ದೇಹವನ್ನು ಆರೋಗ್ಯಕರವಾಗಿಡಲು ನಾವು ಹಲವಾರು ಕ್ರಮಗಳನ್ನು ಅನುಸರಿಸುತ್ತೇವೆ. ಅದರಲ್ಲೂ ದೇಹದಾರೋಗ್ಯವನ್ನು ಕಾಪಾಡಿಕೊಳ್ಳಲು ಜಲಸಂಚಯನ ತುಂಬಾ ಮುಖ್ಯವಾಗಿದೆ. ಇದಕ್ಕಾಗಿ ಪ್ರತಿನಿತ್ಯ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯಲು ಸಲಹೆ ತಜ್ಞರು ಸಲಹೆ ನೀಡುತ್ತಾರೆ. ಸಾಕಷ್ಟು ನೀರನ್ನು ಕುಡಿಯುವುದರಿಂದ ದೇಹದಲ್ಲಿ ಸಂಗ್ರಹಗೊಳ್ಳುವ ತ್ಯಾಜ್ಯವನ್ನು ಹೊರ ಹಾಕಬಹುದು ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಹೀಗೆ ನೀವು ಕುಡಿಯುವ ಉಗುರುಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪನ್ನು ಸೇರಿಸಿದರೆ, ಅದರ ರುಚಿ ಮತ್ತು ಅದರ ಪ್ರಯೋಜನ ದ್ವಿಗುಣಗೊಳ್ಳುತ್ತದೆ. ಹಾಗಾದರೆ ಉಪ್ಪು ನೀರನ್ನು ಸೇವಿಸುವುದರಿಂದ ದೇಹಕ್ಕೆ ಲಭಿಸುವ ಪ್ರಯೋಜನಗಳ ಬಗ್ಗೆ ನೋಡೋಣ.
ಆರೋಗ್ಯಕರ ಜೀರ್ಣಕ್ರಿಯೆಗೆ ಸಹಕಾರಿ:
ನೀವು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿದ್ದರೆ, ಉಪ್ಪು ನೀರನ್ನು ಕುಡಿಯಬಹುದು. ಈ ನೀರನ್ನು ಕುಡಿಯುವುದರಿಂದ ಕರುಳಿನ ಚಲನೆಯ ಸುಲಭಗೊಳ್ಳುತ್ತದೆ. ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ . ಅಲ್ಲದೆ ಉಪ್ಪುನೀರು ಹೊಟ್ಟೆಯ ಪಿ.ಹೆಚ್ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.
ಚರ್ಮಕ್ಕೆ ಪ್ರಯೋಜನಕಾರಿ:
ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಉಪ್ಪು ನೀರು ಕುಡಿಯುವುದು ತುಂಬಾ ಒಳ್ಳೆಯದು. ತ್ವಚೆಯ ಮೇಲೆ ಮೊಡವೆಗಳ ಸಮಸ್ಯೆಗಳು ಕಾಣಿಸಿಕೊಂಡರೆ ಪ್ರತಿನಿತ್ಯ ಉಪ್ಪು ನೀರನ್ನು ಸೇವನೆ ಮಾಡಿ, ಇದು ಮೊಡವೆ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ ಹಾಗೂ ಚರ್ಮದಲ್ಲಿ ಸಂಗ್ರಹವಾಗುವ ಕೊಳೆಗಳನ್ನು ನಿವಾರಣೆ ಮಾಡುತ್ತದೆ. ಮಾತ್ರವಲ್ಲದೆ ಉಪ್ಪು ನೀರನ್ನು ಕುಡಿಯುವುದರಿಂದ ಅನೇಕ ಚರ್ಮ ಸಂಬಂದಿ ಸಮಸ್ಯೆಗಳನ್ನು ನಿವಾರಿಸಬಹುದು.
ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ:
ನಿಮ್ಮ ದೇಹಕ್ಕೆ ಜಲಸಂಚಯನವನ್ನು ಒದಗಿಸುವಲ್ಲಿ ಉಪ್ಪು ನೀರು ಪರಿಣಾಮಕಾರಿಯಾಗಿದೆ. ಪ್ರತಿನಿತ್ಯ ನೀವು ಉಪ್ಪು ನೀರನ್ನು ಕುಡಿಯುವುದರಿಂದ ನಿರ್ಜಲೀಕರಣದ ಸಮಸ್ಯೆಯನ್ನು ಹೋಗಲಾಡಿಸಬಹುದು. ಹೌದು ಉಪ್ಪಿನಲ್ಲಿರುವ ಸೋಡಿಯಂ ಮತ್ತು ಮೆಗ್ನೇಸಿಯಂ ಗುಣಗಳು ದೇಹದಲ್ಲಿನ ದ್ರವಾಂಶಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಮತ್ತು ದೇಹಕ್ಕೆ ಜಲಸಂಚಯನವನ್ನು ಒದಗಿಸುತ್ತದೆ.
ಉತ್ತಮ ನಿದ್ರೆಗೆ ಸಹಕಾರಿ:
ಉಪ್ಪು ನೀರನ್ನು ಸೇವನೆ ಮಾಡುವ ಮೂಲಕ ಉತ್ತಮ ನಿದ್ರೆಯನ್ನು ಪಡೆಯಬಹುದು. ಒತ್ತಡದ ಕಾರಣದಿಂದಾಗಿ ಹಲವರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಿರುವಾಗ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಚಿಟಿಕೆ ಉಪ್ಪನ್ನು ಸೇರಿಸಿ ಕುಡಿಯಿರಿ. ಇದು ದೇಹದಲ್ಲಿನ ಆಕ್ಸಿಟೋಸಿನ್ ಹಾರ್ಮೋನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನೀವು ಶಾಂತವಾಗಿರುತ್ತೀರಿ ಮತ್ತು ಇದು ವಿಶ್ರಾಂತಿ ಪಡೆಯಲು ಕೂಡ ಸಹಕಾರಿಯಾಗಿದೆ.
ಇದನ್ನೂ ಓದಿ: ಪ್ರತಿದಿನ ತಲೆನೋವು ಏಕೆ ಬರುತ್ತದೆ? ಅದರ ಹಿಂದಿನ ಕಾರಣ ಇಲ್ಲಿದೆ
ಮೂಳೆಗಳನ್ನು ಆರೋಗ್ಯಕರವಾಗಿಡಲು ಸಹಕಾರಿ:
ಕೀಲು ನೋವಿನ ಸಮಸ್ಯೆ ಇರುವವರಿಗೆ ಉಪ್ಪು ನೀರು ತುಂಬಾ ಪ್ರಯೋಜನಕಾರಿಯಾಗಿದೆ. ಉಪ್ಪಿನಲ್ಲಿ ಕ್ಯಾಲಿಯಂ ಇದ್ದು, ಇದು ಮೂಳೆಯಗಳನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೆ ಉಪ್ಪಿನಲ್ಲಿರುವ ಮೆಗ್ನೇಸಿಯಂ ದೇಹದಲ್ಲಿನ ಊತವನ್ನು ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.
ಗಂಟಲು ನೋವಿಗೆ ಪರಿಹಾರವನ್ನು ನೀಡುತ್ತದೆ:
ನೆಗಡಿ ಮತ್ತು ಕೆಮ್ಮಿನ ಕಾರಣದಿಂದಾಗಿ ಗಂಟಲು ನೋವು ಕಾಣಿಸಿಕೊಂಡರೆ ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಕುಡಿಯಿರಿ ಅಥವಾ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಇದು ನಿಮಗೆ ಗಂಟಲು ನೋವಿನಿಂದ ಪರಿಹಾರವನ್ನು ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: