ಮನುಷ್ಯನಿಗೆ ವಯಸ್ಸಾದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ. ಅದರಲ್ಲೂ 55 ರಿಂದ 60 ರ ವಸಂತಕ್ಕೆ ಕಾಲಿಡುತ್ತಿದ್ದಂತೆ ಹೆಚ್ಚಿನವರಿಗೆ ಮೊಣಕಾಲು ನೋವು, ಕೀಲು ನೋವು, ಬೆನ್ನು ನೋವು, ಸ್ನಾಯು ಸಮಸ್ಯೆ ಮುಂತಾದವು ಹೆಚ್ಚು ಬಾಧಿಸುತ್ತವೆ. ವಯಸ್ಸಾದಂತೆ ಮೂಳೆಗಳು ದುರ್ಬಲವಾಗುತ್ತದೆ, ಇದರಿಂದಾಗಿ ಮೊಣಕಾಲು ನೋವು ಹೆಚ್ಚಾಗುತ್ತದೆ. ಇದು ದಿನನಿತ್ಯದ ಕೆಲಸದಲ್ಲಿ ನಿಮಗೆ ತೊಂದರೆಯುಂಟು ಮಾಡಬಹುದು. ಅನೇಕ ಜನರು ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ವಿವಿಧ ಬಗೆಯ ಔಷಧಿಗಳನ್ನು ಸೇವನೆ ಮಾಡುತ್ತಾರೆ. ಮಂಡಿ ನೋವು, ಕೀಲು ನೋವಿಗೆ ಅಷ್ಟು ಸುಲಭವಾಗಿ ಔಷಧಿಗಳಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಆದರೆ ನೀವು ಪ್ರತಿನಿತ್ಯ ಈ ಮೂರು ಬಗೆಯ ಯೋಗಾಸನಗಳನ್ನು ಅಭ್ಯಾಸ ಮಾಡುವ ಮೂಲಕ ಮಂಡಿ ಹಾಗೂ ಸ್ನಾಯು ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಆ ಯೋಗ ಭಂಗಿಗಳು ಯಾವುವು ಎಂಬುದನ್ನು ನೋಡೋಣ.
ತಾಡಾಸನದ ಅಭ್ಯಾಸವು ತೊಡೆಗಳು, ಕಣಕಾಲುಗಳು ಮತ್ತು ಕೈಗಳನ್ನು ಬಲಪಡಿಸುತ್ತದೆ. ಮಾತ್ರವಲ್ಲದೆ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ದೇಹದ ರಚನೆಯನ್ನೂ ಸುಧಾರಿಸುತ್ತದೆ.
ತಾಡಾಸನ ಮಾಡಲು, ನೇರವಾಗಿ ನಿಂತು ಬೆನ್ನುಮೂಳೆಯನ್ನು ನೇರವಾಗಿರಿಸಿ. ಎರಡು ಕಾಲುಗಳ ನಡುವೆ ಅಂತರವನ್ನು ಇಟ್ಟುಕೊಂಡು ಆಳವಾದ ಉಸಿರನ್ನು ತೆಗೆದುಕೊಂಡು ಎರಡೂ ಕೈಗಳನ್ನು ನೇರವಾಗಿ ತಲೆಯ ಮೇಲೆ ಸರಿಸಿ. ನಂತರ ಸಾಮಾನ್ಯ ಸ್ಥಿತಿಗೆ ಹಿಂತಿರುಗುವಾಗ ಉಸಿರಾಟದ ವೇಗಕ್ಕೆ ಗಮನಕೊಡಿ ಹಾಗೂ ಉಸಿರನ್ನು ನಿಧಾನಕ್ಕೆ ಬಿಡಿ ಈ ಆಸನವನ್ನು 10 ರಿಂದ 15 ಬಾರಿ ಪುನರಾವರ್ತಿಸಿ.
ಇದನ್ನೂ ಓದಿ: ಯೋಗಾಸನ ಮಾಡಲು ಪ್ರಾರಂಭಿಸಿದ್ದೀರಾ? ಹಾಗಿದ್ದರೆ ಈ ಸಲಹೆ ಪಾಲಿಸಿ
ಈ ಯೋಗ ಭಂಗಿಯ ಅಭ್ಯಾಸವು ಹೊಟ್ಟೆ ಅಂಗಗಳನ್ನು ಆರೋಗ್ಯಕರವಾಗಿರಿಸುವ ಮೂಲಕ ಮಲಬದ್ಧತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದ. ಬೆನ್ನು ಮತ್ತು ಕಾಲುಗಳನ್ನು ಬಲಪಡಿಸುತ್ತದೆ. ಹೃದಯ ಮತ್ತು ಶ್ವಾಸಕೋಶದ ಆರೋಗ್ಯವನ್ನು ಸುಧಾರಿಸುತ್ತದೆ. ಅಲ್ಲದೆ ಈ ಯೋಗದ ವಯಸ್ಸಾದವರು ಎದುರಿಸುತ್ತಿರುವ ಅನೇಕ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ.
ಭುಜಂಗಾಸ ಮಾಡಲು ಹೊಟ್ಟೆಯ ಭಾಗ ನೆಲಕ್ಕೆ ಚಾಚುವಂತೆ ಮಲಗಿ ಮತ್ತು ಎರಡೂ ಪಾದಗಳನ್ನು ಒಟ್ಟಿಗೆ ಜೋಡಿಸಿ, ಕೈಗಳನ್ನು ಪಕ್ಕಕ್ಕೆ ಇಟ್ಟು, ತಲೆಯನ್ನು ಎತ್ತಿ. ಈ ಸ್ಥಿತಿಯಲ್ಲಿ ಎದೆಯ ಭಾಗ ಮೆಲಕ್ಕೆ ಬಂದು ಬಾಗಿದಂತಿರಬೇಕು. ಮತ್ತು ಕಾಲ್ಬೆರಳಿನ ತುದಿಯಿಂದ ತೊಡೆಯ ಭಾಗದವರೆಗೆ ಶರೀರ ಸಂಪೂರ್ಣವಾಗಿ ನೆಲಕ್ಕೆ ತಾಗಿರಬೇಕು. ಈ ಆಸನವನ್ನು ಪ್ರತಿನಿತ್ಯ ಮಾಡುವ ಮೂಲಕ ಸ್ನಾಯು ಹಾಗೂ ಕೀಲು ನೋವಿನಿಂದ ಪರಿಹಾರ ಪಡೆಯಬಹುದು.
ದಿನನಿತ್ಯ ಯೋಗಾಭ್ಯಾಶವನನು ಮಾಡುವ ಮೂಲಕ ದೈಹಿಕ ಆರೋಗ್ಯ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನು ಕೂಡಾ ಸುಧಾರಿಸಿಕೊಳ್ಳಬಹುದು.
ಪ್ರಾಣಾಯಾಮ ಕೀಲುನೋವನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಪ್ರಾಣಾಯಾಮದ ನಿಯಮಿತ ಅಭ್ಯಾಸವು ಬೆನ್ನುಮೂಳೆಯನ್ನು ನೇರಗೊಳಿಸುತ್ತದೆ. ಮತ್ತು ಬೆನ್ನು ನೋವಿಗೆ ಪರಿಹಾರ ನೀಡುತ್ತದೆ. ಪ್ರಾಣಾಯಾಮವು ಕೀಲುನೋವನ್ನು ನಿವಾರಿಸಲು ಸಹ ಸಹಕಾರಿಯಾಗಿದೆ. ಅಲ್ಲದೆ ಪ್ರಾಣಾಯಾಮವು ಅಧಿಕರಕ್ತದೊತ್ತಡ, ಒತ್ತಡ, ಹೃದ್ರೋಗ, ಹೊಟ್ಟೆ ಮತ್ತು ಉಸಿರಾಟದ ಸಮಸ್ಯೆಗಳಿಗೂ ಪರಿಹಾರವನ್ನು ಒದಗಿಸುತ್ತದೆ.
ಪ್ರಾಣಾಯಾಮ ಮಾಡಲು ಚಾಪೆಯ ಮೇಲೆ ಕಾಲು ಚಾಚಿ ಕುಳಿತುಕೊಳ್ಳಿ. ಕಣ್ಣುಗಳನ್ನು ನಿಧಾನವಾಗಿ ಮುಚ್ಚುವ ಮೂಲಕ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ಬಲಗೈ ಮತ್ತು ಹೆಬ್ಬೆರೆಳಿನಿಂದ ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ ಎಡ ಮೂಗಿನ ಹೊಳ್ಳೆಯ ಮೂಲಕ ಉಸಿರಾಡಿ. ನಂತರ ಎಡ ಮೂಗಿನ ಹೊಳ್ಳೆಯನ್ನು ಉಂಗುರದ ಬೆರಳಿನಿಂದ ಮುಚ್ಚುವ ಮೂಲಕ ಬಲ ಮೂಗಿನ ಹೊಳ್ಳೆಯ ಮೂಲಕ ಉಸಿರನ್ನು ಬಿಡಿ. ಹೀಗೆ ಕೆಲವು ಬಾರಿ ಈ ಭಂಗಿಯನ್ನು ಪ್ರಯತ್ನಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:10 pm, Wed, 9 August 23