ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ಕಬಂಧ ಬಾಹುವನ್ನು ಚಾಚುತ್ತಲೇ ಇದೆ. ಇದೀಗ ಕೊರೊನ ಸೋಂಕು ಮುಕ್ತ ದಾಸರಹಳ್ಳಿಗೂ ವಕ್ಕರಿಸಿದೆ. ಟಿ.ದಾಸರಹಳ್ಳಿಯ ಹಾವನೂರು ಬಡಾವಣೆಯ 47 ವರ್ಷದ ಶಿಕ್ಷಕಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಗರ್ಭಕೋಶ ಸಂಬಂಧಿತ ಕಾಯಿಲೆಯಿಂದ ಶಿಕ್ಷಕಿ ಬಳಲುತ್ತಿದ್ದಾರೆ. ಶಸ್ತ್ರಚಿಕಿತ್ಸೆಗೂ ಮೊದಲು ಕೊರೊನಾ ಪರೀಕ್ಷೆಗೆ ವೈದ್ಯರು ಒಳಪಡಿಸಿದ್ದರು. ಕೊರೊನಾ ಪರೀಕ್ಷೆ ವೇಳೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಬಿಬಿಎಂಪಿ ಜಂಟಿ ಆಯುಕ್ತ ನರಸಿಂಹಮೂರ್ತಿ ತಿಳಿಸಿದ್ದಾರೆ.
ಹಾಗಾಗಿ ಹಾವನೂರು ಬಡಾವಣೆ ಸಂಪೂರ್ಣ ಸೀಲ್‌ಡೌನ್ ಮಾಡಲು ಬಿಬಿಎಂಪಿ ಸಿದ್ಧತೆ ನಡೆಸಿಕೊಂಡಿದೆ. ಸೋಂಕಿತ ಶಿಕ್ಷಕಿ ಕಾರ್ಯನಿರ್ವಹಿಸುವ ಖಾಸಗಿ ಶಾಲೆಯಲ್ಲೀಗ ಆತಂಕ ಶುರುವಾಗಿದೆ. ಶಿಕ್ಷಕಿ ದಿನನಿತ್ಯ ಆನ್ಲೈನ್ ಕ್ಲಾಸ್ ಮಾಡುತ್ತಿದ್ದರು. ಸದ್ಯ ಸೋಂಕಿತ ಶಿಕ್ಷಕಿಗೆ ಬೆಂಗಳೂರಿನ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.