ನಿಮ್ಮ ಓರಲ್ ಹೆಲ್ತ್ ಚೆನ್ನಾಗಿಲ್ಲ ಅಂದ್ರೆ ಬಂಜೆತನದ ಅಪಾಯ ಹೆಚ್ಚಾಗುತ್ತಾ? ಏನ್ ಹೇಳುತ್ತೆ ಸಂಶೋಧನೆ?
ಜನರು ಸಾಮಾನ್ಯವಾಗಿ ಬಾಯಿಯ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ, ಇದು ಕೇವಲ ಹಲ್ಲು ಮತ್ತು ಒಸಡುಗಳ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ, ಇತ್ತೀಚಿನ ಅಧ್ಯಯನವು ಬಾಯಿಯ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ಮಹಿಳೆಯರ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದೆ. ಹಾಗಾದರೆ ಸಂಶೋಧನೆ ಹೇಗೆ ನಡೆಸಲಾಗಿದೆ, ಯಾವ ಆಧಾರದ ಮೇಲೆ ಓರಲ್ ಹೆಲ್ತ್ ಮತ್ತು ಫರ್ಟಿಲಿಟಿ ನಡುವೆ ಸಂಬಂಧವಿದೆ ಎಂದು ಹೇಳಲಾಗುತ್ತಿದೆ ಜೊತೆಗೆ ನಾವು ಬಾಯಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಬಾಯಿ ಆರೋಗ್ಯ (Oral Health) ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಇದು ನಮ್ಮ ಅರಿವಿಗೆ ಬಾರದಂತೆ ನಾನಾ ರೀತಿಯ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ. ಇದಕ್ಕೆ ಪೂರಕವೆಂಬಂತೆ ಇತ್ತೀಚಿನ ಅಧ್ಯಯನವೊಂದು ಬಾಯಿ ಆರೋಗ್ಯ ಮತ್ತು ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯದ ನಡುವೆ ಸಂಬಂಧ ಇರಬಹುದೆಂಬ ಆತಂಕಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಹೌದು, ಕೇಳುವುದಕ್ಕೆ ಸ್ವಲ್ಪ ಆಶ್ಚರ್ಯಕರವಾಗಿದ್ದರೂ ಕೂಡ ಇದನ್ನು ನಂಬಲೇಬೇಕು. ಹಾಗಾದರೆ ಸಂಶೋಧನೆ ಹೇಗೆ ನಡೆಸಲಾಗಿದೆ, ಯಾವ ಆಧಾರದ ಮೇಲೆ ಓರಲ್ ಹೆಲ್ತ್ ಮತ್ತು ಫರ್ಟಿಲಿಟಿ (Fertility) ನಡುವೆ ಸಂಬಂಧವಿದೆ ಎಂದು ಹೇಳಲಾಗುತ್ತಿದೆ ಜೊತೆಗೆ ನಾವು ಬಾಯಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅಧ್ಯಯನದ ಪ್ರಕಾರ, ಬಾಯಿಯಲ್ಲಿ ದೀರ್ಘಕಾಲದವರೆಗೆ ಇರುವ ಉರಿಯೂತ (Inflammation) ದೇಹದ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸಬಹುದು. ಈ ಉರಿಯೂತ ಕೇವಲ ಹಲ್ಲುಗಳಿಗೆ ಸೀಮಿತವಾಗದೆ, ದೇಹದ ಇತರ ಭಾಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ಅಂಡಾಶಯಗಳ (Ovaries) ಕಾರ್ಯಕ್ಷಮತೆಯಲ್ಲಿ ಬದಲಾವಣೆ ಉಂಟಾಗಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಸಂಶೋಧನೆಯಲ್ಲಿ, ನಿರಂತರ ಬಾಯಿ ಸೋಂಕು ಮತ್ತು ಉರಿಯೂತದ ಪರಿಣಾಮವಾಗಿ ಅಂಡಾಣುಗಳ (Eggs) ಗುಣಮಟ್ಟ ಕುಸಿಯುವ ಸಾಧ್ಯತೆ ಕಂಡುಬಂದಿದೆ. ಅಲ್ಲದೆ, ಅಂಡಾಣು ಬೆಳೆಯುವ ಫಾಲಿಕಲ್ಸ್‌ಗಳ ಬೆಳವಣಿಗೆಯಲ್ಲೂ ವ್ಯತ್ಯಾಸಗಳು ಕಂಡುಬಂದಿವೆ. ಇದರಿಂದ ಮಹಿಳೆಯರ ಸಂತಾನೋತ್ಪತ್ತಿ ಸಾಮರ್ಥ್ಯಕ್ಕೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಆದರೆ ಈ ಅಧ್ಯಯನವನ್ನು ಪ್ರಾಣಿಗಳ ಮೇಲೆ ನಡೆಸಲಾಗಿದ್ದು, ಮಾನವರಲ್ಲಿ ಇದೇ ಪರಿಣಾಮ ಉಂಟಾಗುತ್ತದೆಯೇ ಎಂಬುದನ್ನು ಖಚಿತಪಡಿಸಲು ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಆದರೂ ಉತ್ತಮ ಬಾಯಿ ಆರೋಗ್ಯ ಕಾಪಾಡಿಕೊಳ್ಳುವುದು ಒಟ್ಟಾರೆ ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ರಾತ್ರಿ ಹಲ್ಲುಜ್ಜದೇ ಮಲಗ್ತೀರಾ? ಇದು ನಿಮ್ಮ ಹೃದಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತಾ?
ಬಾಯಿ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು?
- ದಿನಕ್ಕೆ ಕನಿಷ್ಠ ಎರಡು ಬಾರಿ ಹಲ್ಲು ಉಜ್ಜುವುದು.
- ನಿಯಮಿತವಾಗಿ ಫ್ಲಾಸ್ ಬಳಸಿ.
- ಹಲ್ಲುಗಳಲ್ಲಿ ಉರಿಯೂತ, ರಕ್ತಸ್ರಾವ ಅಥವಾ ನೋವು ಕಂಡುಬಂದರೆ ನಿರ್ಲಕ್ಷಿಸಬೇಡಿ.
- ಹೆಚ್ಚು ಸಿಹಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಿ.
- ಸಮತೋಲಿತ ಆಹಾರ ಸೇವಿಸಿ.
- ನಿಯಮಿತವಾಗಿ ದಂತ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ.
ತಜ್ಞರ ಪ್ರಕಾರ, ಉತ್ತಮ ಬಾಯಿ ಆರೋಗ್ಯವು ಕೇವಲ ಹಲ್ಲುಗಳನ್ನು ಮಾತ್ರವಲ್ಲ, ದೇಹದ ಸಮಗ್ರ ಆರೋಗ್ಯ ಮತ್ತು ಸಂತಾನೋತ್ಪತ್ತಿ ಆರೋಗ್ಯವನ್ನೂ ಕಾಪಾಡಲು ಸಹಾಯಕವಾಗಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Sat, 30 May 26





