ವೀಲಿಂಗ್ ಮಾಡಬೇಡಿ ಎಂದಿದ್ದಕ್ಕೆ ಕಣ್ಣಿಗೆ ಖಾರದಪುಡಿ ಎರಚಿ ಬರ್ಬರವಾಗಿ ಕೊಲೆಗೈದರು..

ಮೈಸೂರು: ವೀಲಿಂಗ್ ಮಾಡ್ಬೇಡಿ ಅಂತಾ ಬುದ್ಧಿ ಹೇಳಿದಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ T.ನರಸೀಪುರ ತಾಲ್ಲೂಕಿನ ಕೇತುಪುರ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ಸಿದ್ದರಾಜು (26) ಹತ್ಯೆಯಾದ ಯುವಕ. ಗ್ರಾಮದಲ್ಲಿ ಕಿರಿದಾದ ರಸ್ತೆ ಇದೆ. ಮಕ್ಕಳು ಓಡಾಡುತ್ತಿರುತ್ತಾರೆ. ಹಾಗಾಗಿ, ಇಲ್ಲಿ ವೀಲಿಂಗ್ ಮಾಡಬೇಡಿ ಎಂದು ಸಿದ್ದರಾಜು ಬುದ್ಧಿ ಹೇಳಿದ್ದಾನೆ. ಇದೇ ವಿಚಾರಕ್ಕೆ ಎರಡು ದಿನದ ಹಿಂದೆ ಗಲಾಟೆ ಸಹ ನಡೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ನೀಡಿದ ಹಿನ್ನಲೆಯಲ್ಲಿ […]

ವೀಲಿಂಗ್ ಮಾಡಬೇಡಿ ಎಂದಿದ್ದಕ್ಕೆ ಕಣ್ಣಿಗೆ ಖಾರದಪುಡಿ ಎರಚಿ ಬರ್ಬರವಾಗಿ ಕೊಲೆಗೈದರು..
Edited By:

Updated on: Sep 13, 2020 | 1:01 PM

ಮೈಸೂರು: ವೀಲಿಂಗ್ ಮಾಡ್ಬೇಡಿ ಅಂತಾ ಬುದ್ಧಿ ಹೇಳಿದಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ T.ನರಸೀಪುರ ತಾಲ್ಲೂಕಿನ ಕೇತುಪುರ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಗ್ರಾಮದ ನಿವಾಸಿ ಸಿದ್ದರಾಜು (26) ಹತ್ಯೆಯಾದ ಯುವಕ.

ಗ್ರಾಮದಲ್ಲಿ ಕಿರಿದಾದ ರಸ್ತೆ ಇದೆ. ಮಕ್ಕಳು ಓಡಾಡುತ್ತಿರುತ್ತಾರೆ. ಹಾಗಾಗಿ, ಇಲ್ಲಿ ವೀಲಿಂಗ್ ಮಾಡಬೇಡಿ ಎಂದು ಸಿದ್ದರಾಜು ಬುದ್ಧಿ ಹೇಳಿದ್ದಾನೆ. ಇದೇ ವಿಚಾರಕ್ಕೆ ಎರಡು ದಿನದ ಹಿಂದೆ ಗಲಾಟೆ ಸಹ ನಡೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ದೂರು ನೀಡಿದ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಗುಂಪು ಕಟ್ಟಿಕೊಂಡು ಬಂದ ಯುವಕರು ಸಿದ್ದರಾಜು ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಆತನ ಕಣ್ಣಿಗೆ ಖಾರದಪುಡಿ ಎರಚಿ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡ ಸಿದ್ದರಾಜು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಇನ್ನು ಗಲಾಟೆ ತಡೆಯಲು ಹೋದ ಮೃತ ಯುವಕನ ಚಿಕ್ಕಪ್ಪನ ಮೇಲೂ ಸಹ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ಘಟನೆ ನಂತರ ಯುವಕರ ಗುಂಪು ಪರಾರಿಯಾಗಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.