AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋತು-ಗೆದ್ದು ಮೇಲೆದ್ದು ನಿಂತ ಹೀರೋ ಈಗೇನು ಮಾಡ್ತಾರೆ? ಬೇರೆ ನಾಯಕರಿಗಿದ್ದಂತೆ ಸಿದ್ದರಾಮಯ್ಯಗೆ ಸುಭದ್ರ ಕ್ಷೇತ್ರ ಯಾವುದು?

ಕೆಜಿಎಫ್ ಸಿನಿಮಾ ಡೈಲಾಗ್ ತರಹ ಸೋತು ಗೆದ್ದು ಮೇಲೆದ್ದು ನಿಂತ ನಿಮ್ಮ ಹೀರೋ ಈಗೇನು ಮಾಡ್ತಾರೆ.? ಅನ್ನೋದು ಮಾತ್ರ ಕೇಳಿಸುತ್ತಿದೆ. ಬೇರೆ ನಾಯಕರಿಗಿದ್ದಂತೆ ಸಿದ್ದರಾಮಯ್ಯಗೆ ಸುಭದ್ರ ಕ್ಷೇತ್ರ ಯಾವುದು?

ಸೋತು-ಗೆದ್ದು ಮೇಲೆದ್ದು ನಿಂತ ಹೀರೋ ಈಗೇನು ಮಾಡ್ತಾರೆ? ಬೇರೆ ನಾಯಕರಿಗಿದ್ದಂತೆ ಸಿದ್ದರಾಮಯ್ಯಗೆ ಸುಭದ್ರ ಕ್ಷೇತ್ರ ಯಾವುದು?
siddaramaiah
TV9 Web
| Edited By: |

Updated on: Oct 29, 2022 | 7:00 AM

Share

ಬೆಂಗಳೂರು: ಸಾರ್… ನೀವು ಇಲ್ಲಿಗೆ ಬರಲೇಬೇಕು.. ಸರ್ ನೀವು ಇಲ್ಲಿಗೆ ಬಂದ್ರೆ ಪಕ್ಕಾ ಗೆಲ್ಲಿಸ್ತೀವಿ… ನಮ್ ಹುಲಿಯಾ ಇಲ್ಲಿಂದ ನಿಂತರೆ ಮತ್ತೆ ಸಿಎಂ ಆಗೋದ್ ಗ್ಯಾರಂಟಿ… ಅಲ್ಲಿ ಇಲ್ಲಿ ಹುಡುಕಾಡಬೇಡಿ ಸಾರ್…ಮತ್ತೆ ಇಲ್ಲಿಂದ್ಲೇ ನಿಂತ್ಕಳಿ ಸಾರ್ ನಿಮಗೆ ಲಕ್ಕು ಅಂದ್ರೆ ಇದೇ ಸಾರ್.. ಹಿಂದೆ ಅವರೂ ಇಲ್ಲೇ ಗೆದ್ದು ಸಿಎಂ ಆಗಿದ್ದಲ್ವಾ ಸಾರ್…. ಇಂಥದ್ದೊಂದು ಮಾತುಗಳು ಗುಂಯ್ ಗುಡುತ್ತಿರುವುದು ಸಿದ್ದರಾಮಯ್ಯ ಕಿವಿಯಲ್ಲಿ. ಒಂದಲ್ಲ ಎರಡಲ್ಲ ಹತ್ತಾರು ಕ್ಷೇತ್ರಗಳು ಸಿದ್ದರಾಮಯ್ಯರನ್ನು ಬನ್ನಿ ಬನ್ನಿ ಅಂತ ಕರೆಯುತ್ತಿವೆ. ಮಾಜಿ ಸಿಎಂ, ಹಾಲಿ ವಿರೋಧ ಪಕ್ಷದ ನಾಯಕ, ಭವಿಷ್ಯದಲ್ಲಿ ಮತ್ತೆ ಖುರ್ಚಿಯ ಕನಸು ಕಾಣುತ್ತಿರುವ ಮುತ್ಸದ್ದಿಯೊಬ್ಬರಿಗೆ ನಿಜಕ್ಕೂ ಚುನಾವಣೆಗೆ ನಿಲ್ಲುವುದಕ್ಕೆ ಕ್ಷೇತ್ರವೇ ಇಲ್ಲವೇ..? ಸಿದ್ದರಾಮಯ್ಯರಂತ ಸಿದ್ದರಾಮಯ್ಯಗೆ ಹೀಗೆ ಆ ಕ್ಷೇತ್ರ ಈ ಕ್ಷೇತ್ರ ಅಂತ ಹುಡುಕಾಡೋ ಸ್ಥಿತಿ ಬಂದುಬಿಟ್ಟಿತಾ ಅನ್ನೋ ಪ್ರಶ್ನೆಗಳೆಲ್ಲ ಗಾಂಧಿಭವನದ ರಸ್ತೆಯಲ್ಲಿ ಅತ್ತಿಂದಿತ್ತ ಇತ್ತಿಂದತ್ತ ಓಡಾಡುತ್ತಿವೆ. ಈ ಕ್ಷಣದ ತನಕ ಈ ಪ್ರಶ್ನೆಗಳಿಗೆ ನಿಜಕ್ಕೂ ಉತ್ತರ ನೀಡಬೇಕಾಗಿರುವುದು ಸಿದ್ದರಾಮಯ್ಯ ಮಾತ್ರ.

ಸಿದ್ದು ಸುತ್ತ ಗಿರಕಿ ಹೊಡೆಯುತ್ತಿರುವುದು ಇದೇ ಪ್ರಶ್ನೆಗಳು

ಸಿದ್ದರಾಮಯ್ಯಗೆ ಅಂಥದ್ದೊಂದು ಪರಿಸ್ಥಿತಿ ಬಂದಿದೆ. ಅಂದರೆ ಅವರ ಅಭಿಮಾನಿಗಳಿಗೂ ಒಪ್ಪಿಕೊಳ್ಳೋದಕ್ಕೆ ಸಾದ್ಯವಾಗ್ತಿಲ್ಲ. ಸಿದ್ದರಾಮಯ್ಯರನ್ನು ವಿಧಾನಸೌಧದ ಮೂರನೇ ಮಹಡಿಗೆ ಮೆಟ್ಟಿಲು ಹತ್ತಿಸಿದ್ದು ವರುಣ ಕ್ಷೇತ್ರ. ತಮ್ಮ ಮಗನಿಗೆ ಸಿದ್ದರಾಮಯ್ಯ ವರುಣ ಕ್ಷೇತ್ರ ತ್ಯಾಗ ಮಾಡಿದ ಮೇಲೆ ಸೋಲಿನ ಕಹಿ ಉಣ್ಣುವಂತೆ ಮಾಡಿದ್ದು ಚಾಮುಂಡೇಶ್ವರಿ ಕ್ಷೇತ್ರ. ಚಾಮುಂಡೇಶ್ವರಿಯಲ್ಲಿ ಕಳೆದುಕೊಂಡದ್ದನ್ನು ಕೊಂಚಮಟ್ಟಿಗೆ ಉಳಿಸಿದ್ದು ದೂರದ ಬಾದಾಮಿ ಕ್ಷೇತ್ರದ ಬನಶಂಕರಿ ತಾಯಿ. ಬನಶಂಕರಮ್ಮನೂ ಮುನಿಸಿಕೊಂಡುಬಿಟ್ಟಿದ್ದರೆ ಸಿದ್ದರಾಮಯ್ಯ ಎಷ್ಟೇ ಫಿಟ್ ಇದ್ದರೂ ಅನಿವಾರ್ಯವಾಗಿ ವಿರೋಧ ಪಕ್ಷದ ಸ್ಥಾನವೂ ಸಿಗದೇ ಹೋಗುತ್ತಿತ್ತು. ಈಗ ಮತ್ತೆ ಅದೇ ಬದಾಮಿಯ ಬಂಧುಗಳನ್ನೇ ನಂಬಿಕೊಳ್ಳಬೇಕೋ ಬದಲಾವಣೆ ಬಯಸಿ ಬೇರೆ ಮಾರ್ಗ ಹುಡುಕಿಕೊಳ್ಳಬೇಕೋ…? ಸಿದ್ದರಾಮಯ್ಯ ಸುತ್ತ ಗಿರಕಿ ಹೊಡೆಯುತ್ತಿರುವುದು ಇದೇ ಪ್ರಶ್ನೆಗಳು.

ರಾಜ್ಯದಲ್ಲಿ ಕಾಂಗ್ರೆಸ್ ಬಸ್ ಯಾತ್ರೆಗೆ ಹೈಕಮಾಂಡ್​ ಗ್ರೀನ್​ಸಿಗ್ನಲ್, ಉತ್ತರಕ್ಕೆ ಸಿದ್ದು, ದಕ್ಷಿಣಕ್ಕೆ ಡಿಕೆಶಿ

ಸೇಫ್  ಕ್ಷೇತ್ರ ಹುಡುಕುತ್ತಿರುವ ಸಿದ್ದು

Siddaramiah

Siddaramiah

ಸಿದ್ದರಾಮಯ್ಯ ಎಂಥ ಸ್ಥಿತಿಗೆ ಬಂದಿದ್ದಾರೆ ಅಂದ್ರೆ ಸಿದ್ದರಾಮಯ್ಯಗೆ ಒಂದೆರಡು ಕ್ಷೇತ್ರಗಳು ಮಾತ್ರ ಬಾಗಿಲು ತೆರೆದು ಕೂತಿಲ್ಲ- ಬರೋಬ್ಬರಿ ಹತ್ತಕ್ಕೂ ಹೆಚ್ಚು ಕ್ಷೇತ್ರಗಳು ಸಿದ್ದರಾಮಯ್ಯರನ್ನು ಬನ್ನಿ ಬನ್ನಿ ಅಂತ ಕರೆಯುತ್ತಿವೆ. ಆದರೆ ಸಿದ್ದರಾಮಯ್ಯ ಯಾವ ಕ್ಷೇತ್ರದ ಕೈ ಹಿಡಿತಾರೆ ಎನ್ನೋದಕ್ಕೆ ಉತ್ತರ ಸಿಗುತ್ತಿಲ್ಲ. ಮೊದಲು ಚಾಮರಾಜಪೇಟೆ ಕ್ಷೇತ್ರದಲ್ಲಿ ಬನ್ನಿ ಅಂತ ಸಿದ್ದು ಅತ್ಯಾಪ್ತ ಜಮೀರ್ ಅಹಮದ್ ಖಾನ್ ಕರೆದು ಕನವರಿಸಿದ್ದಾಯ್ತು. 2021ರ ಡಿಸೆಂಬರ್​ ನಲ್ಲಿಯೇ ಸಿದ್ದರಾಮಯ್ಯಗೆ ಜಮೀರ್ ರೆಡ್ ಕಾರ್ಪೇಟ್ ಹಾಕಿ ಕರೆದು ನಿಂತುಕೊಂಡರು. ಚಾಮರಾಜಪೇಟೆ ಆಯ್ಕೆ ಮಾಡಿಕೊಂಡರೆ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಮೊರೆ ಹೋದರು ಅನ್ನೋ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಚರ್ಚೆಗಳು ಶುರುವಾದ ಬಳಿಕ ಸೇಫ್ ಆದ ಇನ್ನೊಂದು ಕ್ಷೇತ್ರ ಹುಡುಕುವ ಕೆಲಸ ಶುರುವಾಯ್ತು.

ಸಿದ್ದರಾಮಯ್ಯರೇ ಸ್ವತಃ ಹೇಳಿದ ಪ್ರಕಾರ ಗೆಲ್ಲಿಸಿ ಕಳುಹಿಸಿರುವ ಬಾದಾಮಿ ಕ್ಷೇತ್ರ ಓಡಾಟಕ್ಕೆ ಭಾರೀ ದೂರ. ಬಾದಾಮಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ನಾಲ್ಕೈದು ಸಾವಿರ ಕೋಟಿ ಅನುದಾನ, ರಸ್ತೆ, ನೀರು ಎಲ್ಲವನ್ನೂ ಕೊಂಡೊಯ್ದು ಬಾದಾಮಿಯ ಋಣ ತೀರಿಸಿದ್ದಾರೆ ನಿಜ. ಆದರೆ ಕಳೆದ ಬಾರಿ ಬಾದಾಮಿಯಲ್ಲಿ ಗೆದ್ದಿದ್ದು ಅಂತ ಅಭೂತಪೂರ್ವದಿಂದ ಅಲ್ಲ. ಕೇವಲ 1696 ಮತಗಳು ಮಾತ್ರ. ಸಿದ್ದರಾಮಯ್ಯರನ್ನು ಸೋಲಿಗು ಗೆಲುವಿಗೂ ಆಚೀಚೆ ನಿಲ್ಲಿಸಿದ್ದು. ಹೀಗಾಗಿ ಸಿದ್ದರಾಮಯ್ಯ ಮತ್ತೆ ಬಾದಾಮಿ ಬಿಟ್ಟು ಬೇರೆ ಕ್ಷೇತ್ರ ಹುಡುಕಿಕೊಳ್ಳುವುದು ನಿಜಕ್ಕೂ ಸೇಫ್ ಆ್ಯಂಡ್ ಸೆಕ್ಯುರ್ ಅಂತ ಯೋಚಿಸಿದ್ದರಲ್ಲಿ ತಪ್ಪೇನೂ ಕಾಣ್ತಿಲ್ಲ. ಆದರೆ ಇಲ್ಲಿಂದಲೇ ಶುರುವಾಗಿದ್ದು ತಲೆ ಬೇನೆ.

ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಾಡ್ಬೇಕು

ಕೋಲಾರ, ಚಾಮರಾಜಪೇಟೆ, ಕೊಪ್ಪಳ, ತುಮಕೂರು, ಹುಣಸೂರು ಮತ್ತೆ ವರುಣ… ಹೀಗೆ ಸಿದ್ದರಾಮಯ್ಯ ಎಲ್ಲಿಗೆ ಹೋಗಬೇಕು ಅಂತ ನಿರ್ಧರಿಸುತ್ತಲೇ ಯೋಚನೆಯಲ್ಲಿ ತೊಡಗಿದ್ದಾರೆ. ಮತ್ತೆ ವರುಣ ಕ್ಷೇತ್ರಕ್ಕೆ ಮರಳಿ ಮಗನನ್ನು ಚುನಾವಣೆ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂಬ ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯರಂಥ ನಾಯಕರು ಅವರ ಕ್ಷೇತ್ರ ಗೆದ್ದರೆ ಸಾಲದು- ಹತ್ತಾರು ಮಂದಿಯನ್ನು ಗೆಲ್ಲಿಸಿಕೊಂಡು ಬರಬೇಕು. ತಮ್ಮನ್ನೇ ನಂಬಿರುವ ಅರವತ್ತೆಪ್ಪತ್ತು ಶಾಸಕರ ಗೆಲುವಿಗೂ ಕಾಂಟ್ರಿಬ್ಯುಷನ್ ಮಾಡಬೇಕು. ಕ್ಷೇತ್ರವೊಂದಷ್ಟೇ ಅಲ್ಲ, ಇಡೀ ರಾಜ್ಯವನ್ನು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಸುತ್ತಾಡಿ ಗೆಲ್ಲಿಸಿಕೊಂಡು ಬರಬೇಕು. ತಾವು ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ತಮ್ಮ ನಂಬಿಗಸ್ಥರು ಓಡಾಡಿದರೆ ಸಾಕು ಗೆಲ್ಲಬಹುದು ಅನ್ನುವಂತ ಸ್ಥಿತಿ ಇದ್ದರೆ ಮಾತ್ರ ಸಿದ್ದರಾಮಯ್ಯನಂತ ನಾಯಕರು ಧೈರ್ಯವಾಗಿ ಇರಬಹುದು.

ಕ್ಷೇತ್ರ ಉಳಿಸಿಕೊಳ್ಳುವುದಾ ಅಥವಾ ರಾಜ್ಯ ಸುತ್ತುವುದಾ..?

Siddaramaiah speaking to BBMP commissioner

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ

ಹಿಂದೆ ಮಾಜಿ ಸಿಎಂ ದಿವಂಗತ ಎಸ್ ಬಂಗಾರಪ್ಪನಂತಹ ನಾಯಕರು ಕೇವಲ ನಾಮಿನೇಷನ್ ದಿನ ಮಾತ್ರ ಕ್ಷೇತ್ರದಲ್ಲಿದ್ದು ಉಳಿದ ಎಲ್ಲ ಸಮಯ ರಾಜ್ಯ ಸುತ್ತಿ ತಾವೂ ಗೆಲ್ಲುತ್ತಿದ್ದರಂತೆ. ಅಂಥ ಹೋಲ್ಡ್ ಇರುವ ಕ್ಷೇತ್ರ ಸಿಕ್ಕಿದರೆ ಮಾತ್ರ ಸಿದ್ದರಾಮಯ್ಯನಂತ ನಾಯಕರು ಚುನಾವಣೆ ಹೊತ್ತಲ್ಲಿ ರಾತ್ರಿ ನೆಮ್ಮದಿಯ ನಿದ್ರೆ ಮಾಡಬಹುದು. ಇಲ್ಲದೇ ಹೋದರೆ ತಮ್ಮ ಕ್ಷೇತ್ರ ಉಳಿಸಿಕೊಳ್ಳುವುದಾ ಅಥವಾ ರಾಜ್ಯ ಸುತ್ತುವುದಾ..?

ನೀವೇ ನೋಡಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರದ್ದೊಂದು ಕ್ಷೇತ್ರ ಇಟ್ಟುಕೊಂಡಿದ್ದಾರೆ ಹೇಗೇ ಆಗಲಿ ಎಲ್ಲೇ ಸುತ್ತಿ ಬರಲಿ ಯಡಿಯೂರಪ್ಪ ಕ್ಷೇತ್ರದ ಜನ ಗೆದ್ದೇ ಗೆಲ್ಲಿಸುತ್ತಾರೆ. ಡಿಕೆಶಿವಕುಮಾರ್ ಕನಕಪುರದಲ್ಲಿ ಕೆಲವೇ ದಿನ ಸಮಯ ಕಳೆದರೂ ಜನ ಕೈ ಹಿಡಿತಾರೆ. ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿಗೂ ಅಂತದ್ದೊಂದು ಗಟ್ಟಿ ಕ್ಷೇತ್ರವಿದೆ. ಮಾಜಿ ಡಿಸಿಎಂ ಪರಮೇಶ್ವರ್ ಹೀಗೆ ಯಾಮಾರಿದ್ದಕ್ಕೆ ತಾನೇ 2013 ರಲ್ಲಿ ಪಲ್ಟಿ ಹೊಡೆದದ್ದು. ಅದು ಅರಿವಾದ ಮೇಲೆ ಪರಮೇಶ್ವರ್ ಸಾಹೇಬರು ಕ್ಷೇತ್ರ ಬಿಟ್ಟು ಕದಲುತ್ತಿಲ್ಲ. ಅಂಥ ಸುಭದ್ರ ನೆಮ್ಮದಿಯ ನಿದ್ದೆ ಬರುವ ವಾತಾವರಣ ಇರುವ ಕ್ಷೇತ್ರ ಸಿದ್ದರಾಮಯ್ಯಗೆ ಇದೆಯಾ? ಎಂಬುದೇ ಈಗಿನ ಪ್ರಶ್ನೆ.

ಅಳೆದು ತೂಗಿ ಲೆಕ್ಕ ಹಾಕುತ್ತಿರುವ ಮಾಜಿ ಸಿಎಂ

ಕೋಲಾರದಿಂದ ಹಿಡಿದು ಹುಣಸೂರಿನ ತನಕ ಸಿದ್ದರಾಮಯ್ಯ ಎಲ್ಲೇ ನಿಂತರೂ ಗೆಲ್ಲುತ್ತಾರೆ ಎನ್ನುವುದು ಭರವಸೆ, ವಿಶ್ವಾಸ, ನಂಬಿಕೆ. ಆದರೆ ಅದೇ ನಂಬಿಕೆಯ ಮೂಲಕ ಜನ ಕೈ ಹಿಡಿದರೆ ಮಾತ್ರ ಸಿಎಂ ಖುರ್ಚಿ ತಾನೇ..? ತಮ್ಮದೇ ಆಪ್ತರು ಚಾಮುಂಡೇಶ್ವರಿಯಲ್ಲಿ ಕೈಕೊಟ್ಟ ನೋವು ಸಿದ್ದರಾಮಯ್ಯಗೆ ಇನ್ನೂ ಇದೆ. ಅದರಿಂದ ಕಲಿತ ಪಾಠ ಸಿದ್ದರಾಮಯ್ಯ ಮತ್ತೆ ವರುಣದತ್ತ ಮುಖ ಮಾಡುವಂತೆಯೂ ಮಾಡಿದೆ. ಆದರೆ ಸಿದ್ದರಾಮಯ್ಯ ಮಾತ್ರ ಇನ್ನೂ ಎರಡು ತಿಂಗಳು ಅಳೆದೂ ತೂಗಿ ಲೆಕ್ಕ ಹಾಕಿ ನಿರ್ಧಾರ ಪ್ರಕಟಿಸಲಿದ್ದಾರೆ. ಅಲ್ಲಿಯವರೆಗೂ ಕೆಜಿಎಫ್ ಸಿನಿಮಾ ಡೈಲಾಗ್ ತರಹ ಸೋತು ಗೆದ್ದು ಮೇಲೆದ್ದು ನಿಂತ ನಿಮ್ಮ ಹೀರೋ ಈಗೇನು ಮಾಡ್ತಾರೆ.? ಅನ್ನೋದು ಮಾತ್ರ ಕೇಳಿಸುತ್ತಿದೆ.

ವರದಿ: ಪ್ರಸನ್ನ ಗಾಂವ್ಕರ್, ಟಿವಿ9 ಬೆಂಗಳೂರು