
ಆರೋಗ್ಯಕರ ಜೀವನವನ್ನು ನಡೆಸಲು ಉತ್ತಮ ಆಹಾರದಂತೆ ಉತ್ತಮ ನಿದ್ರೆಯೂ (sleep) ಸಹ ತುಂಬಾನೇ ಮುಖ್ಯ. ಉತ್ತಮ ನಿದ್ರೆಯು ಮನಸ್ಸು ಮತ್ತು ದೇಹವನ್ನು ರಿಫ್ರೆಶ್ ಮಾಡುತ್ತದೆ. ಅದಕ್ಕಾಗಿಯೇ ತಜ್ಞರು ಪ್ರತಿಯೊಬ್ಬರೂ 7 ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆ ಪಡೆಯಲೇಬೇಕು ಶಿಫಾರಸ್ಸು ಮಾಡೋದು. ಆದರೆ ಇಂದಿನ ಬ್ಯುಸಿ ಜೀವನದಲ್ಲಿ ಅನೇಕರಿಗೆ ಸರಿಯಾಗಿ ನಿದ್ರೆ ಮಾಡಲು ಸಮಯವೇ ಸಿಗೋದಿಲ್ಲ, ಇನ್ನೂ ಕೆಲವರಿಗೆ ಎಷ್ಟೇ ಪ್ರಯತ್ನಪಟ್ಟರೂ ರಾತ್ರಿ ಸರಿಯಾಗಿ ನಿದ್ರೆಯೇ ಬರೋದಿಲ್ಲ. ನಿಮಗೂ ಕೂಡ ಇದೇ ರೀತಿ ರಾತ್ರಿ ಮಲಗಿದಾಗ ಸುಮಾರು ಹೊತ್ತಿನವರೆಗೆ ನಿದ್ರೆಯೇ ಬರೋದಿಲ್ವಾ? ಹಾಗಿದ್ರೆ ಈ ಒಂದಷ್ಟು ಸಲಹೆಗಳನ್ನು ಪಾಲಿಸುವ ಮೂಲಕ ಆರಾಮದಾಯಕವಾಗಿ ನಿದ್ರಿಸಿ.
ಅನೇಕ ಜನರು ಬೆಡ್ ಮೇಲೆ ಮಲಗಿದ ನಂತರವೂ ಒಂದೆರಡು ಗಂಟೆ ಫೋನ್ ನೋಡ್ತಾ ಸಮಯ ಕಳೆಯುತ್ತಾರೆ. ಇದು ನಿದ್ರಿಸಲು ಹೊರಟ ನಿಮ್ಮ ಗಮನವನ್ನು ಬೇರೆಡೆ ಸೆಳೆಯಬಹುದು. ಅಲ್ಲದೆ ಫೋನ್‌ನ ನೀಲಿ ಬೆಳಕು ನಿದ್ರೆ ಮತ್ತು ನಿದ್ರೆಯ ಚಕ್ರವನ್ನು ನಿಯಂತ್ರಿಸಲು ಸಹಾಯ ಮಾಡುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಮಲಗಲು ಹೊರಟಾಗ ಮೊಬೈಲ್ ಯೂಸ್ ಮಾಡ್ಬೇಡಿ. ಮಲಗುವ 1 ಗಂಟೆಯ ಮುನ್ನ ಫೋನ್ ನೋಡೋದನ್ನು ನಿಲ್ಲಿಸಿ, ಇದರಿಂದ ನೀವು ಮಲಗುವ ತಕ್ಷಣ ನಿದ್ರಿಸಲು ಸಾಧ್ಯವಾಗುತ್ತದೆ.
ಪ್ರತಿದಿನ, ಮಲಗುವ ಮುನ್ನ, ತಣ್ಣೀರಿನಿಂದ ಮುಖವನ್ನು ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದ ನಿಮಗೆ ಹೆಚ್ಚು ನಿರಾಳ ಭಾವನೆ ಉಂಟಾಗುತ್ತದೆ. ಇದರ ನಂತರ, ನೀವು ಮಲಗಿದರೆ, ನೀವು ತಕ್ಷಣ ನಿದ್ರಿಸುತ್ತೀರಿ. ಇದಲ್ಲದೆ ಮಲಗುವ ಮುನ್ನ ಪಾದಗಳನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಬೆಚ್ಚಗಿನ ನೀರು ದೇಹದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ
ಹಲವು ಬಾರಿ ಮಲಗಿದ ನಂತರ, ನಾವು ದಿನವಿಡೀ ಏನು ಮಾಡಿದೆವು, ನಾಳೆ ಬೆಳಿಗ್ಗೆ ಎದ್ದ ನಂತರ ಏನು ಮಾಡಬೇಕು, ಜೀವನದಲ್ಲಿ ಏನೆಲ್ಲಾ ನಡಿತಿದೆ ಅಂತೆಲ್ಲಾ ಸಾಕಷ್ಟು ಯೋಚನೆಗಳನ್ನು ಮಾಡ್ತಾರೆ. ಇದಲ್ಲದೆ ಅನೇಕರು ನಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸುತ್ತಾರೆ. ಇವು ನಿದ್ರೆಗೆ ಅಡ್ಡಿ ಪಡಿಸುತ್ತದೆ. ಅದಕ್ಕಾಗಿಯೇ ನಿದ್ರೆ ಮಾಡಲು ಹೊರಟಾಗ, ತಲೆಯಿಂದ ಎಲ್ಲಾ ಯೋಚನೆಗಳನ್ನು ತೆಗೆದು ಹಾಕಿ, ನಿರಾಳವಾಗಿರಿ, ಇದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಈ ಸಣ್ಣ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಂತೋಷದಾಯಕ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು
ಉಸಿರಾಟದ ವ್ಯಾಯಾಮಗಳು ನಿಮ್ಮ ಮೆದುಳಿನಲ್ಲಿ ರಕ್ತ ಪರಿಚಲನೆ ಮತ್ತು ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನೀವು ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ. ಉಸಿರಾಡುವಾಗ, ನಿಮ್ಮ ಒಳಬರುವ ಮತ್ತು ಹೊರಹೋಗುವ ಉಸಿರಾಟದ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಈ ಸಮಯದಲ್ಲಿ ನೀವು ನಿಮ್ಮ ಉಸಿರಾಟವನ್ನು ಸಹ ಎಣಿಸಬಹುದು; ಇದು ನಿಮಗೆ ಬೇಗನೆ ನಿದ್ರಿಸಲು ಸಹಾಯ ಮಾಡುತ್ತದೆ.
ಕ್ಯಾಮೊಮೈಲ್ ಚಹಾವು ಉತ್ತಮ ನಿದ್ರೆಯನ್ನು ಉಂಟುಮಾಡುವಲ್ಲಿ ಸಹಾಯಕವಾಗಿದೆ ಎಂದು ಪರಿಗಣಿಸಲಾಗಿದೆ. ಈ ವಿಶೇಷ ಚಹಾ ಸ್ನಾಯುಗಳು ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಅರಿಶಿನ ಹಾಲು ಆಯಾಸವನ್ನು ನಿವಾರಿಸುತ್ತದೆ ಮತ್ತು ಮೆಲಟೋನಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಮಲಗುವ 30 ನಿಮಿಷಗಳ ಮೊದಲು ಈ ಪಾನೀಯಗಳಲ್ಲಿ ಯಾವುದನ್ನಾದರೂ ಸೇವಿಸುವುದರಿಂದ ವೇಗವಾಗಿ ಮತ್ತು ಆಳವಾದ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ರಾತ್ರಿಯಲ್ಲಿ ಕೆಫೀನ್, ಚಹಾ ಅಥವಾ ಕಾಫಿಯನ್ನು ತಪ್ಪಿಸಿ, ಏಕೆಂದರೆ ಇವು ಮೆದುಳನ್ನು ಉತ್ತೇಜಿಸುತ್ತವೆ ಮತ್ತು ನಿದ್ರೆಯನ್ನು ಮತ್ತಷ್ಟು ಅಡ್ಡಿಪಡಿಸುತ್ತವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ