮುಸ್ಲಿಮರು ಲಾಕ್​ಡೌನ್ ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪವನ್ನೂ ಹೊರಿಸಲಾಯಿತು.

ಲಾಕ್​​ಡೌನ್ ಹೊತ್ತಲ್ಲಿ ಎಲ್ಲ ರೈಲು ಸಂಚಾರ ಬಂದ್ ಆಗಿತ್ತು. ಈ ನಡುವೆ ದೂರದೂರುಗಳಿಗೆ ರೈಲು ಸಂಚಾರ ಪುನಾರಂಭಗೊಂಡಿದೆ ಎಂಬ ಸುಳ್ಳು ಸುದ್ದಿ ನಂಬಿ ನೂರಾರು ವಲಸೆ ಕಾರ್ಮಿಕರು ಮುಂಬೈಯ ಬಾಂದ್ರಾ ರೈಲು ನಿಲ್ದಾಣದಲ್ಲಿ ಜಮಾವಣೆ ಆಗಿದ್ದರು. ಈ ಘಟನೆಗೂ ಕೆಲವು ಸುದ್ದಿ ವಾಹಿನಿಗಳು ಧಾರ್ಮಿಕ ಆಯಾಮವನ್ನು ನೀಡಿ ದೂಷಿಸಿದವು. ತಬ್ಲೀಘಿ ಜಮಾತ್ ಸದಸ್ಯರ ಮೇಲೆ ವ್ಯಥಾರೋಪ ಮಾಡುವ ವಾಹಿನಿಗಳಿಗೆ ಬಾಂಬೆ ಹೈಕೋರ್ಟ್ ಖಡಕ್ ಎಚ್ಚರಿಕೆಯನ್ನೂ ನೀಡಿತು.

5. ಲಸಿಕೆ ಪೈಪೋಟಿ ಕೋವಿಡ್ ರೋಗ ಪ್ರಕರಣಗಳು ಹೆಚ್ಚುತ್ತಿದ್ದಂತೆ ಕೋವಿಡ್ ಲಸಿಕೆ ಪೈಪೋಟಿಯೂ ಹೆಚ್ಚಿತು. ಆಗಸ್ಟ್ 15ರಂದು ಭಾರತಕ್ಕೆ ಕೋವಿಡ್ ಲಸಿಕೆ ಬರುತ್ತದೆ ಎಂದು ಭಾರತದ ಅಧಿಕಾರಿಗಳು ಜುಲೈ ತಿಂಗಳಲ್ಲಿ ಭರವಸೆ ನೀಡಿದರು. ಈ ಭರವಸೆ ವಿರುದ್ಧ ವಿಜ್ಞಾನಿಗಳು ದನಿಯೆತ್ತಿದರು. ಲಸಿಕೆ ಅಭಿವೃದ್ಧಿಪಡಿಸಲು ಹಲವು ಕಂಪನಿಗಳು ಪೈಪೋಟಿ ನಡೆಸಿದ ನಡುವೆಯೇ ಕೋವಿಡ್-19 ಲಸಿಕೆಯಿಂದ ಮನುಷ್ಯನ ಡಿಎನ್​ಎಯಲ್ಲಿ ಬದಲಾವಣೆ ಉಂಟಾಗುತ್ತದೆ ಎಂಬ ಸುಳ್ಳುಸುದ್ದಿಯೂ ಹರಿದಾಡಿತು. ಅಷ್ಟೇ ಅಲ್ಲದೆ ಈ ಲಸಿಕೆಯಲ್ಲಿ ಹಂದಿ ಮತ್ತು ಹಸುವಿನ ಸಿರಂ (ಅಂಗಾಂಶಗಳು) ಮತ್ತು ಜೀವಕೋಶಗಳು ಬಳಕೆಯಾಗಿವೆ ಎಂಬ ಸುಳ್ಳುಸುದ್ದಿಯೂ ವೈರಲ್ ಆಗಿ ಕೆಲವು ಧಾರ್ಮಿಕ ಸಂಘಟನೆಗಳು ಲಸಿಕೆಗೆ ಬಹಿಷ್ಕಾರ ಹಾಕುವುದಾಗಿಯೂ ಹೇಳಿಕೊಂಡವು.

2020 year in review | ಸಾಮಾಜಿಕ ಮಾಧ್ಯಮಗಳಲ್ಲಿ ನಗೆಯುಕ್ಕಿಸಿದ ಮೀಮ್​ಗಳು

2020 Year in Review | ಲಾಕ್​ಡೌನ್​ ಏಕಾಂತದಲ್ಲಿ ಚಾಲೆಂಜ್​ ಸುಗ್ಗಿ; ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ಚಾಲೆಂಜ್​ಗಳು