AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rice Price: ಅಕ್ಕಿ ಬೆಲೆ ದಿಢೀರ್ ಇಳಿಕೆ, ಗ್ರಾಹಕರಿಗೆ ಬಿಗ್ ರಿಲೀಫ್: ಕೆಜಿಗೆ ₹20ರವರೆಗೆ ಅಗ್ಗವಾಯ್ತು ಸೋನಾ ಮಸೂರಿ!

Karnataka rice price Today: ಅಕ್ಕಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಹೊಸ ಸೋನಾ ಮಸೂರಿ ಅಕ್ಕಿಯ ದರ ಕೆಜಿಗೆ ₹10ರಿಂದ ₹20ರವರೆಗೆ ಇಳಿಕೆಯಾಗಿದ್ದು, ಸದ್ಯ ₹65ರಿಂದ ₹70ಕ್ಕೆ ಮಾರಾಟವಾಗುತ್ತಿದೆ. ಭತ್ತದ ಪೂರೈಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕ್ವಿಂಟಲ್ ಅಕ್ಕಿಗೆ ₹2,000 ದರ ಕಡಿಮೆಯಾಗಿದೆ.

Karnataka Rice Price: ಅಕ್ಕಿ ಬೆಲೆ ದಿಢೀರ್ ಇಳಿಕೆ, ಗ್ರಾಹಕರಿಗೆ ಬಿಗ್ ರಿಲೀಫ್: ಕೆಜಿಗೆ ₹20ರವರೆಗೆ ಅಗ್ಗವಾಯ್ತು ಸೋನಾ ಮಸೂರಿ!
ಅಕ್ಕಿ ಹಾಗೂ ಭತ್ತದ ಮಿಲ್ (ಸಾಂದರ್ಭಿಕ ಚಿತ್ರ)
ಭೀಮೇಶ್​​ ಪೂಜಾರ್
| Edited By: |

Updated on:Nov 19, 2026 | 9:29 AM

Share

ಮುಖ್ಯಾಂಶಗಳು

  • ಹೊಸ ಸೋನಾ ಮಸೂರಿ ಅಕ್ಕಿ ದರದಲ್ಲಿ ಇಳಿಕೆ
  • ಕೆಜಿಗೆ ₹20ರವರೆಗೆ ಕಡಿಮೆಯಾದ ಅಕ್ಕಿ ಬೆಲೆ
  • ಕ್ವಿಂಟಲ್ ಅಕ್ಕಿಗೆ ₹2,000 ದರ ಇಳಿಕೆ

ರಾಯಚೂರು, ನವೆಂಬರ್ 19: ಅಕ್ಕಿ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಇದೀಗ ಕೊಂಚ ನಿರಾಳತೆ ಸಿಕ್ಕಿದೆ. ಮಾರುಕಟ್ಟೆಯಲ್ಲಿ ಹೊಸ ಸೋನಾ ಮಸೂರಿ ಅಕ್ಕಿಯ ದರದಲ್ಲಿ ಭಾರೀ ಇಳಿಕೆಯಾಗಿದೆ. ಈ ಹಿಂದೆ ಕೆಜಿಗೆ ₹80ರಿಂದ ₹90ರ ವರೆಗೆ ಮಾರಾಟವಾಗುತ್ತಿದ್ದ ಅಕ್ಕಿ ಬೆಲೆ ಇದೀಗ ₹65ರಿಂದ ₹70ಕ್ಕೆ ಇಳಿಕೆಯಾಗಿದೆ. ಅಂದರೆ, ಪ್ರತಿ ಕೆಜಿಗೆ ಸುಮಾರು ₹10ರಿಂದ ₹20ರವರೆಗೆ ದರ ಕಡಿಮೆಯಾಗಿದೆ.

ಅಕ್ಕಿ ದರ ಇಳಿಕೆಗೆ ಕಾರಣವೇನು?

ಭತ್ತದ ಪೂರೈಕೆ ಕುಸಿದಿದ್ದರಿಂದ ಕಳೆದ ಕೆಲವು ದಿನಗಳಿಂದ ಅಕ್ಕಿ ಬೆಲೆ ಏರಿಕೆಯಾಗಿತ್ತು. ಆದರೆ, ಇದೀಗ ಮಹಾರಾಷ್ಟ್ರ ಮತ್ತು ತೆಲಂಗಾಣದಿಂದ ಭತ್ತದ ಪೂರೈಕೆ ಹೆಚ್ಚಾಗಿದೆ. ಭತ್ತದ ಕಟಾವು ಪೂರ್ಣಗೊಂಡು ಮಿಲ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬರುತ್ತಿರುವುದರಿಂದ ಮಾರುಕಟ್ಟೆಯಲ್ಲಿ ಅಕ್ಕಿ ದರ ಇಳಿಕೆಯಾಗಿದೆ.

ಅಕ್ಕಿ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಕ್ವಿಂಟಲ್‌ಗೆ ಸುಮಾರು ₹8,500 ಇದ್ದ ದರ, ಇದೀಗ ₹6,500ಕ್ಕೆ ಇಳಿಕೆಯಾಗಿದೆ. ಈ ಮೂಲಕ ಕ್ವಿಂಟಲ್ ಅಕ್ಕಿಗೆ ಬರೋಬ್ಬರಿ ₹2,000 ಕಡಿಮೆಯಾಗಿದೆ.

ಗ್ರಾಹಕರಿಗೆ ಅನುಕೂಲ, ರೈತರಿಗೂ ಉತ್ತಮ ಬೆಲೆ

ಈ ಕುರಿತು ‘ಟಿವಿ9’ ಜೊತೆ ಮಾತನಾಡಿರುವ ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷರಾದ ಸಾವಿತ್ರಿ ಪುರುಷೋತ್ತಮ, ಅಕ್ಕಿ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ಒಳ್ಳೆಯ ಸುದ್ದಿಯಾಗಿದೆ ಎಂದು ಹೇಳಿದ್ದಾರೆ. ಭತ್ತ ಬೆಳೆದ ರೈತರಿಗೂ ಉತ್ತಮ ಬೆಲೆ ಸಿಗುತ್ತಿದೆ ಎಂದು ತಿಳಿಸಿದ್ದಾರೆ.

ತುಂಗಭದ್ರಾ ನದಿ ಪಾತ್ರದಲ್ಲಿ ಭತ್ತದ ಪ್ರಮಾಣ ಕಡಿಮೆಯಿದ್ದರೂ, ಕೃಷ್ಣಾ ನದಿ ಪಾತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದೆ. ಇದೀಗ ಕಟಾವು ಮುಗಿದಿರುವುದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಪೂರೈಕೆಯಾಗುತ್ತಿದೆ. ಇದರಿಂದ ಅಕ್ಕಿ ದರ ಇಳಿಕೆಯಾಗಿದೆ ಎಂದು ವಿವರಿಸಿದ್ದಾರೆ.

ಸ್ಟಾಕ್ ಲಿಮಿಟ್ ಹೆಚ್ಚಿಸಲು ಸರ್ಕಾರಕ್ಕೆ ಮನವಿ

ಇದೇ ವೇಳೆ, ಸರ್ಕಾರ ಅಕ್ಕಿ ದಾಸ್ತಾನು ಮಿತಿಯನ್ನು ಕಡಿಮೆ ಮಾಡಿದರೆ ಅಕ್ಕಿ ಗಿರಣಿಗಳಿಗೂ ಸಮಸ್ಯೆಯಾಗಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಮತ್ತೆ ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಾವಿತ್ರಿ ಪುರುಷೋತ್ತಮ ಎಚ್ಚರಿಸಿದ್ದಾರೆ. ಹೀಗಾಗಿ ಸರ್ಕಾರ ಸ್ಟಾಕ್ ಲಿಮಿಟ್ ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಕ್ಕಿ ಬೆಲೆ ಮತ್ತೆ ದಿಢೀರ್ ಏರಿಕೆ: 2-3 ತಿಂಗಳಲ್ಲಿ ಶೇ 25-30ರಷ್ಟು ಹೆಚ್ಚಳ

ಸದ್ಯ ಬೇಸಿಗೆಯಲ್ಲಿ ಭತ್ತದ ಬೆಳೆ ಬರುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಈಗ ಮಾರುಕಟ್ಟೆಗೆ ಬರುತ್ತಿರುವ ಭತ್ತವನ್ನೇ ಅವಲಂಬಿಸಬೇಕಾಗಿದೆ. ಇದೇ ಭತ್ತದ ದಾಸ್ತಾನಿನ ಆಧಾರದಲ್ಲಿ ಮುಂದಿನ ಒಂದು ವರ್ಷದವರೆಗೆ ಅಕ್ಕಿ ಗಿರಣಿಗಳು ಕಾರ್ಯನಿರ್ವಹಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:26 am, Thu, 19 November 26

Follow Us
ಭೀಮೇಶ್​​ ಪೂಜಾರ್
ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More