ಸ್ಟೀಲ್‌ಗಿಂತ ಗಟ್ಟಿ, ರಸ್ತೆ ಗುಂಡಿಗಳೇ ಗೊತ್ತಾಗಲ್ಲ: ಭಾರತದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ ಬಿದಿರಿನ ಸೈಕಲ್; ತಯಾರಿಕೆ, ಬೆಲೆ, ಕರ್ನಾಟಕದಲ್ಲೆಲ್ಲಿ ಸಿಗುತ್ತೆ?

ಬಿದಿರಿನ ಸೈಕಲ್‌ಗಳು ಪರಿಸರ ಸ್ನೇಹಿ ಜೀವನಶೈಲಿಗೆ ಉತ್ತಮ ಆಯ್ಕೆ. ಸಾಂಪ್ರದಾಯಿಕ ಸೈಕಲ್‌ಗಳಿಗಿಂತ ಸುಸ್ಥಿರ ಹಾಗೂ ಹೆಚ್ಚು ಆರಾಮದಾಯಕ ಅನುಭವ ನೀಡುತ್ತವೆ. ಕರ್ನಾಟಕದಲ್ಲಿ ಇದರ ತಯಾರಿಕೆ ಮತ್ತು ಮಾರುಕಟ್ಟೆ ಪ್ರವರ್ಧಮಾನಕ್ಕೆ ಬರುತ್ತಿದ್ದು, ಕೇವಲ 16,999 ರೂ.ನಿಂದ ವಿವಿಧ ಮಾದರಿಗಳು ಲಭ್ಯವಿದೆ. ವಿಶಿಷ್ಟ ಕರಕುಶಲ ತಯಾರಿಕೆಯಿಂದ ಹಿಡಿದು ವೈಯಕ್ತಿಕಗೊಳಿಸಿದ ತರಬೇತಿಯವರೆಗೆ ಬಿದಿರಿನ ಸೈಕಲ್ ದೇಶದಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿದೆ.

ಸ್ಟೀಲ್‌ಗಿಂತ ಗಟ್ಟಿ, ರಸ್ತೆ ಗುಂಡಿಗಳೇ ಗೊತ್ತಾಗಲ್ಲ: ಭಾರತದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ ಬಿದಿರಿನ ಸೈಕಲ್; ತಯಾರಿಕೆ, ಬೆಲೆ, ಕರ್ನಾಟಕದಲ್ಲೆಲ್ಲಿ ಸಿಗುತ್ತೆ?
ಸಾಂದರ್ಭಿಕ ಚಿತ್ರ

Updated on: Oct 02, 2026 | 4:21 PM

ಬೆಂಗಳೂರು, ಅ.2: ಪರಿಸರ ಸ್ನೇಹಿ ಜೀವನಶೈಲಿ (Eco-friendly Lifestyle) ಮತ್ತು ವಿಶಿಷ್ಟ ವಿನ್ಯಾಸಗಳಿಗೆ ಪ್ರಪಂಚದಾದ್ಯಂತ ಅಪಾರ ಬೇಡಿಕೆ ವ್ಯಕ್ತವಾಗುತ್ತಿರುವ ಈ ಯುಗದಲ್ಲಿ, ಸೈಕ್ಲಿಂಗ್ ಪ್ರಿಯರನ್ನು ‘ಬ್ಯಾಂಬೂ ಬೈಸಿಕಲ್’ (ಬಿದಿರಿನ ಸೈಕಲ್) ಭಾರೀ ಪ್ರಮಾಣದಲ್ಲಿ ಆಕರ್ಷಿಸುತ್ತಿವೆ. ಸಾಂಪ್ರದಾಯಿಕ ಸ್ಟೀಲ್ ಹಾಗೂ ಅಲ್ಯೂಮಿನಿಯಂ ಫ್ರೇಮ್‌ಗಳ ಸೈಕಲ್‌ಗಳಿಗೆ ಅತ್ಯಂತ ಸುಸ್ಥಿರ, ಶಕ್ತಿಶಾಲಿ ಹಾಗೂ ಪ್ರೀಮಿಯಂ ಪರ್ಯಾಯವಾಗಿ ಈ ಬಿದಿರಿನ ಬೈಸಿಕಲ್‌ಗಳು ಜಾಗತಿಕ ಮತ್ತು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿ ಸೃಷ್ಟಿಸುತ್ತಿವೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಬ್ಯಾಂಬೂ ಬೈಸಿಕಲ್ ಓಡಿಸುವ ಮೂಲಕ ಭಾರೀ ವೈರಲ್ ಆಗಿದ್ದಾರೆ. ಇದೀಗ ಈ ಬ್ಯಾಂಬೂ ಬೈಸಿಕಲ್ ಎಲ್ಲಿಲ್ಲ ಸಿುತ್ತದೆ. ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ ನೋಡಿ

ಬಿದಿರು ಸಾಮಾನ್ಯ ಮರಕ್ಕಿಂತ ಗಟ್ಟಿ ಹಾಗೂ ಸೆಳೆಯುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ, ರಸ್ತೆಯ ಕಂಪನಗಳನ್ನು ಹಾಗೂ ಗುಂಡಿಗಳ ಆಘಾತವನ್ನು ತಾನೇ ಹೀರಿಕೊಳ್ಳುವ ಕಾಯಂ ಗುಣವನ್ನು ಹೊಂದಿದ್ದು, ಕಷ್ಟಕರ  ರಸ್ತೆಗಳಲ್ಲೂ ಸವಾರನಿಗೆ ಅತ್ಯಂತ ಆರಾಮದಾಯಕ ಅನುಭವ ನೀಡುತ್ತದೆ.

ಬಿದಿರಿನ ಸೈಕಲ್ ತಯಾರಾಗುವುದು ಹೇಗೆ? :

ಒಂದು ಬಿದಿರಿನ ಸೈಕಲ್ ಅನ್ನು ಕೈಯಲ್ಲೇ ಸಿದ್ಧಪಡಿಸಲು ಸುಮಾರು 40 ರಿಂದ 50 ಗಂಟೆಗಳ ಕಾಲ ಸುದೀರ್ಘ ಶ್ರಮ ಹಾಗೂ ಕೌಶಲ್ಯದ ಅಗತ್ಯವಿರುತ್ತದೆ. ಇದರ ಕೆಲಸವು ಹಂತ ಹಂತವಾಗಿರುತ್ತದೆ.

ಆಯ್ಕೆ ಮತ್ತು ಕ್ಯೂರಿಂಗ್ : ಬಲಿತ, ದಪ್ಪನೆಯ ಬಿದಿರಿನ ಕಡ್ಡಿಗಳನ್ನು (ಉದಾಹರಣೆಗೆ ‘ಸ್ಯೂಡೋ-ಆಕ್ಸಿಟಿನಾಂಥೆರಾ ಸ್ಟಾಕ್ಸಿ’ ತಳಿ) ಆಯ್ಕೆ ಮಾಡಲಾಗುತ್ತದೆ. ತೇವಾಂಶ, ಶಿಲೀಂಧ್ರ ಹಾಗೂ ಗೆದ್ದಲುಗಳಿಂದ ರಕ್ಷಿಸಲು ವಾರಗಳ ಕಾಲ ಒಣಗಿಸಿ, ಹೊಗೆ ಮತ್ತು ಸ್ವಾಭಾವಿಕ ರಾಸಾಯನಿಕಗಳಿಂದ ಸಂಸ್ಕರಿಸಲಾಗುತ್ತದೆ.

ಆಕಾರ ಮತ್ತು ಜಾಯಿಂಟಿಂಗ್: ಸಂಸ್ಕರಿಸಿದ ಬಿದಿರಿನ ಕೊಳವೆಗಳನ್ನು ನಿಖರ ಕೋನಗಳಲ್ಲಿ ಕತ್ತರಿಸಿ, ‘ಜಿಗ್’ ಎಂಬ ವಿಶೇಷ ಸಾಲು-ರಚನೆಯ ಮೇಲೆ ಜೋಡಿಸಲಾಗುತ್ತದೆ.

ಲೋಹದ ಭಾಗಗಳ ಅಳವಡಿಕೆ : ಪೆಡಲ್ ಹೌಸಿಂಗ್, ಹ್ಯಾಂಡಲ್ ಹಾಗೂ ಹಿಂಭಾಗದ ಚಕ್ರ ಜೋಡಿಸುವ ಸ್ಥಳಗಳಲ್ಲಿ ಸ್ಟ್ಯಾಂಡರ್ಡ್ ಮೆಟಲ್ ಇನ್ಸರ್ಟ್‌ಗಳನ್ನು ಅಳವಡಿಸಲಾಗುತ್ತದೆ.

ಲಗ್ ಜಾಯಿಂಟಿಂಗ್ : ಬಿದಿರಿನ ಭಾಗಗಳನ್ನು ಬೆಸುಗೆ ಮಾಡಲು ಸಾಧ್ಯವಿಲ್ಲದ ಕಾರಣ, ಗಟ್ಟಿಮುಟ್ಟಾದ ನಾರುಗಳನ್ನು (ಶಣಬು, ಹತ್ತಿ ಅಥವಾ ಕಾರ್ಬನ್ ಫೈಬರ್) ಬಲವಾದ ಇಪಾಕ್ಸಿ ರೇಸಿನ್‌ನಲ್ಲಿ ನೆನೆಸಿ ಜೋಡಣೆಗಳ ಸುತ್ತ ಬ್ಯಾಂಡೇಜ್ ಮಾದರಿಯಲ್ಲಿ ಬಿಗಿಯಾಗಿ ಸುತ್ತಲಾಗುತ್ತದೆ.

ಸ್ಯಾಂಡಿಂಗ್ ಮತ್ತು ಹವಾಮಾನ ರಕ್ಷಣೆ : ರೇಸಿನ್ ಒಣಗಿದ ನಂತರ ಮೇಲ್ಮೈಯನ್ನು ಮೃದುವಾಗಿ ನಯಗೊಳಿಸಲಾಗುತ್ತದೆ. ನೀರು, ಬಿಸಿಲು ಮತ್ತು ಬಿರುಕುಗಳಿಂದ ರಕ್ಷಿಸಲು ‘ಪಾಲಿಯುರೆಥೇನ್ ಸೀಲರ್’ ಹಾಗೂ ವಾರ್ನಿಶ್‌ ಕೋಟಿಂಗ್‌ಗಳನ್ನು ನೀಡಲಾಗುತ್ತದೆ.

ಭಾರತದಲ್ಲಿ ಪ್ರಮುಖ ತಯಾರಕರು ಮತ್ತು ಬೆಲೆ ವಿವರ:

ಪ್ರತಿಯೊಂದು ಸೈಕಲ್ ಅನ್ನು ಪ್ರತ್ಯೇಕವಾಗಿ ಆರ್ಟಿಸನ್ ಕೌಶಲ್ಯದಿಂದ ರೂಪಿಸುವುದರಿಂದ ಇವು ಪ್ರೀಮಿಯಂ ಮತ್ತು ಕಸ್ಟಮ್ ಬ್ರಾಂಡ್‌ಗಳಾಗಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಭಾರತೀಯ ವಾಯುಪಡೆಯ (IAF) ಮಾಜಿ ಪೈಲಟ್‌ ಒಬ್ಬರು ಸ್ಥಾಪಿಸಿದ ಈ ಸಂಸ್ಥೆಯು ಸ್ಟ್ಯಾಂಡರ್ಡ್, ಗೇರ್‌, ಫೋಲ್ಡಿಂಗ್‌ ಮತ್ತು ಇ-ಬೈಕ್ ಗಳನ್ನು ತಯಾರಿಸುತ್ತದೆ. ಇವುಗಳ ಕಸ್ಟಮ್ ಬೆಲೆ 45,000 ರಿಂದ 1,50,000 ರೂ.ಕ್ಕೂ ಅಧಿಕ ಇದೆ. ಡಿಸೈನರ್‌ಗಳಿಂದ ರೂಪುಗೊಳ್ಳುವ ಪ್ರೀಮಿಯಂ ಕಸ್ಟಮ್ ಬೈಕ್‌ಗಳ ಬೆಲೆ 20,000 ರಿಂದ 3,50,000 ವರೆಗಿದೆ. ಇವರು ಸ್ವತಃ ಸೈಕಲ್ ಅಸೆಂಬಲ್ ಮಾಡಲು ಕೇವಲ 6,000 ಬೆಲೆಯಲ್ಲಿ ‘DIY ಫ್ರೇಮ್ ಕಿಟ್’ ಕೂಡ ನೀಡುತ್ತಾರೆ. ವಿಜಯ್ ಶರ್ಮಾ ಅವರಂತಹ ಪ್ರಸಿದ್ಧ ವಿನ್ಯಾಸಕರು ತಮ್ಮ ಸ್ಟುಡಿಯೋ ಕಾರ್ಯಾಗಾರಗಳಲ್ಲಿ ಸಾರ್ವಜನಿಕರಿಗೆ ಸ್ವತಃ ತಮಗಾಗಿಯೇ ಬಿದಿರಿನ ಸೈಕಲ್ ನಿರ್ಮಿಸಿಕೊಳ್ಳುವ ವಿಶೇಷ ತರಬೇತಿ ಸೆಷನ್‌ಗಳನ್ನು ಆಯೋಜಿಸುತ್ತಾರೆ.

ಇದನ್ನೂ ಓದಿ: ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್‌ ರಹಿತ ಪ್ರಯಾಣಿಕರಿಗೆ ಶಾಕ್: 30 ಬಸ್‌ಗಳಲ್ಲಿ ಸ್ವಯಂಚಾಲಿತ ಪ್ರಯಾಣಿಕರ ಎಣಿಕೆ ಹೈಟೆಕ್ ಸಿಸ್ಟಮ್ ಜಾರಿ

ಕರ್ನಾಟಕದಲ್ಲೂ ಸಿಗುತ್ತಾ ‘ಬ್ಯಾಂಬೂ ಬೈಸಿಕಲ್’?

ಭಾರತದಲ್ಲಿ ಬಿದಿರಿನ ಬೈಸಿಕಲ್ ನಾವೀನ್ಯತೆಗೆ ಕರ್ನಾಟಕವೇ ಪ್ರಮುಖ ಕೇಂದ್ರವಾಗಿದೆ. ಬೆಳಗಾವಿಯಲ್ಲಿ ನೆಲೆಸಿರುವ ‘ಬ್ಯಾಂಬೂ ಸ್ಟೋರಿ ಕ್ರಾಫ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು ವಾಣಿಜ್ಯಿಕವಾಗಿ ಸಾರ್ವಜನಿಕರಿಗೆ ಎಟುಕುವ ಬೆಲೆಯಲ್ಲಿ ಸಿಂಗಲ್-ಸ್ಪೀಡ್ ಬಿದಿರಿನ ಸೈಕಲ್ (Full Bamboo S1, 26T) ಮಾದರಿಯನ್ನು ಕೇವಲ 16,999 ರಿಂದ 17,000 ರೂ.ದರದಲ್ಲಿ ಮಾರಾಟ ಮಾಡುತ್ತಿದೆ. ಬ್ಯಾಂಬೂಚಿಯಂತಹ ಪ್ರೀಮಿಯಂ ಬ್ರಾಂಡ್‌ಗಳು ಕರ್ನಾಟಕದಾದ್ಯಂತ ಆನ್‌ಲೈನ್  ಡೆಲಿವರಿ ನೀಡುತ್ತವೆ. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ (MCE Hassan) ವಿದ್ಯಾರ್ಥಿಗಳು ಮತ್ತು ಸಂಶೋಧಕರು ಬಿದಿರಿನ ಬೈಸಿಕಲ್ ಪ್ರೊಟೋಟೈಪ್‌ಗಳನ್ನು ಯಶಸ್ವಿಯಾಗಿ ವಿನ್ಯಾಸಗೊಳಿಸಿದ್ದು, ರಾಜ್ಯದಲ್ಲಿ ಈ ತಂತ್ರಜ್ಞಾನಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ಬೆಂಗಳೂರಿನ ವರ್ತೂರಿನಲ್ಲಿರುವ ‘ದ ಗ್ರೀನ್ ಸ್ಕೂಲ್ ಬೆಂಗಳೂರು’ ( ಸಂಸ್ಥೆಯು ‘ಬ್ಯಾಂಬೂ 4 ಬೆಂಗಳೂರು’ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಬಿದಿರಿನ ಸೈಕಲ್‌ಗಳನ್ನು ಪರಿಚಯಿಸಿದೆ. ರಾಜ್ಯದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ್ ಖಂಡ್ರೆ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಸೈಕಲ್ ಸವಾರಿ ಮಾಡಿದ್ದರು.

ದೇಶದ ಮೊದಲ ‘ಬ್ಯಾಂಬೂ ಬೈಸಿಕಲ್’ ನಿರ್ಮಿಸಿದ ಬಡಗಿಯ ಮಗ ವಿಜಯ್ ಶರ್ಮಾ

ತಮ್ಮ ಸೃಜನಶೀಲತೆ ಮತ್ತು ನಿರಂತರ ಪ್ರಯೋಗಶೀಲತೆಯಿಂದ ಬಿದಿರಿನಲ್ಲಿ ಗಟ್ಟಿಮುಟ್ಟಾದ, ಹೈಟೆಕ್ ‘ಬ್ಯಾಂಬೂ ಬೈಸಿಕಲ್’ ತಯಾರಿಸಿ ಇಡೀ ದೇಶವೇ ಇತ್ತ ತಿರುಗಿ ನೋಡುವಂತೆ ಮಾಡಿದ್ದಾರೆ ವಿಜ್ಞಾನಿ ಮತ್ತು ನಾವೀನ್ಯಕಾರ ವಿಜಯ್ ಶರ್ಮಾ. ವಿಜಯ್ ಶರ್ಮಾ ಅವರ ಈ ನಾವೀನ್ಯತೆಯ ಹಿಂದಿರುವುದು ಅವರ ಕೌಟುಂಬಿಕ ಹಿನ್ನೆಲೆ ಮತ್ತು ಹವ್ಯಾಸ. ಬಡಗಿ ತಂದೆಯ ಮಗನಾದ ವಿಜಯ್, ಚಿಕ್ಕಂದಿನಿಂದಲೇ ಮರ ಮತ್ತು ವಿವಿಧ ವಸ್ತುಗಳೊಂದಿಗೆ ಕೆಲಸ ಮಾಡುವುದನ್ನು ಕರಗತ ಮಾಡಿಕೊಂಡಿದ್ದರು. ಕಾಲೇಜು ದಿನಗಳಲ್ಲಿದ್ದಾಗಲೇ ವಿಜಯ್ ತಮ್ಮ ಸ್ವಂತ ಕೈಗಳಿಂದ ಚರ್ಮದ ಸ್ಲಿಪ್ಪರ್‌ಗಳು ಹಾಗೂ ಬ್ಯಾಗ್‌ಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us