
ಹಿಂದೂ ಧರ್ಮದ ಪವಿತ್ರ ಹಬ್ಬಗಳಲ್ಲಿ ದೀಪಾವಳಿ (Deepavali) ಕೂಡ ಒಂದು. ಈ ಹಬ್ಬ ಕತ್ತಲೆಯ ವಿರುದ್ಧ ಬೆಳಕಿನ ವಿಜಯ ಮತ್ತು ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ ಹಾಗೂ ಅಜ್ಞಾನದ ವಿರುದ್ಧ ಜ್ಞಾನದ ವಿಜಯವನ್ನು ಸಂಕೇತಿಸುತ್ತದೆ. ಈ ಬೆಳಕಿನ ಹಬ್ಬವನ್ನು ಪ್ರತಿ ವರ್ಷ ಕಾರ್ತಿಕ ಮಾಸದ 15 ನೇ ದಿನದಂದು ಆಚರಿಸಲಾಗುತ್ತದೆ. ಬೆಳಕಿನ ಹಬ್ಬ ದೀಪಾವಳಿ ಎಂದಾಕ್ಷಣ ನೆನಪಾಗುವುದೇ ದೀಪ, ಪಟಾಕಿ ಸದ್ದು, ಗೂಡು ದೀಪಗಳು, ಸಿಹಿ ತಿಂಡಿಗಳು. ಈ ಬಾರಿಯ ಹಬ್ಬಕ್ಕೆ ಇನ್ನೂ ಕೆಲವು ದಿನಗಳು ಮಾತ್ರ ಬಾಕಿಯಿದ್ದು, ಭರದಿಂದ ಸಿದ್ಧತೆಗಳು ನಡೆಯುತ್ತಿದೆ. ಹೀಗೆ ಭಾರತದಾದ್ಯಂತ ಬಹಳ ವಿಜೃಂಭಣೆಯಿಂದ ದೀಪಾವಳಿ ಹಬ್ಬವನ್ನು ಆಚರಿಸುವಂತೆ ಹೊರ ದೇಶಗಳಲ್ಲೂ ಬೆಳಕಿನ ಹಬ್ಬವನ್ನು ಬಲು ಜೋರಾಗಿ ಆಚರಿಸಲಾಗುತ್ತದೆ. ಆ ದೇಶಗಳು ಯಾವುವು ಎಂಬ ಮಾಹಿತಿ ಇಲ್ಲಿದೆ ನೋಡಿ.
ನೇಪಾಳ: ನೇಪಾಳದಲ್ಲಿ, ದೀಪಾವಳಿಯನ್ನು ತಿಹಾರ್ ಅಥವಾ ಸ್ವಾಂತಿ ಎಂದು ಕರೆಯಲಾಗುತ್ತದೆ. ಭಾರತದಂತೆಯೇ, ನೇಪಾಳವು ಐದು ದಿನಗಳ ಕಾಲ ದೀಪಾವಳಿ ಹಬ್ಬವನ್ನು ಹಬ್ಬವನ್ನು ಆಚರಿಸುತ್ತದೆ. ಮೊದಲ ದಿನ, ಜನರು ಕಾಗೆಗಳಿಗೆ ಮತ್ತು ಎರಡನೇ ದಿನ, ನಾಯಿಗಳಿಗೆ ಆಹಾರವನ್ನು ನೀಡುತ್ತಾರೆ. ಮೂರನೇ ದಿನ, ಲಕ್ಷ್ಮಿ ದೇವಿಯನ್ನು ಪೂಜಿಸುತ್ತಾರೆ ಮತ್ತು ಇಲ್ಲಿ ನಾಲ್ಕನೇ ದಿನವನ್ನು ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಐದನೇ ದಿನ, ಭಾಯಿ ಟಿಕಾವನ್ನು ಆಚರಿಸಲಾಗುತ್ತದೆ, ಇದನ್ನು ಭಾಯಿ ದೂಜ್‌ನಂತೆ ಆಚರಿಸಲಾಗುತ್ತದೆ.
ಸಿಂಗಾಪುರ: ಭಾರತದಂತೆಯೇ ಸಿಂಗಾಪುರದಲ್ಲೂ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ವಿಶೇಷವೆಂದರೆ ಇಲ್ಲಿ ಬೆಳಕಿನ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ರಜೆ ಕೂಡ ಇದೆ. ಇಲ್ಲಿ ಲಿಟಲ್ ಇಂಡಿಯಾ ಎಂಬ ಪ್ರದೇಶವಿದ್ದು, ಇಲ್ಲಿ ಭಾರತೀಯರೆಲ್ಲಾ ಒಟ್ಟಾಗಿ ಪಟಾಕಿಯನ್ನು ಸಿಡಿಸದೆ ದೀಪ ಹಚ್ಚುವ ಹಾಗೂ ಸಿಹಿ ಹಂಚುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.
ಶ್ರೀಲಂಕಾ: ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿಯೂ ದೀಪಾವಳಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿನ ತಮಿಳರು ರಾವಣನ ಮೇಲೆ ಶ್ರೀರಾಮ ವಿಜಯ ಸಾಧಿಸಿದ ಸಂಕೇತವಾಗಿ ದುಷ್ಟರ ಮೇಲೆ ಒಳ್ಳೆಯತನದ ವಿಜಯದ ಆಚರಣೆಯಾಗಿ ಹಬ್ಬವನ್ನು ಆಚರಿಸುತ್ತಾರೆ. ಇಲ್ಲಿ ದೀಪಾವಳಿ ಸಂದರ್ಭದಲ್ಲಿ ಜನ ಮಣ್ಣಿನ ದೀಪಗಳನ್ನು ಹಾಗೂ ಮೇಣದ ಬತ್ತಿಗಳನ್ನು ಬೆಳಗುತ್ತಾರೆ.
ಮಲೇಷ್ಯಾ: ಭಾರತದಲ್ಲಿ ವಿಜೃಂಭಣೆಯಿಂದ ದೀಪಾವಳಿ ಹಬ್ಬವನ್ನು ಆಚರಿಸುವಂತೆ ಮಲೇಷ್ಯಾದಲ್ಲೂ ಆಚರಿಸಲಾಗುತ್ತದೆ ಇಲ್ಲಿ ಈ ಹಬ್ಬವನ್ನು ಹರಿ ದೀಪಾವಳಿ ಹೆಸರಿನಲ್ಲಿ ಆಚರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಬೀದಿ ಬೀದಿಗಳಿಂದ ಹಿಡಿದು ಪ್ರತಿ ಮನೆಗಳನ್ನೂ ದೀಪಗಳು ಹಾಗೂ ವಿವಿಧ ವರ್ಣರಂಜಿತ ವಸ್ತುಗಳಿಂದ ಅಲಂಕರಿಸಲಾಗುತ್ತದೆ. ಅಷ್ಟೇ ಅಲ್ಲದೆ ಈ ಹಬ್ಬದ ಸಂದರ್ಭದಲ್ಲಿ ಜನರೆಲ್ಲರೂ ಒಟ್ಟು ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ.
ಮಾರಿಷಸ್: ಭಾರತದಂತೆ ಮಾರಿಷಸ್‌ನಲ್ಲಿಯೂ ದೀಪಾವಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಾರಿಷಸ್ ಸಂಸ್ಕೃತಿಯಲ್ಲಿ ಭಾರತದ ಪ್ರಭಾವ ಹಾಸುಹೊಕ್ಕಾಗಿದ್ದು, ಈ ದ್ವೀಪದಲ್ಲೂ ಕೂಡಾ ಹಿಂದೂ ಹಬ್ಬವಾದ ದೀಪಾವಳಿಯನ್ನು ಬಹಳ ವೈಭವದಿಂದ ಆಚರಿಸಲಾಗುತ್ತದೆ. ಅಷ್ಟೇ ಅಲ್ಲದೆ ಇಲ್ಲಿನ ಜನರು ಹೋಳಿ ಮತ್ತು ಮಹಾ ಶಿವರಾತ್ರಿ ಹಬ್ಬವನ್ನು ಕೂಡಾ ಆಚರಿಸುತ್ತಾರೆ.
ಥೈಲ್ಯಾಂಡ್: ಥೈಲ್ಯಾಂಡ್‌ನಲ್ಲಿಯೂ ದೀಪಾವಳಿಯನ್ನು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಇಲ್ಲಿ ದೀಪಾವಳಿ ಹಬ್ಬದಂದು ಬಾಳೆ ಎಲೆಗಳಿಂದ ದೀಪಗಳನ್ನು ತಯಾರಿಸಿ ರಾತ್ರಿಯಲ್ಲಿ ಆ ದೀಪಗಳನ್ನು ನದಿಯಲ್ಲಿ ಬಿಡುವ ಸಂಪ್ರದಾಯವಿದೆ.
ಅಮೆರಿಕ: ಅಮೇರಿಕಾದಲ್ಲಿ ಭಾರತೀಯ ಮೂಲದವರು ಹೆಚ್ಚಿದ್ದು, ಇವರೆಲ್ಲಾ ಜೊತೆ ಸೇರಿ ಪ್ರತಿವರ್ಷ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಅಷ್ಟೇ ಅಲ್ಲದೆ ಹಿಂದೂಗಳ ಧಾರ್ಮಿಕ ನಂಬಿಕೆಗೆ ಗೌರವವನ್ನು ನೀಡಲು ಅಮೇರಿಕಾದಲ್ಲಿ ದೀಪಾವಳಿ ಹಬ್ಬಕ್ಕೆ ರಾಷ್ಟ್ರೀಯ ರಜಾದಿನವನ್ನು ಕೂಡಾ ನೀಡುತ್ತದೆ. ಹಿಂದೂಗಳು ಮಾತ್ರವಲ್ಲದೆ ಅಮೇರಿಕಾದ ಇತರ ಸಮುದಾಯಗಳು ಕೂಡಾ ದೀಪಾವಳಿಯನ್ನು ಆಚರಿಸುತ್ತದೆ. ಅಮೇರಿಕಾದ ವೈಟ್ ಹೌಸ್ ಬಳಿಯೂ ದೀಪಾವಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಆಸ್ಟ್ರೇಲಿಯಾ: ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರು ಸಿಡ್ನಿ ಮತ್ತು ಮೆಲ್ಬೋರ್ನ್‌ನಂತಹ ನಗರಗಳಲ್ಲಿ ಒಗ್ಗೂಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಭಾರತೀಯ ಭಕ್ಷ್ಯಗಳನ್ನು ತಯಾರಿಸುವ ಮೂಲಕ ಬೆಳಕಿನ ಹಬ್ಬ ದೀಪಾವಳಿಯನ್ನು ಬಹಳ ವಿಶೇಷವಾಗಿ ಆಚರಿಸುತ್ತಾರೆ.
ಇದನ್ನೂ ಓದಿ: ಹಬ್ಬದ ಸಮಯದಲ್ಲಿ ಮನೆಯ ಗೋಡೆ ಹೊಸದರಂತೆ ಕಾಣಲು ಈ ಟಿಪ್ಸ್ ಅನುಸರಿಸಿ
ಫಿಜಿ: ಫಿಜಿಯಲ್ಲಿ ಅನಿವಾಸಿ ಭಾರತೀಯರು ಗಣನೀಯ ಸಂಖ್ಯೆಯಲ್ಲಿದ್ದು, ಇವರೆಲ್ಲಾ ಒಟ್ಟು ಸೇರಿ ಬಹಳ ವಿಜೃಂಭಣೆಯಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ. ವಿಶೇಷವಾಗಿ ಸುವಾ ಮತ್ತು ಲೌಟೋಕಾದಂತಹ ನಗರಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪಟಾಕಿ ಪ್ರದರ್ಶನಗಳನ್ನು ಆಯೋಜಿಸುತ್ತಾರೆ. ಮನೆಗಳಲ್ಲಿ ದೀಪಗಳನ್ನು ಬೆಳಗಿಸಿ ಭಾರತೀಯ ಖಾದ್ಯಗಳನ್ನು ತಯಾರಿಸಿ ಎಲ್ಲರಿಗೂ ಉಣಬಡಿಸುತ್ತಾರೆ.
ಯುನೈಟೆಡ್ ಕಿಂಗ್‌ಡಮ್: ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ದೀಪಾವಳಿಯನ್ನು ಅನೇಕ ನಗರಗಳಲ್ಲಿ, ವಿಶೇಷವಾಗಿ ಲಂಡನ್‌ನಲ್ಲಿ ಉತ್ಸಾಹದಿಂದ ಆಚರಿಸಲಾಗುತ್ತದೆ. ಇಲ್ಲಿ ನೆಲೆಸಿರುವ ಭಾರತೀಯರೆಲ್ಲರೂ ಹಬ್ಬದ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಅಲ್ಲದೆ ಇಂಗ್ಲೆಡಿನ ಲಿಸೇಸ್ಟರ್ ನಗರದಲ್ಲಿಯೂ ದೀಪಾವಳಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿ ಬೆಳಕಿನ ಹಬ್ಬದ ದಿನ ಇಡೀ ನಗರವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:32 pm, Mon, 13 October 25