
ಇತ್ತೀಚಿನ ದಿನಗಳಲ್ಲಿ ತಮ್ಮದೇ ಆದ ಸ್ವಂತ ಉದ್ಯಮವನ್ನು (business) ಪ್ರಾರಂಭಿಸುವುದು ಪ್ರತಿಯೊಬ್ಬರ ಕನಸಾಗಿದೆ. ಹೌದು ಎಷ್ಟು ಅಂತ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವುದು ಸ್ವಂತದ್ದಾಗಿ ಏನಾದರೂ ಮಾಡಬೇಕು ಎಂದು ಎಷ್ಟೋ ಜನ ಸೀರೆ ಬಿಸಿನೆಸ್, ನೈಲ್, ಬ್ಯೂಟಿ ಸೆಲೂನ್, ಚಾಟ್ಸ್ ಸೆಂಟರ್, ಜ್ಯೂಸ್ ಸೆಂಟರ್, ಹೋಮ್‌ಮೇಡ್ ಮಸಾಲಾ ಐಟಂ ಪ್ರಾಡಕ್ಟ್ ಬಿಸಿನೆಸ್ ಸೇರಿದಂತೆ ಬೇರೆ ಬೇರೆ ಸ್ವಂತ ಉದ್ಯಮಗಳನ್ನು ನಡೆಸುತ್ತಿದ್ದಾರೆ. ಆದರೆ ಹೀಗೆ ಸ್ವಂತ ಉದ್ಯಮವನ್ನು ಆರಂಭಿಸುವುದು ಅದರಲ್ಲಿ ಯಶಸ್ಸನ್ನು ಕಾಣುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕೆ ಸರಿಯಾದ ಮಾರ್ಗದರ್ಶನದ ಅಗತ್ಯ ಇದೆ. ನಿಮಗೂ ಹೊಸ ಉದ್ಯಮವನ್ನು ಆರಂಭಿಸಿ, ಅದರಲ್ಲಿ ಯಶಸ್ಸನ್ನು ಕಾಣುವ ಆಸೆಯಿದ್ದರೆ, ಆಚಾರ್ಯ ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ.
ಯೋಜನೆಗಳನ್ನು ಯಾವಾಗಲೂ ರಹಸ್ಯವಾಗಿಡಬೇಕು: ವ್ಯವಹಾರವನ್ನು ಆರಂಭಿಸುವ ಮೊದಲ ನಿಯಮವೆಂದರೆ ಯೋಜನೆಗಳನ್ನು ಮತ್ತು ಮುಂದಿನ ನಡೆಗಳನ್ನು ರಹಸ್ಯವಾಗಿಡುವುದು. ನೀವು ಹೊಸದಾಗಿ ಉದ್ಯಮ ಅರಂಭಿಸುತ್ತೀರಿ ಎಂದಾದರೆ, ಆ ಯೋಜನೆ ಸಂಪೂರ್ಣವಾಗಿ ಕಾರ್ಯಗತಗೊಳ್ಳುವವರೆಗೆ ಅದನ್ನು ರಹಸ್ಯವಾಗಿಡಿ. ನೀವು ಇತರರ ಬಳಿ ನಿಮ್ಮ ಯೋಜನೆಗಳನ್ನು ಹಂಚಿಕೊಂಡಾಗ ಹೊಟ್ಟೆಕಿಚ್ಚಿನಿಂದ ಅವರು ಅದನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಯೋಜನೆ ಪೂರ್ಣಗೊಳ್ಳುವವರೆಗೆ ಮೌನವನ್ನು ಕಾಪಾಡಿಕೊಳ್ಳಿ.
ಬಹುಕಾರ್ಯಗಳ ಜ್ಞಾನ ಬೆಳೆಸಿಕೊಳ್ಳಿ: ಒಬ್ಬ ಉದ್ಯಮಿ ಬಹುಮುಖಿ ಆಟಗಾರನಾಗಿರಬೇಕು ಎನ್ನುತ್ತಾ ಆಚಾರ್ಯ ಚಾಣಕ್ಯ. ನಾಯಕತ್ವ, ಕೆಲಸವನ್ನು ಹಂಚುವುದು, ಮಾರ್ಕೆಟಿಂಗ್, ಲಾಭ-ನಷ್ಟ ಸೇರಿದಂತೆ ಪ್ರತಿಯೊಂದು ಅಂಶವನ್ನು ಅಳೆಯಬೇಕು, ಕ್ರಿಯಾಶೀಲವಾಗಿ ಯೋಚಿಸಬೇಕು ಆಗ ಮಾತ್ರ ಯಶಸ್ವಿ ಉದ್ಯಮಿಯಾಗಲು ಸಾಧ್ಯ.
ಪ್ರತಿದಿನ ಹೊಸದನ್ನು ಕಲಿಯಿರಿ: ಯಶಸ್ವಿ ಉದ್ಯಮಿಯಾಗಲು ಬಯಸಿದರೆ ನೀವು ಪ್ರತಿದಿನ ಹೊಸ ಹೊಸ ವಿಷಯಗಳ ಬಗ್ಗೆ ಕಲಿಯಬೇಕು, ಉದ್ಯಮವನ್ನು ಮೇಲಿನ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಎಂಬ ಬಗ್ಗೆ ಜ್ಞಾನವನ್ನು ಬೆಳೆಸಬೇಕು. ಆಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ. ಯಾವುದೇ ವಿಷಯವನ್ನು ಕಲಿಯದೆ ನಿಂತ ನೀರಿನಂತಿದ್ದರೆ, ನಿಮ್ಮ ಉದ್ಯಮ ಕೂಡ ಪ್ರಗತಿ ಕಾಣದೆ ನಿಂತ ನೀರಿನಂತಿರುತ್ತದೆ ಎಂದು ಎಚ್ಚರಿಸಿದ್ದಾರೆ ಚಾಣಕ್ಯ.
ಇದನ್ನೂ ಓದಿ: ಜೀವನದಲ್ಲಿ ಮುಂದೆ ಬರಬೇಕು ಅಂದ್ರೆ ಈ ವಿಷಯಗಳನ್ನು ನಿಯಂತ್ರಿಸಲು ಕಲಿಯಿರಿ
ಪಾರ್ಟ್ನರ್‌ಗಳನ್ನು ಎಚ್ಚರದಿಂದ ಆಯ್ಕೆ ಮಾಡಿ: ಒಬ್ಬರೇ ಉದ್ಯಮವನ್ನು ಆರಂಭಿಸಲು ಸಾಧ್ಯವಿಲ್ಲ, ಅದಕ್ಕೆ ಸೂಕ್ತವಾದ ಬೆಂಬಲ ಬೇಕಾಗುತ್ತದೆ. ಹೀಗಿರುವಾಗ ನೀವು ನಿಮ್ಮ ಪಾರ್ಟ್ನರ್ ಆಯ್ಕೆಯಲ್ಲಿ ತುಂಬಾನೇ ಜಾಗರೂಕರಾಗಿರಬೇಕು. ಕುರುಡಾಗಿ ಯಾರನ್ನೂ ನಂಬಲು ಹೋಗಬೇಡಿ. ನಿಷ್ಠಾವಂತ ವ್ಯಕ್ತಿಗಳನ್ನು ಮಾತ್ರವೇ ಆಯ್ಕೆ ಮಾಡಿ. ಹೀಗಿದ್ದರೆ ಮಾತ್ರ ನೀವು ನಿಮ್ಮ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯ. ಪಾರ್ಟ್ನರ್‌ನ ತಪ್ಪು ಆಯ್ಕೆಯಿಂದ ನೀವು ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದಿದ್ದಾರೆ ಚಾಣಕ್ಯ.
ನಷ್ಟದ ಬಗ್ಗೆ ಭಯಪಡಬಾರದು: ಉದ್ಯಮ ಅಂದ ಮೇಲೆ ಅಲ್ಲಿ ಲಾಭ ನಷ್ಟ ಇದ್ದೇ ಇರುತ್ತದೆ. ನಷ್ಟ ಅದ್ರೆ ಜೀವನವೇ ಸಂಪೂರ್ಣ ಹಾಳಾದಂತೆ ಎಂಬ ಭಯದಿಂದ ಅನೇಕರು ತಮ್ಮಲ್ಲಿ ಉತ್ತಮ ಸ್ಟಾರ್ಟ್‌ಅಪ್ ಯೋಜನಗಳಿದ್ದರೂ ಅದನ್ನು ಕಾರ್ಯಗತಗೊಳಿಸಲು ಹಿಂದೇಟು ಹಾಕುತ್ತಾರೆ. ಹೀಗಿದ್ದರೆ ಯಶಸ್ಸನ್ನು ಸಾಧಿಸಲು ಖಂಡಿತವಾಗಿಯೂ ಸಾಧ್ಯವಿಲ್ಲ. ಜೀವನದಲ್ಲಿ ಏನಾದರೂ ಸಾಧಿಸುವ ಯೋಚನೆಯಲ್ಲಿದ್ದರೆ ನಷ್ಟದ ಭಯವನ್ನು ಬಿಟ್ಟು ಒಂದೊಳ್ಳೆ ಸ್ಟಾರ್ಟ್‌ಅಪ್ ಆರಂಭಿಸಿ. ನಷ್ಟ ಹಾಗೂ ಸೋಲುಗಳಿಗೆ ಭಯಪಡಬೇಡಿ, ಅದರಿಂದ ಒಳ್ಳೆಯ ಪಾಠ ಕಲಿತು, ಇನ್ನಷ್ಟು ಬೆಳೆಯಲು ಪ್ರಯತ್ನಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ