
ಹೆಚ್ಚಿನವರು ನಿಷ್ಠಾವಂತ ಪ್ರಾಣಿಯಾದ ಶ್ವಾನವನ್ನು ಇಷ್ಟ ಪಟ್ಟು ಸಾಕುತ್ತಾರೆ. ಕೆಲವರಿಗೆ ಮನೆಯೊಳಗಿರುವ ಬೆಕ್ಕುಗಳೆಂದರೆಗಳೆಂದರೆ ಅಷ್ಟಕಷ್ಟೆ. ಈ ಬೆಕ್ಕುಗಳು ಮನುಷ್ಯರಿಗೆ ತೊಂದರೆ ಮಾಡುತ್ತವೆ ಎಂದು ಭಾವಿಸುವವರು ಇದ್ದಾರೆ. ಆದರೆ ಈ ಜಗತ್ತಿನಲ್ಲಿ ಅನೇಕರು ಈ ಬೆಕ್ಕಿನ ಪ್ರೇಮಿಗಳಿದ್ದಾರೆ. ನೀವೇನಾದರೂ ಬೆಕ್ಕು ಪ್ರೇಮಿಯಾಗಿದ್ದರೆ ಈ ಸ್ಟೋರಿಯನ್ನು ಓದಲೇಬೇಕು. ಜಪಾನಿನಲ್ಲಿರುವ ದ್ವೀಪವೊಂದರಲ್ಲಿ ಮನುಷ್ಯರಿಗಿಂತ ಹೆಚ್ಚು ಬೆಕ್ಕುಗಳು ವಾಸಿಸುತ್ತವೆಯಂತೆ.
ಹೌದು, ಅಯೋಶಿಮಾ ಜಪಾನ್‌ನ ಅತ್ಯಂತ ಪ್ರಸಿದ್ಧ ಕ್ಯಾಟ್ ದ್ವೀಪವಾಗಿದೆ. ಈ ದ್ವೀಪದಲ್ಲಿ ಜನರಿಗಿಂತ ಬೆಕ್ಕುಗಳೇ ಹೆಚ್ಚು ಕಾಣಸಿಗುತ್ತವೆ. ಹೀಗಾಗಿ ಈ ದ್ವೀಪವನ್ನು “ಕ್ಯಾಟ್ ಐಲ್ಯಾಂಡ್” ಎಂದು ಕರೆಯುತ್ತಾರೆ. ಈ ದ್ವೀಪವು ದಕ್ಷಿಣ ಜಪಾನ್‌ನ ಎಹೈಮ್ ಪ್ರಿಫೆಕ್ಚರ್‌ನಲ್ಲಿರುವ 1.6 ಕಿಮೀ ಉದ್ದದ ದ್ವೀಪವಾಗಿದೆ. ಇಲ್ಲಿನ ಜನರ ಮುಖ್ಯ ಕಸುಬು ಮೀನುಗಾರಿಕೆ. ಮೀನುಗಾರಿಕೆ ನಡೆಸುವ ದೋಣಿಗಳಲ್ಲಿ ಇಲಿಗಳ ಉಪಟಳ ಹೆಚ್ಚಾದಾಗ ಪರಿಹಾರಕ್ಕಾಗಿ ಇಲ್ಲಿ ಬೆಕ್ಕುಗಳನ್ನು ತಂದು ಸಾಕಲಾಯಿತು. ಆದಾದ ಬಳಿಕ ಇಲ್ಲಿನ ಜನರು ಇಲಿಗಳ ಕಾಟದಿಂದ ಮುಕ್ತಿ ಪಡೆದರಾದರೂ ಈ ದ್ವೀಪವು ಬೆಕ್ಕುಗಳ ತಾಣವಾಗಿ ಬಿಟ್ಟಿತು.
ಎರಡನೇ ಮಹಾಯುದ್ಧದ ನಂತರ ಈ ದ್ವೀಪದಲ್ಲಿದ್ದ ನಿವಾಸಿಗಳಲ್ಲಿ ಹೆಚ್ಚಿನವರು ಉದ್ಯೋಗ ಹುಡುಕುತ್ತ ಜಪಾನ್‌ನ ನಗರ ಪ್ರದೇಶಗಳಿಗೆ ಹೊರಟು ಬಿಟ್ಟರು. ಆವಾಗ ಬೆಕ್ಕುಗಳು ಇಲ್ಲಿ ಬಾಕಿಯಾಗಿದ್ದು ಅವುಗಳ ಸಂತತಿ ಹೆಚ್ಚುತ್ತಾ ಹೋಯಿತು. ಇಲ್ಲಿ ರೆಸ್ಟೋರೆಂಟ್ ಗಳು ಹಾಗೂ ಹೋಟೆಲ್ ಗಳಿಲ್ಲ. ಆದರೆ ಮನುಷ್ಯರಿಗಿಂತ ಹೆಚ್ಚು ಬೆಕ್ಕುಗಳ ಬಳಗಗಳೇ ಇಲ್ಲಿನ ವಿಶೇಷವಾಗಿದೆ. ಸಣ್ಣ ಸಣ್ಣ ಜೀವಿಗಳನ್ನು ತಿಂದು ಬದುಕುವ ಈ ಬೆಕ್ಕುಗಳಿಗೆ ಅಲ್ಲಿರುವ ಕೆಲವೇ ಕೆಲವು ಜನರೇ ಆಹಾರವನ್ನು ನೀಡುತ್ತಾರೆ.
2019 ರಲ್ಲಿ ಈ ದ್ವೀಪದಲ್ಲಿ ಬೆಕ್ಕಿನ ಜನಸಂಖ್ಯೆಯು ಸುಮಾರು 200 ರಷ್ಟಿತ್ತು. ಇಲ್ಲಿ ಕೇವಲ ಆರು ಜನರು ಮಾತ್ರ ವಾಸಿಸುತ್ತಿದ್ದರು. ಫೆಬ್ರವರಿ 2018 ರಲ್ಲಿ, ದ್ವೀಪದಲ್ಲಿರುವ ಎಲ್ಲಾ ಬೆಕ್ಕುಗಳನ್ನು ಸಂತತಿಯನ್ನು ನಿಯಂತ್ರಿಸಲು ಸಂತಾನಹರಣ ಚಿಕಿತ್ಸೆಯನ್ನು ಮಾಡಬೇಕೆಂದು ನಿರ್ಧರಿಸಲಾಯಿತು. ಕೊನೆಗೆ ಸರಿಸುಮಾರು 219 ಬೆಕ್ಕುಗಳಿಗೆ ಸಂತಾನಹರಣವನ್ನು ಮಾಡಲಾಯಿತು.
ಇದನ್ನೂ ಓದಿ: ಮೇಕಪ್ ಮಾಡಿಕೊಳ್ಳುವುದರಿಂದ ಚರ್ಮದ ಕಾಂತಿ ಕಡಿಮೆಯಾಗುತ್ತಾ?
ನಾಗಹಾಮಾ ಬಂದರಿನಿಂದ ಈ ಕ್ಯಾಟ್ ಐಲ್ಯಾಂಡ್‌ಗೆ ಹೋಗಬಹುದು. ಮೊದಲಿಗೆ ಐಯೋ- ನಾಗಹಾಮಾ ರೈಲು ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಐದು ನಿಮಿಷಗಳ ಕಾಲ ನಡೆದುಕೊಂಡು ಹೋದರೆ ನಾಗಹಾಮಾ ಬಂದರು ಸಿಗುತ್ತದೆ. ಬಂದರಿನಿಂದ ಈ ದ್ವೀಪವನ್ನು ತಲುಪಲು 35 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಫೆರ್ರಿ ಪ್ರಯಾಣದ ಮೂಲಕ ಈ ದ್ವೀಪವನ್ನು ತಲುಪಬಹುದು. ಕ್ಯಾಟ್ ಐಲ್ಯಾಂಡ್ ಹೋಗಬೇಕೇನ್ನುವವರಿಗೆ ಬೆಳಿಗ್ಗೆ 8 ಗಂಟೆಗೆ ಹಗ್ ಮಧ್ಯಾಹ್ನ 2:30ರ ಸಮಯಕ್ಕೆ ಈ ಬಂದರಿಗೆ ಬಂದರೆ ಹೋಗುವ ವ್ಯವಸ್ಥೆಯಿದೆ. ಈ ದ್ವೀಪದಿಂದ ಹಿಂತಿರುಗಲು ಸಂಜೆ 4:15 ಕ್ಕೆ ಕೇವಲ ಒಂದು ದೋಣಿ ವ್ಯವಸ್ಥೆಯನ್ನು ಮಾಡಲಾಗಿದೆ. ದ್ವೀಪದೊಳಗೆ ಕಾಲಿಟ್ಟರೆ ಬೆಕ್ಕುಗಳ ಹಿಂಡು ಹಿಂಡೇ ನಿಮ್ಮನ್ನು ಸ್ವಾಗತ ಮಾಡುತ್ತವೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ