ಈ ಜೋಡಿ ಮದುವೆಯಾಗಿ 30 ವರ್ಷವಾದರೂ ಜಗಳವನ್ನೇ ಆಡಿಲ್ಲವಂತೆ: ಸುಂದರ ಸಾಂಗತ್ಯಕ್ಕೆ ನೀಡಿದ ಟಿಪ್ಸ್ ಇಲ್ಲಿದೆ ನೋಡಿ
ಮದುವೆ, ಬಂಧ ಎಂದರೆ ಅಧಿಕಾರದ ಹಂಚಿಕೆಯಲ್ಲ. ಒಬ್ಬರಿಗೊಬ್ಬರು ಹೆಗಲಾಗಿ ನಿಲ್ಲುವುದು. ಸಮಸ್ಯೆ ಇಬ್ಬರದ್ದೂ ಎಂದು ನಿಭಾಯಿಸಬೇಕು.
ಮದುವೆ, ದಾಂಪತ್ಯ ಪ್ರತೀ ಹೆಣ್ಣು ಮತ್ತು ಗಂಡಿಗೆ ಜೀವನದ ಅತ್ಯಮೂಲ್ಯ ದಿನಗಳು. ಜಂಟಿ ಕನಸುಗಳನ್ನು ಹೊತ್ತು ಜೊತೆಯಾಗಿ ನೆರವೇರಿಸುವ ಬದುಕು ಅಂದುಕೊಂಡಷ್ಟು ಸುಲಭವಲ್ಲ. ಬೇರೆ ಬೇರೆ ರೀತಿಯ ಮನಸ್ಥಿತಿಯುಳ್ಳ ಎರಡು ಜೀವಗಳು ಜೀವನದ ಅತೀ ಹೆಚ್ಚು ದಿನಗಳ ಕಾಲ ಒಟ್ಟಿಗೆ ಇರಬೇಕೆಂದರೆ ಹೊಂದಾಣಿಕೆ ಮುಖ್ಯ. ತಾನಂದುಕೊಂಡಂತೆ ನಡೆಯಲಿ ಎನ್ನುವ ಭಾವ ಎಲ್ಲರಲ್ಲೂ ಇರುತ್ತದೆ. ಆದರೂ ಅದನ್ನು ಹತ್ತಿಕ್ಕಿಕೊಂಡು ಜೊತೆಯಾಗಿ ನಿರ್ಧಾರ ತೆಗೆದುಕೊಂಡು ಬದುಕುವುದು ಒಂದು ಕಲೆ. ಜೀವನದ ಬಹುತೇಕ ದಿನಗಳನ್ನು ಒಟ್ಟಿಗೆ ಬದುಕುವಾಗ ನೂರಾರು ಸವಾಲುಗಳು ಎದುರಾಗುತ್ತವೆ. ಇಬ್ಬರ ನಡುವೆ ಜಗಳ, ಮನಸ್ಥಾಪ, ಕೋಪ, ಮುನಿಸು, ಹತಾಶೆಯ ಭಾವನೆ ಎಲ್ಲವೂ ಸಹಜ. ಆದರೆ ಅದನ್ನೂ ಕೂಡ ಜೊತೆಯಾಗಿ ನಿಭಾಯಿಸಿದರೆ ಬದುಕು ಸುಂದರ. ಇಬ್ಬರ ನಡುವೆ ಜಗಳವೇ ನಡೆಯಲು ಸಾಧ್ಯವಿಲ್ಲ ಎಂದರೆ ನಂಬುವುದು ತುಸು ಕಷ್ಟದ ವಿಷಯವೇ ಸರಿ. ಆದರೆ ಆ ರೀತಿ ಬದುಕು ನಡೆಸುವವರು ಇದ್ದಾರೆ ಎಂದರೆ ನೀವು ನಂಬಲೇಬೇಕು. ಮದುವೆಯಾದ 30 ವರ್ಷಗಳಲ್ಲಿ ಒಮ್ಮೆಯೂ ಜಗಳವಾಡಿಲ್ಲ ಎಂದು ಹೇಳಿಕೊಂಡ ವರ್ಜೀನಿಯಾ ದಂಪತಿಗಳು ತಮ್ಮ ಸಂಬಂಧದ ಹಿಂದಿನ ರಹಸ್ಯಗಳನ್ನು ತೆರೆದಿಟ್ಟಿದ್ದಾರೆ.
53ರ ಹರೆಯದ ಹನ್ನಾ ಮತ್ತು ಬ್ಲೇರ್ ಕೀಲಿ ಇಬ್ಬರೂ ಸಂದರ್ಭೋಚಿತವಾಗಿ ಒಬ್ಬರಿಗೊಬ್ಬರು ಅಸಮಾಧಾನಗೊಳ್ಳುವುದನ್ನು ಒಪ್ಪಿಕೊಂಡಿದ್ದಾರೆ, ಆದರೆ ಅವರ ಕೋಪವು ಪೂರ್ಣ ಪ್ರಮಾಣದ ಹೋರಾಟದಲ್ಲಿ ಉಲ್ಬಣಗೊಳ್ಳದಂತೆ ನೋಡಿಕೊಳ್ಳುವ ಮೂಲಕ ಅವರು ತಮ್ಮ ನಡುವೆ ಉತ್ತಮ ಹೊಂದಾಣಿಕೆ ಇರಿಸಿಕೊಂಡಿದ್ದಾರೆ.
ಸಂಬಂಧಗಳು ಒಂದು ಕೌಶಲ್ಯ, ಉಡುಗೊರೆಯಲ್ಲ ಎನ್ನುವ ದಂಪತಿ ಏಳು ಮಕ್ಕಳನ್ನು ಹೊಂದಿದ್ದಾರೆ. ಮಕ್ಕಳ ಸುಂದರ ಬದುಕಿಗೂ ಇವರ ಜೀವನ ಮಾದರಿಯಾಗಿದೆ ಎನ್ನುವ ದಂಪತಿ ಸಾಂಗತ್ಯದಲ್ಲಿ ಅಳವಡಿಸಿಕೊಳ್ಳಬೇಕಾದ ಅಂಶಗಳ ಬಗ್ಗೆ ಹೇಳಿದ್ದಾರೆ ಇಲ್ಲಿದೆ ನೋಡಿ,
- ದಾಂಪತ್ಯ ಬದುಕಿಗೆ ಸಂವಹನವು ಅತೀ ಅಗತ್ಯವಾಗಿದೆ. ಜಗಳ, ವಾದ ಎಲ್ಲವನ್ನೂ ಕುಳಿತು ಮಾತನಾಡಿದರೆ ಬಗೆಹರಿಸಿಕೊಳ್ಳಬಹುದು.
-
ಇಬ್ಬರೂ ದೂರದಲ್ಲಿದ್ದರೂ ದಿನಕ್ಕೊಂದು ಬಾರಿಯಾದರೂ ಸಂಪರ್ಕಿಸಿ. ಇದರಿಂದ ಇಬ್ಬರ ನಡುವಿನ ಬಂಧಕ್ಕೆ ಧಕ್ಕೆಯಾಗದು. ಕನಿಷ್ಟ 10 ನಿಮಿಷವಾದರೂ ಮಾತನಾಡಿ, ಕುಶಲೋಪರಿ ವಿಚಾರಿಸಿಕೊಳ್ಳಿ.
-
ಪತ್ರ ಹಿಂದಿನ ಕಾಲದ ಸಂವಹನ ಪದ್ಧತಿಯಾಗಿತ್ತು. ಈಗೆಲ್ಲ ಫೋನ್, ಸಾಮಾಜಿಕ ಜಾಲತಾಣಗಳ ಬಳಕೆಯೇ ಹೆಚ್ಚು. ಆದರೆ ಪ್ರೀತಿಯಲ್ಲಿ ಖುಷಿ ಹೆಚ್ಚಬೇಕೆಂದರೆ ನಿಮ್ಮ ಒಲವಿಗೆ ಪತ್ರ ಬರೆಯಿರಿ. ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ.
-
ನಿಮ್ಮ ಒತ್ತಡಗಳನ್ನು ಸಂಗಾತಿಯ ಮೇಲೆ ತೋರಿಸಬೇಡಿ. ಯಾರದೋ ಮೇಲಿನ ಸಿಟ್ಟಿಗೆ ಸಂಗಾತಿಯೆದುರು ಧ್ವನಿ ಎತ್ತಿ ಮಾತನಾಡಿದರೆ ಮನಸ್ಸು ಒಡೆಯುವ ಸಾಧ್ಯತೆಯೇ ಹೆಚ್ಚು. ಕೋಪವಿದ್ದರೆ ಮಾತನಾಡಲೇಬೇಡಿ. ಕೊಂಚ ಸಮಯ ಸುಮ್ಮನಿದ್ದು ನಂತರ ಪ್ರತಿಕ್ರಿಯಿಸಿ. ವಾದದಿಂದ ಸಮಸ್ಯೆ ಸರಿಯಾಗದು. ಆದಷ್ಟು ತಾಳ್ಮೆವಹಿಸಿ.
-
ಮದುವೆ, ಬಂಧ ಎಂದರೆ ಅಧಿಕಾರದ ಹಂಚಿಕೆಯಲ್ಲ. ಒಬ್ಬರಿಗೊಬ್ಬರು ಹೆಗಲಾಗಿ ನಿಲ್ಲುವುದು. ಸಮಸ್ಯೆ ಇಬ್ಬರದ್ದೂ ಎಂದು ನಿಭಾಯಿಸಬೇಕು. ಕೋಪವನ್ನು ಅಂದಿನ ದಿನ ಮುಗಿಯುವದರೊಳಗೆ ಬಗೆಹರಿಸಿಕೊಳ್ಳಿ. ಮರುದಿನ ಹೊಸ ದಿನವಾಗಿರಲಿ.
-
ಇಬ್ಬರೂ ಜೊತೆಯಾದರೆ ಎಲ್ಲವನ್ನೂ ಸಾಧಿಸಬಲ್ಲೆವು ಎನ್ನುವ ನಂಬಿಕೆಯಿರಲಿ. ಇದು ಒಬ್ಬರನ್ನೊಬ್ಬರು ಬಲವಾಗಿ ನಂಬಿದ್ದರೆ ಮಾತ್ರ ಸಾಧ್ಯ. ಜನರ ಟೀಕೆಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ಇಬ್ಬರ ನಡುವಿನ ಬಾಂಧವ್ಯತೆಯ ಬೇರು ಗಟ್ಟಿಯಾಗಿದ್ದರೆ ಸಾಕು.
ಇದನ್ನೂ ಓದಿ:
Relationship Tips: ದಾಂಪತ್ಯದಲ್ಲಿ ಪತಿಯೊಂದಿಗೆ ಎಂದಿಗೂ ಈ ವಿಚಾರಗಳ ಬಗ್ಗೆ ಚರ್ಚಿಸಬೇಡಿ