ಯಾದಗಿರಿ: ಮನೆಯಲ್ಲಿ ಆಟವಾಡುತ್ತಾ ಕ್ರಿಮಿನಾಶಕ ಕುಡಿದು ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ವಡಗೇರ ತಾಲೂಕಿನ ಕೊಡಾಲ್ ಗ್ರಾಮದಲ್ಲಿ ನಡೆದಿದೆ. 2 ವರ್ಷದ ಖೈರುನ್ ಹಾಗೂ 4 ತಿಂಗಳ ಮಗು ಅಪ್ಸಾನ ಮೃತ ದುರ್ದೈವಿಗಳು.
ಮನೆಯಲ್ಲಿ ತಾಯಿ ಅಡುಗೆ ಮಾಡುತ್ತಿದ್ದ ವೇಳೆ ಮನೆಯಲ್ಲೇ ಮಕ್ಕಳು ಕ್ರಿಮಿನಾಶಕ ಸೇವಿಸಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ. ಮಕ್ಕಳ ಸಾವಿನ ಸುದ್ದಿ ಕೇಳಿ ತಾಯಿ ಶಹನಾಜ್ ಸಹ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಗಂಡ ಜಮೀನು ಕೆಲಸಕ್ಕೆ ಹೋದಾಗ ಈ ಘಟನೆ ನಡೆದಿದ್ದು, ಮಕ್ಕಳು ಮೃತಪಟ್ಟಿರುವ ವಿಷಯ ಪತಿಗೆ ತಿಳಿದರೆ ಹೊಡೆಯಬಹುದು ಎಂದು ಹೆದರಿ ತಾನೂ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥ ಶಹನಾಜ್ಗೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.