ನಮ್ಮ ಮಾತಿಗೆ, ಮೌನಕ್ಕೆ, ಆಲಿಸುವಿಕೆಗೆ, ನೋಟಕ್ಕೆ, ಸ್ಪರ್ಶಕ್ಕೆ ಮಿಗಿಲಾದುದರ ಹುಡುಕಾಟ ಮತ್ತು ತಣಿಕೆಗಾಗಿಯೇ ನಾವು ಮತ್ತೆ ಮತ್ತೆ ಅಕ್ಷರಲೋಕದ ಸಾಂಗತ್ಯಕ್ಕೆ ಬೀಳುವುದು. ಅದು ಉಸಿರಿನಷ್ಟೇ ಸಹಜ. ಭಾವಕ್ಕೂ ಬುದ್ಧಿಗೂ ಬೇಕಾದ ಈ ಆಮ್ಲಜನಕಕ್ಕಾಗಿ ನಾವು ಜಂಜಡಗಳ ಮಧ್ಯೆಯೇ ಹೆಚ್ಚೆಚ್ಚು ಆತುಕೊಳ್ಳುತ್ತಲು ನೋಡುತ್ತಿರುತ್ತೇವೆ. ಈ ವರ್ಷ ಆವರಿಸಿದ ಮಹಾಶೂನ್ಯದೊಂದಿಗೇ ನಾವು ಏನು ಓದಿದೆವು?
‘tv9 ಕನ್ನಡ ಡಿಜಿಟಲ್ ವರ್ಷಾಂತ್ಯ ವಿಶೇಷ 2020: ಓದಿನಂಗಳ’ ಸರಣಿಗಾಗಿ ಕನ್ನಡದ ಹಿರಿ-ಕಿರಿಯ ಕಥೆಗಾರರು, ಕಾದಂಬರಿಕಾರರು, ಕವಿಗಳು ಮತ್ತು ಗಂಭೀರ ಓದುಗರು ಈ ವರ್ಷ ತಾವು ಓದಿ ಮೆಚ್ಚಿದ ಎರಡು ಪುಸ್ತಕಗಳ ಬಗ್ಗೆ ಪುಟ್ಟ ಟಿಪ್ಪಣಿ ನೀಡಿದ್ದಾರೆ. ಇತಿಹಾಸ ಪ್ರಾಧ್ಯಾಪಕ, ಲೇಖಕ ಎಚ್.ಎ. ಅನಿಲಕುಮಾರ ಅವರ ಆಯ್ಕೆಗಳು ಇಲ್ಲಿವೆ.
ಕೃತಿ : ರೊಯಾಲ್ಡ್ ದಾಲ್-ಸಮಗ್ರ ಕಥಾಸಂಗ್ರಹ
ಲೇ: ರೊಯಾಲ್ಡ್ ದಾಲ್
ಪ್ರ : ಮೈಕೆಲ್ ಜೋಸೆಫ್ ಪ್ರಕಾಶನ
ರೋಯಾಲ್ಡ್ ದಾಲ್ (1916-90) ಅವರ 762 ಪುಟಗಳ ಸಮಗ್ರ ಕಥೆಗಳು ಕೊನೆಯಲ್ಲಿ ಅನಿರೀಕ್ಷಿತ ತಿರುವ ನೀಡುವ ನಿರೀಕ್ಷೆಯನ್ನು ಸದಾ ಹುಟ್ಟುಹಾಕುತ್ತವೆ, ಓ. ಹೆನ್ರಿ ಅವರ ಕಥೆಗಳಂತೆ. ಈ ನಿರೀಕ್ಷೆಯ ಕ್ಲೀಷೆಯ ಆಚೆಗೂ ಸಹ, ತಮ್ಮ ಅತ್ಯುತ್ತಮ ಕಥೆಗಳಲ್ಲಿ, ‘ಮನಸ್ಸಿನ ವ್ಯಾಪಾರಗಳನ್ನು ಸುತ್ತಲಿನ ಪರಿಸರವು ನಿರ್ಬಂಧಿಸುತ್ತವೆ’ ಎಂಬ ಅಂಶವನ್ನು ಹೊಳೆಯಿಸುತ್ತಾರೆ ಈ ಬ್ರಿಟಿಷ್ ಬರಹಗಾರ.
ಲಿಫ್ಟಿನಲ್ಲಿ ಸಿಕ್ಕಿಹಾಕಿಕೊಂಡ ಗಂಡನ ಬಗ್ಗೆ ಅರಿವಿದ್ದೂ ತಿಂಗಳುಗಳ ಕಾಲ ಖಂಡಾಂತರವಾಗಿ ಮಗಳ ಮನೆಗೆ ತೆರಳುವಾಕೆಯಂತಹ ಕಥೆಗಳೇ ಎಲ್ಲ ಪ್ರಪಂಚ ಯುದ್ಧವು ಒಟ್ಟಾರೆ ಮಾನವೀಯತೆಯನ್ನು ಪುನರ್ ವ್ಯಾಖಾನ ಮಾಡುವಾಗ, ಅರ್ಥಗಳು, ಅನುಭವಗಳು ಸದಾ ‘ಅವಕಾಶಗಳನ್ನು ಮಾತ್ರ’ ಆಧರಿಸಿರುತ್ತವೆ ಎಂದು ನಿರೂಪಿಸುತ್ತವೆ. ದಾಲ್ ಪ್ರಕಾರ ಒಳ್ಳೆಯತನವೂ ಸಹ ಒಂದು ಉಪಾಯವೇ ಹೊರತು, ಉಪಾಯವು ಎಂದಿಗೂ ತಾನೇ ತಾನಾಗಿ ಒಳ್ಳೆಯದ್ದಾಗಿರುವುದಿಲ್ಲ. ವಸ್ತು, ತಂತ್ರಜ್ಞಾನ, ನಿರಂತರ ಮಾನಸಿಕ ತೊಳಲಾಟ ಪ್ರಸ್ತುತ ಶತಮಾನದಲ್ಲಿ ಈ ಮೂರು ಪರಸ್ಪರ ಪ್ರಭಾವಿಸಿ, ವ್ಯಕ್ತಿತ್ವಗಳನ್ನು ರೂಪಿಸುತ್ತವೆ ಎಂಬ ಅರಿವು ಈ ಕಥೆಗಳಲ್ಲಿವೆ. ‘ಮನುಕುಲದ ವಿವಿಧ ಕಾಲಘಟ್ಟಗಳಲ್ಲಿ ಮನಸ್ಸಿನ ವ್ಯಾಪಾರವನ್ನು ಪ್ರಭಾವಿಸುವ ಹೊರಗಿನ ಅಂಶಗಳು ಯಾವಾಗಲೂ ಭಿನ್ನ’ ಎಂಬ ವಿಭಿನ್ನ ಹೊಳಹನ್ನು ಜನಪ್ರಿಯ ಕಥನ ಪ್ರಕಾರಗಳಲ್ಲಿಯೂ ನಿರೂಪಿಸಬಹುದು ಎಂಬುದು ದಾಲ್ ಬರವಣಿಗೆಯಲ್ಲಿ ನಾನು ಕಂಡುಕೊಂಡ ಪಾಠ.
ಕೃ: ಪ್ಯಾಲೆಸ್ತೀನ್
ಲೇ: ಜೋ ಸ್ಯಾಕೋ
ಪ್ರ: ಫ್ಯಾಂಟಾಗ್ರಾಫಿಕ್ ಬುಕ್ಸ್
ಜೋ ಸ್ಯಾಕೋ ಎಂಬ ಅಮೇರಿಕನ್ ಛಾಯಾಚಿತ್ರ ವರದಿಗಾರ ರಚಿಸಿದ ಈ ಗ್ರಾಫಿಕ್-ಕಾದಂಬರಿ ಪ್ಯಾಲಸ್ತೀನ್ ದೇಶದ ಒಳಗಿನ ಆಗುಹೋಗುಗಳ, ನಿಜದಲ್ಲಿ ಕಂಡ ಕಂಗಳ ದಾಖಲೆಯ ಚಿತ್ರವನ್ನು ನೀಡುತ್ತದೆ. ಎರಡು ವರ್ಷ ಪ್ರಕಟವಾದ (93-95), ಪ್ರಸ್ತುತ ಲೇಖಕನ ಮೂರು ತಿಂಗಳ (91-92) ಅನುಭವದ ಒಂಬತ್ತು ಅಧ್ಯಾಯಗಳ ಆತ್ಮಚರಿತ್ರೆ/ಪ್ರವಾಸಕಥನದ ಒಟ್ಟಾರೆ ಮೊತ್ತವಿದು. ಮೊದಲಿಗೆ ನಿರ್ಭಾವುಕನಾಗಿ, ಕೊನೆಗೆ ಕಫ್ಯ್ಯೂವನ್ನೂ ಸಹ ಮುರಿದ ಸ್ವತಃ ಸಹಭಾಗಿಯಾಗಿಯಾಗುವ ಘಟನೆಗಳ ವಿವರವಿಲ್ಲಿದೆ. ಮುಖ್ಯವಾಹಿನಿ ಮಾಧ್ಯಮ ನೀಡದ, ನೀಡಲಾಗದ ಛಾಯಾಚಿತ್ರ, ವಿಡಿಯೋಗಳನ್ನು ಆಧರಿಸಿ ಪ್ಯಾಲೇಸ್ಟಿನಿಯರ ಕಥೆಯನ್ನು ಅವುಗಳನ್ನು ರಚಿತ ಚಿತ್ರವನ್ನಾಗಿ ಪೋಣಿಸಿದ ಎಪಿಕ್ ಕಥನವಿದು.
ಜಗತ್ತಿಗೆ ಮುಚ್ಚಿಟ್ಟಿರಲಾದುದನ್ನು, ‘ಯಾವುದನ್ನು ಕಾಣುತ್ತೇವೆ ಎಂಬುದನ್ನು ಹೇಗೆ ಕಾಣುತ್ತೇವೆ ಎಂಬುದನ್ನು ಪರಸ್ಪರ ವಿಂಗಡಿಸಲಾಗದಂತೆ ಓದಿಸಿಕೊಳ್ಳುತ್ತದೆ’ ಈ ಕಾದಂಬರಿ. ಮುಖ್ಯವಾಗಿ ದಮನಿತ ವರ್ಗವೊಂದರ ಸಮಾಜೋ-ರಾಜಕೀಯ ಪರಿಸ್ಥಿತಿಯ ಕಲಾತ್ಮಕ ವೈಭವೀಕರಣವಿದಾಗಿದೆ ಈ ಪುಸ್ತಕ. ಇದು ಎಷ್ಟು ನೈತಿಕ ಅಥವಾ ನೈತಿಕತೆಯು ಇಂತಹ ಕಥೆಗಳಿಗೆ ಅನ್ವಯವಾಗದೇ ಎಂಬ ಮುಖ್ಯ ಪ್ರಶ್ನೆ ಹುಟ್ಟಿಹಾಕಿರುವುದು ಈ ಪುಸ್ತಕದ ಮುಖ್ಯಸಾಧನೆ. ಚಿತ್ರಿಸಿ ಬರೆಯಲಾಗಿರುವ ಪ್ರತಿಯೊಂದು ಪುಟವೂ ಸಹ ಗ್ರೀಕ್ ದುರಂತ ಕಥೆಗಳ ಆಕರ್ಷಣೆ ಹೊಂದಿದ್ದು ನೈತಿಕತೆಗಳನ್ನು ಬದಿಗಿಟ್ಟು, ಒಮ್ಮೆ ಈ ಕರ್ಫ್ಯೂ, ಗುಂಡಿನ ಚಕಮಕಿ, ಉಸಿರುಗಟ್ಟಿಸುವ ವಾತಾವರಣ, ಬಿಸಿಯೇರಿದ ಚರ್ಚೆಗಳನ್ನು ಆಲಿವ್ ಮರದ ಕೆಳಗೆ ‘ಮಧ್ಯ’ ರಾತ್ರಿಯಲ್ಲಿ ಅರೆಕ್ಷಣ ಆ ಪ್ಯಾಲಿಸ್ತೀನಿಯರ ಒಟ್ಟಿಗೆ ಕುಳಿತು ಆಸ್ವಾದಿಸಿಬಿಟ್ಟರೆ ಹೇಗೆ? ಎಂದೆನಿಸದಿರದು, ಈ ಚಿತ್ರ-ಕಥೆಗಳನ್ನು ಓದಿ ನೋಡುತ್ತಿದ್ದರೆ.
ವರ್ಷಾಂತ್ಯ ವಿಶೇಷ 2020: ’ಓದಿನಂಗಳ’ದಲ್ಲಿ ಕಥೆಗಾರ ಪ್ರಕಾಶ ನಾಯಕ; The Hungry Tide, ತೇಜೋತುಂಗಭದ್ರ
Published On - 7:02 pm, Mon, 28 December 20