
ಇಂದಿನ ಈ ವೇಗದ ಯುಗದಲ್ಲಿ ನಮ್ಮ ಜೀವನಶೈಲಿ (Lifestyle) ತುಂಬಾ ಹದಗೆಟ್ಟಿದೆ ಹೌದು ನಾವು ಸಮಯಕ್ಕೆ ಸರಿಯಾಗಿ ಊಟ ಮಾಡುವುದಿಲ್ಲ, ಸಾಕಷ್ಟು ನಿದ್ರೆ ಪಡೆಯುವುದಿಲ್ಲ, ಆರೋಗ್ಯಕರ ಆಹಾರವನ್ನು ಸೇವನೆ ಮಾಡುವುದಿಲ್ಲ, ಇನ್ನೂ ಟೈಮ್ ಸಾಕಾಗುವುದಿಲ್ಲವೆಂದು ದಿನನಿತ್ಯ ವ್ಯಾಯಾಮವನ್ನೇ ಮಾಡುವುದಿಲ್ಲ. ಈ ಎಲ್ಲಾ ಅಂಶಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಹಾಗಾಗಿ ಫಿಟ್ ಆಗಿ ಮತ್ತು ಆರೋಗ್ಯವಾಗಿರಲು ದೈಹಿಕ ಚಟುವಟಿಕೆಯನ್ನು ಮಾಡುವುದು ಅತ್ಯಗತ್ಯ. ಇದಕ್ಕಾಗಿ ಸಾಕಷ್ಟು ಸಮಯ ಇಲ್ಲ ಎಂದಾದ್ರೆ ನೀವು ಪ್ರತಿನಿತ್ಯ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಆಡಬಹುದು. ಸ್ಕಿಪ್ಪಿಂಗ್ ಮಾಡುವುದರಿಂದ ಏನೆಲ್ಲಾ ಪ್ರಯೋಜನಗಳು ಲಭಿಸುತ್ತದೆ ಅನ್ನೋದನ್ನು ನೋಡೋಣ ಬನ್ನಿ.
ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ: ನೀವು ತೂಕ ಹೆಚ್ಚಾಗುವ ಬಗ್ಗೆ ಚಿಂತಿತರಾಗಿದ್ದರೆ ಮತ್ತು ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ, ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡಿ. ಇದು ಕಾರ್ಡಿಯೋ ವ್ಯಾಯಾಮವಾಗಿದ್ದು, ಇದು ಕ್ಯಾಲೊರಿಗಳನ್ನು ತ್ವರಿತವಾಗಿ ಸುಡುತ್ತದೆ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ನೀವು ವೇಗವಾಗಿ ತೂಕ ಇಳಿಸಿಕೊಳ್ಳಬಹುದು.
ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಇದು ಹೃದಯವನ್ನು ಬಲಪಡಿಸುವ ಮತ್ತು ರಕ್ತ ಪರಿಚಲನೆ ಸುಧಾರಿಸುವ ಅತ್ಯುತ್ತಮ ಕಾರ್ಡಿಯೋ ವ್ಯಾಯಾಮವಾಗಿದ್ದು, ಹೃದಯಾಘಾತ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಮೂಳೆಗಳನ್ನು ಬಲಪಡಿಸುತ್ತದೆ: ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡುವುದರಿಂದ ಕಾಲುಗಳು, ತೊಡೆಗಳು, ತೋಳುಗಳು ಮತ್ತು ಭುಜಗಳ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ಇದು ಆಸ್ಟಿಯೊಪೊರೋಸಿಸ್ ಮತ್ತು ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡುತ್ತದೆ. ದುರ್ಬಲ ಸ್ನಾಯುಗಳನ್ನು ಹೊಂದಿರುವ ಜನರಿಗೆ ಸ್ಕಿಪ್ಪಿಂಗ್ ತುಂಬಾನೇ ಪ್ರಯೋಜನಕಾರಿ.
ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ: ನೀವು ಸಣ್ಣ ವಿಷಯಗಳಿಗೂ ಒತ್ತಡಕ್ಕೊಳಗಾಗುತ್ತಿದ್ದರೆ, ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡಿ. ಈ ವ್ಯಾಯಾಮವು ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಆಲಸ್ಯವನ್ನು ಹೋಗಲಾಡಿಸಿ ದಿನವಿಡೀ ಆಕ್ಟಿವ್ ಆಗಿರಲು ಈ ಅಹಾರಗಳನ್ನು ಸೇವನೆ ಮಾಡಿ
ಶಕ್ತಿ ಮತ್ತು ಸಹಿಷ್ಣುತೆ ಹೆಚ್ಚಳ: ಈ ವ್ಯಾಯಾಮವು ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ, ಇದು ದಿನವಿಡೀ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.
ಮಧುಮೇಹವನ್ನು ನಿಯಂತ್ರಿಸಲು ಸಹಕಾರಿ: ಸ್ಕಿಪ್ಪಿಂಗ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡಬಹುದು.
ಉತ್ತಮ ನಿದ್ರೆ ಪಡೆಯಲು ಸಹಕಾರಿ: ನಿದ್ರಾಹೀನತೆ ಅಥವಾ ಕಳಪೆ ನಿದ್ರೆಯಿಂದ ಬಳಲುತ್ತಿರುವವರು ಪ್ರತಿದಿನ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಮಾಡಬೇಕು. ಇದು ದೇಹವನ್ನು ದಣಿಸಿ ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ, ರಾತ್ರಿಯಲ್ಲಿ ಆಳವಾದ ಮತ್ತು ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ