ಸಿಹಿ ತಿನ್ನುವ ಬಯಕೆ ಮೂಡುವುದು ಸಹಜ. ಆದರೆ ನಾವು ಸಕ್ಕರೆ ಇರುವ ಆಹಾರವನ್ನು ಹೆಚ್ಚು ಹೆಚ್ಚು ತಿನ್ನಲು ಏಕೆ ಬಯಸುತ್ತೇವೆ? ನೀವು ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ದೀರ್ಘಕಾಲದ ಒತ್ತಡ, ಒಂಟಿತನದ ಭಾವನೆಗಳು, ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಅಸಮತೋಲನ ಅಥವಾ ಹಾರ್ಮೋನುಗಳಲ್ಲಿನ ಏರಿಳಿತಗಳು ಸಹ, ಸಿಹಿ ಪದಾರ್ಥಗಳನ್ನು ತಿನ್ನಲು ನಮ್ಮನ್ನು ಹಂಬಲಿಸುವಂತೆ ಮಾಡಬಹುದು. ಆದರೆ ಸಿಹಿ ಭಕ್ಷ್ಯಗಳನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ಅದು ನಿಮಗೂ ತಿಳಿದಿರಬಹುದು. ಅಧಿಕ ಸಕ್ಕರೆ ಸೇವನೆಯು ಬೊಜ್ಜು, ಹೃದ್ರೋಗ, ಟೈಪ್ -2 ಮಧುಮೇಹ, ಅಸಮತೋಲಿತ ಹಾರ್ಮೋನುಗಳು, ಮನಸ್ಥಿತಿಯಲ್ಲಿ ಏರಿಳಿತ ಅಥವಾ ಆತಂಕದಂತಹ ಗಂಭೀರ ಆರೋಗ್ಯ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಹಾಗಾಗಿ ಸಕ್ಕರೆ ವ್ಯಸನಕಾರಿಯಾಗದಂತೆ ನೋಡಿಕೊಳ್ಳಬೇಕು. ಆದ್ದರಿಂದ, ನೀವು ದೀರ್ಘಾವಧಿಯಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಕ್ಕರೆ ಅಥವಾ ಸಿಹಿ ಸೇವನೆಯನ್ನು ಕಡಿಮೆ ಮಾಡಬೇಕು. ಇದನ್ನು ಸುಲಭವಾಗಿ ತ್ಯಜಿಸಲು ಅಥವಾ ನಿಗ್ರಹಿಸಲು ಕೆಲವು ಮಸಾಲೆಗಳು ನಿಮಗೆ ಸಹಾಯ ಮಾಡುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ಸಕ್ಕರೆ ಕಡುಬಯಕೆಯನ್ನು ನಿಗ್ರಹಿಸುವುದು ಸವಾಲಿನ ಸಂಗತಿಯಾಗಿದೆ, ವಿಶೇಷವಾಗಿ ಭಾರತೀಯ ಪಾಕ ಪದ್ಧತಿಯಲ್ಲಿ ಜನಪ್ರಿಯವಾಗಿರುವ ಸಿಹಿ ತಿಂಡಿಗಳ ಸೇವನೆಯನ್ನು ಕಡಿಮೆ ಮಾಡಲು ಭಾರತೀಯ ಮಸಾಲೆಗಳು ಸಹಾಯ ಮಾಡುತ್ತದೆ ಎಂದು ತಿಳಿದು ಬಂದಿದೆ. ಆಹಾರ ತಜ್ಞ ಮತ್ತು ಕ್ಲಿನಿಕಲ್ ಪೌಷ್ಟಿಕ ತಜ್ಞ ಡಾ. ಉಷಾಕಿರಣ್ ಸಿಸೋಡಿಯಾ ಅವರ ಪ್ರಕಾರ, ಸಕ್ಕರೆ ತಿನ್ನುವ ಬಯಕೆಯನ್ನು ಕಡಿಮೆ ಮಾಡಲು ಕೆಲವು ಮಸಾಲೆಗಳು ಸಹಾಯ ಮಾಡುತ್ತದೆ. ಅದು ಈ ಕೆಳಗಿನಂತಿವೆ:
1. ದಾಲ್ಚಿನ್ನಿ: ಭಾರತದಲ್ಲಿ ದಾಲ್ಚಿನಿ ಎಂದೂ ಕರೆಯಲ್ಪಡುವ ಮಸಾಲೆಯು ಇನ್ಸುಲಿನ್ ಚಟುವಟಿಕೆಯನ್ನು ಅನುಕರಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ ಮತ್ತು ಜೀವಕೋಶಗಳಿಗೆ ಗ್ಲೂಕೋಸ್ ಸಾಗಣೆಯನ್ನು ಹೆಚ್ಚಿಸುತ್ತದೆ.
2. ಮೆಂತ್ಯ ಬೀಜಗಳು: ಮೆಂತ್ಯ ಬೀಜಗಳು ಅಮೈನೋ ಆಮ್ಲವನ್ನು ಹೊಂದಿರುತ್ತವೆ, ಅದು ಇನ್ಸುಲಿನ್ ಬಿಡುಗಡೆ ಮಾಡುವುದನ್ನು ಹೆಚ್ಚಿಸುತ್ತದೆ. ಅವುಗಳನ್ನು ರಾತ್ರಿಯಿಡಿ ನೆನೆಸಿ ಬೆಳಿಗ್ಗೆ ಸೇವನೆ ಮಾಡುವುದರಿಂದ ಅಥವಾ ಅವುಗಳನ್ನು ರುಬ್ಬಿ ಪುಡಿ ಮಾಡಿ ಪಲ್ಯ ಅಥವಾ ಅಡುಗೆಗೆ ಸೇರಿಸುವುದು ಸೂಕ್ತ ಮಾರ್ಗವಾಗಿದೆ.
3. ಶುಂಠಿ; ಶುಂಠಿ ಅಥವಾ ಅದ್ರಕ್ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ಅದರ ಪರಿಮಳ ನಿಮಗೆ ಸಿಹಿ ತಿನ್ನುವ ಬಯಕೆಯನ್ನು ಕಡಿಮೆ ಮಾಡುತ್ತದೆ. ಇವು ಬೆಳಗಿನ ಚಹಾಕ್ಕೆ ಜನಪ್ರಿಯ ಸೇರ್ಪಡೆಯಾಗಿದೆ.
4. ಲವಂಗ: ಲವಂಗವು ಇನ್ಸುಲಿನ್ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತದಲ್ಲಿ ಗ್ಲೂಕೋಸ್ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಇದನ್ನು ಅಕ್ಕಿಯಿಂದ ಮಾಡಿದ ಭಕ್ಷ್ಯಗಳಲ್ಲಿ, ಪಲ್ಯಗಳಲ್ಲಿ ಅಥವಾ ಚಹಾಗಳಿಗೆ ಸಹ ಸೇರಿಸಬಹುದು.
5. ಏಲಕ್ಕಿ: ಏಲಕ್ಕಿ ವಿಶಿಷ್ಟ ಪರಿಮಳವನ್ನು ಹೊಂದಿರುವ ಜನಪ್ರಿಯ ಮಸಾಲೆಗಳಲ್ಲಿ ಒಂದಾಗಿದೆ ಮತ್ತು ಸಕ್ಕರೆ ತಿನ್ನುವ ಬಯಕೆಯನ್ನು ನಿಗ್ರಹಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದನ್ನು ನಿಮ್ಮ ಚಹಾ, ಸಿಹಿ ತಿಂಡಿಗಳಿಗೂ ಕೂಡ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ: ಬೊಜ್ಜು ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗಬಹುದು
ಆರೋಗ್ಯಕರ, ಸಕ್ಕರೆ ರಹಿತ ಆಹಾರ ಸೇವನೆ ಮಾಡಲು ಹಣ್ಣುಗಳು ಮತ್ತು ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಈ ಮೇಲೆ ನೀಡಿರುವ ಮಸಾಲೆಗಳಿಂದ ಅಲರ್ಜಿ ಕಂಡು ಬಂದಲ್ಲಿ ತಕ್ಷಣ ನಿಮ್ಮ ಪೌಷ್ಟಿಕ ತಜ್ಞರನ್ನು ಸಂಪರ್ಕಿಸಿ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ