ಭಾರತೀಯ ಸಂಪ್ರದಾಯಗಳ ಹಿಂದಿದೆ ಆರೋಗ್ಯ ಪ್ರಯೋಜನಗಳು
ಭಾರತವು ತನ್ನ ಶ್ರೀಮಂತ ಪರಂಪರೆ ಮತ್ತು ಸಂಪ್ರದಾಯಕ್ಕೆ ಹೆಸರುವಾಸಿಯಾದ ದೇಶ. ಭಾರತದ ಪ್ರತಿಯೊಂದು ಸಂಪ್ರದಾಯದ ಹಿಂದೆಯೂ ಒಂದು ದೃಢವಾದ ಕಾರಣವಿದೆ. ಅದರಲ್ಲೂ ನಾವು ಪಾಲಿಸುವ ಕೆಲವೊಂದು ಸಂಪ್ರದಾಯಗಳು ನಮಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ಈ ಸತ್ಯಾಂಶವನ್ನು ಹಲವು ಅಧ್ಯಯನಗಳು ಕೂಡ ಸಾಬೀತುಪಡಿಸಿದೆ. ಭಾರತೀಯ ಸಂಪ್ರದಾಯಗಳ ಪಾಲನೆಯಿಂದ ದೊರೆಯುವ ಆರೋಗ್ಯ ಪ್ರಯೋಜಗಳ ಕುರಿತ ಮಾಹಿತಿ ಇಲ್ಲಿದೆ.
ಸಂಪ್ರದಾಯಗಳು ಮತ್ತು ಸಂಸ್ಕೃತಿಯ ವಿಷಯದಲ್ಲಿ ನಮ್ಮ ಭಾರತ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಭಾರತದ ಪ್ರತಿಯೊಂದು ಸಂಪ್ರದಾಯದ ಹಿಂದೆಯೂ ವೈಜ್ಞಾನಿಕ ಕಾರಣವಿದೆ. ಆಧುನೀಕರಣದ ನಂತರವೂ ಬಹಳಷ್ಟು ಜನರು ಹಳೆಯ ಸಂಪ್ರದಾಯಗಳನ್ನು ಇಂದಿಗೂ ಪಾಲಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಕೆಲವರು ಈ ಸಂಪ್ರದಾಯಗಳನ್ನೆಲ್ಲಾ ಗೊಡ್ಡು ಸಂಪ್ರದಾಯಗಳೆಂದು ದೂರಿ, ಪಾಶ್ಚಿಮಾತ್ಯ ಸಂಸ್ಕೃತಿಯ ಕಡೆಗೆ ಒಲುವು ತೋರುತ್ತಿದ್ದಾರೆ. ಆದರೆ ಪಾಶ್ಚಿಮಾತ್ಯರು ಭಾರತೀಯ ಸಂಪ್ರದಾಯದ ವೈಜ್ಞಾನಿಕ ಹಿನ್ನಲೆಯ ಮಹತ್ವವನ್ನು ಒಪ್ಪಿಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಭಾರತೀಯರ ಸಂಪ್ರದಾಯವನ್ನು ಪಾಶ್ಚಿಮಾತ್ಯ ದೇಶಗಳು ಗೇಲಿ ಮಾಡಿದ್ದವು. ಇಂದು ಅದೇ ಪಾಶ್ಚಿಮಾತ್ಯರು ಭಾರತೀಯ ಸಂಪ್ರದಾಯದ ಪಾಲನೆಯ ಕಡೆಗೆ ತಮ್ಮ ಒಲವನ್ನು ತೋರುತ್ತಿದ್ದಾರೆ. ಯಾವುದೇ ಒಂದು ಆಚರಣೆ ಅಥವಾ ಸಂಪ್ರದಾಯವನ್ನು ನಮ್ಮ ಹಿರಿಯರು ಸುಮ್ಮನೆ ಮಾಡಿಲ್ಲ. ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆ. ಈ ಎಲ್ಲಾ ಭಾರತೀಯ ಸಂಪ್ರದಾಯಗಳು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ತಿಳಿಯೋಣ.
ಭಾರತೀಯ ಸಂಪ್ರದಾಯಗಳ ಹಿಂದಿನ ಆರೋಗ್ಯ ಪ್ರಯೋಜನಗಳು
ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು:
ಭಾರತದಲ್ಲಿ ನಮ್ಮ ಹಿಂದಿನ ತಲೆಮಾರಿನವರು ತಾಮ್ರದ ಪಾತ್ರೆಗಳಿಂದ ನೀರನ್ನು ಕುಡಿಯುತ್ತಿದ್ದರು. ಈ ಅಭ್ಯಾಸವು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ತಾಮ್ರದ ಪಾತ್ರೆಯಲ್ಲಿ ನೀರನ್ನು ಶೇಖರಿಸುವುದರಿಂದ ಆ ಶೇಖರಿಸಿಟ್ಟ ನೀರಿನಲ್ಲಿ ಅಲ್ಪ ಪ್ರಮಾಣದ ತಾಮ್ರದ ಅಯಾನುಗಳು ಕರಗುವುದರಿಂದ ಅದು ನೀರನ್ನು ಶುದ್ಧೀಕರಿಸುತ್ತದೆ. ಇದರ ಇತರ ಆರೋಗ್ಯ ಪ್ರಯೋಜನಗಳೆಂದರೆ ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ, ದೇಹದ ಗಾಯಗಳನ್ನು ಗುಣಪಡಿಸುವ ಸಾಮಾರ್ಥ್ಯವನ್ನು ಸುಧಾರಿಸುತ್ತದೆ ಮತ್ತು ಕೀಲುಗಳನ್ನು ಬಲಪಡಿಸುತ್ತದೆ.
ಬೆಳ್ಳಿ ಪಾತ್ರೆಯಲ್ಲಿ ಆಹಾರ ಸೇವಿಸುವುದು:
ಹಿಂದಿನ ಕಾಲದಲ್ಲಿ ಜನರು ಬೆಳ್ಳಿಯ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಇದು ಕೇವಲ ಶ್ರೀಮಂತಿಕೆಯ ಸಂಕೇತವಲ್ಲ. ಇದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಅಲ್ಲದೆ ಇಂದಿಗೂ ಕೂಡಾ ಪುಟ್ಟ ಮಕ್ಕಳಿಗೆ ಬೆಳ್ಳಿಯ ಪಾತ್ರೆಯಲ್ಲಿ ಆಹಾರ ನೀಡುತ್ತಾರೆ. ಏಕೆಂದರೆ ಬೆಳ್ಳಿಯ ಪಾತ್ರೆಗಳು ಆಂಟಿ ವೈರಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಈ ಗುಣಲಕ್ಷಣಗಳು ಆಹಾರವನ್ನು ವೈರಸ್ ಮತ್ತು ಬ್ಯಾಕ್ಟೀರಿಯಾಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ.
ಕೈಗಳಿಂದ ತಿನ್ನುವುದು:
ಯಾವುದೇ ಆಹಾರವನ್ನು ಕೈಗಳಿಂದ ತಿನ್ನುವುದು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಭಾರತೀಯರಾದ ನಾವು ಹೆಚ್ಚಾಗಿ ವಿದೇಶಿ ಸಂಸ್ಕೃತಿಯಂತೆ ಚಮಚಗಳನ್ನು ಬಳಸದೆ ಕೈಯಲ್ಲಿಯೇ ಆಹಾರವನ್ನು ತಿನ್ನುತ್ತೇವೆ. ತಿನ್ನಲು ಕೈಗಳನ್ನು ಬಳಸುವುದು ಕರುಳಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಏಕೆಂದರೆ ನೀವು ನಿಮ್ಮ ಕೈಗಳಿಂದ ತಿನ್ನುವಾಗ ನಿಮ್ಮ ಕೈಯಲ್ಲಿರು ಒಳ್ಳೆಯ ಬ್ಯಾಕ್ಟೀರಿಯಾ ನಿಮ್ಮ ಕರುಳಿಗೆ ರವಾನೆಯಾಗುತ್ತದೆ. ಇದು ಹೊಟ್ಟೆಯಲ್ಲಿ ಕೆಟ್ಟ ಬ್ಯಾಕ್ಟೀರಿಯವನ್ನು ಹೋಗಲಾಡಿಸುವ ಮೂಲಕ ನಿಮ್ಮ ರೋಗನಿರೊಧಕ ಶಕ್ತಿಯನ್ನು ಸುಧಾರಿಸುತ್ತದೆ. ಹೆಚ್ಚುವರಿಯಾಗಿ ನಾವು ಕೈಯಾರೆ ಊಟ ಮಾಡಿದಾಗ ಊಟದ ರುಚಿಯೂ ಹೆಚ್ಚಾಗುತ್ತದೆ.
ಇದನ್ನೂ ಓದಿ: ಪುರುಷರು ಪ್ಯಾಂಟ್ನ ಯಾವ ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡರೆ ಉತ್ತಮ?
ಆಭರಣಗಳನ್ನು ಧರಿಸುವುದು:
ಭಾರತದಲ್ಲಿ ಚಿನ್ನ ಮತ್ತು ಬೆಳ್ಲಿ ಆಭರಣಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಇಲ್ಲಿನ ಪ್ರತಿಯೊಬ್ಬರೂ ಆಭರಣಗಳನ್ನು ಇಷ್ಟಪಡುತ್ತಾರೆ. ಆಭರಣಗಳನ್ನು ಧರಿಸುವುದು ಕೇವಲ ಫ್ಯಾಷನ್ ಅಲ್ಲ. ಇದು ಅಷ್ಟೇ ಆರೋಗ್ಯ ಪ್ರಯೋಜನಗಳನ್ನು ಕೂಡಾ ಹೊಂದಿದೆ. ಚಿನ್ನದ ಆಭರಣಗಳನ್ನು ಧರಿಸುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಿಸಬಹುದು. ಚಿನ್ನದ ಆಭರಣಗಳು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡಲು ಇದು ಸಹಕಾರಿ. ಬೆಳ್ಳಿಯ ಆಭರಣವನ್ನು ಧರಿಸುವುದು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಮತ್ತು ಶೀತ, ಜ್ವರವನ್ನು ತಡೆಗಟ್ಟಲು ಸಹಕಾರಿಯಾಗಿದೆ.
ಕಿವಿ ಚುಚ್ಚುವುದು:
ಹಿಂದಿನ ಕಾಲದಿಂದಲೂ ಭಾರತದಲ್ಲಿ ಕಿವಿ ಚುಚ್ಚುವ ಸಂಪ್ರದಾಯವಿದೆ. ಹುಡುಗಿಯರಿಗೆ ಮಾತ್ರವಲ್ಲದೆ ಹುಡುಗರಿಗೂ ಸಹ ಕಿವಿ ಚುಚ್ಚುತ್ತಾರೆ. ಕಿವಿ ಚುಚ್ಚುವುದರಿಂದ ಹಲವು ಆರೋಗ್ಯ ಪ್ರಯೋಜನಗಳಿವೆ. ಆಯುರ್ವೇದದ ಪ್ರಕಾರ ಕಿವಿಯ ಹಾಳೆಯು ಹೆಣ್ಣಿನ ಸಂತಾನೋತ್ಪತ್ತಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಋತುಚಕ್ರಮವನ್ನು ಸಮತೋಲನದಲ್ಲಿಡುತ್ತದೆ.
ಮನೆ ಅಂಗಳದಲ್ಲಿ ರಂಗೋಲಿ ಬಿಡಿಸುವುದುವುದು:
ಮನೆ ಮುಂದೆ ರಂಗೋಲಿ ಬಿಡಿಸುವುದು ಇಂದಿಗೂ ಅನುಸರಿಸುತ್ತಿರುವ ಅನೇಕ ಭಾರತೀಯ ಸಂಪ್ರದಾಯಗಳಲ್ಲಿ ಒಂದಾಗಿದೆ. ಮನೆಯ ಮುಂದೆ ರಂಗೋಲಿಯನ್ನು ಬಿಡಿಸುವುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಮನೆಯ ಅಂಗಳವನ್ನು ಸುಂದರವಾಗಿ ಕಾಣುವಂತೆ ಮಾಡುವ ರಂಗೋಲಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ರಂಗೋಲಿಯಲ್ಲಿನ ವಿವಿಧ ಬಣ್ಣಗಳು ಒಬ್ಬರ ಚಿತ್ತವನ್ನು ಹೆಚ್ಚಿಸಲು ಮತ್ತು ಧನಾತ್ಮಕ ಶಕ್ತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಕಣ್ಣಿನ ದೃಷ್ಟಿ ಸೂಕ್ಷ್ಮವಾಗಿಸಲು ಒಳ್ಳೆಯದು
ಗೋರಂಟಿ ಹಚ್ಚುವುದು:
ಯಾವುದೇ ಶುಭ ಸಮಾರಂಭಗಳು ಬರಲಿ ಹೆಂಗಳೆಯರು ಕೈಗೆ ಗೋರಂಟಿಯನ್ನು ಹಚ್ಚಿಕೊಳ್ಳುತ್ತಾರೆ. ಇದು ಶುಭದ ಸಂಕೇತ ಮಾತ್ರವಲ್ಲದೆ ಮೆಹಂದಿ ದೇಹಕ್ಕೆ ತುಂಬಾನೇ ತಂಪು. ನೀವು ಅಧಿಕ ದೇಹದ ಉಷ್ಣತೆಯನ್ನು ಹೊಂದಿದ್ದರೆ, ನಿಮ್ಮ ದೇಹವನ್ನು ತಂಪಾಗಿರಿಸಲು ನಿಮ್ಮ ಅಂಗೈ ಮತ್ತು ಪಾದಗಳಿಗೆ ಗೋರಂಟಿ ಹಚ್ಚಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: