
ಹುಬ್ಬಳ್ಳಿ: ಬೈಕ್ ಕಳ್ಳತನಕ್ಕೆ ಬಂದಿದ್ದ 10 ಜನರ ತಂಡ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ ಬೈಕ್‌ಗೆ ಬೆಂಕಿ ಹಚ್ಚಿರುವ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಗಿರಿನಗರದಲ್ಲಿ ನಡೆದಿದೆ.
ಗೋಕುಲ ರಸ್ತೆಯ ಗಿರಿ ನಗರದಲ್ಲಿರುವ ವಿನಯ್ ದೇಸಾಯಿ ಎಂಬುವರಿಗೆ ಸೇರಿದ ಮನೆಗೆ ಬೈಕ್ ಕಳ್ಳತನಕ್ಕೆ ಬಂದಿದ್ದ 10 ಜನರ ತಂಡದಿಂದ ಈ ಕೃತ್ಯ ನಡೆದಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕಳ್ಳತನ ಮಾಡಲು ಬಂದವರ ಶಬ್ದ ಕೇಳಿ ವಿನಯ್ ಹೊರಬಂದಿದ್ದಾರೆ. ಈ ವೇಳೆ ಕಳ್ಳರನ್ನು ಕಂಡ ವಿನಯ್ ಅವರನ್ನು ಹಿಡಿಯಲು ಮುಂದಾಗಿದ್ದಾರೆ, ಕೂಡಲೇ ಹೆಚ್ಚೆತ್ತುಕೊಂಡ ಕಳ್ಳರು ವಿನಯ್ ಮೇಲೆ ಕಲ್ಲು, ದೊಣ್ಣೆತಿಂದ ಹಲ್ಲೆ ಮಾಡಿದ್ದಾರೆ.
ನಂತರ ಕುಟುಂಬಸ್ಥರಿಗೆ ಥಳಿಸಿದ ಕಳ್ಳರು, ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಖದೀಮರ ದಾಳಿಯಲ್ಲಿ ವಿನಯ್ ಹಾಗೂ ಅವರ ಅಕ್ಕನಿಗೆ ಗಾಯಗಳಾಗಿದ್ದು, ಗಾಯಾಳುಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಳೆಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.