ಬೆಂಗಳೂರು: ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯದ ಕುರಿತು ವಿವಾದಾತ್ಮಕ ದೃಶ್ಯಗಳು ಇದ್ದ ಹಿನ್ನೆಲೆಯಲ್ಲಿ ಸಮುದಾಯದವರಿಂದ ತೀವ್ರ ಪ್ರತಿಭಟನೆ ನಡೆಯಿತು. ಇದೀಗ, ಬ್ರಾಹ್ಮಣ ಸಮುದಾಯದ ಒತ್ತಾಯದ ಮೇರೆಗೆ ಪೊಗರು ಚಿತ್ರದಲ್ಲಿನ ವಿವಾದಾತ್ಮಕ ದೃಶ್ಯಗಳಿಗೆ ಕತ್ತರಿ ಬಿದ್ದಿದೆ. ಪೊಗರು ಚಿತ್ರತಂಡ ವಿವಾದಿತ ದೃಶ್ಯಗಳಿಗೆ ಕತ್ತರಿ ಹಾಕಿದೆ.
ಈ ಮೂಲಕ, ಪೊಗರು ಸಿನಿಮಾ ವಿವಾದ ಸುಖಾಂತ್ಯ ಕಂಡಿದೆ. ಸದ್ಯ ಪೊಗರು ಸಿನಿಮಾ ನೋಡಿದ ಬ್ರಾಹ್ಮಣ ಸಭಾದ ಸದಸ್ಯರು ವಿವಾದಾತ್ಮಕ ಸೀನ್ಗಳಿಗೆ ಕತ್ತರಿ ಹಾಕಿರುವುದನ್ನು ಗಮನಿಸಿದ್ದಾರೆ. ಈ ಹಿಂದೆ, ನಿರ್ದೇಶಕ ನಂದಕಿಶೋರ್ ಮತ್ತು ಸಮುದಾಯದ ಸದಸ್ಯರ ಮಧ್ಯೆ ಮಾತುಕತೆ ನಡೆದಿತ್ತು. ಸದ್ಯ, ತಾಂತ್ರಿಕ ಕಾರಣದಿಂದ ಸಿನಿಮಾ ಒಂದು ದಿನ ತಡವಾಗಿ ಥಿಯೇಟರ್ನಲ್ಲಿ ಪ್ರದರ್ಶನವಾಗಬಹುದು. ಸದ್ಯ, ಸೆನ್ಸಾರ್ ಮಂಡಳಿ ಮುಂದೆ ಮತ್ತೆ ಸಿನಿಮಾ ಕಳಿಸಲಾಗುತ್ತೆ. ಅನುಮತಿ ಸಿಕ್ಕ ನಂತರ ಹೊಸ ಪ್ರಿಂಟ್ನ ಪ್ರದರ್ಶನ ಆರಂಭಿಸುತ್ತೇವೆ ಎಂದು ಪೊಗರು ಚಿತ್ರತಂಡ ತಿಳಿಸಿದೆ.
ಇದಕ್ಕೂ ಮುನ್ನ, ಚಿತ್ರದಲ್ಲಿ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ದೃಶ್ಯಗಳಿರುವ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಾತನಾಡಿದ ಸಾ.ರಾ.ಗೋವಿಂದು ಪೊಗರು ಸೆನ್ಸಾರ್ ಆದ ಚಿತ್ರ, ಅವರೇ ತಡೆಹಿಡಿಯಬಹುದಿತ್ತು. ಅಂಥ ಅಚಾತುರ್ಯ ಆಗಿದ್ರೆ ಅವರೇ ತಡೆಹಿಡಿಯಬಹುದಾಗಿತ್ತು. ಈಗ ಕೈತಪ್ಪಿ ಆಗಿದೆ, ಆದರೂ ನೋವಾಗಿದ್ದರೆ ತೆಗೆಯುತ್ತಾರೆ. ಬ್ರಾಹ್ಮಣ ಸಮಾಜಕ್ಕೆ ನೋವಾಗಿದ್ದರೆ ದೃಶ್ಯವನ್ನು ತೆಗೆಯುತ್ತಾರೆ ಎಂದು ಹೇಳಿದರು.
ಇನ್ನೂ, ಈ ಕುರಿತು ಪ್ರತಿಕ್ರಿಯಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ಯಾರ ಭಾವನೆಗೂ ಧಕ್ಕೆ ತರುವ, ಅಗೌರವ ತರುವ ಉದ್ದೇಶವಿಲ್ಲ. ಪೊಗರು ಚಿತ್ರದಲ್ಲಿನ ವಿವಾದಿತ ದೃಶ್ಯ ತೆಗೆದುಹಾಕಲಾಗುವುದು ಎಂದು ಹೇಳಿದರು.
ಈ ನಡುವೆ, ಬ್ರಾಹ್ಮಣ ಸಮುದಾಯ, ಬ್ರಾಹ್ಮಣ ಮಠಾಧೀಶರಿಗೂ ಕ್ಷಮೆ ಇರಲಿ. ನನ್ನನ್ನು ದಯವಿಟ್ಟು ಕ್ಷಮಿಸಿ ಎಂದು ಸಿನಿಮಾದ ನಿರ್ದೇಶಕ ನಂದಕಿಶೋರ್ ಹೇಳಿದರು. ಚಿತ್ರದಲ್ಲಿ 12 ಅಂಶಗಳನ್ನು ತೆಗೆಯುವಂತೆ ಮನವಿ ಮಾಡಿದ್ದಾರೆ. ವಿವಾದಾತ್ಮಕ ಅಂಶಗಳನ್ನ ತೆಗೆಯುತ್ತೇವೆ. ಇನ್ಮುಂದೆ ಇಂತಹ ತಪ್ಪುಗಳು ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಫಿಲ್ಮ್ ಚೇಂಬರ್ನಲ್ಲಿ ಪೊಗರು ನಿರ್ದೇಶಕ ನಂದಕಿಶೋರ್ ಹೇಳಿದರು.
ಇದನ್ನೂ ಓದಿ: Pogaru | ಹಿಂದೂಗಳನ್ನ ಅವಮಾನಿಸೋದು ಫ್ಯಾಷನ್ ಆಗಿಬಿಟ್ಟಿದೆ -ಪೊಗರು ವಿರುದ್ಧ ಶೋಭಾ ಕರಂದ್ಲಾಜೆ ಆಕ್ರೋಶ