ಬೆಂಗಳೂರು: ನಗರದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಇಬ್ಬರು ಆರೋಪಿಗಳ ಮೇಲೆ ಸೋಲದೇವನಹಳ್ಳಿಯ ಆಚಾರ್ಯ ಕಾಲೇಜು ಬಳಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಭಸಿತ್ ಮತ್ತು ರಿಯಾಜ್ ಎಂಬುವವರ ಮೇಲೆ ಸೋಲದೇವನಹಳ್ಳಿ ಇನ್ಸ್‌ಪೆಕ್ಟರ್ ಶಿವಸ್ವಾಮಿ ಗುಂಡಿನ ದಾಳಿ ನಡೆಸಿದ್ದಾರೆ.
ಆರೋಪಿಗಳೂ ಬಗಲಗುಂಟೆ ಠಾಣೆಯ ಸಿಬ್ಬಂದಿಯಾದ ಶ್ರೀನಿವಾಸ್ ಹಾಗೂ ಮಲ್ಲಿಕಾರ್ಜುನ ಎಂಬುವವರ ಮೇಲೆ ಹಲ್ಲೆ ಮಾಡಿದ್ದರು. ಆರೋಪಿಗಳು ತಂಗಿರುವ ಸ್ಥಳದ ಬಗ್ಗೆ ಖಚಿತ ಮಾಹಿತಿ ಪಡೆದು ಅವರನ್ನ ಹಿಡಿಯಲು ಹೋದಾಗ ಈ ಘಟನೆ ನಡೆದಿದೆ.
ತಡರಾತ್ರಿ 4 ವಾಹನಗಳಿಗೆ ಬೆಂಕಿ ಹಚ್ಚಿದ್ದರು:
ಬಿ.ಟಿ.ಶ್ರೀನಿವಾಸ್ ಎಂಬುವರಿಗೆ ತಡರಾತ್ರಿ ಕರೆ ಮಾಡಿ ಧಮ್ಕಿ ಹಾಕಿದ್ದರು. 50 ಲಕ್ಷ ಹಣ ಕೊಡು, ಇಲ್ಲ ಅಂದ್ರೆ ಕಾರಿಗೆ ಬೆಂಕಿ ಹಾಕ್ತೇವೆ ಎಂದು ಬೆದರಿಕೆ ಹಾಕಿದ್ದರು. ಆದ್ರೆ, ಹಣವನ್ನು ನೀಡಲು ಶ್ರೀನಿವಾಸ್ ಒಪ್ಪದ ಹಿನ್ನೆಲೆಯಲ್ಲಿ ವಾಟರ್ ಪ್ಲಾಂಟ್ ಹಾಗೂ 4 ಬೈಕ್ಗಳಿಗೆ ಪೆಟ್ರೋಲ್ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಮನೆ ಮುಂದೆ ನಿಲ್ಲಿಸಿದ್ದ ನಾಲ್ಕು ವಾಹನಗಳು ಸುಟ್ಟು ಕರಕಲಾಗಿದ್ದವು.
ಆತ್ಮರಕ್ಷಣೆಗಾಗಿ ಫೈರಿಂಗ್: ಈ ಪ್ರಕರಣ ಸಂಬಂಧ ಖಚಿತ ಮಾಹಿತಿ ಮೇಲೆ ಪೊಲೀಸರು ಆರೋಪಿಗಳ ಬಂಧನಕ್ಕೆ ತೆರಳಿದ್ದರು. ಈ ವೇಳೆ ಬಾಗಲಗುಂಟೆ ಠಾಣೆಯ ಸಿಬ್ಬಂದಿ ಶ್ರೀನಿವಾಸ್ ಹಾಗೂ ಮಲ್ಲಿಕಾರ್ಜನ ಎಂಬುವವರ ಮೇಲೆ ಆರೋಪಿಗಳು ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಆರೋಪಿಗಳಾದ ಭಸಿತ್, ರಿಯಾಜ್ ಕಾಲಿಗೆ ಸೋಲದೇವನಹಳ್ಳಿಯ ಇನ್ಸ್‌ಪೆಕ್ಟರ್ ಶಿವಸ್ವಾಮಿ ಗುಂಡು ಹಾರಿಸಿದ್ದಾರೆ.
ಆರೋಪಿಗಳು ತಮಿಳುನಾಡು ಮೂಲದವರೆಂದು ತಿಳಿದು ಬಂದಿದೆ. ಘಟನೆ ನಡೆದ ಕೆಲವೆ ಗಂಟೆಗಳಲ್ಲಿ ಗುಂಡು ಹಾರಿಸುವ ಮುಖಾಂತರ ಆರೋಪಿಗಳನ್ನು ಸೆರೆಹಿಡಿದಿದ್ದು, ಘಟನೆಗೆ ಹಣದ ಬೇಡಿಕೆಯೇ ಕಾರಣ ಅಥವಾ ವೈಯಕ್ತಿಕ ಕಾರಣವೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಗಾಯಾಳು ಪೊಲೀಸರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.