Children’s Behaviour: ಮಕ್ಕಳ ನಡೆ-ನುಡಿ ಹೇಗಿರಬೇಕು? ಪೋಷಕರ ಕರ್ತವ್ಯವೇನು?
ಮಾತನಾಡುವುದು ಕೂಡ ಒಂದು ಕಲೆ, ಅದೇ ಸಮಯದಲ್ಲಿ ನಾವು ಮಾತಿನಲ್ಲಿ ಯಾವ ರೀತಿಯ ಪದವನ್ನು ಬಳಕೆ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ನಿಂತಿರುತ್ತದೆ.

ಮಾತನಾಡುವುದು ಕೂಡ ಒಂದು ಕಲೆ, ಅದೇ ಸಮಯದಲ್ಲಿ ನಾವು ಮಾತಿನಲ್ಲಿ ಯಾವ ರೀತಿಯ ಪದವನ್ನು ಬಳಕೆ ಮಾಡುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ನಿಂತಿರುತ್ತದೆ. ಮಕ್ಕಳು ಹಿರಿಯರು ಅಥವಾ ಯಾರ ಬಳಿಯಾದರೂ ಮಾತನಾಡುವಾಗ ವಿಧೇಯತೆಯಿಂದ ಮಾತನಾಡಬೇಕು. ವ್ಯಕ್ತಿತ್ವ, ಒಳ್ಳೆಯ ನಡತೆ ಎಂಬುದು ಶ್ರೀಮಂತಿಕೆಯೊಟ್ಟಿಗೆ ಬರುವುದಲ್ಲ, ಬಡವ, ಶ್ರೀಮಂತನೆನ್ನದೆ ಎಲ್ಲರಿಗೂ ಸಮನಾಗಿ ಧಕ್ಕುವಂಥದ್ದು. ಬೆಳೆಯುವ ಪೈರು ಮೊಳಕೆಯಲ್ಲೇ ಎನ್ನುವಂತೆ ಮಕ್ಕಳಿಗೆ ಒಳ್ಳೆಯದ್ಯಾವುದು, ಕೆಟ್ಟದ್ಯಾವುದು ಎಂಬುದನ್ನು ತಿಳಿ ಹೇಳಬೇಕು.
ವಿಧೇಯತೆ ಇರಬೇಕು: ಮಕ್ಕಳು ವಿಧೇಯರಾಗಿರಬೇಕು, ಪೋಷಕರು ಅಥವಾ ಹಿರಿಯರು ಹೇಳುವ ಮಾತನ್ನು ಕೇಳುವಂತಿರಬೇಕು. ಮಕ್ಕಳಿಗೆ ಗಿಫ್ಟ್ ಕೊಡುವುದು ಉತ್ತಮ ಅಭ್ಯಾಸವೇ?: ಮಕ್ಕಳಿಗೆ ಆಮಿಷ ಒಡ್ಡುವುದು ಒಳ್ಳೆಯ ಅಭ್ಯಾಸವಲ್ಲ, ಮಕ್ಕಳಿಗೆ ಈ ಮಾತನ್ನು ಕೇಳಿದರೆ ಅದು ಕೊಡಿಸುತ್ತೇನೆ, ಇದು ಕೊಡಿಸುತ್ತೇನೆ ಎಂಬ ಆಮಿಷವೊಡ್ಡಬೇಡಿ, ನಂತರ ಅದೇ ಪರಿಪಾಠ ಮುಂದುವರೆಯುತ್ತದೆ. ಒಂದೊಮ್ಮೆ ಅವರ ಆಸೆಯನ್ನು ಪೂರೈಸಲು ಸಾಧ್ಯವಾಗದಿದ್ದರೆ ಮನಸ್ತಾಪಗಳು ಹೆಚ್ಚಾಗುತ್ತವೆ. ಇವೆಲ್ಲವನ್ನೂ ಬದಿಗಿಟ್ಟು ಮಕ್ಕಳಿಗೆ ವಿನಯಶೀಲತೆಯನ್ನು ಕಲಿಸಬೇಕು.
ಮಕ್ಕಳು ತಪ್ಪು ಮಾಡಿದಾಗ ತಿದ್ದಿ ಹೇಳಬೇಕು: ಮಕ್ಕಳು ಯಾವುದೋ ತಪ್ಪು ಮಾಡಿದ ತಕ್ಷಣ ಅವರನ್ನು ಹೀಯಾಳಿದೇ, ಹೊಡೆಯದೇ ಶಾಂತವಾಗಿ ಕುಳಿತುಕೊಂಡು ತಪ್ಪುಗಳನ್ನು ವಿವರಿಸಿ ಆ ರೀತಿಯ ತಪ್ಪುಗಳು ಮುಂದೆ ಆಗದಂತೆ ನೋಡಿಕೊಳ್ಳಬೇಕು.
ಕೋಪದಿಂದ ಏನೂ ಆಗದು: ಯಾವುದೇ ವಿಚಾರವಿರಲಿ ಕೋಪದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ, ಒಂದೊಮ್ಮೆ ಮಕ್ಕಳು ಕೋಪ ಮಾಡಿಕೊಂಡರೂ ಪೋಷಕರು ಶಾಂತಿಯಿಂದ ಬುದ್ಧಿವಾದ ಹೇಳಬೇಕು. ಸತ್ಯ, ಮಿಥ್ಯಗಳ ಬಗ್ಗೆ ಅರಿವು ಮೂಡಿಸಬೇಕು.
ಮಧ್ಯೆ ಮಾತನಾಡುವುದು: ಪೋಷಕರು ಮಾತನಾಡುವಾಗ ಹಲವು ಮಕ್ಕಳು ಅವರ ಮಧ್ಯೆ ಬಂದು ಮಾತನಾಡುವ ಅಭ್ಯಾಸ ಹೊಂದಿರುತ್ತಾರೆ, ಅದನ್ನು ತಪ್ಪಿಸಬೇಕು, ಯಾರೇ ಮಾತನಾಡುತ್ತಿರಲಿ ಅದನ್ನು ತಾಳ್ಮೆಯಿಂದ ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು.
ಸಹಾಯ ಮಾಡುವ ಮನೋಭಾವ: ಮಕ್ಕಳಿಗೆ ಚಿಕ್ಕವರಿದ್ದಾಗಿನಿಂದಲೂ ಸಹಾಯ ಮಾಡುವ ಮನೋಭಾವವನ್ನು ಬೆಳೆಸಬೇಕು, ಯಾರೇ ಕಷ್ಟದಲ್ಲಿರಲಿ ಅವರಿಗೆ ಸಹಾಯ ಮಾಡಬೇಕು ಎಂಬ ವಿಚಾರವನ್ನು ತಲೆಯಲ್ಲಿ ತುಂಬಬೇಕು.
ಮಕ್ಕಳನ್ನು ಟಿವಿ, ಮೊಬೈಲ್ ಗೀಳಿನಿಂದ ಹೊರ ತರುವುದು ಹೇಗೆ?: ಮಕ್ಕಳನ್ನು ಓದಲು ಬಿಟ್ಟು, ಅಥವಾ ವ್ಯಾಯಾಮ ಮಾಡು ಎಂದು ಹೇಳಿ ತಾವು ಟಿವಿ ಮುಂದೆ ಕುಳಿತುಕೊಳ್ಳುತ್ತಾರೆ,. ಮೊದಲು ಇದನ್ನು ತಪ್ಪಿಸಬೇಕು, ಪೋಷಕರು ಕೂಡ ಮಕ್ಕಳ ಜತೆ ವ್ಯಾಯಾಮ ಮಾಡಬೇಕು, ಮಕ್ಕಳು ಟಿವಿ ನೋಡುವಾಗಲೇ ಟಿವಿ ನೋಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು.