RBI ವಿತ್ತೀಯ ನೀತಿ ಪ್ರಕಟ: ರೆಪೊ ದರದಲ್ಲಿಲ್ಲ ಬದಲಾವಣೆ
ಆರ್ಥಿಕತೆಗೆ ಬಲ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ. ಕೊರೊನಾ ಬಂದ ನಂತರದ ದಿನದಿಂದ ಇಲ್ಲಿಯವರೆಗೆ ಆರ್ಥಿಕತೆ ಚೇತರಿಕೆಗೆ ಬೇಕಾದ ಕೆಲಸವನ್ನು ಮಾಡಿದ್ದೇವೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂದು (ಫೆ.5) ವಿತ್ತೀಯ ನೀತಿ ಪ್ರಕಟಿಸಿದೆ. ಸತತ ನಾಲ್ಕನೇ ಬಾರಿಗೆ ರೆಪೊ ದರದಲ್ಲಿ ಆರ್ಬಿಐ ಯಾವುದೇ ಬದಲಾವಣೆ ಮಾಡಿಲ್ಲ. ಈ ವಿಷಯವನ್ನು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ್ ದಾಸ್ ಈ ಕುರಿತು ಮಾಹಿತಿ ನೀಡಿದರು.
ಹಣಕಾಸು ನೀತಿ ಸಮಿತಿ ಈ ಬಾರಿ ರೆಪೊ ದರದಲ್ಲಿ ಯಾವುದೆ ಬದಲಾವಣೆ ಮಾಡುತ್ತಿಲ್ಲ. ಹೀಗಾಗಿ, ಹಾಲಿ ಚಾಲ್ತಿಯಲ್ಲಿರುವ ಶೇ 4ರ ರೆಪೊ ದರ ಮುಂದುವರಿಯಲಿದೆ. ರಿವರ್ಸ್ ರೆಪೊ ದರ ಕೂಡ ಯಾವುದೇ ಬದಲಾವಣೆ ಕಾಣದೆ ಶೇ 3.35 ಇದೆ ಎಂದು ತಿಳಿಸಿದರು. 2021ರ ಬಜೆಟ್ ನಂತರ ಆರು ಸದಸ್ಯರ ಹಣಕಾಸು ನೀತಿ ಸಮಿತಿಯ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆ ಸುಧಾರಿಸಲಿದೆ. ಕೊರೊನಾದಿಂದ ಉಂಟಾದ ಹಾನಿಯನ್ನು ಭವಿಷ್ಯದಲ್ಲಿ ನಾವು ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ. ರಿಸರ್ವ್ ಬ್ಯಾಂಕ್ 2020 ಮೇ ತಿಂಗಳಲ್ಲಿ ಕೊನೆಯ ಬಾರಿಗೆ ರೆಪೊ ದರವನ್ನು ಕಡಿಮೆ ಮಾಡಿತ್ತು. ಈ ಮೂಲಕ ಆರ್ಥಿಕತೆಗೆ ಬಲ ತುಂಬುವ ಕೆಲಸ ಮಾಡಿತ್ತು.
ಇನ್ನು, ಆರ್ಥಿಕತೆಗೆ ಬಲ ತುಂಬುವ ಕೆಲಸವನ್ನು ನಾವು ಮಾಡುತ್ತೇವೆ. ಕೊರೊನಾ ಬಂದ ನಂತರದ ದಿನದಿಂದ ಇಲ್ಲಿಯವರೆಗೆ ಆರ್ಥಿಕತೆ ಚೇತರಿಕೆಗೆ ಬೇಕಾದ ಕೆಲಸವನ್ನು ಮಾಡಿದ್ದೇವೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಇನ್ನು, ಇಂದು ಹಣಕಾಸು ನೀತಿ ಘೋಷಣೆಗೂ ಮೊದಲೇ ಷೇರು ಮಾರುಕಟ್ಟೆಯಲ್ಲಿ ಭಾರೀ ಏರಿಕೆ ಕಂಡಿತ್ತು. ನಿಫ್ಟಿ 15 ಸಾವಿರದ ಗಡಿ ತಲುಪಿದರೆ, ಸೆನ್ಸೆಕ್ಸ್ 51 ಸಾವಿರದ ಗಡಿ ತಲುಪಿದೆ. ಮಧ್ಯಾಹ್ನದ ವೇಳೆಗೆ ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದೆ.
ಏನಿದು ರೆಪೊ ದರ? ನಮಗೆ ಸಾಲ ನೀಡುವುದಕ್ಕೆ ಬ್ಯಾಂಕ್ಗಳು ಆರ್ಬಿಐನಿಂದ ಸಾಲ ಪಡೆಯುತ್ತವೆ. ಆರ್ಬಿಐ ಬ್ಯಾಂಕ್ಗಳಿಗೆ ನೀಡುವ ಹಣಕ್ಕೆ ಬಡ್ಡಿ ಹಾಕುತ್ತದೆ. ಈ ಬಡ್ಡಿ ದರವೇ ರೆಪೊ ದರ. ಒಂದೊಮ್ಮೆ ರೆಪೊ ದರವನ್ನು ಆರ್ಬಿಐ ಹೆಚ್ಚಿಸಿದರೆ ಜನಸಾಮಾನ್ಯರಿಗೆ ನೀಡುವ ಸಾಲದ ಬಡ್ಡಿ ದರ ಹೆಚ್ಚಲಿದೆ. ರೆಪೊ ದರ ಕಡಿಮೆ ಆದರೆ, ನಮಗೆ ಸಿಗುವ ಸಾಲದ ಬಡ್ಡಿ ದರ ಕಡಿಮೆ ಆಗಲಿದೆ. ಇಂದು ರೆಪೊ ದರದಲ್ಲಿ ಯಾವುದೆ ಬದಲಾವಣೆ ಕಂಡಿಲ್ಲ. ಹೀಗಾಗಿ, ಸಾಮಾನ್ಯರಿಗೆ ಸಿಗುವ ಸಾಲದ ಹಣದ ಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ.
Stock Market: ಷೇರು ಮಾರುಕಟ್ಟೆ ಬೆಳವಣಿಗೆಯಿಂದ ಜನ ಸಾಮಾನ್ಯರಿಗೇನು ಲಾಭ?