ಭಾರತ -ಇಂಗ್ಲೆಂಡ್ ನಡುವೆ ನಡೆಯುವ ಮೂರನೆ ಟೆಸ್ಟ್ ಹೊನಲು ಬೆಳಕಿನ ಪಂದ್ಯವಾಗಿರುತ್ತದೆ: ಬಿಸಿಸಿಐ

ಒಂದು ವರ್ಷದ ನಂತರ ಭಾರತದಲ್ಲಿ ಪೂರ್ಣ ಪ್ರಮಾಣದ ಕ್ರಿಕೆಟ್​ ಸರಣಿಯೊಂದು ಇನ್ನೆರಡು ತಿಂಗಳಲ್ಲಿ ಆಯೋಜನೆಗೊಳ್ಳಲಿದೆ. 4 ಟೆಸ್ಟ್, 3 ಒಡಿಐ ಮತ್ತು 5 ಟಿ20ಐ ಪಂದ್ಯಗಳ ಸರಣಿಯನ್ನಾಡಲು ಇಂಗ್ಲೆಂಡ್ 2021 ಫೆಬ್ರವರಿಯಲ್ಲಿ ಭಾರತಕ್ಕೆ ಬರಲಿದೆ. ಟೆಸ್ಟ್ ಸರಣಿಯ ಮೂರನೆ ಪಂದ್ಯ ಹೊನಲು ಬೆಳಕಿನಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

ಭಾರತ -ಇಂಗ್ಲೆಂಡ್ ನಡುವೆ ನಡೆಯುವ ಮೂರನೆ ಟೆಸ್ಟ್ ಹೊನಲು ಬೆಳಕಿನ ಪಂದ್ಯವಾಗಿರುತ್ತದೆ: ಬಿಸಿಸಿಐ
ಇಂಗ್ಲೆಂಡ್ ನಾಯಕ ಜೊ ರೂಟ್ ಮತ್ತು ವಿರಾಟ್ ಕೊಹ್ಲಿ
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Dec 11, 2020 | 11:08 AM

ಕೊವಿಡ್-19 ಪಿಡುಗಿನಿಂದ ಹೆಚ್ಚು ಕಡಿಮೆ ಒಂದು ವರ್ಷ ಕಾಲ ಕ್ರಿಕೆಟ್ ಮತ್ತು ಇತರ ಕ್ರೀಡಾ ಚಟುವಟಿಕೆಗಳ ಬರ ಎದುರಿಸಿದ ಭಾರತೀಯರಿಗೆ ಮುಂದಿನ ವರ್ಷದ ಫೆಬ್ರುವರಿ ತಿಂಗಳಿನಿಂದ ಕ್ರಿಕೆಟ್ ರಸದೌತಣ ಸಿಗಲಿದೆ. ಇಂಗ್ಲೆಂಡ್ ಕ್ರಿಕೆಟ್ ತಂಡ ಒಂದು ಪೂರ್ಣ ಪ್ರಮಾಣದ ಸರಣಿಯನ್ನಾಡಲು ಭಾರತಕ್ಕೆ ಆಗಮಿಸಲಿದೆ. ಈ ಪ್ರವಾಸದಲ್ಲಿ ಅದು 4 ಟೆಸ್ಟ್, 5 ಟಿ20ಪಂದ್ಯಗಳು ಮತ್ತು 3 ಒಂದು ದಿನ ಅಂತರರಾಷ್ಟ್ರೀಯ ಪಂದ್ಯಗಳನ್ನಾಡಲಿದೆ ಎಂದು ಗುರುವಾರದಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪತ್ರಿಕಾ ಪ್ರಕಟಣೆಯೊಂದರಲ್ಲಿ ತಿಳಿಸಿದೆ.

ಇಂಗ್ಲೆಂಡ್ ವಿರುದ್ಧ ನಡೆಯುವ ಸರಣಿಯು ವಿಶ್ವದಾದ್ಯಂತ ಕೊವಿಡ್-19 ಸೃಷ್ಟಿಸಿದ ಭಯಾನಕ ಸ್ಥಿತಿಯ ಮಧ್ಯೆ ಭಾರತದಲ್ಲಿ ನಡೆಯುವ ಮೊದಲ ಪ್ರಮುಖ ಕ್ರೀಡಾ ಈವೆಂಟ್ ಆಗಲಿದೆ. ಓದುಗರಿಗೆ ನೆನಪಿರಬಹುದು, ಈ ವರ್ಷದ ಆರಂಭದಲ್ಲಿ ಸರಣಿಯನ್ನಾಡಲು ದಕ್ಷಿಣ ಆಫ್ರಿಕ ತಂಡ ಭಾರತಕ್ಕೆ ಆಗಮಿಸಬೇಕಿತ್ತು. ಆದರೆ, ಪ್ಯಾಂಡೆಮಿಕ್​ನಿಂದಾಗಿ ಅದನ್ನು ರದ್ದು ಮಾಡಲಾಗಿತ್ತು.

ಇಂಗ್ಲೆಂಡ್ ವಿರುದ್ಧ ನಡೆಯುವ ಪಂದ್ಯಗಳನ್ನು ಆಯೋಜಿಸಲು ಕೇವಲ ಮೂರು ನಗರಗಳಲ್ಲಿನ ಕ್ರಿಕೆಟ್ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ. ಅಂತೋನಿ ಡಿ ಮೆಲ್ಲೊ ಟ್ರೋಫಿಗಾಗಿ ನಡೆಯುವ4 ಟೆಸ್ಟ್ ಪಂದ್ಯಗಳ ಪೈಕಿ ಮೊದಲಿನರೆಡು ಚೆನೈಯಲ್ಲಿ ನಡೆಯಲಿವೆ ಮತ್ತು ಮೂರು ಹಾಗೂ ನಾಲ್ಕನೆ ಟೆಸ್ಟ್​ಗಳು ಅಹಮದಾಬಾದ್​ನ ಸರ್ದಾರ್ ಪಟೇಲ್ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿವೆ. ಗಮನಿಸಬೇಕಾದ ಅಂಶವೆಂದರೆ, ಮೂರನೆ ಟೆಸ್ಟ್ ಹೊನಲು ಬೆಳಕಿನ ಪಂದ್ಯವಾಗಿದ್ದು ಪಿಂಕ್ ಬಣ್ಣದ ಚೆಂಡಿನಿಂದ ಆಡಲಾಗುತ್ತದೆ.

ಮೊಟೆರಾ ಸ್ಟೇಡಿಯಂ, ಅಹಮದಾಬಾದ್

ನೂತನವಾಗಿ ನಿರ್ಮಿಸಲಾಗಿರುವ ಅಹಮದಾಬಾದ್​ನ ಮೊಟೆರಾ ಸ್ಟೇಡಿಯಂ ಬಗ್ಗೆ ಇಲ್ಲಿ ಒಂದಷ್ಟು ಚರ್ಚಿಸಲೇಬೇಕು. ಇದು ಜಗತ್ತಿನ ಅತಿ ದೊಡ್ಡ ಸ್ಟೇಡಿಯಂ ಆಗಿದ್ದು, 1,10,000 ಪ್ರೇಕ್ಷಕರು ಕೂತುಕೊಂಡು ಪಂದ್ಯ ವೀಕ್ಷಿಸುವಷ್ಟು ಆಸನಗಳ ವ್ಯವಸ್ಥೆಯಿದೆ. ಗುಜರಾತ್ ಕ್ರಿಕೆಟ್ ಸಂಸ್ಥೆಯ ಮೂಲಗಳ ಪ್ರಕಾರ ಸದರಿ ಕ್ರೀಡಾಂಗಣದಲ್ಲಿ ಎಲ್ಲ ಆಧುನಿಕ ಸೌಲಭ್ಯಗಳಿವೆ. ಭಾರತದಲ್ಲಿ ನಡೆಯಲಿರುವ ಕೇವಲ ಎರಡನೆ ಹೊನಲು-ಬೆಳಕಿನ ಪಂದ್ಯವನ್ನು ಈ ಸ್ಟೇಡಿಯಂನಲ್ಲಿ ಆಯೋಜಿಸಲಾಗುತ್ತಿದೆ. ಕೊನೆಯೆರಡು ಟೆಸ್ಟ್​ಗಳಲ್ಲದೆ, ಎಲ್ಲ ಐದು ಟಿ20 ಪಂದ್ಯಗಳು ಸಹ ಇಲ್ಲೇ ನಡೆಯಲಿವೆ.

ಅಂದಹಾಗೆ, ಮೂರು ಒಂದು ದಿನದ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಪುಣೆಯ ಕ್ರಿಕೆಟ್​ ಸ್ಟೇಡಿಯಂ ಅನ್ನು ಆಯ್ಕೆ ಮಾಡಿಕೊಂಡಿದೆ.

ಇಂಗ್ಲೆಂಡ್ ಪ್ರವಾಸದ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಕೊವಿಡ್-19 ಪ್ಯಾಂಡೆಮಿಕ್ ಹಿನ್ನೆಲೆಯಲ್ಲಿ ಬಿಸಿಸಿಐ ಮತ್ತು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್​ ಮಂಡಳಿಗಳಿಗೆ ಎರಡೂ ತಂಡದ ಆಟಗಾರರ ಆರೋಗ್ಯ ಮತ್ತು ಅವರ ಹಿತಾಸಕ್ತಿಯನ್ನು ಕಾಪಾಡುವುದು ಮೊದಲ ಆದ್ಯತೆಯಾಗಿದೆ. ಎರಡು ಮಂಡಳಿಗಳು ತಮ್ಮ ನಡುವೆ ಆರೋಗ್ಯ ಮತ್ತು ಮುನ್ನೆಚ್ಚರಿಕೆ ಕುರಿತು ಮಾಡಿಕೊಂಡಿರುವ ಒಡಂಬಡಿಕೆಯ ಶಿಷ್ಟಾಚಾರಗಳನ್ನು ಚಾಚೂತಪ್ಪದೆ ಅನುಸರಿಸಲಾಗುವುದು ಎಂದು ಹೇಳಿದರು.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ

ಕಳೆದ ಸಲ ಆಂಗ್ಲರ ತಂಡ ಭಾರತ ಪ್ರವಾಸ ಬಂದಾಗ ಅತಿಥೇಯರು ಟೆಸ್ಟ್, ಒಡಿಐ ಮತ್ತು ಟಿ20 ಸರಣಿ-ಮೂರನ್ನೂ ಗೆದ್ದಿದ್ದರು.