
ಪ್ರತಿಯೊಬ್ಬರ ಮನೆಯಲ್ಲೂ ಟಾಯ್ಲೆಟ್ ಮತ್ತು ಬಾತ್‌ರೂಮ್ (bathroom) ಸ್ವಚ್ಛತೆಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ಹೀಗೆ ಸ್ನಾನಗೃಹವನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಸಹ, ಕೆಟ್ಟ ವಾಸನೆ ಬರುತ್ತಲೇ ಇರುತ್ತವೆ. ಅದರಲ್ಲೂ ಮಲಗುವ ಕೋಣೆಗೆ ಅಟ್ಯಾಚ್ ಆಗಿರುವ ಬಾತ್‌ರೂಮಿನಿಂದ ವಾಸನೆ ಬರಲಾರಂಭಿಸಿದರೆ, ಇಡೀ ಕೋಣೆಯ ವಾತಾವರಣವೇ ಹಾಳಾಗಿಬಿಡುತ್ತದೆ. ಈ ಒಂದು ಸಮಸ್ಯೆಯಿಂದ ಮುಕ್ತಿ ಪಡೆಯಲು ಅನೇಕರು ದುಬಾರಿ ಫ್ರೆಶ್ನರ್‌ಗಳನ್ನು ಬಳಸುತ್ತಾರೆ. ಇವು ರಾಸಾಯನಿಕಯುಕ್ತವಾಗಿರುವುದರಿಂದ ಇವುಗಳನ್ನು ಅತಿಯಾಗಿ ಬಳಕೆ ಮಾಡೋದು ಒಳ್ಳೆಯದಲ್ಲ ಜೊತೆಗೆ ಇವು ವಾಸನೆಯಿಂದ ತಾತ್ಕಾಲಿಕ ಪರಿಹಾರವಷ್ಟೇ ಸಿಗುತ್ತದೆ. ಹೀಗಿರುವಾಗ ಈ ಕೆಲವೊಂದು ಕೆಲಸವನ್ನು ಮಾಡುವ ಮೂಲಕ ಬಾತ್‌ರೂಮಿನಿಂದ ಯಾವುದೇ ರೀತಿಯ ಕೆಟ್ಟ ವಾಸನೆ ಬಾರದಂತೆ ನೋಡಿಕೊಳ್ಳಬಹುದು.
ಸ್ನಾನಗೃಹಗಳಲ್ಲಿ ವಾಸನೆ ಬರಲು ತೇವಾಂಶವು ಕೂಡ ಒಂದು ಪ್ರಮುಖ ಕಾರಣವಾಗಿದೆ. ತೇವಾಂಶ ಸಂಗ್ರಹವಾಗುವುದರಿಂದ ಕೆಟ್ಟ ವಾಸನೆ ಬರುತ್ತದೆ. ಆದ್ದರಿಂದ, ಸ್ನಾನ ಮಾಡಿದ ನಂತರ ಅಥವಾ ಸ್ನಾನಗೃಹವನ್ನು ಬಳಸಿದ ನಂತರ, ತೇವಾಂಶ ಹೊರಬರಲು ಬಾಗಿಲು ಓಪನ್ ಮಾಡಿಟ್ಟುಕೊಳ್ಳಿ.ಅಥವಾ ಎಕ್ಸಾಸ್ಟ್ ಫ್ಯಾನ್ ಅನ್ನು ಸ್ವಲ್ಪ ಸಮಯದವರೆಗೆ ಆನ್ ಮಾಡಿ.
ಒದ್ದೆಯಾದ ಟವೆಲ್‌ಗಳಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬಹಳ ಬೇಗನೆ ಬೆಳೆಯುತ್ತವೆ. ಇದು ವಾಸನೆಗೆ ಪ್ರಮುಖ ಕಾರಣವಾಗಿದೆ. ಹಾಗಾಗಿ ಬಳಸಿದ ಟವೆಲ್‌ಗಳನ್ನು ಯಾವಾಗಲೂ ಹೊರಗೆ ಹೊರಗೆ ಬಿಸಿಲಿನಲ್ಲಿ ಅಥವಾ ಚೆನ್ನಾಗಿ ಗಾಳಿ ಇರುವ ಪ್ರದೇಶದಲ್ಲಿ ಒಣಗಿಸಿ.
ವಾಶ್ ಬೇಸಿನ್‌ಗಳು ಮತ್ತು ಶವರ್‌ಗಳ ಡ್ರೈನ್‌ಗಳಲ್ಲಿ (ಪೈಪ್‌ಗಳು) ಕೂದಲು, ಸೋಪ್ ಮತ್ತು ಕೊಳಕು ಸಂಗ್ರಹವಾಗುತ್ತವೆ. ಇವು ವಾಸನೆ ಬರಲು ಪ್ರಮುಖ ಕಾರಣ. ಆದ್ದರಿಂದ ವಾರಕ್ಕೊಮ್ಮೆ ಬಿಸಿನೀರು ಸುರಿಯುವ ಮೂಲಕ ಅಥವಾ ಡ್ರೈನ್ ಕ್ಲೀನರ್ ಬಳಸಿ ಒಳಚರಂಡಿ ಪೈಪ್‌ಗಳನ್ನು ಸ್ವಚ್ಛಗೊಳಿಸುತ್ತಿರಿ.
ಹೆಚ್ಚಿನ ಜನರು ಶೌಚಾಲಯ, ಬಾತ್‌ರೂಮ್ ಅನ್ನು ಸ್ವಚ್ಛಗೊಳಿಸುತ್ತಾರೆ ಆದರೆ ಸ್ವಚ್ಛಗೊಳಿಸಲು ಬಳಸುವ ಬ್ರಷ್‌ಗಳನ್ನು ಸ್ವಚ್ಛಗೊಳಿಸಲು ಮರೆತುಬಿಡುತ್ತಾರೆ. ಈ ಕೊಳಕು ಬ್ರಷ್‌ಗಳು ಸಹ ವಾಸನೆ ಬರಲು ಕಾರಣವಾಗುತ್ತದೆ. ಆದ್ದರಿಂದ ಬಾತ್‌ರೂಮ್ ಸ್ವಚ್ಛಗೊಳಿಸಿದ ನಂತರ ಟಾಯ್ಲೆಟ್ ಬ್ರಷ್‌ಗಳನ್ನು ಸಹ ಕ್ಲೀನ್ ಮಾಡಿ ಮತ್ತು ಅವುಗಳನ್ನು ಚೆನ್ನಾಗಿ ಒಣಗಿಸಿ.
ಇದನ್ನೂ ಓದಿ: ಅಡುಗೆಮನೆ ಸಿಂಕ್‌ನಿಂದ ಕೆಟ್ಟ ವಾಸನೆ ಬರುತ್ತಾ? ಜಸ್ಟ್ ಒಂದು ನಿಂಬೆಹಣ್ಣಿನಿಂದ ಈ ಸಮಸ್ಯೆಗೆ ಮುಕ್ತಿ ಪಡೆಯಬಹುದು
ಸ್ನಾನಗೃಹದ ಬಾಗಿಲಿನ ಬಳಿ ಇಡುವ ಇಡುವ ಮ್ಯಾಟ್ ನಿರಂತರವಾಗಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದಲೂ ಬಾತ್‌ರೂಮ್ ವಾಸನೆ ಬರಲು ಕಾರಣವಾಗುತ್ತದೆ. ಆದ್ದರಿಂದ ಮೂರು ನಾಲ್ಕು ದಿನಗಳಿಗೊಮ್ಮೆ ಮ್ಯಾಟ್ ಅನ್ನು ಸ್ವಚ್ಛಗೊಳಿಸಿ, ಬಿಸಿಲಿನಲ್ಲಿ ಒಣಗಿಸಿ.
ಅಡುಗೆ ಸೋಡಾ ಸ್ನಾನಗೃಹದ ವಾಸನೆಯನ್ನು ತೆಗೆದುಹಾಕಲು ಸರಳ ಮತ್ತು ಪರಿಣಾಮಕಾರಿ ಪರಿಹಾರವಾಗಿದೆ. ಇದು ವಾಸನೆಯನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ನೀವು ಸಣ್ಣ ಪ್ಲೇಟ್‌ನಲ್ಲಿ ಅಡುಗೆ ಸೋಡಾ ಹಾಕಿ ಅದನ್ನು ಸ್ನಾನಗೃಹದ ಮೂಲೆಯಲ್ಲಿ ಇಡಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕ ಸ್ಪ್ರೇ, ಫ್ರೆಶ್ನರ್‌ಗಳನ್ನು ಬಳಸುವ ಬದಲು, ನೀವು ಸ್ನಾನಗೃಹದಲ್ಲಿ ನಿಂಬೆ, ಲ್ಯಾವೆಂಡರ್ ಅಥವಾ ಯೂಕಲಿಪ್ಟಸ್‌ನಂತಹ ಕೆಲವು ಹನಿ ಸಾರಭೂತ ತೈಲಗಳನ್ನು ಸಿಂಪಡಿಸಬಹುದು, ಇದು ನೈಸರ್ಗಿಕ ತಾಜಾತನವನ್ನು ನೀಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ