Naga Panchami 2025: ನಾಗರಹಾವುಗಳ ಬಗ್ಗೆ ಜನರಿಗಿರುವ ತಪ್ಪು ಕಲ್ಪನೆಗಳೇನು? ಈ ಬಗ್ಗೆ ಉರಗ ತಜ್ಞ ಗುರುರಾಜ್ ಸನಿಲ್ ಏನ್ ಹೇಳ್ತಾರೆ?
ನಾಗರ ಹಾವುಗಳೆಂದರೆ ಎಲ್ಲರಿಗೂ ಭಯವಿರುವುದು ಸಹಜ. ಹೀಗಾಗಿ ಹಾವು ಕಂಡೊಡನೆ ಅಲ್ಲಿಂದ ಓಡಿ ಹೋಗುವವರೇ ಹೆಚ್ಚು. ಆದರೆ ಈ ಪರಿಸರ ಸಮತೋಲನದಲ್ಲಿ ಹಾವುಗಳ ಪಾತ್ರವನ್ನು ಮರೆಯುವಂತಿಲ್ಲ. ಹೆಚ್ಚಿನವರಿಗೆ ಈ ನಾಗರಹಾವುಗಳ ಬಗ್ಗೆ ತಪ್ಪು ಕಲ್ಪನೆಗಳಿವೆ. ನಾಗರಹಾವಿಗೆ ಬಗ್ಗೆ ನಾನಾ ರೀತಿಯ ತಪ್ಪು ಗ್ರಹಿಕೆಗಳು ಹಾಗೂ ನಂಬಿಕೆಗಳಿದ್ದು, ಇದು ಎಷ್ಟರ ಮಟ್ಟಿಗೆ ನಿಜ ಎನ್ನುವುದಕ್ಕೆ ಇಲ್ಲಿದೆ ಉತ್ತರ.

ನಮ್ಮ ಹಿರಿಯರು ಏನು ಹೇಳಿದ್ದಾರೋ ಅದನ್ನು ಕಣ್ಣು ಮುಚ್ಚಿ ಒಪ್ಪಿಕೊಂಡು ಬಂದಿದ್ದೇವೆ. ಹೌದು, ಹಿರಿಯರು ಹೇಳಿದ ಕೆಲವು ವಿಚಾರಗಳು ಹಾಗೂ ಆಚರಣೆಗಳ ಬಗೆಗಿನ ಹಿಂದಿನ ಕಾರಣವೇನು ಎಂದು ತಿಳಿದುಕೊಳ್ಳುವ ಪ್ರಯತ್ನವಾಗಲಿ, ಅದರ ಬಗ್ಗೆ ಪ್ರಶ್ನೆ ಮಾಡುವ ಗೋಜಿಗೆ ಹೋಗುವುದಿಲ್ಲ. ಇದು ನಾಗರಹಾವುಗಳ ವಿಚಾರದಲ್ಲಿ ಹೊರತಾಗಿಲ್ಲ. ಇವತ್ತಿಗೂ ನಾಗರಹಾವು (Indian Cobra) ಹಾಲು ಕುಡಿಯುತ್ತವೆ, ನಾಗರಹಾವುಗಳ ತಲೆಯ ಮೇಲೆ ನಾಗಮಣಿಯಿರುತ್ತದೆ ಹೀಗೆ ಹತ್ತಾರು ತಪ್ಪು ಕಲ್ಪನೆಗಳು ಜನರಲ್ಲಿದೆ. ಹಾಗಾದ್ರೆ ಈ ನಾಗರಹಾವಿನ ಕುರಿತು ಜನರಿಗೆ ಇರುವ ಈ ತಪ್ಪುಕಲ್ಪನೆಗಳು ಹಾಗೂ ನಂಬಿಕೆಗಳ ಬಗ್ಗೆ ಸಾಹಿತಿ ಹಾಗೂ ಉರಗ ತಜ್ಞರಾದ ಉಡುಪಿಯ ಗುರುರಾಜ್ ಸನಿಲ್ (Gururaj Sanil) ಏನ್ ಹೇಳ್ತಾರೆ? ಇದು ನಿಜವೇ? ಈ ಕುರಿತಾದ ಮಾಹಿತಿ ಇಲ್ಲಿದೆ.
ನಾಗರಹಾವುಗಳು ಹಾಲನ್ನು ಕುಡಿಯುತ್ತವೆಯೇ?
ನಾಗರಹಾವು ಈವರೆಗೆ ಹಾವು ಕುಡಿದ ಪುರಾವೇ ಇಲ್ಲ. ಹಾವುಗಳು ಸರೀಸೃಗಳಾಗಿರುವುದರಿಂದ ಅವುಗಳಲ್ಲಿ ಸ್ತನ್ಯಪಾನ ಕ್ರಮವಿಲ್ಲ. ಮೊಟ್ಟೆಗಳಿಂದ ಹೊರಬರುವ ಮರಿಗಳು ಕೂಡ ಎದುರಿಗಿರುವ ಕಪ್ಪೆ ಮರಿಗಳು ಇಲ್ಲದಿದ್ದರೆ ಇನ್ಯಾವೋ ಜೀವಿ ಇದ್ರೆ ಹಿಡಿದು ತಿನ್ನುವ ಜೀವನಕ್ರಮ ಈ ಹಾವುಗಳದ್ದು. ಹೀಗಾಗಿ ಹಾಲಿಗೂ ಈ ಹಾವಿಗೂ ಯಾವುದೇ ಸಂಬಂಧ ಇಲ್ಲ. ಆದರೆ ನಮ್ಮ ಕರಾವಳಿಯ ಭಾಗದಲ್ಲಿ ಆರಾಧನೆಯಲ್ಲಿ ಪಂಚಾಮೃತ ತಯಾರು ಮಾಡುವ ಕ್ರಮವಿದೆ. ಆಚರಣೆಗೆ ಸಂಬಂಧ ಪಟ್ಟಂತೆ ಪಂಚಾಮೃತ ತಯಾರು ಮಾಡುತ್ತಾರೆಯೇ ಹೊರತು ಹಾವು ಹಾಲು ಕುಡಿಯುವುದಿಲ್ಲ. ಒಂದು ಹಾವನ್ನು ತಿಂಗಳುಗಟ್ಟಲೇ ಪಂಜರದೊಳಗೆ ಹಾಕಿಟ್ಟು, ಅದಕ್ಕೆ ಆಹಾರ ನೀರೂ ಕೊಡದೇ ಇದ್ದಾಗ ನೀರೂ ಮಿಶ್ರಿತ ಹಾಲು ಇಟ್ಟರೆ ಬಾಯಾರಿಕೆಗಾಗಿ ಕುಡಿಯಬಹುದು. ಈ ನಂಬಿಕೆಯನ್ನು ಕೆಲವು ಭಾಗಗಳಲ್ಲಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜೀವಂತ ಹಾವುಗಳಿಗೆ ಹಾಲೆರೆಯುವುದು ಅಷ್ಟು ಸಮಂಜಸವಲ್ಲ.
ಆರಾಧನೆ ನೆಪದಲ್ಲಿ ಹುತ್ತಕ್ಕೆ ಹಾಲೆರೆಯುವುದು ಸರಿಯೇ?
ನಾಗರಪಂಚಮಿಯಂದು ವಿವಿಧ ಕಡೆಗಳಲ್ಲಿ ವಿವಿಧ ರೀತಿ ಆಚರಣೆಯಿರುತ್ತದೆ. ಕೆಲವು ಭಾಗಗಳಲ್ಲಿ ಹುತ್ತಕ್ಕೆ ಹಾಲನ್ನು ಹಾಕುವಂತಹ ಕ್ರಮವು ಇದೆ. ಆದರೆ ಹೆಚ್ಚಿನವರು ಈ ಹುತ್ತಗಳು ನಾಗರಹಾವಿನ ವಾಸಸ್ಥಾನ ಮಾತ್ರ ಎಂದು ತಿಳಿದುಕೊಂಡಿದ್ದಾರೆ. ಹುತ್ತಗಳು ಪ್ರಕೃತಿಗೆ ಸಂಬಂಧ ಪಟ್ಟದ್ದು. ಗೆದ್ದಲುಗಳು ಈ ಹುತ್ತಗಳನ್ನು ನಿರ್ಮಾಣ ಮಾಡುತ್ತವೆ. ಹಚ್ಚ ಹಸಿರಿನ ಪರಿಸರವಿದ್ದಲ್ಲಿ ಈ ಹುತ್ತಗಳು ನಿರ್ಮಾಣವಾಗುತ್ತವೆ. ಕಾಲಕ್ರಮೇಣ ಗೆದ್ದಲುಗಳು ಈ ಹುತ್ತಗಳನ್ನು ಬಿಟ್ಟು ಹೋಗುವ ಕಾರಣ ಇಲ್ಲಿ ಇಲಿ, ಹೆಗ್ಗಣಗಳು ಬಿಲ ಕೊರೆದು ತನ್ನ ವಾಸಸ್ಥಾನವನ್ನಾಗಿ ಮಾಡಿಕೊಳ್ಳುತ್ತವೆ. ಆಹಾರವನ್ನು ಹುಡುಕಿಕೊಂಡು ಈ ಹುತ್ತದೊಳಗೆ ಪ್ರವೇಶ ಮಾಡುವ ಈ ಹಾವುಗಳು ಕ್ರಮೇಣ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ. ಅಲ್ಲೇ ತನ್ನ ವಾಸಸ್ಥಾನವನ್ನು ಕಂಡುಕೊಳ್ಳುತ್ತವೆ. ಹುತ್ತ ಅದರ ವಾಸಸ್ಥಾನ ಆಗಿರುವುದರಿಂದ ಆರಾಧನೆ ನೆಪದಲ್ಲಿ ಹುತ್ತಕ್ಕೆ ಹಾಲು ಎರೆಯುತ್ತಾರೆ. ಇದು ಯಾವುದೇ ಪ್ರಯೋಜನವಿಲ್ಲದ ಕ್ರಮವಾಗಿದ್ದು. ಈ ರೀತಿ ಲೀಟರ್‌ಗಟ್ಟಲೇ ಹಾಲು ಹುತ್ತಕ್ಕೆ ಎರೆಯುವುದರಿಂದ ಹುತ್ತಕ್ಕೂ ಅದರಲ್ಲಿರುವ ಹಾವು ಸೇರಿದಂತೆ ಇನ್ನಿತ್ತರ ಜೀವಿಗಳಿಗೂ ಸಮಸ್ಯೆ. ಆರಾಧನೆ ಸರಿಯೇ, ಈ ರೀತಿ ಆರಾಧನೆಯೂ ಪರಿಸರ ಮಾರಕ ಆರಾಧನೆಯಾಗಿದೆ.
ನಾಗರಹಾವಿನ ಮಿಲನ ಕ್ರಿಯೆ ನೋಡಿದ್ರೆ ದೋಷ ಬರುತ್ತದೆಯೇ?
ಯಾವುದೇ ರೀತಿಯ ಮಿಲನ ಕ್ರಿಯೆಯನ್ನು ನೋಡುವುದು ನಮ್ಮಲ್ಲಿ ಅಶುದ್ಧ ಎನ್ನುವ ಕಲ್ಪನೆಯನ್ನು ಬಿತ್ತಲಾಗಿದೆ. ಆ ಪ್ರಕ್ರಿಯೆ ನೋಡಿದರೆ ಅಸಹ್ಯ ಭಾವನೆ ಇಲ್ಲವಾದರೆ ಪ್ರಚೋದನಾಕಾರಿ ಭಾವನೆ ಬರಬಹುದು ಎನ್ನುವ ಯೋಚನೆ ನಮ್ಮ ಹಿರಿಯರಲ್ಲಿ ಇದ್ದೀರಬಹುದು. ನಾಗರಹಾವು ಎಂದರೆ ನಮ್ಮಲ್ಲಿ ದೇವರು, ಈ ಜೀವಿಯ ಮಿಲನಕ್ರಿಯೆ ನೋಡಿದ್ರೆ ದೋಷ ಬರುತ್ತೆ ಎನ್ನುವ ನಂಬಿಕೆಯನ್ನು ನಾವೇ ಸೃಷ್ಟಿ ಮಾಡಿಕೊಂಡಿದ್ದೇವೆ. ಬದುಕಿನಲ್ಲಿ ಏರುಪೇರು ಆಗುವುದನ್ನು ದೋಷ ಅನ್ನೋದಾದ್ರೆ ಈ ಹಾವುಗಳ ಮಿಲನ ನೋಡಿದವರದ್ದು ಮಾತ್ರವಲ್ಲ ಎಲ್ಲರ ಜೀವನದಲ್ಲಿ ಕಷ್ಟಗಳು ಬರುತ್ತವೆ. ಆದರೆ ನಾವುಗಳು ನಮ್ಮ ನಂಬಿಕೆಗಳಿಗೆ ನಮ್ಮ ಜೀವನದ ಘಟನೆಗಳನ್ನು ಹೋಲಿಕೆ ಮಾಡಿ ಭಯ ಪಡುತ್ತೇವೆ. ಮಿಲನ ಕ್ರಿಯೆ ನೋಡಿದ್ರೆ ಸಮಸ್ಯೆಗಳು ಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಹಾವುಗಳಿಗೆ ತೊಂದರೆ ಕೊಡಬಾರದು ಎನ್ನುವ ದೃಷ್ಟಿಯಿಂದ ಮಿಲನಕ್ರಿಯೆಯಲ್ಲಿ ತೊಡಗಿರುವ ಹಾವುಗಳನ್ನು ನೋಡಬಾರದು ಎನ್ನುವ ಗುಪ್ತ ಸೂಚನೆಯನ್ನು ನಮ್ಮ ಹಿರಿಯರು ಕೊಟ್ಟಿರಬಹುದು.
ಹಾವುಗಳು ದ್ವೇಷ ಕಟ್ಟಿಕೊಳ್ಳುತ್ತವೆಯೇ?
ನಾಗರಹಾವುಗಳು ಹನ್ನೆರಡು ವರ್ಷಗಳು ಹಗೆ ಕಟ್ಟಿಕೊಳ್ಳುತ್ತವೆ ಎನ್ನುವುದು ಸುಳ್ಳು. ಒಂದು ಸಲ ನಾಗರಹಾವಿಗೆ ನೋವಾದ್ರೆ ಆ ಕ್ಷಣ ಕಚ್ಚುವುದು ಇಲ್ಲದಿದ್ದರೆ ಹೆದರಿಸುವ ಮೂಲಕ ಪ್ರತಿಕ್ರಿಯಿಸುತ್ತವೆ. ಆ ಬಳಿಕ ಆ ವಲಯಕ್ಕೆ ಅಥವಾ ಸ್ಥಳಕ್ಕೆ ಮತ್ತೆ ಬರುವುದೇ ಇಲ್ಲ. ದ್ವೇಷ ಇಟ್ಟುಕೊಳ್ಳುವಂತಹ ಮೆದುಳಿನ ಬೆಳವಣಿಗೆ ನಾಗರ ಹಾವುಗಳಿಗೆ ಆಗಿಲ್ಲ. ಆದರೆ ಈ ಹಾವುಗಳಿಗೆ ಹುಟ್ಟರಿವು ಇರುತ್ತದೆ, ತಾನು ಜೀವಿಸುವ ಪರಿಸರ, ಎಲ್ಲಿ ಆಹಾರ ಇದೆ, ತನ್ನ ಸಂಗಾತಿ ಎಲ್ಲಿದೆ ಈ ಹುಟ್ಟರಿವು ಪ್ರಕೃತಿಗೆ ಬೇಕಾದ ಹಾಗೆ ಇರುತ್ತದೆ. ನೆನಪಿನ ಶಕ್ತಿ ಹಾವುಗಳಿಗೆ ಇಲ್ಲ. ಹೀಗಾಗಿ ನಾಗರ ಹಾವುಗಳು ದ್ವೇಷ ಕಟ್ಟಿಕೊಳ್ಳುತ್ತವೆ ಎನ್ನುವುದು ತಪ್ಪು ಕಲ್ಪನೆ.
ನಾಗರ ಹಾವಿನ ತಲೆಯ ಮೇಲೆ ನಾಗಮಣಿಯಿರುತ್ತದೆ ಎನ್ನುವುದು ನಿಜವೇ?
ನಾಗಮಣಿ ಎಂದು ಹೆಸರಿರುವ ಮಣಿ ಇರಬಹುದು. ಈ ನಾಗರ ಹಾವುಗಳ ನೆತ್ತಿಯಲ್ಲಿ ಯಾವುದೇ ಮಣಿ ಮಾಣಿಕ್ಯ ಸಿಕ್ಕಿದ ದಾಖಲೆಯಿಲ್ಲ. ಆದರೆ ಶಾಸ್ತ್ರಗಳಲ್ಲಿರುವ ವಿಚಾರವನ್ನೇ ಬಂಡವಾಳವಾಗಿಸಿಕೊಂಡು ಕೃತಕ ಮಣಿಗಳನ್ನು ಸೃಷ್ಟಿ ಮಾಡಿ ಜನರ ಈ ನಂಬಿಕೆಗಳನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಈ ನಾಗಮಣಿಗಳು ನಮ್ಮ ನಂಬಿಕೆ ಹಾಗೂ ಪುರಾಣ ಕಥೆಗಳು ಹೊರತು ಪಡಿಸಿ ವೈಜ್ಞಾನಿಕವಾಗಿ ಎಲ್ಲಿಯೂ ಈ ಬಗ್ಗೆ ದಾಖಲಾಗಿಲ್ಲ.
ಇದನ್ನೂ ಓದಿ: Naga Panchami 2025: ಕರಾವಳಿಯಲ್ಲಿ ನಾಗರ ಪಂಚಮಿಯಂದು ಅರಶಿನ ಎಲೆಯ ಕಡುಬು ಮಾಡುವುದು ಯಾಕೆ? ಈ ಬಗ್ಗೆ ಅರ್ಚಕರು ಹೇಳೋದೇನು?
ನಾಗರಹಾವು ಪುಂಗಿಯ ನಾದಕ್ಕೆ ತಲೆ ಅಲ್ಲಾಡಿಸುತ್ತವೆಯೇ?
ನಾಗರಹಾವು ಸೇರಿಸಿ ಎಲ್ಲಾ ಹಾವುಗಳಿಗೂ ಕಿವಿ ಎನ್ನುವ ಅಂಗವೇ ಇಲ್ಲ. ಅವುಗಳು ಪ್ರಪಂಚದ ಹಾಗುಹೋಗುಗಳನ್ನು ತಿಳಿದುಕೊಳ್ಳಲು ಸೀಳು ನಾಲಿಗೆಯನ್ನು ಬಳಸುತ್ತವೆ. ಒಂದಷ್ಟು ದೂರದ ಶಬ್ದವನ್ನು ನೆಲದ ಕಂಪನದ ಮೂಲಕ, ದವಡೆಗಳು, ಪಕ್ಕೆಲುಬುಗಳು, ಇಯರ್ ಬೋನ್ ಮೂಲಕ ತಿಳಿದುಕೊಳ್ಳುತ್ತವೆ. ಕಣ್ಣುಗಳು ಒಂದಷ್ಟು ಕೆಲಸ ಮಾಡುತ್ತದೆ, ಹೊರತು ಪಡಿಸಿದ್ರೆ, ಈ ನಾಗರಹಾವುಗಳಿಗೆ ಸಂಗೀತದ ಜ್ಞಾನವೇ ಇಲ್ಲ. ಪುಂಗಿಯ ತುದಿಯೂ ಚೂಪಾಗಿರುವುದರಿಂದ, ಇದಕ್ಕೆ ಹೆದರಿ ತನ್ನ ಹೆಡೆಯನ್ನು ಕುಣಿಸುತ್ತವೆ. ಆದರೆ ಈ ನಾಗರಹಾವುಗಳು ಪುಂಗಿಯ ನಾದಕ್ಕೆ ತಲೆ ಅಲ್ಲಾಡಿಸುತ್ತದೆ ಎಂದು ಜನರು ತಪ್ಪು ತಿಳಿದುಕೊಂಡಿದ್ದಾರೆ ಎನ್ನುತ್ತಾರೆ ಉರಗ ತಜ್ಞರು.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








