Nag Panchami 2025: ನೋಡ ಬನ್ನಿ ಉತ್ತರ ಕರ್ನಾಟಕದ ನಾಗರ ಪಂಚಮಿ ಹಬ್ಬದ ಸಡಗರ
ನಾಗರ ಪಂಚಮಿ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ನಾಡಿನೆಲ್ಲೆಡೆ ಈ ಹಬ್ಬವನ್ನು ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಪಂಚಮಿಯನ್ನು ಬಹು ದೊಡ್ಡ ಹಬ್ಬ ಎಂದೇ ಪರಿಗಣಿಸಲಾಗುತ್ತದೆ. ಇಲ್ಲಿ ಬಹಳ ವಿಜೃಂಭನೆಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಾಗಾದರೆ ಉತ್ತರ ಕರ್ನಾಟಕ ಭಾಗದಲ್ಲಿ ಪಂಚಮಿ ಹಬ್ಬವನ್ನು ಯಾವ ರೀತಿ ಆಚರಿಸಲಾಗುತ್ತದೆ, ಇಲ್ಲಿನ ಆಚರಣೆಗಳೇನು ಎಂಬುದನ್ನು ನೋಡೋಣ ಬನ್ನಿ.

ನಾಡಿನೆಲ್ಲೆಡೆ ನಾಗರ ಪಂಚಮಿ (Nag Panchami) ಹಬ್ಬದ ಸಂಭ್ರಮ. ಶ್ರಾವಣ ಮಾಸದ ಮೊದಲ ಹಬ್ಬವಾಗಿರುವ ನಾಗರ ಪಂಚಮಿ ಮುಂಬರುವ ಎಲ್ಲಾ ಹಬ್ಬಗಳಿಗೂ ಆದಿಯಾಗಿದೆ. ವಿಶೇಷವಾಗಿ ಹೆಣ್ಣು ಮಕ್ಕಳು ಅತೀ ಸಡಗರ, ಸಂಭ್ರಮದಿಂದ ಆಚರಿಸುವ ಹಬ್ಬವೂ ಹೌದು. ಈ ಹಬ್ಬವನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ಪ್ರತಿಯೊಂದು ಊರಿನ ಆಚರಣೆ, ಸಂಪ್ರದಾಯ ಭಿನ್ನವಾಗಿರುತ್ತದೆ. ಆಯಾ ಸಂಪ್ರದಾಯಕ್ಕೆ ತಕ್ಕಂತೆ ಅಲ್ಲಿನ ಜನ ಹಬ್ಬವನ್ನು ಆಚರಿಸುತ್ತಾರೆ. ಹೀಗಿರುವಾಗ ಉತ್ತರ ಕರ್ನಾಟಕದ (North Karnataka) ಭಾಗದಲ್ಲಿ ನಾಗರ ಪಂಚಮಿ ಹಬ್ಬವನ್ನು ಯಾವ ರೀತಿ ಆಚರಿಸಲಾಗುತ್ತದೆ, ಅಲ್ಲಿನ ವಿಶಿಷ್ಟ ಆಚರಣೆಗಳೇನು ಎಂಬುದನ್ನು ತಿಳಿಯೋಣ ಬನ್ನಿ.
ಉತ್ತರ ಕರ್ನಾಟಕ ಭಾಗದ ನಾಗರ ಪಂಚಮಿ ಆಚರಣೆ:
ನಾಗರ ಪಂಚಮಿ ಉತ್ತರ ಕರ್ನಾಟಕದ ಕಡೆ ದೊಡ್ಡ ಹಬ್ಬವಾಗಿದೆ. ಈ ಹಬ್ಬವನ್ನು ಹೆಣ್ಣು ಮಕ್ಕಳ ಹಬ್ಬ ಅಂತಾನೇ ಕರೆಯುತ್ತಾರೆ. ಏಕೆಂದರೆ ಈ ಹಬ್ಬಕ್ಕಾಗಿ ಇಲ್ಲಿನ ಹೆಣ್ಣು ಮಕ್ಕಳು ವರ್ಷವಿಡೀ ಕಾಯುತ್ತಾರೆ. ಈ ಹಬ್ಬದಂದು ಮದುವೆಯಾದ ಹೆಣ್ಣು ಮಕ್ಕಳನ್ನು ತವರಿಗೆ ಕರೆದುಕೊಂಡು ಬರುವ, ತವರು ಮನೆಗೆ ಹೆಣ್ಣು ಮಕ್ಕಳನ್ನು ಆಹ್ವಾನಿಸಿ ಉಡುಗೊರೆ ನೀಡಿ ಗೌರವಿಸುವ ಸಂಪ್ರದಾಯವೂ ಇದೆ. ಅಲ್ಲದೆ ಈ ಹಬ್ಬದಂದು ಈ ಭಾಗದ ಕಡೆ ಸಹೋದರಿಯರು ಪ್ರೀತಿ, ವಾತ್ಸಲ್ಯಭಾವದಿಂದ ಸಹೋದರರನ್ನು ಹಾರೈಸುವುದು, ಅವರ ಆಶಿರ್ವಾದವನ್ನು ಪಡೆಯುವ ಪದ್ಧತಿಯು ನಡೆಯುತ್ತದೆ. ಜೊತೆಗೆ ಹೊಸ ಉಡುಗೆಯನ್ನುಟ್ಟು ಸಂಭ್ರಮದಿಂದ ಹೆಣ್ಮಕ್ಕಳು ಉಯ್ಯಾಲೆ ಜೀಕುವ ಅಂದರೆ ಜೋಕಾಲಿ ಆಡುವ, ತವರಿಗೆ ಬಂದ ಹೆಣ್ಣುಮಕ್ಕಳಿಗೆ ಚಕ್ಕುಲಿ, ಚೂಡ, ಅರಳು, ಉಂಡೆ ಇವೆಲ್ಲವನೀ ಕೊಬ್ಬರಿಯೊಟ್ಟಿಗಿಟ್ಟು ಕುಪ್ಪುಸದ ಕಣದೊಂದಿಗೆ ಬಾಗಿನ ನೀಡುವ ಸಂಪ್ರದಾಯವೂ ಇದೆ.
ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ನಾಗರ ಅಮವಾಸ್ಯೆಯಿಂದ ಆರಂಭವಾಗುತ್ತದೆ. ಅಮವಾಸ್ಯೆಯ ನಂತರ ಮೂರನೇ ದಿನ ರೊಟ್ಟಿ ಹಬ್ಬ, ನಾಲ್ಕನೇ ದಿನ ಚತುರ್ಥಿ, ಐದನೆಯ ದಿನ ಪಂಚಮಿ ಹಬ್ಬವನ್ನು ಆಚರಿಸುತ್ತಾರೆ. ಇಲ್ಲಿ ರೊಟ್ಟಿ ಪಂಚಮಿಯನ್ನು ಬಹಳ ವಿಶೇಷವಾಗಿ ಆಚರಿಸುವ ಸಂಪ್ರದಾಯವಿದೆ. ರೊಟ್ಟಿ ಹಬ್ಬದ ದಿನ ಮನೆ ಮನೆಗಳಲ್ಲಿ ಬಗೆಬಗೆಯ ಪಲ್ಯ, ಉಸುಳಿ, ಶೇಂಗಾ-ಗುರೆಳ್ಳು, ಚಟ್ನಿ,ಎಳ್ಳು ಹಚ್ಚಿದ ಸಜ್ಜೆ, ರೊಟ್ಟಿ, ತಯಾರಿಸಿ ಅಕ್ಕಪಕ್ಕದ ಮನೆಯವರೊಂದಿಗೆ ಪರಸ್ಪರ ಹಂಚಿಕೊಳ್ಳುತ್ತಾರೆ. ಇದನ್ನು ಬಾಂಧವ್ಯದ ರೂಪದಲ್ಲಿ ಹಂಚಲಾಗುತ್ತದೆ. ಹೀಗೆ ಮನೆ ಮನೆಗಳಿಗೆ ತೆರಳಿ ರೊಟ್ಟಿ ಬುತ್ತಿಯನ್ನು ಹಂಚಿ ಬರುವುದು ರೊಟ್ಟಿ ಪಂಚಮಿಯ ವಿಶಿಷ್ಟ ಸಂಪ್ರದಾಯವಾಗಿದೆ.
ರೊಟ್ಟಿ ಹಬ್ಬದ ನಂತರ ಶೇಂಗಾ ಉಂಡೆ, ಅಳ್ಳಿಟ್ಟು ಉಂಡೆ, ಎಳ್ಳುಂಡೆ ಹಾಗೂ ಚಕ್ಕುಲಿ ಸೇರಿದಂತೆ ಬಗೆ ಬಗೆಯ ಉಂಡೆಗಳನ್ನು ತಯಾರಿಸುತ್ತಾರೆ. ಈ ಉಂಡೆಗಳನ್ನು ಶ್ರಾವಣ ಮಾಸ ಪೂರ್ತಿ ತಿನ್ನುವುದು ವಾಡಿಕೆ. ಇನ್ನು ಪಂಚಮಿ ದಿನ ಬೇರೆ ಬೇರೆ ಊರುಗಳಲ್ಲಿರುವ ಸಂಬಂಧಿಕರಿಗೆ ಉಂಡೆ ಕೊಟ್ಟು ತರುವ ಸಂಪ್ರದಾಯವೂ ಇದೆ. ಹೌದು ಗೃಹಿಣಿಯರು ತಾವು ತಯಾರಿಸಿದ ತಯಾರಿಸಿದ ಖಾದ್ಯಗಳ ಬುತ್ತಿ ಕಟ್ಟಿ ಅಕ್ಕಪಕ್ಕದ ಮನೆಗಳಿಗೆ, ಬಂಧು ಮಿತ್ರರ ಮನೆಗಳಿಗೆ ಹಂಚಿ ಬರುತ್ತಾರೆ.
ಇದನ್ನೂ ಓದಿ: ಕರಾವಳಿಯಲ್ಲಿ ನಾಗರ ಪಂಚಮಿಯಂದು ಅರಶಿನ ಎಲೆಯ ಕಡುಬು ಮಾಡುವುದು ಯಾಕೆ? ಈ ಬಗ್ಗೆ ಅರ್ಚಕರು ಹೇಳೋದೇನು?
ಅಣ್ಣ-ತಂಗಿಯರ ಹಬ್ಬ:
ರೊಟ್ಟಿ ಹಬ್ಬದ ಮಾರನೇ ದಿನ ನಾಗರ ಕಲ್ಲಿಗೆ ಹಾಲೆರೆಯುವ ಸಂಪ್ರದಾಯ. ಪಂಚಮಿಯ ಎರಡನೇ ದಿನ ಮಹಿಳೆಯರು ದೇವಾಲಯಗಳಿಗೆ ಪೂಜೆ ಸಲ್ಲಿಸಿ, ನಾಗ ಬನಗಳಿಗೆ ತೆರಳಿ, ನಾಗರ ಕಲ್ಲಿಗೆ ಅಥವಾ ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸುತ್ತಾರೆ. ಇನ್ನೂ ಹುತ್ತದ ಮಣ್ಣನ್ನು ತಂದು ಅದರ ಜೊತೆಗೆ ಅಕ್ಕಿ ಹಿಟ್ಟಿನ್ನು ಸೇರಿಸಿ ನಾಗರ ಹಾವಿನ ಪ್ರತಿರೂಪ ಮಾಡಿ ಅದಕ್ಕೆ ಹಸಿ ಹಾಲು, ತುಪ್ಪ ಜೊತೆಗೆ ಅಕ್ಕಿ ಹಿಟ್ಟು ಮತ್ತು ಅರಳಿನಿಂದ ತನಿ ಎರೆಯುವುದು, ಎಳ್ಳಿನ ಚಿಗಳಿ, ತಂಬಿಟ್ಟು, ಸಿಹಿ ಕಡುಬುಗಳನ್ನು ನಾಗಪ್ಪನಿಗೆ ಅರ್ಪಿಸುವ ಪದ್ಧತಿಯೂ ಇದೆ. ಹೀಗೆ ನಾಗನಿಗೆ ತನಿ ಎರೆದ ಬಳಿಕ ಸಹೋದರರ ಹೊಟ್ಟೆ ತಣ್ಣಗಿರಲಿ, ಬೆನ್ನು ತಣ್ಣಗಿರಲಿ, ತವರು ಮನೆಗೆ ಒಳ್ಳೆಯದಾಗಲಿ ಎಂದು ಹೇಳಿ ಹೆಣ್ಣು ಮಕ್ಕಳು ಪ್ರಾರ್ಥಿಸುತ್ತಾರೆ. ಸಹೋದರರ ಒಳಿತನ್ನು ಕೋರುವ ಹಬ್ಬವಾದ್ದರಿಂದ ನಾಗರ ಪಂಚಮಿಯನ್ನು ಅಣ್ಣ-ತಂಗಿಯರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಂದು ಅಕ್ಕ ತಂಗಿಯರು ತಮ್ಮ ಸಹೋದರರಿಗೆ ಆಯಸ್ಸು, ಆರೋಗ್ಯ ಮತ್ತು ಸಕಲ ಸುಖ ನೀಡುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಇನ್ನೂ ತವರು ಮನೆಗೆ ಬಂದ ಹೆಣ್ಣು ಮಕ್ಕಳು ಗಂಡನ ಮನೆಯ ಆಯಾಸ, ಕಿರಿಕಿರಿಯನ್ನು ಮರೆತು, ಹೊಸ ಬಟ್ಟೆ, ಆಭರಣಗಳನ್ನು ತೊಟ್ಟು ಸಂಭ್ರಮಿಸುತ್ತಾರೆ. ತವರಿಗೆ ಬಂದ ಹೆಣ್ಣು ಮಕ್ಕಳು ಮನೆಯಲ್ಲಿ ತಯಾರಿಸಿದ ಸಿಹಿ ತಿಂಡಿಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡು, ಅತ್ತೆ ಮನೆಯ ಅನುಭವಗಳನ್ನು ಹಂಚಿಕೊಳ್ಳುತ್ತಾರೆ.
ಜೋಕಾಲಿ ಹಬ್ಬ:
ನಾಗರ ಪಂಚಮಿಯಂದು ಎಲ್ಲರೂ ಸೇರಿ ಜೋಕಾಲಿ ಆಡುವ ಪದ್ಧತಿಯೂ ಇದೆ. ಪೂಜೆ ಭೋಜನವಾದ ನಂತರ ಮನೆಯ ಹತ್ತಿರದ ಮರಗಳಿಗೆ ಜೋಕಾಲಿ ಕಟ್ಟಿ ಎಲ್ಲರೂ ಉಯ್ಯಾಲೆಯಾಡುವ ಪದ್ಧತಿ ಉತ್ತರ ಕರ್ನಾಟಕದಲ್ಲಿ ರೂಢಿಯಲ್ಲಿದೆ. ಒಟ್ಟಾರೆಯಾಗಿ ಇದು ಪ್ರೀತಿ, ವಿಶ್ವಾ, ಬಂಧವನ್ನು ಗಟ್ಟಿಗೊಳಿಸುವ ಹಬ್ಬವಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:48 pm, Mon, 28 July 25








