ವೈದ್ಯರು ಬಿಳಿ, ವಕೀಲರು ಕಪ್ಪು ಕೋಟು ಧರಿಸೋದೇಕೆ ಗೊತ್ತಾ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ನೀವು ನ್ಯಾಯಾಲಯದ ಕಡೆಗೆ ಹೋಗಾದ ವಕೀಲರು ಕಪ್ಪು ಕೋಟುಗಳನ್ನು ಧರಿಸಿರುವುದನ್ನು ಹಾಗೇಯೇ ಆಸ್ಪತ್ರೆಗಳಿಗೆ ಹೋದಾಗ ಅಲ್ಲಿನ ವೈದ್ಯರು ಮತ್ತು ನರ್ಸ್‌ಗಳು ಬಿಳಿ ಬಣ್ಣದ ಕೋಟುಗಳನ್ನು ಧರಿಸಿರುವುದನ್ನು ಗಮನಿಸಿರುತ್ತೀರಿ ಅಲ್ವಾ. ವಕೀಲರು ಮತ್ತು ನ್ಯಾಯಾಧೀಶರು ಯಾವಾಗಲೂ ಕಪ್ಪು ಕೋಟುಗಳನ್ನು ಹಾಗೂ ವೈದ್ಯರು ಯಾವಾಗಲೂ ಬಿಳಿ ಕೋಟುಗಳನ್ನೇ ಏಕೆ ಧರಿಸುತ್ತಾರೆ ಎಂಬ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಇವರು ಈ ನಿರ್ದಿಷ್ಟ ಬಣ್ಣದ ಕೋಟು ಧರಿಸುವುದ ಹಿಂದೆಯೂ ಒಂದು ಕಾರಣವಿದೆಯಂತೆ. ಅದೇನೆಂಬುದನ್ನು ನೋಡೋಣ ಬನ್ನಿ.

ಸಾಮಾನ್ಯವಾಗಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಒಂದೇ ರೀತಿಯ ಯುನಿಫಾರ್ಮ್ ಧರಿಸುತ್ತಾರೆ. ಅದೇ ರೀತಿ ಎಲ್ಲಾ ವೈದ್ಯರು (Doctors) ಬಿಳಿ (white) ಬಣ್ಣದ ಹಾಗೂ ಲಾಯರ್‌ಗಳು (Lawyers) ಕಪ್ಪು ಬಣ್ಣದ ಕೋಟುಗಳನ್ನು ಧರಿಸುವುದನ್ನು ನೋಡಿರುತ್ತೀರಿ ಅಲ್ವಾ. ಯಾಕೆ ವಕೀಲರು ಮತ್ತು ನ್ಯಾಯಾಧೀಶರು ಯಾವಾಗಲೂ ಕಪ್ಪು ಬಣ್ಣದ ಕೋಟುಗಳನ್ನೇ ಧರಿಸುತ್ತಾರೆ. ವೈದ್ಯರು ಏಕೆ ಬಿಳಿ ಬಣ್ಣದ ಕೋಟನ್ನು ಮಾತ್ರ ಧರಿಸುತ್ತಾರೆ, ಇದರ ಹಿಂದೆ ಏನಾದರೂ ಕಾರಣಗಳಿದೆಯಾ, ಈ ಎರಡು ವೃತ್ತಿಗಳಿಗೆ ಈ ನಿರ್ದಿಷ್ಟ ಬಣ್ಣದ ಕೋಟನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬ ಪ್ರಶ್ನೆ ನಿಮ್ಮ ಮನದಲ್ಲೂ ಮೂಡಿದ್ಯಾ? ಹಾಗಾದ್ರೆ ಡಾಕ್ಟರ್ಸ್ ಹಾಗೂ ಲಾಯರ್‌ಗಳು ಏಕೆ ನಿರ್ದಿಷ್ಟ ಬಣ್ಣದ ಕೋಟುಗಳನ್ನೇ ಧರಿಸುತ್ತಾರೆ ಎಂಬುದರ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.
ವಕೀಲರು ಕಪ್ಪು ಬಣ್ಣದ ಕೋಟು ಏಕೆ ಧರಿಸುತ್ತಾರೆ?
ವಾಸ್ತವವಾಗಿ, ಕಪ್ಪು ಬಣ್ಣವನ್ನು ನ್ಯಾಯ, ಅಧಿಕಾರ ಮತ್ತು ಘನತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಕೀಲರು ಕಪ್ಪು ಕೋಟು ಧರಿಸಿ ನ್ಯಾಯಾಲಯವನ್ನು ಪ್ರವೇಶಿಸಿದಾಗ, ಅದು ಅವರ ಕೆಲಸದ ಗಂಭೀರತೆ ಮತ್ತು ನಿಷ್ಪಕ್ಷಪಾತತೆಯನ್ನು ಪ್ರತಿಬಿಂಬಿಸುತ್ತದೆ. ಈ ಬಣ್ಣವು ನ್ಯಾಯದಲ್ಲಿ ಯಾವುದೇ ಪಕ್ಷಪಾತವಿರುವುದಿಲ್ಲ ಮತ್ತು ನಿರ್ಧಾರಗಳನ್ನು ಸಂಪೂರ್ಣ ನಿಷ್ಪಕ್ಷಪಾತವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಸೂಚಿಸುತ್ತದೆ. ನ್ಯಾಯದ ದೃಷ್ಟಿಯಿಂದ ವಕೀಲರು ಮತ್ತು ನ್ಯಾಯಾಧೀಶರು ಕರ್ತವ್ಯ ನಿರತರಾಗಿದ್ದಾಗ ಕಪ್ಪು ಕೋಟುಗಳನ್ನು ಧರಿಸುತ್ತಾರೆ.
ಇನ್ನೊಂದು ಸಂಗತಿ ಏನಪ್ಪಾ ಅಂದ್ರೆ, ಕಪ್ಪು ಬಣ್ಣವು ಯಾವುದೇ ಕಲೆಗಳನ್ನು ಸುಲಭವಾಗಿ ತೋರಿಸುವುದಿಲ್ಲ, ಇದು ವಕೀಲರನ್ನು ಯಾವಾಗಲೂ ವೃತ್ತಿಪರರಾಗಿ ಕಾಣುವಂತೆ ಮಾಡುತ್ತದೆ. ಒಂದು ರೀತಿಯಲ್ಲಿ, ಇದು ಅವರ ವೈಯಕ್ತಿಕ ಮತ್ತು ವೃತ್ತಿಪರ ಇಮೇಜ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ವಕೀಲರು ಕಪ್ಪು ಕೋಟು ಧರಿಸುವುದರ ಹಿಂದಿನ ಇತಿಹಾಸದ ಬಗ್ಗೆ ಹೇಳುವುದಾದರೆ, 17 ನೇ ಶತಮಾನದಲ್ಲಿ ಬ್ರಿಟಿಷ್ ರಾಜ ಚಾರ್ಲ್ಸ್ II ರ ಮರಣದ ನಂತರ, ಅವರ ಸಾವಿಗೆ ಸಂತಾಪ ಸೂಚಿಸಲು ವಕೀಲರು ಮತ್ತು ನ್ಯಾಯಾಧೀಶರು ಕಪ್ಪು ಬಟ್ಟೆಗಳನ್ನು ಧರಿಸಲು ಪ್ರಾರಂಭಿಸಿದರು. ಆದರೆ ಕ್ರಮೇಣ ಅದು ಒಂದು ಸಂಪ್ರದಾಯವಾಗಿ ಮುಂದುವರೆಯಿತು.
ಇದನ್ನೂ ಓದಿ: ಮನೆಯಲ್ಲಿ ಈ ಗಿಡಗಳನ್ನು ನೆಟ್ಟರೆ ಸೊಳ್ಳೆಗಳ ಕಾಟವೇ ಇರೋಲ್ಲ ನೋಡಿ
ವೈದ್ಯರು ಬಿಳಿ ಬಣ್ಣದ ಕೋಟುಗಳನ್ನೇ ಏಕೆ ಧರಿಸುತ್ತಾರೆ?
ವೈದ್ಯರು ತಮ್ಮ ಕರ್ತವ್ಯದ ಸಮಯದಲ್ಲಿ ಬಿಳಿ ಕೋಟುಗಳನ್ನು ಧರಿಸುತ್ತಾರೆ. ಇದರ ಹಿಂದಿನ ಕಾರಣ ಏನಂದ್ರೆ, ಬಿಳಿ ಬಣ್ಣ ಶುದ್ಧತೆ, ಶುಚಿತ್ವ ಮತ್ತು ನಂಬಿಕೆಯ ಸಂಕೇತವಾಗಿದೆ. ಮತ್ತು ವೈದ್ಯರ ಬಿಳಿ ಕೋಟು ಶುದ್ಧತೆ, ಶುಚಿತ್ವ ಮತ್ತು ಪ್ರಾಮಾಣಿಕತೆಯನ್ನು ಪ್ರತಿನಿಧಿಸುತ್ತದೆ. ರೋಗಿಗಳು ಬಿಳಿ ಕೋಟು ಧರಿಸಿದ ವೈದ್ಯರನ್ನು ನೋಡಿದಾಗ, ಡಾಕ್ಟರ್ ತಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಾರೆ ಎಂಬ ವಿಶ್ವಾಸ ಅವರಲ್ಲಿ ಮೂಡುತ್ತದೆ. ಬಿಳಿ ಬಣ್ಣದ ಪ್ರಭಾವ ಎಷ್ಟು ಆಳವಾಗಿದೆಯೆಂದರೆ, ಬಿಳಿ ಕೋಟು ಧರಿಸಿದ ವೈದ್ಯರನ್ನು ನೋಡಿದಾಗ ರೋಗಿಗಳು ಮಾನಸಿಕವಾಗಿ ಶಾಂತಿ ಮತ್ತು ಭದ್ರತೆಯನ್ನು ಅನುಭವಿಸುತ್ತಾರಂತೆ.
ವೈದ್ಯರು ಧರಿಸುವ ಬಿಳಿ ಕೋಟುಗಳ ಇತಿಹಾಸವನ್ನು ನೋಡುವುದಾದರೆ, 19 ನೇ ಶತಮಾನದ ಮಧ್ಯಭಾಗದಲ್ಲಿ, ವೈದ್ಯಕೀಯ ವಿಜ್ಞಾನವು ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದಾಗ, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಲು ಪ್ರಾರಂಭವಾದಾಗ ವೈದ್ಯರು ಬಿಳಿ ಕೋಟುಗಳನ್ನು ಧರಿಸಲು ಪ್ರಾರಂಭಿಸಿದರು. ಬಿಳಿ ಬಣ್ಣದ ಮೇಲೆ ಕಲೆಗಳು ಸುಲಭವಾಗಿ ಗೋಚರಿಸುತ್ತವೆ, ಇದು ವೈದ್ಯರಿಗೆ ಸ್ವಚ್ಛತೆ ಮತ್ತು ನೈರ್ಮಲ್ಯದ ಬಗ್ಗೆ ಆಗಾಗ್ಗೆ ನೆಪಿಸುತ್ತದೆ. ಬಿಳಿ ಬಣ್ಣ ಆರೋಗ್ಯ ಮತ್ತು ಶುದ್ಧತೆಯನ್ನು ಸಂಕೇತಿಸುತ್ತದೆ. ಆಸ್ಪತ್ರೆಗಳು ಮತ್ತು ಚಿಕಿತ್ಸಾಲಯಗಳಲ್ಲಿ ಶುಚಿತ್ವದ ಮಟ್ಟವು ಬಹಳ ಮುಖ್ಯ, ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು ಬಿಳಿ ಕೋಟುಗಳನ್ನು ಧರಿಸಲಾಗುತ್ತದೆ. ಇದು ವೈದ್ಯರಿಗೆ ನೈರ್ಮಲ್ಯದ ಮಹತ್ವವನ್ನು ನೆನಪಿಸುತ್ತದೆ. ಹೆಚ್ಚುವರಿಯಾಗಿ, ಬಿಳಿ ಕೋಟ್ ಧರಿಸುವುದರಿಂದ ವೈದ್ಯರು ವೃತ್ತಿಪರ ಮತ್ತು ವಿಶ್ವಾಸಾರ್ಹರಾಗಿ ಕಾಣುತ್ತಾರೆ, ಇದು ರೋಗಿಗಳ ವಿಶ್ವಾಸವನ್ನು ಗಳಿಸಲು ಸಹಾಯ ಮಾಡುತ್ತದೆ.
ಹೀಗೆ ವಕೀಲರ ಕಪ್ಪು ಕೋಟು ಕಟ್ಟುನಿಟ್ಟಿನ ಮತ್ತು ನಿಷ್ಪಕ್ಷಪಾತತೆಯನ್ನು ಸಂಕೇತವಾದರೆ, ವೈದ್ಯರ ಬಿಳಿ ಕೋಟು ನಂಬಿಕೆ ಮತ್ತು ಶುದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








