ಮೈಸೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. 2020ನ್ನು ಸ್ವಾಗತಿಸಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಹಾಗೇ ನ್ಯೂ ಇಯರ್ ಸೆಲಬ್ರೇಷನ್ಗೆ ಡಿಫರೆಂಟ್ ಡಿಫರೆಂಟ್ ಪ್ಲ್ಯಾನ್ಸ್ ಮಾಡ್ತಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹೊಸ ವರ್ಷಾಚರಣೆಗೆ ಭರದ ಸಿದ್ಧತೆ ನಡೆದಿದ್ದು, ಲಕ್ಷಾಂತರ ಲಾಡುಗಳು ಸಿದ್ಧವಾಗಿವೆ.
ಹೊಸ ವರ್ಷ ಬಂತೆಂದರೆ ಎಲ್ಲೆಡೆಯೂ ಸಂಭ್ರಮ ಮನೆಮಾಡಿರುತ್ತೆ. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಹೊಸ ವರ್ಷವನ್ನು ಬರಮಾಡಿಕೊಳ್ತಾರೆ. ಹೀಗೆ ಮೈಸೂರಿನ ವಿಜಯನಗರದಲ್ಲಿರುವ ‘ಶ್ರೀ ಯೋಗ ನರಸಿಂಹ’ ಸ್ವಾಮಿ ದೇಗುಲದಲ್ಲಿ ಹೊಸವರ್ಷಾಚರಣೆಗೆ ಅಂತಾ 2 ಲಕ್ಷ ಲಡ್ಡುಗಳನ್ನ ತಯಾರಿಸಲಾಗಿದೆ. ವರ್ಷದ ಮೊದಲ ದಿನದಂದೇ ಈ ಲಡ್ಡುಗಳನ್ನು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ವಿತರಿಸಲಾಗುತ್ತೆ. ಜನವರಿ 1ರಂದು ಬೆಳಗ್ಗೆ 4 ಗಂಟೆಯಿಂದಲೇ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬರಿಗೂ ಲಡ್ಡು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಒಟ್ಟು 50 ಬಾಣಸಿಗರ ಪರಿಶ್ರಮದಿಂದ ಲಡ್ಡು ತಯಾರಿಸಲಾಗಿದೆ. 50 ಕ್ವಿಂಟಾಲ್ ಕಡಲೇ ಹಿಟ್ಟು, 100 ಕೆಜಿ ಸಕ್ಕರೆ, 4000 ಲೀಟರ್ ಎಣ್ಣೆ, 100 ಕೆಜಿ ಗೋಡಂಬಿ, 100 ಕೆಜಿ ದ್ರಾಕ್ಷಿ, 20 ಕೆಜಿ ಏಲಕ್ಕಿ, 50 ಕೆಜಿ ಲವಂಗ, 20 ಕೆಜಿ ಬಾದಾಮಿಯನ್ನ ಲಡ್ಡು ತಯಾರಿಕೆಗೆ ಬಳಸಲಾಗಿದೆ. ಲಡ್ಡು ತಯಾರಿಕೆಯ ಸಂಪೂರ್ಣ ವೆಚ್ಚವನ್ನು ದೇವಸ್ಥಾನದ ಆಡಳಿತ ಮಂಡಳಿಯೇ ಭರಿಸಿದೆ. ವಿವಿಧ ಗಾತ್ರಗಳಲ್ಲಿ ಲಡ್ಡು ತಯಾರಿಸಲಾಗಿದ್ದು, ಇದಕ್ಕಾಗಿ ಬಾಣಸಿಗರು ಹಗಲು ರಾತ್ರಿ ಕೆಲಸ ಮಾಡಿದ್ದಾರೆ.
1994ರಿಂದಲೂ ಈ ದೇವಸ್ಥಾನದಲ್ಲಿ ಹೊಸ ವರ್ಷದಂದು ಭಕ್ತಾದಿಗಳಿಗೆ ಲಡ್ಡು ಹಂಚಲಾಗುತ್ತಿದೆ. 1000 ದಿಂದ ಆರಂಭವಾದ ಲಡ್ಡು ವಿತರಣೆ ಇವತ್ತು 2 ಲಕ್ಷ ತಲುಪಿದೆ. ಒಟ್ಟಾರೆ ಮೈಸೂರಿನ ಜನರು ಹೊಸ ವರ್ಷದಂದು ದೇವರ ಪ್ರಸಾದವಾಗಿ ಲಡ್ಡು ತಿಂದು ವರ್ಷಪೂರ್ತಿ ಸಿಹಿಯಾಗಿಯೇ ಜೀವನ ನಡೆಸಲಿ ಅನ್ನೋದೆ ಎಲ್ಲರ ಆಶಯ.