AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರ್ಯಾಕ್ಟರ್ ಹರಿಸಿ ಈರುಳ್ಳಿ-ಮೆಣಸಿನಕಾಯಿ ಬೆಳೆ ನಾಶ ಮಾಡಿದ ದುಷ್ಕರ್ಮಿಗಳು, ರೈತ ಕಂಗಾಲು

ಆತ ಇಡೀ ಊರಿಗೆ ಬೇಕಾದ ರೈತ. ಗ್ರಾಮದಲ್ಲಿ ಯಾರಿಗೆ ಏನಾದ್ರೂ ಆದ್ರೆ ನೆರವಿಗೆ ಧಾವಿಸ್ತಿದ್ದ. ಹೀಗಾಗಿ ಆತನಿಗೆ ದುಶ್ಮನ್ ಅನ್ನೋರು ಯಾರೂ ಇಲ್ಲ. ಆದ್ರೆ ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ದುಷ್ಕರ್ಮಿಗಳು ಟ್ರ್ಯಾಕ್ಟರ್ ಹರಿಸಿ ಐದು ಎಕರೆ ಬೆಳೆ ಸರ್ವನಾಶ ಮಾಡಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತ‌ ಕುಟುಂಬದ ಕಣ್ಣೀರು ಹಾಕುತ್ತಿದೆ. ಅದ್ಯಾಕೋ ಗೊತ್ತಿಲ್ಲ ಉತ್ತರ ಕರ್ನಾಟಕ ರೈತರ ಹಣೆ ಬರಹವೇ ಸರಿಯಿಲ್ಲ. ಪ್ರವಾಹ, ನಿರಂತರ ಮಳೆ ಹೊಡೆತಕ್ಕೆ ರೈತ ಸಮುದಾಯದ ಬದುಕು ಮೂರಾಬಟ್ಟೆಯಾಗಿದೆ. ಆದ್ರೆ […]

ಟ್ರ್ಯಾಕ್ಟರ್ ಹರಿಸಿ ಈರುಳ್ಳಿ-ಮೆಣಸಿನಕಾಯಿ ಬೆಳೆ ನಾಶ ಮಾಡಿದ ದುಷ್ಕರ್ಮಿಗಳು, ರೈತ ಕಂಗಾಲು
ಪೃಥ್ವಿಶಂಕರ
|

Updated on:Nov 04, 2020 | 3:03 PM

Share

ಆತ ಇಡೀ ಊರಿಗೆ ಬೇಕಾದ ರೈತ. ಗ್ರಾಮದಲ್ಲಿ ಯಾರಿಗೆ ಏನಾದ್ರೂ ಆದ್ರೆ ನೆರವಿಗೆ ಧಾವಿಸ್ತಿದ್ದ. ಹೀಗಾಗಿ ಆತನಿಗೆ ದುಶ್ಮನ್ ಅನ್ನೋರು ಯಾರೂ ಇಲ್ಲ. ಆದ್ರೆ ರಾತ್ರೋರಾತ್ರಿ ಜಮೀನಿಗೆ ನುಗ್ಗಿದ ದುಷ್ಕರ್ಮಿಗಳು ಟ್ರ್ಯಾಕ್ಟರ್ ಹರಿಸಿ ಐದು ಎಕರೆ ಬೆಳೆ ಸರ್ವನಾಶ ಮಾಡಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದೆ ರೈತ‌ ಕುಟುಂಬದ ಕಣ್ಣೀರು ಹಾಕುತ್ತಿದೆ.

ಅದ್ಯಾಕೋ ಗೊತ್ತಿಲ್ಲ ಉತ್ತರ ಕರ್ನಾಟಕ ರೈತರ ಹಣೆ ಬರಹವೇ ಸರಿಯಿಲ್ಲ. ಪ್ರವಾಹ, ನಿರಂತರ ಮಳೆ ಹೊಡೆತಕ್ಕೆ ರೈತ ಸಮುದಾಯದ ಬದುಕು ಮೂರಾಬಟ್ಟೆಯಾಗಿದೆ. ಆದ್ರೆ ಅಳಿದುಳಿದ ಬೆಳೆ ಉಳಿಸಿಕೊಳ್ಳಲು ರೈತರು ಹರಸಹಾಸ ಪಡ್ತಾಯಿದ್ದಾರೆ. ಸಾಲಸೋಲ ಮಾಡಿ ಬಿತ್ತನೆ ಮಾಡಿದ ಹಣವಾದ್ರೂ ಸಿಗುತ್ತೆ ಅನ್ನೋ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಆದ್ರೆ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಆ ರೈತನ ಫಲವತ್ತಾದ ಬೆಳೆ ಸರ್ವನಾಶವಾಗಿದೆ.

ದುಷ್ಕರ್ಮಿಗಳ ಅಟ್ಟಹಾಸ.. ಹೌದು ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೇರಿ ಗ್ರಾಮದಲ್ಲಿ ಹಿಂದೆಂದೂ ನಡೆಯದ ಅಟ್ಟಹಾಸವನ್ನ ದುಷ್ಕರ್ಮಿಗಳು ಮೆರೆದಿದ್ದಾರೆ. ಯಾಕಂದ್ರೆ ನಿರಂತರ ಮಳೆಗೆ ಜಮೀನುಗಳಲ್ಲಿ ನೀರು ನಿಂತು ಎಲ್ಲ ಬೆಳೆಗಳು ಕೊಳೆತು ಹೋಗಿವೆ. ಆದ್ರೆ ಕೆಲ ಇಳಿಜಾರು ಜಮೀನುಗಳಲ್ಲಿ ಭರ್ಜರಿ ಬೆಳೆ ಬಂದಿದೆ.

ಹಾಲಕೇರಿ ಗ್ರಾಮದ ಬಸವರಾಜ್ ಅಂಗಡಿ ಎಂಬ ರೈತ ಸಾಕಷ್ಟು ಸಾಲಸೋಲ ಮಾಡಿ ಗೊಬ್ಬರ ಹಾಕಿ ಈರುಳ್ಳಿ, ಮೆಣಸಿನಕಾಯಿ ಬೆಳೆದಿದ್ದಾನೆ. ಮೆಣಸಿನಕಾಯಿ ಹಾಗೂ ಈರುಳ್ಳಿ ಭರ್ಜರಿ ಫಸಲು ಬಂದಿದೆ. ಈಗಾಗಲೇ ಈರುಳ್ಳಿ ಕಟಾವು ಮಾಡಿ ಜಮೀನಿನಲ್ಲೇ ಹಾಕಿದ್ದಾರೆ. ಮೆಣಸಿನಕಾಯಿ ಗಿಡಗಳಲ್ಲೂ ಭರ್ಜರಿ ಮೆಣಸಿನಕಾಯಿ ಬಿಟ್ಟಿವೆ. ಆದ್ರೆ ಆದ್ಯಾವ ವಕ್ರದೃಷ್ಠಿ ಈ ರೈತನ ಜಾಮೀನಿನ ಮೇಲೆ ಬಿತ್ತೋ ಗೊತ್ತಿಲ್ಲ. ಬೆಳಗಾಗುವುದ್ರಲ್ಲಿ ಈರುಳ್ಳಿ, ಮೆಣಸಿನಕಾಯಿ ಬೆಳೆಯನ್ನು ದುಷ್ಕರ್ಮಿಗಳು ಸರ್ವನಾಶ ಮಾಡಿದ್ದಾರೆ.

ಈರುಳ್ಳಿ ಮೇಲೆ ಟ್ರ್ಯಾಕ್ಟರ್ ಹರಸಿದ ಪಾಪಿಗಳು.. ನಿನ್ನೆ ದಿನ ಇಡೀ ಕುಟುಂಬ ಜಮೀನಿಗೆ ಆಗಮಿಸಿ ಈರುಳ್ಳಿ ಕಟಾವು ಮಾಡಿ ಹೋಗಿದ್ದಾರೆ. ಆದ್ರೆ ಬೆಳಗ್ಗೆ ಜಮೀನಿಗೆ ಬಂದು ನೋಡಿದ್ರೆ ಇಡೀ ಜಮೀನಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರೋ ಈರುಳ್ಳಿ, ಮೆಣಸಿನಕಾಯಿ ಗಿಡಗಳು ನೋಡಿ ಕಂಗಾಲಾಗಿದ್ದಾರೆ. ಕಟಾವು ಮಾಡಿ ಕೂಡಿ ಹಾಕಿದ್ದ ಈರುಳ್ಳಿ ಮೇಲೆ ಟ್ರ್ಯಾಕ್ಟರ್ ಹರಸಿದ್ದರಿಂದ ಈರುಳ್ಳಿ ಹಾಳಾಗಿದೆ.

ಮೆಣಸಿನಕಾಯಿ ಗಿಡಗಳು ನೆಲಕ್ಕುರುಳಿ ಮೆಣಸಿನಕಾಯಿ ಹಾಳಾಗಿವೆ. ಗ್ರಾಮದಲ್ಲಿ ಯಾರ ಮೇಲೂ ವೈರತ್ವ ಇಲ್ಲ. ಎಲ್ಲರ ಜೊತೆ ಚೆನ್ನಾಗಿ ಒಡನಾಟ ಇದೆ. ಆದ್ರೆ ಯಾರೂ ಈ ದುಷ್ಕಕೃತ್ಯ ಮಾಡಿದ್ದಾರೆ ಅಂತ ಗೊತ್ತಿಲ್ಲ ಅಂತ ರೈತ ಗೋಳಾಡುತ್ತಿದ್ದಾರೆ. ನಮ್ಮ ಮೇಲೆ ದ್ವೇಷ ಇದ್ರೆ ನೇರವಾಗಿ ಬಂದು ಜಗಳ ಮಾಡಲಿ ಆದ್ರೆ ಭೂಮಿತಾಯಿ ಮೇಲೆಕೆ ಸಿಟ್ಟು ಅಂತ ಕಿಡಿಕಾರಿದ್ದಾರೆ.

ಇಡೀ ಗ್ರಾಮವೇ ಮಮ್ಮಲ‌ ಮರಗುತ್ತಿದೆ.. 5 ಎಕರೆ ಪ್ರದೇಶದಲ್ಲಿ ಬೆಳೆದ ಈರುಳ್ಳಿ, ಮೆಣಸಿನಕಾಯಿ ಬೆಲೆಯಿಂದ ಲಕ್ಷಾಂತರ ಲಾಭದ ನಿರೀಕ್ಷೆಯಲ್ಲಿ ಇದ್ದ ರೈತ‌ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಜಮೀನು ಸ್ಥಿತಿ ನೋಡಿ ಇಡೀ ಗ್ರಾಮವೇ ಮಮ್ಮಲ‌ ಮರಗುತ್ತಿದೆ. ರೈತರ ಬಾಳಿನ ಜೊತೆ ಚೆಲ್ಲಾಟವಾಡುವ ಇಂಥ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರೈತರು ಒತ್ತಾಯಿಸಿದ್ದಾರೆ.

ಈ ಕುರಿತು ರೈತ ನರೇಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ಕೂಡ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಏನೇ ಇರಲಿ ರೈತರ ಸ್ಥಿತಿ ಮಾತ್ರ ಅಯ್ಯೋ ಎನ್ನುವಂತಾಗಿದೆ. -ಸಂಜೀವ ಪಾಂಡ್ರೆ

Published On - 3:01 pm, Wed, 4 November 20