Chanakya Niti: ಅತ್ತೆ-ಸೊಸೆ ಹೀಗಿದ್ದರೆ ಮನೆಯಲ್ಲಿ ಯಾವುದೇ ಜಗಳಗಳು ನಡೆಯೋಲ್ಲ ಎಂದಿದ್ದಾರೆ ಚಾಣಕ್ಯ
ಪ್ರತಿ ಮನೆಯಲ್ಲೂ ಅತ್ತೆ-ಸೊಸೆ ಮಧ್ಯೆ ಜಗಳ, ಮನಸ್ತಾಪಗಳು ನಡೆಯೋದು ಸಾಮಾನ್ಯ. ಇವರಿಬ್ಬರ ಮನಸ್ತಾಪದ ಕಾರಣದಿಂದಾಗಿ ಸಂಪೂರ್ಣ ಮನೆಯ ಶಾಂತಿ, ನೆಮ್ಮದಿಯೇ ಹಾಳಾಗಿ ಹೋಗುತ್ತದೆ. ಇದು ಮನೆಯವರ ಮನಸ್ಥಿಯ ಮೇಲೂ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಹೀಗಿರುವಾಗ ಅತ್ತೆ ಮತ್ತು ಸೊಸೆ ಹೊಂದಾಣಿಕೆಯಿಂದ ಜೀವನ ನಡೆಸುವ ಮೂಲಕ ತಮ್ಮ ನಡುವೆ ಯಾವುದೇ ಜಗಳಗಳು ಬಾರದಂತೆ ನೋಡಿಕೊಳ್ಳಬಹುದು. ಅತ್ತೆ ಮತ್ತು ಸೊಸೆಯ ಈ ಸಂಬಂಧವನ್ನು ಬಲಪಡಿಸುವುದು ಹೇಗೆ ಎಂಬ ಸಲಹೆಯನ್ನು ಅಚಾರ್ಯ ಚಾಣಕ್ಯರು ತಿಳಿಸಿಕೊಟ್ಟಿದ್ದಾರೆ.

ಅತ್ತೆ ಸೊಸೆ ಜಗಳ ಎಲ್ಲಾ ಮನೆಗಳಲ್ಲೂ ಇದ್ದಿದ್ದೆ. ಅತ್ತೆ (mother-in-law) ಮತ್ತು ಸೊಸೆಯ ನಡುವೆ ಕ್ಷುಲ್ಲಕ ವಿಷಯಗಳಿಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿ ಉದ್ಭವಿಸುತ್ತವೆ. ಮನೆ ಕೆಲಸ, ಅಡುಗೆ, ಚಿಂತನೆಗಳಲ್ಲಿನ ಬಿನ್ನಾಭಿಪ್ರಾಯ ಹೀಗೆ ಹಲವು ಕಾರಣಗಳಿಂದ ಅತ್ತೆ ಸೊಸೆಯ ನಡುವೆ ಮನಸ್ತಾಪಗಳು ಏರ್ಪಡುತ್ತಲೇ ಇರುತ್ತವೆ. ಇವರಿಬ್ಬರ ಈ ಜಗಳ ಇವರ ಸಂಬಂಧವನ್ನು ಹಾಳು ಮಾಡುವುದರ ಜೊತೆಗೆ ಮನೆಯ ಇತರ ಸದಸ್ಯರ ನೆಮ್ಮದಿಯನ್ನೂ ಕೆಡಿಸುತ್ತದೆ, ಮನೆಯ ಶಾಂತಿ, ಸಂತೋಷವೆಲ್ಲ ಹಾಳಾಗಿಹೋಗುತ್ತದೆ. ಮನೆಯ ನೆಮ್ಮದಿಯ ದೃಷ್ಟಿಯಿಂದ ಅತ್ತೆ ಮತ್ತು ಸೊಸೆ ಪರಸ್ಪರ ಅರ್ಥ ಮಾಡಿಕೊಂಡು ಬಾಳ್ವೆ ನಡೆಸುವುದು ತುಂಬಾನೇ ಮುಖ್ಯ. ಇವರಿಬ್ಬರ ನಡುವೆ ಉತ್ತಮ ಬಾಂಧವ್ಯ ಬೆಳೆಸುವುದು ಅಷ್ಟೇನೂ ಕಷ್ಟದ ಕೆಲಸವಲ್ಲ. ಆಚಾರ್ಯ ಚಾಣಕ್ಯರು ಹೇಳಿರುವ ಈ ಸರಳ ಸಲಹೆಗಳನ್ನು ಪಾಲಿಸುವ ಮೂಲಕ ಅತ್ತೆ ಮತ್ತು ಸೊಸೆ ಹೊಂದಾಣಿಕೆಯಿಂದ ಜೀವನ ನಡೆಸಬಹುದು.
ಪರಸ್ಪರ ಆಲೋಚನೆಗಳು ಮತ್ತು ಭಾವನೆಗಳನ್ನು ಗೌರವಿಸಬೇಕು:
ವಯಸ್ಸು ಮತ್ತು ಪೀಳಿಗೆಯ ನಡುವೆ ಅಂತರವಿರುವ ಕಾರಣ ಅತ್ತೆ-ಸೊಸೆ ಮಧ್ಯೆ ಆಲೋಚನೆ ಮತ್ತು ಜೀವನಶೈಲಿಯಲ್ಲಿ ಸಾಕಷ್ಟು ಭಿನ್ನತೆಗಳಿರುತ್ತವೆ. ಸೊಸೆಗೆ ತನ್ನದೇ ಆದ ಆದ್ಯತೆಗಳಿದ್ದರೆ, ಅತ್ತೆಯ ಆಲೋಚನೆ, ಆಚಾರ ವಿಚಾರಗಳು ಬೇರೆಯದ್ದೇ ಅಗಿರುತ್ತದೆ. ಈ ಭಿನ್ನತೆಗಳ ಕಾರಣದಿಂದಲೂ ಅತ್ತೆ ಸೊಸೆಯ ಮಧ್ಯೆ ಜಗಳಗಳು ಏರ್ಪಡುವ ಸಾಧ್ಯತೆ ಇರುತ್ತದೆ. ಈ ವಿಚಾರಗಳಿಗೆ ಜಗಳವಾಡಿ ನೆಮ್ಮದಿಯನ್ನು ಹಾಳು ಮಾಡುವ ಬದಲು ಪರಸ್ಪರ ಆಲೋಚನೆ ಮತ್ತು ಭಾವನೆಗಳನ್ನು ಗೌರವಿಸಬೇಕು. ಇನ್ನೂ ಅತ್ತೆಯು ತನ್ನ ಆಯ್ಕೆಗಳು ಮತ್ತು ನಿರ್ಧಾರಗಳನ್ನು ಸೊಸೆಯ ಮೇಲೆ ಹೇರುವುದನ್ನು ತಪ್ಪಿಸಬೇಕು. ಸೊಸೆಯು ಕುಟುಂಬದ ಸಂಪ್ರದಾಯಗಳು ಮತ್ತು ಅತ್ತೆಯ ಅನುಭವಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಆಗ ಇಬ್ಬರ ಸಂಬಂಧವೂ ಉತ್ತಮವಾಗಿರುತ್ತದೆ ಎಂದಿದ್ದಾರೆ ಚಾಣಕ್ಯ.
ಕೋಪಗೊಂಡ ತಕ್ಷಣ ಪ್ರತಿಕ್ರಿಯಿಸುವುದನ್ನು ತಪ್ಪಿಸಬೇಕು:
ಕೋಪವು ಯಾವುದೇ ಸಂಬಂಧವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ. ಕೋಪ ಸಣ್ಣ ವಿಷಯವನ್ನು ಸಹ ದೊಡ್ಡ ವಿವಾದವಾಗಿ ಪರಿವರ್ತಿಸುತ್ತದೆ. ಹಾಗಾಗಿ ಅತ್ತೆಯಾಗಲಿ ಅಥವಾ ಸೊಸೆಯಾಗಲಿ ಇಬ್ಬರೂ ಸಹ ಕೋಪಗೊಂಡಾಗ ತಕ್ಷಣ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬೇಕು. ಶಾಂತವಾಗಿ ಪರಿಸ್ಥಿತಿಯನ್ನು ನಿಭಾಯಿಸಬೇಕು. ಆಗ ಮಾತ್ರ ಅತ್ತೆ ಸೊಸೆ ಮಧ್ಯೆ ಜಗಳಗಳು ಏರ್ಪಡೋದಿಲ್ಲ.
ಇದನ್ನೂ ಓದಿ: ಆದಾಯ, ಹಣಕಾಸಿಗೆ ಸಂಬಂಧಿಸಿದ ಈ ಸೀಕ್ರೆಟ್‌ಗಳನ್ನು ಯಾರೊಂದಿಗೂ ಶೇರ್ ಮಾಡಬಾರದು
ಮನೆಯ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬಾರದು:
ಕೆಲವೊಮ್ಮೆ ಅತ್ತೆಯು ತನ್ನ ಸೊಸೆಯ ಬಗ್ಗೆ ಸಂಬಂಧಿಕರು ಮತ್ತು ನೆರೆಹೊರೆಯವರೊಂದಿಗೆ ದೂರುಗಳನ್ನು ಹೇಳುತ್ತಾರೆ. ಸೊಸೆಯಂದಿರೂ ಸಹ ಇದೇ ರೀತಿ ಮಾಡುತ್ತಾರೆ. ಈ ರೀತಿ ತಮ್ಮಿಬ್ಬರ ನಡುವೆ ಜಗಳ, ಮನಸ್ತಾಪಗಳ ಬಗ್ಗೆ ಇತರರ ಬಳಿ ಹೇಳುವುದರಿಂದ ಸಂಬಂಧ ಇನ್ನಷ್ಟು ಹದಗೆಡುತ್ತದೆ. ಅತ್ತೆ ಮತ್ತು ಸೊಸೆಯ ನಡುವೆ ಸಮಸ್ಯೆ ಇದ್ದರೆ, ಅವರು ಪರಸ್ಪರ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಅಗತ್ಯವಿದ್ದರೆ, ಕುಟುಂಬ ಸದಸ್ಯರ ಸಹಾಯ ಪಡೆಯಬಹುದು. ಅದು ಬಿಟ್ಟು ಅತ್ತೆ ಮತ್ತು ಸೊಸೆ ಮನೆಯಲ್ಲಿ ನಡೆಯುವ ವಿಷಯಗಳನ್ನು ಮೂರನೇ ವ್ಯಕ್ತಿಗಳ ಬಳಿ ಹಂಚಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ ಚಾಣಕ್ಯ.
ಪರಸ್ಪರ ಸಹಕಾರ ಅತ್ಯಗತ್ಯ:
ಜನರು ತಮ್ಮ ನಿರೀಕ್ಷೆಗಳನ್ನು ಬಹಿರಂಗವಾಗಿ ತಿಳಿಸದಿದ್ದಾಗ ಸಂಬಂಧಗಳಲ್ಲಿ ಘರ್ಷಣೆಗಳು ಹೆಚ್ಚಾಗಿ ಉಂಟಾಗುತ್ತವೆ. ಮನೆಯ ಜವಾಬ್ದಾರಿಗಳು, ವೆಚ್ಚಗಳು ಮತ್ತು ಪ್ರಮುಖ ನಿರ್ಧಾರಗಳ ಬಗ್ಗೆ ಅತ್ತೆ ಮತ್ತು ಸೊಸೆಯ ನಡುವೆ ಸ್ಪಷ್ಟ ಸಂವಹನ ಇರಬೇಕು ಮತ್ತು ಅತ್ತೆ ಸೊಸೆಗೆ ಹೊಸ ಜವಾಬ್ದಾರಿಗಳನ್ನು ಕಲಿಯಲು ಸಮಯ ನೀಡಬೇಕು. ಇದಲ್ಲದೆ, ಅತ್ತೆ ಮತ್ತು ಸೊಸೆ ಸಹಕರಿಸಿದರೆ, ಅವರ ಸಂಬಂಧ ಬಲಗೊಳ್ಳುತ್ತದೆ ಮತ್ತು ಅನಗತ್ಯ ಸಂಘರ್ಷಗಳು ನಡೆಯುವುದಿಲ್ಲ ಎಂದಿದ್ದಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




