April Fool’s Day 2026: ಏಪ್ರಿಲ್‌ ಫೂಲ್‌ ಆಚರಣೆ ಆರಂಭವಾದ್ದು ಹೇಗೆ? ಈ ದಿನದ ವಿಶೇಷತೆಯೇನು ತಿಳಿಯಿರಿ

ಏಪ್ರಿಲ್ 1 ಅನ್ನು ಪ್ರಪಂಚದಾದ್ಯಂತ ಏಪ್ರಿಲ್ ಮೂರ್ಖರ ದಿನವೆಂದು ಆಚರಿಸಲಾಗುತ್ತದೆ. ಈ ದಿನದಂದು ಜನರು ಪರಸ್ಪರ ಮೂರ್ಖರನ್ನಾಗಿಸುತ್ತಾರೆ. ಪರಸ್ಪರ ತಮಾಷೆ ಮಾಡುತ್ತಾ, ಕಾಲೆಳೆಯುತ್ತಾ ಎಂಜಾಯ್‌ ಮಾಡ್ತಾರೆ. ಅಷ್ಟಕ್ಕೂ ಏಪ್ರಿಲ್‌ 1 ರಂದು ಮೂರ್ಖರ ದಿನವನ್ನು ಆಚರಿಸುವುದೇಕೆ, ಈ ವಿಶಿಷ್ಟ ಆಚರಣೆಯ ಇತಿಹಾಸವೇನು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.

April Fools Day 2026: ಏಪ್ರಿಲ್‌ ಫೂಲ್‌ ಆಚರಣೆ ಆರಂಭವಾದ್ದು ಹೇಗೆ? ಈ ದಿನದ ವಿಶೇಷತೆಯೇನು ತಿಳಿಯಿರಿ
ಏಪ್ರಿಲ್‌ ಫೂಲ್‌ ಡೇ
Image Credit source: Pinterest

Updated on: Apr 01, 2026 | 10:17 AM

ಈ ಜಗತ್ತಿನಾದ್ಯಂತ ಹಲವು ವಿಭಿನ್ನ, ವಿಶಿಷ್ಟ, ವಿಚಿತ್ರ ಆಚರಣೆಗಳಿವೆ. ಅವುಗಳಲ್ಲಿ ಏಪ್ರಿಲ್‌ ಫೂಲ್‌ ಡೇ (April Fool’s Day) ಕೂಡ ಒಂದು. ಪ್ರಪಂಚದಾದ್ಯಂತ ಏಪ್ರಿಲ್‌ 1 ರಂದು ಏಪ್ರಿಲ್‌ ಫೂಲ್‌ ಡೇ ಆಚರಿಸಲಾಗುತ್ತದೆ. ಈ ದಿನದಂದು ಜನ ಪರಸ್ಪರ ಸುಳ್ಳುಗಳನ್ನು ಹೇಳಿ, ತಮಾಷೆ ಮಾಡಿ ಒಬ್ಬರಿಗೊಬ್ಬರು ಕಾಲೆಳೆಯುತ್ತಾರೆ. ಸ್ನೇಹಿತರು, ಆಪ್ತರ ತಮಾಷೆಯಿಂದ ತಾವು ಮೂರ್ಖರಾದೆವು ಎಂದು ತಿಳಿದ ಮೇಲೆಯೂ ಜನ ಜೋರಾಗಿ ಮನಬಿಚ್ಚಿ ನಗುತ್ತಾರೆ. ಒಟ್ಟಿನಲ್ಲಿ ಇದೊಂದು ದಿನ ಮಾತ್ರ ಎಂಥವರ ಮುಖದಲ್ಲೂ ನಗು ಮೂಡಿಸಿ ಬಿಡುತ್ತದೆ. ಅಷ್ಟಕ್ಕೂ ಈ ವಿಶಿಷ್ಟ ದಿನಾಚರಣೆ ಆರಂಭವಾದ್ದು ಹೇಗೆ, ಈ ಮೂರ್ಖರ ದಿನದ ಉದ್ದೇಶವಾದರೂ ಏನು ಎಂಬುದನ್ನು ನೋಡೋಣ ಬನ್ನಿ.

ಏಪ್ರಿಲ್ ಮೂರ್ಖರ ದಿನ ಯಾವಾಗ ಮತ್ತು ಹೇಗೆ ಪ್ರಾರಂಭವಾಯಿತು?

ಏಪ್ರಿಲ್ ಮೂರ್ಖರ ದಿನದ ಹಿಂದೆ ಹಲವು ಕಥೆಗಳಿವೆ. ಈ ದಿನದ ಆಚರಣೆ ಫ್ರಾನ್ಸ್‌ನಲ್ಲಿ ಹುಟ್ಟಿಕೊಂಡಿತು. ಏಪ್ರಿಲ್ ಮೂರ್ಖರ ದಿನದ ಅತ್ಯಂತ ಜನಪ್ರಿಯ ಕಥೆ ಫ್ರಾನ್ಸ್‌ಗೆ ಸಂಬಂಧಿಸಿದೆ. 16 ನೇ ಶತಮಾನದಲ್ಲಿ, ಚಾರ್ಲ್ಸ್ IX 1564 ರಲ್ಲಿ ಹೊಸ ಕ್ಯಾಲೆಂಡರ್ ಅನ್ನು ಜಾರಿಗೆ ತಂದರು, ಅದರಲ್ಲಿ ಹೊಸ ವರ್ಷವು ಜನವರಿ 1 ರಂದು ಪ್ರಾರಂಭವಾಯಿತು. ಆದಾಗ್ಯೂ, ಅನೇಕ ಜನರಿಗೆ ಈ ಬದಲಾವಣೆಯ ಬಗ್ಗೆ ತಿಳಿದಿರಲಿಲ್ಲ ಮತ್ತು ಏಪ್ರಿಲ್ 1 ರಂದು ಹೊಸ ವರ್ಷವನ್ನು ಆಚರಿಸುವುದನ್ನು ಮುಂದುವರೆಸಿದರು. ಅಂತಹ ಜನರನ್ನು ಅಪಹಾಸ್ಯ ಮಾಡಲು, ಅವರನ್ನು ಏಪ್ರಿಲ್ ಮೂರ್ಖರು ಎಂದು ಕರೆಯಲಾಗುತ್ತಿತ್ತು.

ಇನ್ನೊಂದು ಕಥೆಯ ಪ್ರಕಾರ ಏಪ್ರಿಲ್ ಮೂರ್ಖರ ದಿನವನ್ನು ಆಚರಿಸುವ ಮೂಲವು 1381 ರಲ್ಲಿ ಇಂಗ್ಲೆಂಡ್‌ನ ರಾಜ ರಿಚರ್ಡ್ II ಮತ್ತು ಬೊಹೆಮಿಯಾದ ರಾಣಿ ಅನ್ನಿ ಅವರ ನಿಶ್ಚಿತಾರ್ಥವನ್ನು ಘೋಷಿಸಿದಾಗ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ರಾಜನು  ಜನರಿಗೆ ತನ್ನ ಮತ್ತು ರಾಣಿ ಅನ್ನಿಯ ನಿಶ್ಚಿತಾರ್ಥದ ದಿನಾಂಕ ಮಾರ್ಚ್ 32 ಎಂದು ಹೇಳಿದ್ದನು. ಜನರು ರಾಜ ಹೇಳಿದ ಈ ತಮಾಷೆಯ ಸುಳ್ಳನ್ನು ಅರ್ಥಮಾಡಿಕೊಳ್ಳದೆ ರಾಜನ ನಿಶ್ಚಿತಾರ್ಥದ ಖುಷಿಯಲ್ಲಿ ಭರ್ಜರಿ ಸಂಭ್ರಮಾಚರಣೆ ಮಾಡಿದರು.  ಆದರೆ ಇದ್ದಕ್ಕಿದ್ದಂತೆ ಕ್ಯಾಲೆಂಡರ್‌ನಲ್ಲಿ ಮಾರ್ಚ್ 32 ದಿನಾಂಕವೇ ಇಲ್ಲ ಎಂದು ಅರಿತು ಮೂರ್ಖರಾದರು.  ನಂತರ ಇದು ಬ್ರಿಟನ್‌ನಾದ್ಯಂತ ಹರಡಿ ಮೂರ್ಖರ ದಿನದ ಆಚರಣೆ ಆರಂಭವಾಯಿತು.

ಇದನ್ನೂ ಓದಿ: ಏಪ್ರಿಲ್‌ನಲ್ಲಿ ಆಚರಿಸಲಾಗುವ ರಾಷ್ಟ್ರೀಯ-ಅಂತಾರಾಷ್ಟ್ರೀಯ ದಿನಾಚರಣೆಗಳ ಪಟ್ಟಿ

ಏಪ್ರಿಲ್ ಫೂಲ್‌  ದಿನವನ್ನು ಹೇಗೆ ಆಚರಿಸಲಾಗುತ್ತದೆ?

ಈ ದಿನದಂದು ಜನರು ಪರಸ್ಪರ ತಮಾಷೆ ಮಾಡುತ್ತಾರೆ. ಹಲವರು ತಮಾಷೆ ಮಾಡುವ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡುತ್ತಾರೆ. ಕೆಲವರು ನಕಲಿ ಸುದ್ದಿಗಳನ್ನು ಹರಡಿದರೆ, ಇನ್ನು ಕೆಲವರು ಹಾಸ್ಯಮಯ ವಂಚನೆಗಳನ್ನು ಮಾಡಿ ಇನ್ನೊಬ್ಬ ವ್ಯಕ್ತಿಯನ್ನು ನಗಿಸುತ್ತಾರೆ.

ಏಪ್ರಿಲ್ ಫೂಲ್‌ ದಿನದ ಮಹತ್ವವೇನು?

  • ಜನರು ಈ ದಿನವನ್ನು ತುಂಬಾ ಮೋಜಿನಿಂದ ಆಚರಿಸುತ್ತಾರೆ. ಇದು ಕೇವಲ ತಮಾಷೆಗಳನ್ನು ಹಂಚಿಕೊಳ್ಳುವುದು ಮತ್ತು ಸ್ನೇಹಿತರು, ಪ್ರೀತಿಪಾತ್ರರನ್ನು ತಮಾಷೆ ಮಾಡುವುದು, ಕಾಲೆಳೆಯುವುದು ಮಾತ್ರವಲ್ಲ, ಈ ದಿನ ಸಂತೋಷವನ್ನು ಹರಡುವುದರ ಬಗ್ಗೆಯೂ ಆಗಿದೆ. ಈ ದಿನ ಜೋಕ್‌ಗಳು ಮತ್ತು ನಗುವನ್ನು ಹಂಚಿಕೊಳ್ಳುವುದರಿಂದ ಎಲ್ಲರೂ ಮನಃಪೂರ್ವಕವಾಗಿ ನಗುತ್ತಾರೆ.
  • ಒಟ್ಟಾರೆಯಾಗಿ ಏಪ್ರಿಲ್ ಫೂಲ್‌ ದಿನವನ್ನು ನಗುವನ್ನು ಹರಡಲು ಮತ್ತು ಹಗುರವಾದ ಹಾಸ್ಯ ಮತ್ತು ನಗುವಿನ ಮೂಲಕ ಒತ್ತಡವನ್ನು ನಿವಾರಿಸಲು ಉದ್ದೇಶಿಸಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us