AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Men’s Day 2026: ಸ್ತ್ರೀಯರಂತೆ ಪುರುಷರಿಗೂ ಭಾವನಾತ್ಮಕ ಬೆಂಬಲದ ಅವಶ್ಯಕತೆ ಇದೆ

ಇಂದು ಪುರುಷರು ಹೆಚ್ಚು ಶೋಷಣೆಗೊಳಗಾಗುತ್ತಿದ್ದಾರೆ, ತಮಗಾಗುವ ಮಾನಸಿಕ ದೌರ್ಜನ್ಯದಿಂದ ಖಿನ್ನತೆಗೊಳಗಾಗುತ್ತಿದ್ದಾರೆ. ಪುರುಷರಿಗಾಗುವ ಈ ಕಿರುಕುಳಗಳ ಬಗ್ಗೆ ಯಾರು ಅಷ್ಟಾಗಿ ಧ್ವನಿ ಎತ್ತುವುದಿಲ್ಲ. ಇದಲ್ಲದೆ ಕುಟುಂಬ ಜವಾಬ್ದಾರಿ, ಸಂಬಂಧಗಳನ್ನು ನಿಭಾಯಿಸುವುದು, ಕೆಲಸ ಇವೆಲ್ಲದರ ಕಾರಣದಿಂದ ಸಾಕಷ್ಟು ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇದಾವುದರ ಬಗ್ಗೆಯೂ ಅವರು ಹೇಳಿಕೊಳ್ಳುವುದಿಲ್ಲ. ಆದರೆ ಅವರಿಗೂ ಭಾವನಾತ್ಮಕ ಬೆಂಬಲದ ಸಾಕಷ್ಟು ಅವಶ್ಯಕತೆಯಿದೆ. ಹೀಗಿರುವಾಗ ಪುರುಷರಿಗೆ ನಾವು ಯಾವ ರೀತಿ ಬೆಂಬಲವಾಗಿ ನಿಲ್ಲಬಹುದು ಎಂಬುದರ ಪೂರ್ಣ ವಿವರ ಇಲ್ಲಿದೆ ನೋಡಿ.

International Men’s Day 2026: ಸ್ತ್ರೀಯರಂತೆ ಪುರುಷರಿಗೂ ಭಾವನಾತ್ಮಕ ಬೆಂಬಲದ ಅವಶ್ಯಕತೆ ಇದೆ
ಸಾಂದರ್ಭಿಕ ಚಿತ್ರ Image Credit source: Unsplash
ಮಾಲಾಶ್ರೀ ಅಂಚನ್​
|

Updated on:Nov 19, 2026 | 9:36 AM

Share

ಸಮಾಜದಲ್ಲಿ ಪುರುಷರ  (Men’s)ಮೇಲಿನ  ಶೋಷಣೆ, ಕಿರುಕುಳ, ತಾರತಮ್ಯ, ದೌರ್ಜನ್ಯದ ವಿರುದ್ದ ಧ್ವನಿ ಎತ್ತುಲು ಹಾಗೂ ಅವರಿಗೆ ಅವರ ಹಕ್ಕುಗಳನ್ನು ನೀಡಲು, ಪುರುರುಷ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು,  ಲಿಂಗ ಸಮಾನತೆಯನ್ನು  ಉತ್ತೇಜಿಸಲು ಪ್ರತಿವರ್ಷ ನವೆಂಬರ್ 19ರಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಪುರುಷರ ದಿನವು ಪುರುಷರ ಸಾಧನೆಗಳನ್ನು ಆಚರಿಸುವ ದಿನವಲ್ಲ, ಅವರ ಭಾವನಾತ್ಮಕ ಮತ್ತು ಮಾನಸಿಕ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಅವಕಾಶವೂ ಆಗಿದೆ. ಪ್ರತಿಯೊಬ್ಬ ಪುರುಷನ ನಿರೀಕ್ಷೆಗಳು ವಿಭಿನ್ನವಾಗಿದ್ದರೂ, ಅವರು ಸ್ಟ್ರಾಂಗ್‌ ಆಗಿ ಕಂಡರೂ  ಅವರಿಗೂ ಪ್ರೀತಿ, ಗೌರವ ಮತ್ತು ಭಾವನಾತ್ಮಕ ಬೆಂಬಲ, ಮಾನಸಿಕ ಆರೋಗ್ಯದ ಕಾಳಜಿ  ಸಾಕಷ್ಟು ಅವಶ್ಯಕತೆಯಿದೆ.

ಅಂತಾರಾಷ್ಟ್ರೀಯ ಪುರುಷರ ದಿನದ ಇತಿಹಾಸ:

ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯನ್ನು ಮೊದಲ ಬಾರಿಗೆ 1992 ರಲ್ಲಿ ಥಾಮಸ್ ಓಸ್ಟರ್ ಎಂಬವರು ಆಚರಿಸಿದರು ಎಂದು ಹೇಳಲಾಗುತ್ತದೆ. ಸಮಾಜದಲ್ಲಿ ಪುರುಷರು ಎದುರಿಸುತ್ತಿರುವ ಸವಾಲುಗಳು ಮತ್ತು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಸಲುವಾಗಿ ಈ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಅವರು ಜಾರಿಗೆ ತಂದರು. ಆದರೆ ಈ ಆಚರಣೆಗೆ ಅಷ್ಟೇನೂ ಪ್ರೋತ್ಸಾಹ ದೊರೆಯದ ಕಾರಣ 1995 ರಲ್ಲಿ ನಿಲ್ಲಿಸಬೇಕಾಯಿತು. ನಂತರ 1999 ರಲ್ಲಿ ಮತ್ತೊಮ್ಮೆ ಪುರುಷರ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ವೆಸ್ಟ್ ಇಂಡೀಸ್‌ನ ಭಾರತೀಯ ಮೂಲದ ಪ್ರೊಫೆಸರ್ ಡಾ. ಜೊರೋಮ್ ತಿಲಕ್ ಸಿಂಗ್ ಎಂಬವರು 1999 ನವೆಂಬರ್ 19 ರಂದು ತಮ್ಮ ತಂದೆಯ ಜನ್ಮ ದಿನವನ್ನು ಅಂತಾರಾಷ್ಟ್ರೀಯ ಪುರುಷರ ದಿನವನ್ನಾಗಿ ಆಚರಿಸಿದರು.  ಲಿಂಗ ಸಮಾನತೆಯನ್ನು ಉತ್ತೇಜಿಸಲು, ಪುರುಷರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳ ಬಗ್ಗೆ ಈ ಸಮಾಜದಲ್ಲಿ ಧ್ವನಿ ಎತ್ತಬೇಕು ಎಂದು ಈ ಆಚರಣೆಯನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರತಿವರ್ಷ ನವೆಂಬರ್ 19 ರಂದು ಅಂತರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ.

ಪುರುಷರಿಗೂ ಭಾವನಾತ್ಮಕ ಬೆಂಬಲದ ಅವಶ್ಯಕತೆಯಿದೆ:

ಸಮಾಜದ ಕಟ್ಟುಪಾಡು ಮತ್ತು ಜವಾಬ್ದಾರಿಗಳ ನಡುವೆ ಪುರುಷರು ತಮ್ಮ ನೋವು ಮತ್ತು ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಿಲ್ಲ. ನೋವನ್ನು ಇನ್ನೊಬ್ಬರ ಜೊತೆ ಹೇಳಿಕೊಂಡರೆ, ಅತ್ತರೆ ನಮ್ಮನ್ನು ದುರ್ಬಲರೆಂದು ಭಾವಿಸುತ್ತಾರೆ ಎಂಬ ಕಾರಣಕ್ಕೆ ನೋವನ್ನು ಹೇಳಿಕೊಳ್ಳಲಾರದೆ ಮನದಲ್ಲಿಯೇ ಕೊರಗುತ್ತಾರೆ. ಇದು ಪುರುಷರಿಗೆ ಒತ್ತಡವನ್ನು ಉಂಟುಮಾಡುವುದಲ್ಲದೆ, ಅವರ ಮಾನಸಿಕ ಆರೋಗ್ಯದ ಮೇಲೂ ಇದು ಗಂಭೀರ ಪರಿಣಾಮವನ್ನು ಉಂಟುಮಾಡುತ್ತದೆ. ಹಾಗಾಗಿ ಪುರುಷರು ತಮ್ಮವರಿಗೆ ಬೆಂಬಲವಾಗಿ ನಿಲ್ಲುವಂತೆ, ಅವರ ಭಾವನೆಗಳಿಗೂ ಬೆಲೆಯನ್ನು ನೀಡಬೇಕು, ಅವರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳಬೇಕು.

ಪುರುಷರಿಗೆ ಯಾವ ರೀತಿ ಭಾವನಾತ್ಮಕ ಬೆಂಬಲವನ್ನು ನೀಡಬಹುದು?

ನೀವು ಹೇಗಿದ್ದೀರಿ ಎಂದು ಕೇಳಿ:

ಪುರುಷರು ಸಾಮಾನ್ಯವಾಗಿ ಕುಟುಂಬ ಸದಸ್ಯರ, ಸ್ನೇಹಿತೆಯರ, ಸಂಗಾತಿಯ ಯೋಗಕ್ಷೇಮದ ಬಗ್ಗೆ ವಿಚಾರಿಸುತ್ತಾರೆ, ಆದರೆ ಹೆಚ್ಚಾಗಿ ಪುರುಷರ ಯೋಗಕ್ಷೇಮದ ಬಗ್ಗೆ ವಿಚಾರಿಸುವುದೇ ಇಲ್ಲ. ಅವರಿಗೂ ಭಾವನೆಗಳಿದ್ದು, ಅವರು ತಮ್ಮ ಸಂಗಾತಿ ಅಥವಾ ಕುಟುಂಬ ಸದಸ್ಯರು ಕೆಲವೊಮ್ಮೆ ತಮ್ಮ ಆಲೋಚನೆಗಳನ್ನು ಕೇಳಬೇಕೆಂದು ಬಯಸುತ್ತಾರೆ. ಹಾಗಾಗಿ ಹೇಗಿದ್ದೀರಿ, ನಿಮ್ಮ ದಿನ ಹೇಗಿತ್ತು ಎಂದು ಕೇಳಿ ಕಾಳಜಿ ವಹಿಸಿಸುವ ಮೂಲಕವೂ ಭಾವನಾತ್ಮಕ ಬೆಂಬಲವನ್ನು ನೀಡಬಹುದು.

ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸಲು ಅವರನ್ನೇ ಕೇಳಬೇಡಿ:

ಸಾಮಾನ್ಯವಾಗಿ ಮನೆಯಲ್ಲಿ ಏನೇ ಸಮಸ್ಯೆ ಬಂದರೂ ಮನೆಯವರು ಆ ಮನೆಯ ಪುರುಷನೇ ಆ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಬಯಸುತ್ತಾರೆ. ಆದರೆ ಇದನ್ನೆಲ್ಲಾ ಒಬ್ಬರೇ ನಿಂತು ನಿಭಾಯಿಸಿದಾಗ ಅವರ ಒತ್ತಡ ಹೆಚ್ಚಾಗುತ್ತದೆ. ಹೀಗಿರುವಾಗ ಪುರುಷರ ಮೇಲೆಯೇ ಎಲ್ಲಾ ಹೊರೆಯನ್ನು ಹಾಕದೆ, ಕಷ್ಟದ ಸಮಯದಲ್ಲಿ ಅವರಿಗೆ ಆರ್ಥಿಕವಾಗಿ, ಭಾವನಾತ್ಮಕವಾಗಿ ಬೆಂಬಲವಾಗಿ ನಿಲ್ಲಬೇಕು.

ಇದನ್ನೂ ಓದಿ: ವಿದ್ಯಾರ್ಥಿಗಳು ಈ ಅಭ್ಯಾಸಗಳನ್ನು ತ್ಯಜಿಸಿದರೆ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯವಾಗುತ್ತದೆ

ಅವರ ಶ್ರಮಕ್ಕೆ ಇರಲಿ ಒಂದು ಮೆಚ್ಚುಗೆ:

ಅನೇಕ ಪುರುಷರು ಕುಟುಂಬಕ್ಕಾಗಿ ತಮ್ಮ ಸ್ವಂತ ಆಸೆಗಳನ್ನು ಬದಿಗಿಡುತ್ತಾರೆ. ಇಂತಹ ತ್ಯಾಗಮಯಿ ಪುರುಷರಿಗೆ ಧನ್ಯವಾದ ಹೇಳುವ ಮೂಲಕ, ಸಣ್ಣ ಉಡುಗೊರೆಗಳನ್ನು ನೀಡುವ ಮೂಲಕ ಅವರ ತ್ಯಾಗ, ಪರಿಶ್ರಮವನ್ನು ಶ್ಲಾಘಿಸಿ. ಇದು ಸಣ್ಣ ನಡೆಯಾಗಿದ್ದರೂ, ನನಗೂ ಬೆಂಬಲವಾಗಿ ನಿಲ್ಲುವವರು ಇದ್ದಾರಲ್ಲ ಎಂದು ಅವರ ಮನಸ್ಸಿಗೆ ಸಾಕಷ್ಟು ಖುಷಿಯನ್ನು ನೀಡುತ್ತದೆ.

ಅವರಿಗೂ ಕೆಲವೊಮ್ಮೆ ವಿಶ್ರಾಂತಿ ನೀಡಲು ಅವಕಾಶ ನೀಡಬೇಕು:

ಹಣ ಸಂಪಾದನೆ ಮತ್ತು ಕುಟುಂಬದ ಜವಾಬ್ದಾರಿಗಳನ್ನು ಪೂರೈಸುವುದು ಮುಖ್ಯ, ಆದರ ಜೊತೆಗೆ ಪುರುಷರಿಗೆ ವಿಶ್ರಾಂತಿಯ ಅವಶ್ಯಕತೆಯೂ ಸಾಕಷ್ಟು ಇದೆ. ಹಾಗಾಗಿ ಮನೆಗೆ ಬಂದ ತಕ್ಷಣ ಸಮಸ್ಯೆಗಳ ಬಗ್ಗೆ ಹೇಳಿ ಅವರ ಒತ್ತಡವನ್ನು ಹೆಚ್ಚು ಮಾಡುವ ಬದಲು ತಮಗಾಗಿ ಸಮಯವನ್ನು ಮೀಸಲಿಡಲು, ವಿಶ್ರಾಂತಿ ಪಡೆಯಲು ಅವಕಾಶವನ್ನು ನೀಡಿ. ಸ್ನೇಹಿತರನ್ನು ಭೇಟಿಯಾಗಲು, ತಮ್ಮ ನೆಚ್ಚಿನ ಕ್ರೀಡೆಯನ್ನು ಆಡಲು, ಒಬ್ಬಂಟಿಯಾಗಿ ಸಮಯ ಕಲೆಯಲು ಅವಕಾಶ ನೀಡಿ. ಇದು ಅವರ ಮನಸ್ಸನ್ನು ರಿಫ್ರೆಶ್‌ ಮಾಡುತ್ತದೆ.

ಅವರ ಭಾವನೆಗಳನ್ನು ತಮಾಷೆ ಮಾಡಬೇಡಿ:

ಅನೇಕ ಪುರುಷರು ತಾವು ದುರ್ಬಲರಾಗಿ ಕಾಣಲ್ಪಡುತ್ತಾರೆ ಎಂಬ ಭಯದಿಂದ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳುವುದಿಲ್ಲ. ಆದರೆ ಅವರಿಗೂ ಭಾವನಾತ್ಮಕ ಬೆಂಬಲದ ಅವಶ್ಯಕತೆಯಿದೆ. ಹೀಗಿರುವಾಗ ಅವರು ಅತ್ತಾಗ, ನೋವನ್ನು ತೋಡಿಕೊಂಡಾಗ ಅವರನ್ನು ಹೀಯಾಳಿಸುವ ಅಥವಾ ತಮಾಷೆ ಮಾಡುವ ಬದಲು ಅವರ ನೋವನ್ನು ಅರ್ಥಮಾಡಿಕೊಂಡು ಬೆಂಲವಾಗಿ ನಿಲ್ಲಬೇಕು, ಪ್ರೀತಿ, ಕಾಳಜಿ ವಹಿಸಬೇಕು. ಅವರ ನೋವುಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶವನ್ನು ನೀಡಬೇಕು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:26 am, Thu, 19 November 26

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More