ಗದಗ:ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ನವಿಲು ತೀರ್ಥ ಡ್ಯಾಂನಿಂದ 10 ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಇದರಿಂದ ಜಿಲ್ಲಾಡಳಿತ ಪ್ರವಾಹಕ್ಕೆ ಒಳಗಾಗುವ ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರಿಸಲು ಚಿಂತನೆ ನಡೆಸಿದೆ. ಆದರೆ ಜಿಲ್ಲಾಡಳಿತದ ಕೆಲಸಕ್ಕೆ ಒಪ್ಪದ ಗ್ರಾಮಸ್ಥರು ನಾವು ಎಲ್ಲಿಗೂ ಹೋಗುವುದಿಲ್ಲವೆಂದು ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನರಗುಂದ ತಾಲೂಕಿನ ಲಕಮಾಪುರ ಗ್ರಾಮವು ಮಲಪ್ರಭಾ ನದಿಯ ಪ್ರವಾಹಕ್ಕೆ ತುತ್ತಾಗಿದ್ದು, ಈಗ ಇಲ್ಲಿನ ಗ್ರಾಮಸ್ಥರನ್ನು ಬೆಳ್ಳೇರಿಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಆದರೆ ಗ್ರಾಮಸ್ಥರು ಇದಕ್ಕೆ ಒಪ್ಪದೇ ನಮಗೆ ಇಲ್ಲಿಯೇ ಶೆಡ್ ಹಾಕಿ ಕೊಡಿ. ನಾವು ಎಲ್ಲಿಗೂ ಹೋಗುವುದಿಲ್ಲವೆಂದು ಪ್ರತಿಭಟನೆ ನಡೆಸಿದ್ದಾರೆ.
ಹೀಗಾಗಿ ಲಖಮಾಪೂರ ಗ್ರಾಮಕ್ಕೆ ನರಗುಂದ ತಹಶಿಲ್ದಾರ ಮಹೇಂದ್ರ, ಡಿವೈಎಸ್ಪಿ ಗುರುನಾಥ್, ಎಎಸ್ಐ ಪವಾರ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ. ಆದರೆ ಗ್ರಾಮಸ್ಥರು ಕಳೆದ ವರ್ಷವೂ ನಮ್ಮ ಗ್ರಾಮ ಪ್ರವಾಹದಲ್ಲಿ ಮುಳುಗಿತ್ತು. ಆಗಲೂ ಸಹ ನಾವು ರಸ್ತೆ ಪಕ್ಕದಲ್ಲಿ ಗುಡಿಸಲು ಹಾಕಿ ಜೀವನ ಸಾಗಿಸಿದೆವು. ಇದರಿಂದ ಎಚ್ಚೆತ್ತುಕೊಳ್ಳದ ಸರ್ಕಾರ ನಮ್ಮ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ನಾವು ಎಲ್ಲಿಗೂ ತೆರಳುವುದಿಲ್ಲ ಎಂದಿದ್ದಾರೆ.
ಇನ್ನು ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸಚಿವ ಸಿಸಿ ಪಾಟೀಲ್ ಗ್ರಾಮಸ್ಥರ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ. ಜೊತೆಗೆ ನಾಳೆ ಒಳಗಾಗಿ ಶೆಡ್ ನಿರ್ಮಿಸಿಕೊಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.