ಹಾವಿಗಾಗಿ ನಡೆದು ಹೋಯ್ತು ಭೀಕರ ಕೊಲೆ
ಒಂದು ಹಾವಿನ ವಿಚಾರಕ್ಕೆ ಗಲಾಟೆಯಾಗಿ ವ್ಯಕ್ತಿರ್ಯೋನ ಕೊಲೆಯಾಗಿದೆ. ಒಂದು ಹತ್ಯೆಯ ಜಾಡು ಹಿಡಿದು ಹೊರಟ ಪೊಲೀಸರು ತನಿಖೆ ಬಳಿಕ ಬಿಚ್ಚಿಟ್ಟ, ಬೆಚ್ಚಿಬೀಳಿಸುವ ಸುದ್ದಿ ಇದು.

ಕಲಬುರಗಿ: ಎಂತೆಂಥೋ ವಿಚಾರಕ್ಕೆ ಜಗಳ ಆಗುವುದು, ಅದು ಹತ್ಯೆಗೆ ತಿರುಗುವುದನ್ನು ಕೇಳಿರುತ್ತೀರಿ, ಆದರೆ ಇಲ್ಲಿ ಒಂದು ಹಾವಿನ ವಿಚಾರಕ್ಕೆ ಗಲಾಟೆಯಾಗಿ ವ್ಯಕ್ತಿರ್ಯೋನ ಕೊಲೆಯಾಗಿದೆ. ಒಂದು ಹತ್ಯೆಯ ಜಾಡು ಹಿಡಿದು ಹೊರಟ ಪೊಲೀಸರು ತನಿಖೆ ಬಳಿಕ ಬಿಚ್ಚಿಟ್ಟ, ಬೆಚ್ಚಿಬೀಳಿಸುವ ಸುದ್ದಿ ಇದು.
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಪಟವಾದ ಗ್ರಾಮದ ಸಮೀಪ ಮುಲ್ಲಾಮಾರಿ ಹಳ್ಳದಲ್ಲಿ ವ್ಯಕ್ತಿಯೋರ್ವನ ಶವ ನವೆಂಬರ್ 5ರಂದು ಪತ್ತೆಯಾಗಿತ್ತು. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶವದ ಕುತ್ತಿಗೆ ಮತ್ತು ಹಣೆಯ ಮೇಲೆ ತುಂಬ ಗಾಯಗಳು ಇದ್ದುದರಿಂದ ಅದೊಂದು ಕೊಲೆಯೇ ಎಂಬುದು ಪಕ್ಕಾ ಆಗಿತ್ತು. ಈ ಕೇಸ್ನ ತನಿಖೆ ನಡೆಸಿದ ಪೊಲೀಸರಿಗೆ ಹತ್ಯೆಗೆ ಕಾರಣ ಮಣ್ಣಮುಕ್ಕ ಹಾವು ಎಂಬುದು ಗೊತ್ತಾಗಿದೆ.
ಕೊಲೆಯಾದ ವ್ಯಕ್ತಿ ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಕೋಡಂಬಲ್ ಗ್ರಾಮದ 29 ವರ್ಷದ ಸಂಜುಕುಮಾರ್ ಎಂಬುದನ್ನು ಪತ್ತೆ ಮಾಡಿದ ಇನ್ಸ್ಪೆಕ್ಟರ್ ಶಂಕರಗೌಡ್ ನೇತೃತ್ವದ ಪೊಲೀಸ್ ತಂಡ, ಆತನನ್ನು ಯಾಕೆ, ಯಾರು ಕೊಲೆ ಮಾಡಿದ್ದಾರೆ ಎಂಬುದರ ಬಗ್ಗೆ ಆಳವಾಗಿ ತನಿಖೆ ಶುರು ಮಾಡಿತ್ತು. ಇದೀಗ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಕಾರಣವೂ ಗೊತ್ತಾಗಿದೆ.
ಕೊಲೆಯಾದ ಸಂಜುಕುಮಾರ್ ಗ್ರಾಮದವರೇ ಆದ ರಾಮಣ್ಣ (58) ಮತ್ತು ಇವರ ಪುತ್ರ ಭಗವಂತ ಆರೋಪಿಗಳು. ತಮ್ಮ ಮನೆಯಲ್ಲೇ ಸಂಜುಕುಮಾರ್ನನ್ನು ಹತ್ಯೆ ಮಾಡಿ, ರಾತ್ರಿ ತಮ್ಮ ಟಿವಿಎಸ್ ಎಕ್ಸೆಲ್ ಮೊಪೆಡ್ನಲ್ಲಿ ಶವವನ್ನು ತಂದು, ಮುಲ್ಲಾಮಾರಿ ಹಳ್ಳಕ್ಕೆ ಹಾಕಿ ಹೋಗಿದ್ದರು. ಇನ್ನೂ ವಿಚಿತ್ರವೆಂದರೆ ಕೊಲೆಗಾರ ರಾಮಣ್ಣ, ಸಂಜು ತನ್ನ ಆಪ್ತ..ಅವನ ಸಾವಿನ ತನಿಖೆ ಆಗಬೇಕು ಎನ್ನುತ್ತ, ಪೊಲಿಸರಿಗೆ ಮಾಹಿತಿ ನೀಡುತ್ತ ಅವರೊಂದಿಗೇ ಅಡ್ಡಾಡಿಕೊಂಡಿದ್ದ.
ನಿಧಿ ಹುಡುಕುವ ಕಾಯಕ ಕೊಲೆ ಆಗಿರುವ ಸಂಜುಕುಮಾರ್ ಈ ಮೊದಲು ದುಬೈನಲ್ಲಿ ಎಲೆಕ್ಟ್ರೀಶಿಯನ್ ಕೆಲಸ ಮಾಡಿಕೊಂಡಿದ್ದ. ಆದರೆ ವರ್ಷದ ಹಿಂದೆ ಗ್ರಾಮಕ್ಕೆ ಬಂದವನು ಮತ್ತೆ ಹೋಗಿರಲಿಲ್ಲ. ಈ ರಾಮಣ್ಣ ಮತ್ತು ಭಗವಂತನ ಜತೆ ಸೇರಿಕೊಂಡು ನಿಧಿ ಹುಡುಕಾಟ, ಪೂಜೆಯಂತಹ ಕೆಲಸದಲ್ಲಿ ತೊಡಗಿಕೊಂಡಿದ್ದ. ಈ ಮಧ್ಯೆ ಲಾರಿ ಚಾಲಕನೋರ್ವ ರಾಮಣ್ಣ ಮತ್ತು ಸಂಜುಕುಮಾರ್ಗೆ ಸ್ಯಾಂಡ್ ಬೋವಾ ಎಂಬ ಹೆಸರಿನ ಮಣ್ಣುಮುಕ್ಕ ಹಾವನ್ನು ತಂದುಕೊಟ್ಟಿದ್ದ. ಈ ಹಾವಿನಿಂದ ಸುಲಭವಾಗಿ ನಿಧಿ ಹುಡುಕಬಹುದು .ಎಲ್ಲಿ ನಿಧಿಯಿದೆಯೋ ಅಲ್ಲಿ ಈ ಹಾವು ಕದಲದೆ ನಿಲ್ಲುತ್ತದೆ ಎಂಬ ನಂಬಿಕೆ ಇದೆ. ಹಾವಿನಿಂದ ಒಳ್ಳೆಯದೇ ಆಗುತ್ತದೆ ಎಂದಿದ್ದ.
ಹಾವನ್ನು ಬೇರೆಯವರಿಗೆ ₹ 2 ಲಕ್ಷಕ್ಕೆ ಮಾರಲು ಮೊದಲು ಸಂಜುಕುಮಾರ್ ಮತ್ತು ರಾಮಣ್ಣ ನಿರ್ಧರಿಸಿದ್ದರು. ₹ 10 ಲಕ್ಷದವರೆಗೂ ಮಾತುಕತೆ ನಡೆಸಿದ್ದರು. ಆದರೆ ಬಳಿಕ ಈ ಡೀಲ್ ರದ್ದಾಗಿತ್ತು. ಆದರೆ ಇತ್ತ ಲಾರಿ ಚಾಲಕನಿಗೆ ತಾನು ಕೊಟ್ಟ ಹಾವಿಗೆ ಲಕ್ಷಾಂತರ ರೂಪಾಯಿ ಬೇಡಿಕೆ ಇದೆ ಎಂದು ಗೊತ್ತಾಗುತ್ತಿದ್ದಂತೆ, ಪರಿಚಿತರೋರ್ವರನ್ನು ರಾಮಣ್ಣನ ಮನೆಗೆ ಕಳಿಸಿ, ಹಾವನ್ನು ವಾಪಸ್ ತರಿಸಿಕೊಂಡಿದ್ದ. ಆದರೆ ಸಂಜುಕುಮಾರ್ಗೆ ರಾಮಣ್ಣನ ಮೇಲೆಯೇ ಅನುಮಾನ ಶುರುವಾಗಿತ್ತು. ಹಾವನ್ನು ಮನೆಯಲ್ಲೇ ಇಟ್ಟುಕೊಂಡು, ತನ್ನನ್ನು ಯಾಮಾರಿಸುತ್ತಿದ್ದಾನೆ ಎಂದು ಭಾವಿಸಿ ಗಲಾಟೆ ಮಾಡಿದ್ದ. ನಂತರ ಇವರಿಬ್ಬರ ಜಗಳ ತಾರಕಕ್ಕೇರಿ, ತಂದೆ ಮಗ ಸೇರಿ ಸಂಜುಕುಮಾರ್ನ ಹತ್ಯೆ ಮಾಡಿದ್ದರು.
ಸ್ಯಾಂಡ್ ಬೋವಾ ವಂಚನೆ ಹಳ್ಳಿಗಳಲ್ಲಿ ಈ ಮಣ್ಣುಮುಕ್ಕ ಹಾವು ಸಾಮಾನ್ಯವಾಗಿ ಕಂಡುಬರುತ್ತದೆ. ಇದಕ್ಕೆ ಬಾಲ ಇರುವುದಿಲ್ಲ. ಎರಡೂ ಬದಿಗೂ ಮುಖ ಇದ್ದು. ಎರಡೂ ದಿಕ್ಕಿನಲ್ಲಿ ಹರಿದಾಡುತ್ತದೆ. ಕಚ್ಚುವುದೂ ಇಲ್ಲ. ಅದರಲ್ಲಿ ಸ್ಯಾಂಡ್ ಬೋವಾ ಹೆಸರಿನ ಮಣ್ಣಮುಕ್ಕ ಹಾವನ್ನು ಕೆಲವರು ಬಂಡವಾಳವಾಗಿ ಮಾಡಿಕೊಂಡಿದ್ದಾರೆ. ಈ ಹಾವನ್ನು ಇಟ್ಟುಕೊಂಡ್ರೆ ಐಶ್ಚರ್ಯ ಪ್ರಾಪ್ತಿಯಾಗುತ್ತದೆ ಅಂತ ಹೇಳಿ ನಂಬಿಸುತ್ತಾರೆ. ನಿಧಿ ಹುಡುಕಾಟಕ್ಕಾಗಿ ಇದನ್ನು ಬಳಸಿಕೊಳ್ಳುತ್ತಾರೆ. ನಿಧಿ ಇದ್ದರೆ ಈ ಹಾವು ಅಲ್ಲಿಂದ ಕದಲೋದಿಲ್ಲಾ ಎಂದು ಹೇಳಿ, ಈ ಹಾವನ್ನು ಇಟ್ಟುಕೊಂಡು ನಿಧಿ ಹುಡುಕಾಟ ಮಾಡುವ ದೊಡ್ಡ ಜಾಲವೇ ಇದೆ. ಇನ್ನು ಅನೇಕ ರೀತಿಯ ಸುಳ್ಳುಗಳನ್ನು ಸತ್ಯ ಅಂತ ಹೇಳಿ ಐವತ್ತರಿಂದ ಐದಾರು ಲಕ್ಷದವರಗೆ ಈ ಹಾವನ್ನು ಮಾರಟ ಮಾಡುವ ಜಾಲವೇ ರಾಜ್ಯದಲ್ಲಿ ಸಕ್ರಿಯವಾಗಿದೆ.
ಸದ್ಯ ಇದೇ ಹಾವಿನಿಂದ ಶ್ರೀಮಂತರಾಗಬೇಕು ಅಂತ ಕನಸು ಕಂಡಿದ್ದ ಓರ್ವ ವ್ಯಕ್ತಿ ಬಾರದ ಲೋಕಕ್ಕೆ ಹೋದ್ರೆ, ಇನ್ನಿಬ್ಬರು ಜೈಲು ಪಾಲಾಗಿದ್ದಾರೆ. ಮತ್ತೊಂದಡೆ ಈ ಹಾವನ್ನು ಸಂರಕ್ಷಿಸುವಲ್ಲಿ ಕಮಲಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು, ಅದನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.



