ಮನುಷ್ಯನ ದೇಹಕ್ಕೆ ಪೋಷಕಾಂಶಗಳು ಯಥೇಚ್ಚವಾಗಿ ಸಿಕ್ಕರೆ ದೈಹಿಕವಾಗಿ ಸದೃಢವಾಗಿರುವುದು ಸಾಧ್ಯ. ಅದಕ್ಕಾಗಿ ಕಾಲ ಕಾಲಕ್ಕೆ ಆಹಾರ, ನಿಯಮಿತ ವ್ಯಾಯಾಮ, ನಿದ್ರೆ ಎಲ್ಲವೂ ಅತ್ಯವಶ್ಯಕ. ಆದರೆ, ಈಗೀಗ ಜನರು ಆಫೀಸ್, ಕೆಲಸ, ಓಡಾಟ ಎಂದು ತಲ್ಲೀನರಾಗಿ ಹೊತ್ತಿಗೊಂದು ಊಟ ಮಾಡುವುದೇ ಕಷ್ಟ ಎನ್ನುವಂತೆ ಬದುಕುತ್ತಿದ್ದಾರೆ. ಜಂಕ್ ಫುಡ್, ಫಾಸ್ಟ್ ಫುಡ್ಗಳ ಸೆಳೆತಕ್ಕೆ ಸಿಕ್ಕು ಸಾಂಪ್ರದಾಯಿಕ ಆಹಾರವನ್ನೇ ಮರೆತು ಬಿಟ್ಟಿದ್ದಾರೆ. ಹೀಗೆ ಒತ್ತಡದಲ್ಲಿ ಬದುಕುವವರಿಗೆ ಸಂಜೀವಿನಿಯಂತೆ ಸುಲಭದಲ್ಲಿ ಸಿಗುವ ಆರೋಗ್ಯಕರ ಆಹಾರವೆಂದರೆ ಹಣ್ಣು-ಹಂಪಲು. ಈ ಹಣ್ಣುಗಳ ಪೈಕಿಯಲ್ಲೂ ಅತ್ಯಂತ ಸುಲಭವಾಗಿ ಸಿಗುವುದೆಂದರೆ ಅದು ಬಾಳೆಹಣ್ಣು.
ಸಾಧಾರಣವಾಗಿ ಬಾಳೆಹಣ್ಣು ಎಂದಾಕ್ಷಣ ಕೆಲವರು ಅಸಡ್ಡೆ ತೋರುತ್ತಾರೆ. ಸುಲಭವಾಗಿ ಸಿಗುವ ಈ ಹಣ್ಣು ಅತ್ಯುತ್ತಮ ಶಕ್ತಿವರ್ಧಕ ಆಗಿದ್ದರೂ ತಿನ್ನಲು ಇಷ್ಟಪಡುವುದಿಲ್ಲ. ಆದರೆ, ಜಗತ್ತಿನಾದ್ಯಂತ ಬಾಳೆಹಣ್ಣಿನಲ್ಲಿ 1,000ಕ್ಕೂ ಅಧಿಕ ತಳಿಗಳಿದ್ದು, ಅವುಗಳಲ್ಲಿ ಒಂದಕ್ಕಿಂತ ಒಂದು ವಿಶಿಷ್ಟವಾಗಿವೆ. ಅದರಲ್ಲೂ ದಕ್ಷಿಣ ಏಷಿಯಾ ಭಾಗದಲ್ಲಿ ಕಂಡು ಬರುವ ಕೆಂಪು ಬಾಳೆಹಣ್ಣು ತಿನ್ನಲು ರುಚಿಕರವಾಗಿದ್ದು, ಉಳಿದ ಬಾಣೆಹಣ್ಣಿಗಿಂತ ಸಿಹಿಯಾಗಿರುತ್ತದೆ.
ಮುಖ್ಯವಾಗಿ ಕೆಂಪು ಬಾಳೆಹಣ್ಣುಗಳು ಹೃದಯದ ಆರೋಗ್ಯ ವರ್ಧನೆಗೆ ಸಹಕಾರಿಯಾಗಿರುವುದಲ್ಲದೇ, ದೇಹಕ್ಕೆ ಅತಿ ಹೆಚ್ಚು ಪೋಷಕಾಂಶ ಹಾಗೂ ರೋಗ ನಿರೋಧಕ ಶಕ್ತಿಯನ್ನು ಒದಗಿಸುತ್ತವೆ. ಜೀರ್ಣಶಕ್ತಿಗೆ ಹೆಚ್ಚು ಸಹಕಾರಿಯಾಗಿರುವ ಈ ಜಾತಿಯ ಬಾಳೆ ಹಣ್ಣುಗಳ ನಿಯಮಿತ ಸೇವನೆಯಿಂದ ಅಜೀರ್ಣ ಸಮಸ್ಯೆ ನಿವಾರಿಸಿಕೊಳ್ಳಬಹುದು. ನಮ್ಮಲ್ಲಿ ಯಥೇಚ್ಚವಾಗಿ ಸಿಗುವ ಹಳದಿ ಬಣ್ಣದ ಬಾಳೆಹಣ್ಣುಗಳಿಗಿಂತಲೂ ವಿಶಿಷ್ಟವಾಗಿರುವ ಇವುಗಳನ್ನು ಸೇವಿಸುವುದರಿಂದ ಅನೇಕ ಅಂಶಗಳು ದೇಹಕ್ಕೆ ಲಭಿಸುತ್ತವೆ ಎಂದು ತಜ್ಞರೂ ಹೇಳುತ್ತಾರೆ.
ಆ ಪೈಕಿ ಬಹುಮುಖ್ಯವಾಗಿ ಪೊಟ್ಯಾಶಿಯಂ, ವಿಟಮಿನ್ ಸಿ, ವಿಟಮಿನ್ ಬಿ6 ಅಂಶಗಳನ್ನು ಹೆಚ್ಚೆಚ್ಚು ಒಳಗಂಡಿರುವ ಈ ಜಾತಿಯ ಬಾಳೆಹಣ್ಣಿನ ನಾರು ಪಚನ ಕ್ರಿಯೆಗೆ ಸಹಕಾರಿಯಾಗಿದೆ. ಹೃದಯದ ಆರೋಗ್ಯ ವರ್ಧಿಸುವ ಅಂಶಗಳನ್ನು ಹೊಂದಿರುವ ಕೆಂಪು ಬಾಳೆಹಣ್ಣು ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣಗಳನ್ನೂ ಒಳಗೊಂಡಿದೆ. ಅಲ್ಲದೇ ಕಣ್ಣಿನ ದೃಷ್ಟಿ ಕಾಪಾಡಿಕೊಳ್ಳಲೂ ಇದರಲ್ಲಿರುವ ಅಂಶಗಳು ಸಹಾಯ ಮಾಡುತ್ತವೆ. ಹೆಚ್ಚೂ ಕಡಿಮೆ ಮಾಮೂಲಿ ಬಾಳೆಹಣ್ಣುಗಳಲ್ಲಿರುವ ಎಲ್ಲಾ ಧನಾತ್ಮಕ ಅಂಶಗಳನ್ನು ಹೊಂದಿರುವ ಈ ಕೆಂಪು ಬಾಳೆಹಣ್ಣು ಕೆಲವೊಂದಷ್ಟು ವಿಚಾರದಲ್ಲಿ ಅದಕ್ಕೂ ಮಿಗಿಲಾಗಿ ಒಳ್ಳೆಯ ಪರಿಣಾಮ ಬೀರುತ್ತದೆ ಎಂಬುದು ಎನ್ನುವುದು ತಜ್ಞರ ಅಭಿಪ್ರಾಯ.
ಇದನ್ನೂ ಓದಿ:
ಗರ್ಭಿಣಿಯರೇ ಆಹಾರದ ಬಗ್ಗೆ ಇರಲಿ ಎಚ್ಚರ; ಜಂಕ್ ಫುಡ್ಗಳ ಸೇವನೆ ಬಿಟ್ಟೇಬಿಡಿ..ಇಲ್ದಿದ್ರೆ ಮಕ್ಕಳಿಗೆ ಅಪಾಯ
ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಮಧುಮೇಹದಿಂದ ದೂರ ಇರಲು ಈ ಆಹಾರ ಪದ್ಧತಿಯೇ ಸಾಕು