AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Naga Panchami 2025: ನಾಗದರ್ಶನ ಹಾಗೂ ನಾಗ ಮಂಡಲದ ನಡುವಿನ ವ್ಯತ್ಯಾಸವೇನು? ಏನಿದರ ವಿಶೇಷತೆ?

ನಾಗಾರಾಧನೆ ಎಂದ ಕೂಡಲೇ ಮೊದಲು ನೆನಪಿಗೆ ಬರುವುದೇ ಪರಶುರಾಮ ಸೃಷ್ಟಿಯ ತುಳುನಾಡು. ಇದೊಂದು ನಾಗದೇವರನ್ನು ಪೂಜಿಸುವ ಒಂದು ಸಂಪ್ರದಾಯ. ಕರಾವಳಿ ಭಾಗದ ಜನರು ನಾಗರಹಾವುಗಳನ್ನು ಕೇವಲ ಸರೀಸೃಪಗಳೆಂದು ನೋಡದೇ ದೇವರ ಸಾಲಿನಲ್ಲಿ ಇಟ್ಟಿದ್ದಾರೆ. ಆದರೆ ತುಳುನಾಡಿನ ಜನರ ಜೀವನದ ಭಾಗವಾದ ನಾಗಾರಧನೆಯಲ್ಲಿ ನಾಗದರ್ಶನ ಹಾಗೂ ನಾಗಮಂಡಲವು ಸೇರಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.

Naga Panchami 2025: ನಾಗದರ್ಶನ ಹಾಗೂ ನಾಗ ಮಂಡಲದ ನಡುವಿನ ವ್ಯತ್ಯಾಸವೇನು? ಏನಿದರ ವಿಶೇಷತೆ?
ನಾಗದರ್ಶನ ಹಾಗೂ ನಾಗ ಮಂಡಲ
ಸಾಯಿನಂದಾ
|

Updated on:Jul 28, 2025 | 6:59 PM

Share

ಪ್ರಕೃತಿಯ ಆರಾಧನೆಯ ಮಹತ್ವವನ್ನು ಸಾರುವ ತುಳುನಾಡಿನಲ್ಲಿ ನಾಗಾರಾಧನೆ (Nagaradhane) ಬಹುವಿಶೇಷವಾಗಿದೆ. ಇದು ಇಲ್ಲಿನ ಸಂಸ್ಕೃತಿಯ ಅಭಿಭಾಜ್ಯ ಅಂಗವಾಗಿದೆ. ಹೌದು, ಇದೊಂದು ಗ್ರಾಮೀಣ ಜನರ ನಂಬಿಕೆಯಾಗಿ ಉಳಿಯದೇ ಎಲ್ಲರ ಮನೆಯಲ್ಲಿ ಆಳವಾಗಿ ಬೇರೂರಿದೆ. ಇಲ್ಲಿನ ಜನರು ಕಲಿಯುಗದಲ್ಲಿ ಜೀವಂತ ದೇವರೆಂದೇ ಆರಾಧಿಸುವುದು ನಾಗನನ್ನು. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ನಾಗಾರಾಧನೆ ವಿಶೇಷ ಸ್ಥಾನಮಾನ ನೀಡಲಾಗಿದೆ. ನಾಗಬನಗಳಲ್ಲಿ ನಾಗ ಆರಾಧನೆ, ನಾಗಮಂಡಲ, ಆಶ್ಲೇಷಾ ಬಲಿ, ನಾಗದರ್ಶನ ಹೀಗೆ ಹತ್ತು ಹಲವು ಆಚರಣೆಗಳನ್ನು ಇಲ್ಲಿ ಕಾಣಬಹುದು. ಹಾಗಾದ್ರೆ ಈ ತುಳುನಾಡಿನ ನಾಗಾರಾಧನೆಯಲ್ಲಿ ಸೇರಿರುವ ನಾಗಮಂಡಲ ಹಾಗೂ ನಾಗದರ್ಶನದ ಕುರಿತಾದ ಇನ್ನಷ್ಟು ಮಾಹಿತಿ ಇಲ್ಲಿದೆ.

ತುಳುನಾಡಿನಲ್ಲಿ ನಾಗದೇವರಿಗೆ ಏಕೆ ಶ್ರೇಷ್ಠ ಸ್ಥಾನ?

ತುಳುನಾಡಿನ ಜನರಲ್ಲಿ ಪ್ರತಿಯೊಂದು ಕುಟುಂಬಕ್ಕೂ ಮೂಲನಾಗನಿದ್ದು, ತಮ್ಮ ಹಿರಿಯರ ಕಾಲದಿಂದಲೂ ಕುಟುಂಬದ ನಾಗ ಹಾಗೂ ಜಾಗದಲ್ಲಿರುವ ನಾಗದೇವರನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತಾರೆ. ಹೌದು, ತುಳುನಾಡಿನಲ್ಲಿ ನಾಗ ಕೃಷಿ ಪ್ರಧಾನ ದೇವತೆಯಾಗಿದ್ದು, ಕಾಲ ಕಾಲಕ್ಕೆ ಮಳೆ ಬೆಳೆಗಳನ್ನು ಅನುಗ್ರಹಿಸುತ್ತಾರೆ. ಸಂತಾನ ಭಾಗ್ಯ, ರೋಗ ರುಜಿನಗಳನ್ನು ದೂರ ಮಾಡಿ ಆರೋಗ್ಯ ಕೊಟ್ಟು ಕಾಪಾಡುತ್ತಾರೆ. ಹೀಗಾಗಿ ಅನಾದಿಕಾಲದಿಂದಲೂ ನಾಗನನ್ನು ಪೂಜಿಸುವುದರಿಂದ ತಮ್ಮ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ.

ಇದನ್ನೂ ಓದಿ
Image
ನೋಡ ಬನ್ನಿ ಉತ್ತರ ಕರ್ನಾಟಕದ ನಾಗರ ಪಂಚಮಿ ಹಬ್ಬದ ಸಡಗರ
Image
ಕರಾವಳಿಯಲ್ಲಿ ನಾಗರ ಪಂಚಮಿಯಂದು ಅರಶಿನ ಎಲೆಯ ಸಿಹಿ ಕಡುಬು ಮಾಡುವುದು ಯಾಕೆ?
Image
ಅಪರೂಪಕ್ಕೆ ಕಾಣಸಿಗುವ ಕೇದಗೆ ಹೂವನ್ನು ಸಿಕ್ರೆ ಬಿಡಬೇಡಿ? ಯಾಕೆ ಗೊತ್ತಾ
Image
ನಾಗರಪಂಚಮಿಯ ದಿನ ಅರಿಶಿನ ಎಲೆಯ ಸಿಹಿಕಡುಬು ಆರೋಗ್ಯಕ್ಕೆ ಎಷ್ಟು ಒಳ್ಳೆಯದು?

ವಿಡಿಯೋ ಇಲ್ಲಿದೆ ನೋಡಿ

ನಾಗಮಂಡಲ ಹಾಗೂ ನಾಗದರ್ಶನದ ನಡುವಿನ ವ್ಯತ್ಯಾಸವೇನು?

ನಾಗರಾಧನೆಯಲ್ಲಿ ಬರುವ ಆಚರಣೆಗಳಲ್ಲಿ ಈ ನಾಗ ಮಂಡಲ ಹಾಗೂ ನಾಗದರ್ಶನ ಕೂಡ ಒಂದಾಗಿದೆ. ಇದರಲ್ಲಿ ವಿಶೇಷವಾಗಿ ನಾಗ ಮಂಡಲವು ವರ್ಣರಂಜಿತ ಹಾಗೂ ವಿಸ್ತಾರವಾದ ಆಚರಣೆಯಾಗಿದ್ದು ರಾತ್ರಿಯಿಡೀ ನಡೆಯುತ್ತದೆ. ನಾಗಮಂಡಲದಲ್ಲಿ ಹಾವುಗಳ ದೈವಿ ಮಿಲನವನ್ನು ಚಿತ್ರಿಸಲಾಗುತ್ತದೆ. ಇದನ್ನು ಎರಡು ಪಾತ್ರಿಗಳು ನಡೆಸಿಕೊಡುತ್ತಾರೆ.

ಮೊದಲನೆಯ ಪಾತ್ರಿ, ಹಿಂಗಾರವನ್ನು ಆಘ್ರಾಣಿಸುತ್ತ ಗಂಡು ಸರ್ಪವಾಗುತ್ತಾರೆ. ಎರಡನೇ ಪಾತ್ರಿಯು ನಾಗಕನ್ನಿಕೆ ಅಥವಾ ಹೆಣ್ಣು ಹಾವು, ನೈಸರ್ಗಿಕ ಬಣ್ಣಗಳಿಂದ ರಚಿಸಿದ ವಿಸ್ತಾರವಾದ ನಾಗಮಂಡಲದ ಸುತ್ತ ಹಾಡನ್ನು ಹೇಳುತ್ತಾ ಕುಣಿಯುತ್ತಾರೆ. ಈ ವಿಶೇಷ ಹಾಗೂ ವರ್ಣರಂಜಿತ ಧಾರ್ಮಿಕ ಆಚರಣೆಯಲ್ಲಿ ಡಕ್ಕೆ ಎಂಬ ವಾದ್ಯವನ್ನು ನುಡಿಸುವುದು ವಿಶೇಷ.

ಇದನ್ನೂ ಓದಿ: Naga Panchami 2025: ನಾಗರಹಾವುಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳೇನು? ಈ ಬಗ್ಗೆ ಉರಗ ತಜ್ಞ ಗುರುರಾಜ್ ಸನಿಲ್ ಏನ್ ಹೇಳ್ತಾರೆ?

ಆದರೆ ನಾಗರಾಧನೆಯ ಭಾಗವಾದ ನಾಗದರ್ಶನವನ್ನು ಇಲ್ಲಿಯ ಜನರು ನಾಗಬನಗಳ ನಿರ್ಮಾಣಕ್ಕೂ ಮುನ್ನ, ಕುಟುಂಬದಲ್ಲಿ ಏನಾದರೂ ಸಮಸ್ಯೆಗಳು ಬಂದಲ್ಲಿ, ಅಥವಾ ಮೂಲ ನಾಗನ ಕಾಲಡಿಯಲ್ಲಿರುವ ಪ್ರೇತಗಳನ್ನು ಬಿಡಿಸಿಕೊಂಡು ಅವುಗಳಿಗೆ ಸದ್ಗತಿ ನೀಡಲು ಇದನ್ನು ನಡೆಸುತ್ತಾರೆ. ನಾಗ ಪಾತ್ರಿಗಳ ಬಳಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ನಾಗಾರಾಧನೆಯ ಆಚರಣೆಗಳಲ್ಲಿ ಒಂದಾಗಿರುವ ಇದನ್ನು ಇವತ್ತಿಗೂ ಇಲ್ಲಿನ ಜನರು ಆಚರಿಸಿಕೊಂಡು ನಂಬಿಕೊಂಡು ಬರುತ್ತಿದ್ದಾರೆ.

ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:55 pm, Mon, 28 July 25