ಮತಗಳನ್ನು ಹರಾಜಿಗೆ ಇಟ್ಟಿದ್ದಾರೆ; ವಿಪಕ್ಷ ನಾಯಕ ಸಿದ್ದರಾಮಯ್ಯ ವಿಷಾದ
Ssiddaramaiah: ವರ್ಷದಲ್ಲಿ ಕನಿಷ್ಠ 60 ದಿನ ಸದನ ನಡೆಯಲೇಬೇಕು. ಈ ಕುರಿತು ಕಾನೂನು ಕೂಡ ತಂದಿದ್ದೇವೆ. ಸದನ ನಡೆಯುವ ಬಗ್ಗೆ ಸರ್ಕಾರ ನಿರ್ಧರಿಸುವುದು ಬೇಡ. ಎಷ್ಟು ದಿನ ನಡೆಯಬೇಕೆಂದು ಸಭಾಧ್ಯಕ್ಷರು ನಿರ್ಧರಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಚುನಾವಣೆಗಳನ್ನು ಸರ್ಕಾರಗಳೇ ನಡೆಸಬೇಕು ಎಂದು ವಿಧಾನಸೌಧದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅಭ್ಯರ್ಥಿಗಳು ಮತ ಕೇಳುವುದಕ್ಕೆ ಹೋಗಬಾರದು. ಮತ ಕೇಳಲು ಹೋದರೆ ವ್ಯಾಪಾರ ಶುರುವಾಗುತ್ತದೆ. ಮತಗಳನ್ನು ಹರಾಜಿಗೆ ಇಟ್ಟಿದ್ದಾರೆ ಎಂದು ಹೇಳಿದರು. 1983ರಲ್ಲಿ ಬೂತ್ ನೋಡಿಕೊಳ್ಳಲು 100 ರೂ. ಕೊಟ್ಟರೆ ತೆಗೆದುಕೊಳ್ಳುತ್ತಿರಲಿಲ್ಲ. ಹಣ ನೀಡಿ ಅವಮಾನ ಮಾಡಬೇಡಿ ಎನ್ನುತ್ತಿದ್ದರು. ಆಗ ಪ್ರತಿ ಹಳ್ಳಿಯಲ್ಲೂ ಚುನಾವಣಾ ಖರ್ಚಿಗೆ ಜನರೇ ಹಣವನ್ನು ನೀಡುತ್ತಿದ್ದರು. ಈಗ ಹಣ ಇಲ್ಲದಿದ್ದರೆ ಏಕೆ ಸ್ಪರ್ಧಿಸಿದ್ದೀರಿ ಅಂತಾರೆ. ಪಕ್ಷಾಂತರ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿ ಆಗಬೇಕು ಎಂದರು.
ವರ್ಷದಲ್ಲಿ ಕನಿಷ್ಠ 60 ದಿನ ಸದನ ನಡೆಯಲೇಬೇಕು. ಈ ಕುರಿತು ಕಾನೂನು ಕೂಡ ತಂದಿದ್ದೇವೆ. ಸದನ ನಡೆಯುವ ಬಗ್ಗೆ ಸರ್ಕಾರ ನಿರ್ಧರಿಸುವುದು ಬೇಡ. ಎಷ್ಟು ದಿನ ನಡೆಯಬೇಕೆಂದು ಸಭಾಧ್ಯಕ್ಷರು ನಿರ್ಧರಿಸಬೇಕು. ಸಭಾಧ್ಯಕ್ಷರು ಮತ್ತು ಸಭಾಪತಿ ಗಟ್ಟಿ ನಿಲುವು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಮೌಲ್ಯ ಕುಸಿಯುತ್ತಿರುವುದಕ್ಕೆ ನಾವೇ ಹೊಣೆ. ಇದಕ್ಕೆ ಅವರಿವರ ಮೇಲೆ ಬೆಟ್ಟು ತೋರುವುದು ತಪ್ಪು. ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಕೆಲಸ ಮಾಡದೆ ದಾರಿ ತಪ್ಪಿದರೆ ಮೌಲ್ಯ ಕುಸಿಯುತ್ತದೆ. ಈಗ ಆಗಿರುವುದೂ ಇದೆ. ಸಂವಿಧಾನದ ಮೂಲ ಆಶಯಗಳು ಗೊತ್ತಿಲ್ಲದವರು ಕಾನೂನು ಕಾನೂನು ರಚನೆ ಮಾಡುತ್ತಿದ್ದಾರೆ ಎಂದು ಜನಪ್ರತಿನಿಧಿಗಳ ಬಗ್ಗೆ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು. ಸ್ವಾತಂತ್ರ ಬಂದ ದಿನಗಳಲ್ಲಿ ಸಾಕ್ಷರತೆ ಶೇ 12 ರಷ್ಟಿತ್ತು. ಈಗ ಸಾಕ್ಷರತೆ ಶೇ 78ರಷ್ಷಿದೆ. ಆದರೆ ಅವತ್ತು ನಡೆಯುತ್ತಿದ್ದ ಕಲಾಪಕ್ಕೂ ಇವತ್ತಿನ ಕಲಾಪಕ್ಕೂ ಎಷ್ಟು ವ್ಯತ್ಯಾಸ ಇದೆ. ಸಂಸದೀಯ ಮೌಲ್ಯಗಳು ಕುಸಿಯುತ್ತಿರುವುದು ಸ್ಪಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು.
ದುಡ್ಡು ಇರುವವರು, ಜಾತಿ ಬಲ ಇರುವವರು, ಕ್ರಿಮಿನಲ್ಗಳು ಚುನಾವಣೆಯಲ್ಲಿ ಆರಿಸಿ ಬರುತ್ತಿದ್ದಾರೆ. ಹೀಗಾದರೆ ಸಂಸದೀಯ ಮೌಲ್ಯಗಳು ಕುಸಿಯದೆ ಮತ್ತೇನು ಆಗುತ್ತದೆ? ಚುನಾವಣೆ ವ್ಯವಸ್ಥೆ ಬದಲಾಗಬೇಕು. ಪಕ್ಷಗಳಲ್ಲಿ ಬದಲಾವಣೆ ಆಗಬೇಕು ಎಂದರು
ಮೈಸೂರು ನಗರ ಪಾಲಿಕೆ ಮೇಯರ್ ಚುನಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ನಮ್ಮದೇನಿಲ್ಲ, ನಿರ್ಧರಿಸಲು ಸ್ಥಳೀಯ ನಾಯಕರಿಗೆ ಬಿಟ್ಟಿದ್ದೆವು. ಚುನಾವಣೆ ಬಗ್ಗೆ ನಿರ್ಧಾರ ಮಾಡಿದ್ದು ಸ್ಥಳೀಯ ನಾಯಕರು. ರಾಜ್ಯ ನಾಯಕರ ನಿರ್ಧಾರವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: PFI, SDPI ಸಂಘಟನೆಗಳನ್ನ ಬೆಳೆಸುತ್ತಿರುವುದೇ BJP; ಅವರದೇ ಸರ್ಕಾರವಿದೆ, ಬೇಕಿದ್ದರೆ ಬ್ಯಾನ್ ಮಾಡಲಿ: ಸಿದ್ದರಾಮಯ್ಯ ಸವಾಲ್
ಇದನ್ನೂ ಓದಿ: ಮುಖ ತೋರಿಸಲಾಗದೇ ಪ್ರಧಾನಿ ಮೋದಿ ಗಡ್ಡ ಬಿಟ್ಟಿದ್ದಾರೆ; ಮಾಜಿ ಸಿಎಂ ಸಿದ್ದರಾಮಯ್ಯ ಕುಹಕ