Asia’s Richest Person Mukesh Ambani: ಏಷ್ಯಾದ ಅತ್ಯಂತ ಶ್ರೀಮಂತ ಕಿರೀಟ ಮತ್ತೆ ಮುಕೇಶ್ ಮುಡಿಗೆ
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತೆ ಏಷ್ಯಾದ ಅತ್ಯಂತ ಶ್ರೀಮಂತ ಎಂಬ ಸಿಂಹಾಸನದಲ್ಲಿ ಕೂತಿದ್ದಾರೆ. ಈವರೆಗೆ ಆ ಸ್ಥಾನದಲ್ಲಿದ್ದ ಚೀನಾದ ಉದ್ಯಮಿ ಝೋಂಗ್ ಶನ್ಷನ್ರನ್ನು ಪಕ್ಕಕ್ಕೆ ಸರಿಸಿ, ಈ ಹುದ್ದೆಗೆ ಏರಿದ್ದಾರೆ.
ಏಷ್ಯಾದ ಅತಿ ಶ್ರೀಮಂತ ಯಾರು ಎಂಬುದಕ್ಕೆ ಮ್ಯೂಸಿಕಲ್ ಚೇರ್ ಮುಂದುವರಿದಿದೆ. 8000 ಕೋಟಿ ಅಮೆರಿಕನ್ ಡಾಲರ್ಗೂ ಹೆಚ್ಚು ಆಸ್ತಿಯೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತೆ ಆ ಸ್ಥಾನಕ್ಕೆ ಬಂದು ಕೂತಿದ್ದಾರೆ. ಚೀನಾದ ಬಾಟಲ್ ನೀರಿನ ಕಂಪೆನಿ ಮಾಲೀಕರಾದ ಝೋಂಗ್ ಶನ್ಷನ್ರನ್ನು ಪಕ್ಕಕ್ಕೆ ಸರಿಸಿ, ಮುಕೇಶ್ ನಂಬರ್ ಒನ್ ಆಗಿದ್ದಾರೆ. ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದಂತೆ, ಅಂಬಾನಿ 8000 ಕೋಟಿ ಅಮೆರಿಕನ್ ಡಾಲರ್ ಹೊಂದಿದ್ದಾರೆ ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 5,84,000 ಕೋಟಿ ರೂಪಾಯಿಗೂ ಹೆಚ್ಚು. ಹೌದು ನೀವು ಸರಿಯಾಗಿಯೇ ಓದುತ್ತಿದ್ದೀರಿ, 5.84 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು. ಅತ್ತ, ಚೀನಾದ ಶ್ರೀಮಂತ ಉದ್ಯಮಿ ಝೋಂಗ್ ಶನ್ಷನ್ ಸಂಪತ್ತು 2,200 ಕೋಟಿ ಅಮೆರಿಕನ್ ಡಾಲರ್ ಕುಸಿದು, 7660 ಕೋಟಿ ಯುಎಸ್ಡಿಗೆ ಇಳಿದಿದೆ.
ಕಳೆದ ಎರಡು ವರ್ಷಗಳಲ್ಲಿ ಬಹುತೇಕ ಸಮಯ ಏಷ್ಯಾದ ಅತ್ಯಂತ ಶ್ರೀಮಂತ ಎನಿಸಿಕೊಂಡಿದ್ದವರು ಮುಕೇಶ್ ಅಂಬಾನಿ. ಅವರಿಗೂ ಮುಂಚೆ ಟಾಪ್ನಲ್ಲಿದ್ದ ವ್ಯಕ್ತಿ ಜಾಕ್ ಮಾರನ್ನು ಪಕ್ಕಕ್ಕೆ ಸರಿಸಿ, ಮುಕೇಶ್ ಮೇಲೇರಿದ್ದರು. ಆ ನಂತರ ಎರಡು ಕಂಪೆನಿಗಳ ಲಿಸ್ಟಿಂಗ್ನಿಂದಾಗಿ ಝೋಂಗ್ ಮೈದಾನಕ್ಕೆ ಇಳಿದರು. ಡಿಸೆಂಬರ್ ಕೊನೆ ಹಾಗೂ 2021ರ ಜನವರಿ ಆರಂಭಕ್ಕೆ ಅಂಬಾನಿ ಕಿರೀಟವನ್ನು ಕಳಚಿ, ತಾವಿಟ್ಟುಕೊಂಡರು. ಅಷ್ಟೇ ಅಲ್ಲ, ವಾರೆನ್ ಬಫೆಟ್ರನ್ನು ದಾಟಿ, ಜಗತ್ತಿನ ಆರನೇ ಶ್ರೀಮಂತ ಎನಿಸಿಕೊಂಡರು.
ಅಂದಹಾಗೆ ಝೋಂಗ್ ಅವರ ನೊಂಗ್ಫು ಸ್ಪ್ರಿಂಗ್ ಕಂ. ಅದರ ಐಪಿಒ ವಿತರಣೆ ಬೆಲೆಗಿಂತ ಮೂರು ಪಟ್ಟಿಗೂ ಹೆಚ್ಚು ಮೇಲೇರಿತು. ಇನ್ನು ಲಸಿಕೆ ತಯಾರಿಸುವ ಬೀಜಿಂಗ್ ವಾಂಟೈ ಬಯಾಲಜಿಕಲ್ ಫಾರ್ಮಸಿ ಎಂಟರ್ಪ್ರೈಸ್ ಕಂಪೆನಿ 3,757 ಪರ್ಸೆಂಟ್ ಹೆಚ್ಚಳವಾಯಿತು. ಆದರೆ ಈ ವಾರ ಹಾಂಕಾಂಗ್ ಮತ್ತು ಚೀನೀ ಷೇರು ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದರಿಂದ ಷೇರಿನ ಹೊಳಪು ಮಾಸಿತು. ನೊಂಗ್ಫು ಷೇರು ತನ್ನ ಗಳಿಕೆಯನ್ನು ಕಳೆದುಕೊಂಡಿತು. ಇನ್ನು ವಾಂಟೈ ದಾಖಲೆ ಮಟ್ಟದ ತಿಂಗಳ ಇಳಿಕೆ ದಾಖಲಿಸಿತು.
ಮುಕೇಶ್ ಅಂಬಾನಿ ತಮ್ಮ ಸಾಮ್ರಾಜ್ಯವನ್ನು ಎನರ್ಜಿಯಿಂದ ತಂತ್ರಜ್ಞಾನದ ಮತ್ತು ಇ-ಕಾಮರ್ಸ್ ಕಡೆಗೆ ವಿಸ್ತರಿಸುತ್ತಾ ಇದ್ದಾರೆ. ಕಳೆದ ವರ್ಷ ರಿಲಯನ್ಸ್ ಡಿಜಿಟಲ್ ಮತ್ತು ರೀಟೇಲ್ ಉದ್ಯಮದ ಷೇರಿನ ಪಾಲು 2700 ಕೋಟಿ ಅಮೆರಿಕನ್ ಡಾಲರ್ನಷ್ಟು ಗೂಗಲ್, ಫೇಸ್ಬುಕ್ ಮತ್ತಿತರ ಜಾಗತಿಕ ಕಂಪೆನಿಗಳಿಗೆ ಮಾರಾಟ ಮಾಡಿದ್ದರು. ಇದರಿಂದಾಗಿ ಅಂಬಾನಿ ಆಸ್ತಿಯಲ್ಲಿ 1800 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಯಿತು. ತೈಲದಿಂದ ರಾಸಾಯನಿಕದ ತನಕ ರಿಲಯನ್ಸ್ ಇಂಡಸ್ಟ್ರೀಸ್ ಉದ್ಯಮ ವ್ಯವಹಾರವು ಕಳೆದ ಹಣಕಾಸು ವರ್ಷದಲ್ಲಿ 60 ಪರ್ಸೆಂಟ್ ಗೂ ಹೆಚ್ಚು ಆದಾಯ ತಂದಿದೆ. ಇದರಿಂದಾಗಿ ಇನ್ನಷ್ಟು ಹೂಡಿಕೆದಾರರನ್ನು ಸೆಳೆಯಲು ಹಾಗೂ ಸೌದಿ ಅರೇಬಿಯನ್ ಆಯಿಲ್ ಕಂಪೆನಿಗೆ ಪ್ರಸ್ತಾವಿತ ಷೇರು ಪಾಲು ಮಾರಾಟ ಮಾಡಲು ನೆರವಾಗುತ್ತದೆ.
ಇದನ್ನೂ ಓದಿ: Corona impact on global wealth: ಅತಿ ಶ್ರೀಮಂತರಿಗೆ ನಾನಾ ದೇಶದಲ್ಲಿ ನಾನಾ ಅಳತೆಗೋಲು