
ತುಮಕೂರು: ಈ ಹಿಂದೆ ಅಪ್ಪ-ತಾತನ ಹೆಸರು ಹೇಳಿ ರಾಜಕೀಯ ಮಾಡುತ್ತಿದ್ದರು. ಹೀಗೆ ರಾಜಕೀಯ ಮಾಡ್ತಿದ್ದವರು ಕಾಲಾಂತರದಲ್ಲಿ ನಿರುದ್ಯೋಗಿಗಳಾಗಿದ್ದಾರೆ ಎಂದು ಶಿರಾದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಟಾಂಗ್ ಕೊಟ್ಟಿದ್ದಾರೆ. ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರ ಭರ್ಜರಿ ಪ್ರಚಾರ ನಡೆಯುತ್ತಿದೆ. ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ ವಿಪಕ್ಷಗಳ ವಿರುದ್ಧ ಪ್ರಹಾರ ಮಾಡಿದ್ದಾರೆ.
ಬಿಜೆಪಿಯ ಇತಿಹಾಸದಲ್ಲಿ ಯಾವುದೂ ಸುಲಭವಾಗಿ ಸಿಕ್ಕಿಲ್ಲ. ದೇಶದಲ್ಲಿ ಬಿಜೆಪಿ 303 ಸಂಸದರನ್ನು ಹೊಂದಿದೆ. ಮನೆಯಲ್ಲಿ ಸುಮ್ಮನೆ ಮಲಗಿದ್ರಿಂದ ಬಂದಿರುವುದಲ್ಲ. ಪ್ರತಿಯೊಂದನ್ನೂ ಸಂಘರ್ಷದ ಮೂಲಕವೇ ಗೆದ್ದಿದ್ದೇವೆ. ಶಿರಾದಲ್ಲೂ ಕೂಡ ಸಂಘರ್ಷದ ಯೋಜನೆ ಜಾರಿಯಲ್ಲಿದೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ 60 ವರ್ಷದಲ್ಲಿ ಆಗಿರದಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ರಾಷ್ಟ್ರದ ನಿರುದ್ಯೋಗದ ಕುರಿತು ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ.
ಈ ಚುನಾವಣೆ ಗೆದ್ದೇ ಗೆಲ್ಲುತ್ತೇವೆ:
ಶಿರಾದಲ್ಲಿ ಬದಲಾವಣೆ ಪರ್ವವಿದೆ. ಯುವಕರು ಜೆ.ಡಿ.ಎಸ್, ಕಾಂಗ್ರೆಸ್ ಅಧಿಕಾರ ನೋಡಿ ಬೇಸತ್ತಿದ್ದಾರೆ. ನೇರವಾಗಿ ಯುವಕರು ಮೋದಿ, ಯಡಿಯೂರಪ್ಪ ನೇತೃತ್ವದ ಶಾಸಕರು ಬೇಕೆಂದು ಬಯಸಿದ್ದಾರೆ. ಶಿರಾ ಅಭಿವೃದ್ಧಿಯಾಗಲು ಯುವಕರು ಸಂಕಲ್ಪ ಮಾಡಿದ್ದಾರೆ. ಇಷ್ಟು ವರ್ಷ ಕಾಣದ ಅಭಿವೃದ್ಧಿಯನ್ನು ರಾಜೇಶ್ ಗೌಡ ನೇತೃತ್ವದಲ್ಲಿ ಕಾಣಲಿದ್ದಾರೆ. ಈ ಚುನಾವಣೆ ಶಿರಾ ಇತಿಹಾಸದಲ್ಲೇ ಬದಲಾವಣೆ ಚುನಾವಣೆಯಾಗಲಿದೆ. ಯುವಕರು ಅತ್ಯಂತ ಉತ್ಸಾಹಕರಾಗಿ ಬಿಜೆಪಿ ಪರ ನಿಂತಿದ್ದಾರೆ. ಈ ಚುನಾವಣೆ ಗೆದ್ದೆ ಗೆಲ್ಲುತ್ತೇವೆ ಎಂದು ಯುವಕರನ್ನು ಬಡಿದೆಬ್ಬಿಸಿದ್ದಾರೆ.
Published On - 3:25 pm, Thu, 22 October 20