‘ಪೊಗರು’ ವಿವಾದ: ಟ್ವೀಟ್ ಮೂಲಕ ಬೇಷರತ್ ಕ್ಷಮೆ ಕೇಳಿದ ನಟ ಧ್ರುವ ಸರ್ಜಾ
ನಮ್ಮ ಇಡೀ ವಂಶವೇ ಹಿಂದುತ್ವ ಪದ್ಧತಿ ಅನುಸರಿಸುತ್ತಾ ಬಂದಿದೆ. ಹಿಂದುತ್ವವನ್ನು ಗೌರವಿಸುತ್ತಾ ಬದುಕಿದ್ದೇವೆ ಎಂದು ಧ್ರುವ ಸರ್ಜಾ ಟ್ವೀಟ್ನಲ್ಲಿ ಹೇಳಿದ್ದಾರೆ.
ಬೆಂಗಳೂರು: ಬ್ರಾಹ್ಮಣ ಸಮುದಾಯದವರಿಗೆ ಪೊಗರು ಸಿನಿಮಾದಲ್ಲಿ ಅವಮಾನ ಮಾಡಲಾಗಿದೆ ಎನ್ನುವ ವಿವಾದ ತಣ್ಣಗಾಗುವ ಲಕ್ಷಣ ಕಂಡು ಬಂದಿದೆ. ಈ ದೃಶ್ಯಗಳನ್ನು ತೆಗೆದು ಹಾಕುತ್ತೇವೆ ಎಂದು ಚಿತ್ರತಂಡ ಸ್ಪಷ್ಟಪಡಿಸಿತ್ತು. ಈ ಬೆನ್ನಲ್ಲೇ, ನಟ ಧ್ರುವ ಸರ್ಜಾ ಟ್ವೀಟ್ ಮೂಲಕ ಕ್ಷಮೆ ಯಾಚಿಸಿದ್ದಾರೆ.
‘ನಮ್ಮ ಇಡೀ ಕುಟುಂಬ ಹನುಮಭಕ್ತರು. ಆಂಜನೇಯನ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನಮ್ಮ ಇಡೀ ವಂಶವೇ ಹಿಂದುತ್ವ ಪದ್ಧತಿ ಅನುಸರಿಸುತ್ತಾ ಬಂದಿದೆ. ಹಿಂದುತ್ವವನ್ನು ಗೌರವಿಸುತ್ತಾ ಬದುಕಿದ್ದೇವೆ. ತಾತನ ಕಾಲದಿಂದಲೂ ಹಿಂದುತ್ವದ ಪ್ರತಿಪಾದಕರಾಗಿದ್ದೇವೆ. ಕಲೆಯೇ ಧರ್ಮ, ನಾವು ಎಲ್ಲ ಧರ್ಮಗಳನ್ನ ಗೌರವಿಸಿದ್ದೇವೆ’ ಎಂದು ಟ್ವೀಟ್ ಮಾಡಿದ್ದಾರೆ.
ಮುಂದುವರಿದು, ‘ನನ್ನ ಚಿತ್ರದಲ್ಲಿರುವ ದೃಶ್ಯದಿಂದ ಸಮುದಾಯವೊಂದಕ್ಕೆ ನೋವಾಗಿದೆ ಎಂಬ ಮಾತು ನಿಜಕ್ಕೂ ಬೇಸರ ತಂದಿದೆ. ಈ ಕಾರಣಕ್ಕೆ ನಾನು ಬೇಷರತ್ ಕ್ಷಮೆ ಕೇಳುತ್ತೇನೆ. ನಿಮಗೆ ಬೇಸರವಾಗಿರುವಂತಹ ದೃಶ್ಯಗಳನ್ನ ಕತ್ತರಿಸಿದ್ದೇವೆ. ಸೆನ್ಸಾರ್ ಬಳಿಕ ನಿಮ್ಮ ಜತೆ ಚರ್ಚಿಸಲು ನಿರ್ಧರಿಸಿದ್ದೇವೆ. ಈಗ ಅದನ್ನು ಸರಿಪಡಿಸಲು ತಂತ್ರಜ್ಞರ ತಂಡ ಸಿದ್ಧವಾಗಿದೆ. ನನ್ನ ಮನವಿಯನ್ನ ಪುರಸ್ಕರಿಸಿ ಎಂದಿನಂತೆ ಆಶೀರ್ವದಿಸಿ’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.
Jai Hanuman ? pic.twitter.com/mqnrKkkjJH
— Dhruva Sarja (@DhruvaSarja) February 24, 2021
ಧ್ರುವ ಸರ್ಜಾ ಅಭಿಮಾನಿಗಳಿಗೆ ದೂರು ಈಗಾಗಲೇ ಬ್ರಾಹ್ಮಣ ಮಹಾಸಭಾದವರು ಹೇಳಿದಂತೆ ಸಿನಿಮಾ ಎಡಿಟ್ ಮಾಡಲಾಗಿದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲಿ ಪೊಗರು ಸಿನಿಮಾಗೆ ಧಕ್ಕೆ ತರುವ ವಿಚಾರಗಳಿಗೆ ಬ್ರೇಕ್ ಹಾಕಬೇಕು ಎಂದು ಧ್ರುವ ಸರ್ಜಾ ಅಭಿಮಾನಿಗಳು ಕಮಿಷನರ್ಗೆ ಮನವಿ ಸಲ್ಲಿಕೆ ಮಾಡಿದ್ದಾರೆ.
ಏನಿದು ಪ್ರಕರಣ? ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿಯಾದ ಹೇಳಿಕೆಗಳಿವೆ. ಇದರಿಂದ ಸಮುದಾಯದ ಜನರಿಗೆ ನೋವುಂಟಾಗಿದೆ. ಕೂಡಲೇ ಚಿತ್ರತಂಡ, ಪೊಗರು ಚಿತ್ರದ ನಿರ್ದೇಶಕ, ನಿರ್ಮಾಪಕರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ವಾಣಿಜ್ಯ ಮಂಡಳಿಗೆ ದೂರು ನೀಡುತ್ತೇವೆ. ಜತೆಗೆ ಸಿನಿಮಾದಲ್ಲಿರುವ ದೃಶ್ಯವನ್ನು ತೆಗೆದುಹಾಕಬೇಕು. ಇಲ್ಲದಿದ್ದರೆ ಮುಂದೆ ಹೋರಾಟ ಮಾಡ್ತೀವಿ ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಪೊಗರು ಸಿನಿಮಾ ತಂಡಕ್ಕೆ ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಚಿತ್ರತಂಡ ಕ್ಷಮೆ ಕೇಳಿತ್ತು.
ಇದನ್ನೂ ಓದಿ: Pogaru | ‘ಪೊಗರು’ ಸಿನಿಮಾ ವಿವಾದಕ್ಕೆ ತೆರೆ: ಚಿತ್ರದಲ್ಲಿನ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ