
ಪ್ರತಿ ಮನೆಯಲ್ಲೂ ಜಗಳ ಎನ್ನುವಂತಹದ್ದು ನಡೆದೇ ನಡೆಯುತ್ತದೆ. ಅದರಲ್ಲೂ ಗಂಡ ಹೆಂಡತಿಯ ಜಗಳ (Parents Fight) ಸಾಮಾನ್ಯ. ಇವರ ಈ ಮನಸ್ತಾಪ, ಜಗಳ ಮಿತಿ ಮೀರಿದರೆ ಮನೆಯ ವಾತಾವರಣ ಕೆಟ್ಟು ಹೋಗುವುದರ ಜೊತೆಗೆ ಇದು ಮನೆಯ ಮಕ್ಕಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಮಕ್ಕಳ ಮನಸ್ಸು ಎನ್ನುವಂತಹದ್ದು ತುಂಬಾನೇ ಸೂಕ್ಷ್ಮವಾದದ್ದು, ಹೀಗಿರುವಾಗ ಈ ತಂದೆ-ತಾಯಿ ಜಗಳವಾಡಿದರೆ, ಇದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ, ಮನಸ್ಸಿಗೆ ಇದರಿಂದ ಸಿಕ್ಕಾಪಟ್ಟೆ ನೋವು ಉಂಟು ಮಾಡುತ್ತದೆ. ಹೀಗಿರುವಾಗ ಪೋಷಕರ ಜಗಳ (Effects Of Parents Fighting On Children) ಮಕ್ಕಳ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯಿರಿ.
ಭಾವನಾತ್ಮಕ ಒತ್ತಡವನ್ನು ಸೃಷ್ಟಿಸುತ್ತದೆ: ಮಕ್ಕಳು ತುಂಬಾ ಸೂಕ್ಷ್ಮ ಸ್ವಭಾವದವರು. ಪೋಷಕರಿಬ್ಬರಿ ಪ್ರತಿ ಬಾರಿಯೂ ಜಗಳವಾಡಿದಾಗ ಅವರ ಮನಸ್ಸು ನೋಯುತ್ತದೆ. ಮಕ್ಕಳು ಅಂತಹ ವಾತಾವರಣದಲ್ಲಿದ್ದಾಗ ಹೆಚ್ಚು ಭಯಪಡುತ್ತಾರೆ. ಅವರಲ್ಲಿ ಆತಂಕ, ದುಃಖ ಮತ್ತು ಅಭದ್ರತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಪೋಷಕರ ಮೇಲಿನ ಕೋಪ: ಮಕ್ಕಳು ತಮ್ಮ ಹೆತ್ತವರು ಪದೇ ಪದೇ ಜಗಳವಾಡುವುದನ್ನು ನೋಡಿದಾಗ ಇದಕ್ಕೆಲ್ಲಾ ಇವರೇ ಕಾರಣ ಎಂದು ಅವರು ತಮ್ಮ ತಾಯಿ ಅಥವಾ ತಂದೆ ಇಬ್ಬರಲ್ಲಿ ಒಬ್ಬರ ಮೇಲೆ ಕೋಪ ಮತ್ತು ಧ್ವೇಷ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ. ಇದು ಅವರ ಭಾವನಾತ್ಮಕ ಬಾಂಧವ್ಯವನ್ನೂ ದುರ್ಬಲಗೊಳಿಸುತ್ತದೆ.
ಮಾನಸಿಕ ಆರೋಗ್ಯದ ಮೇಲೆ ಪರಿಣಾಮ: ನಿರಂತರ ಜಗಳ ಮತ್ತು ವಾದಗಳ ವಾತಾವರಣದಲ್ಲಿ ಬೆಳೆಯುವ ಮಕ್ಕಳು ಖಿನ್ನತೆ, ಆತಂಕದಂತಹ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ಜೊತೆಗೆ ತಂದೆ-ತಾಯಿಯ ಈ ಜಗಳವನ್ನು ನೋಡಿ ಅವರಲ್ಲಿ ಆತ್ಮವಿಶ್ವಾಸದ ಕೊರೆತೆಯೂ ಸಹ ಕಾಣಿಸಿಕೊಳ್ಳುತ್ತದೆ.
ಆತ್ಮ ವಿಶ್ವಾಸದ ಮೇಲೆ ಪರಿಣಾಮ: ಪೋಷಕರ ನಡುವೆ ಆಗಾಗ್ಗೆ ಜಗಳಗಳು ನಡೆದರೆ ಈ ಜಗಳಗಳಿಂದಾಗಿ ಮಕ್ಕಳಲ್ಲಿ ಅಭದ್ರತೆ, ಅಪರಾಧಿ ಭಾವನೆ ಉಂಟಾಗುತ್ತದೆ. ನಂತರದಲ್ಲಿ ಇದು ಅವರ ಸ್ವಾಭಿಮಾನಕ್ಕೆ ಧಕ್ಕೆಯನ್ನು ಉಂಟು ಮಾಡುತ್ತದೆ ಅಲ್ಲದೆ ಅವರ ಆತ್ವ ವಿಶ್ವಾಸದ ಮೇಲೂ ಪರಿಣಾಮ ಬೀರುತ್ತದೆ.
ತಪ್ಪು ನಡವಳಿಕೆಯ ಅನುಕರಣೆ: ಮಕ್ಕಳು ತಾವು ನೋಡುವ ವಿಷಯಗಳಿಂದ ಕಲಿಯುತ್ತಾರೆ ಎಂದು ಹೇಳುತ್ತಾರೆ. ಒಂದು ವೇಳೆ ತಂದೆ ತಾಯಿ ಜಗಳವಾಡುವುದನ್ನು ನೋಡಿದರೆ, ಮಕ್ಕಳು ಕೂಡಾ ಜೋರು ಧ್ವನಿಯಲ್ಲಿ ಮಾತನಾಡುವ, ಜಗಳವಾಡುವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬಹುದು. ಇದು ಭವಿಷ್ಯದಲ್ಲಿ ಅವರ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ತಂದೆಯಾದವನು ತನ್ನ ಮಗಳ ಮುಂದೆ ಈ ಕೆಲಸಗಳನ್ನು ಮಾಡಲೇಬಾರದಂತೆ
ಸಂಘರ್ಷಗಳನ್ನು ಹೇಗೆ ಪರಿಹರಿಸಬೇಕೆಂದು ಕಲಿಯುವುದಿಲ್ಲ: ಮಕ್ಕಳು ತಮ್ಮ ಪೋಷಕರು ಸಮಸ್ಯೆಗಳನ್ನು ಶಾಂತವಾಗಿ ಪರಿಹರಿಸುವುದನ್ನು ನೋಡದೆ ಪ್ರತಿ ಬಾರಿಯೂ ಅವರ ಜಗಳಗಳನ್ನೇ ನೋಡಿದರೆ, ಅವರೂ ಕೂಡಾ ಅದೇ ರೀತಿ ಕೋಪ, ಜಗಳ ಮಾಡಿಕೊಳ್ಳುವುದನ್ನೇ ರೂಢಿಸಿಕೊಳ್ಳುತ್ತಾರೆ. ಮತ್ತು ಸಂಘರ್ಷ, ಜಗಳ ಭಿನ್ನಾಭಿಪ್ರಾಯಗಳನ್ನು ಸಕಾರಾತ್ಮಕ ರೀತಿಯಲ್ಲಿ ಹೇಗೆ ಪರಿಹರಿಸಬೇಕು ಅವರಿಗೆ ತಿಳಿಯುವುದಿಲ್ಲ.
ಶಿಕ್ಷಣ ಮತ್ತು ಆರೋಗ್ಯದ ಮೇಲೆ ಪರಿಣಾಮ: ಮನೆಯಲ್ಲಿ ಪೋಷಕರ ನಡುವಿನ ನಿರಂತರ ಜಗಳಗಳು ಮಕ್ಕಳನ್ನು ಭಾವನಾತ್ಮಕವಾಗಿ ಕುಗ್ಗಿಸುತ್ತವೆ. ಇದು ಓದು ಮತ್ತು ಆರೋಗ್ಯ ಎರಡರ ಮೇಲೂ ಪರಿಣಾಮವನ್ನು ಬೀರುತ್ತದೆ. ಒಂದೆಡೆ ಓದಿನ ಮೇಲೂ ಗಮನಹರಿಸಲು ಸಾಧ್ಯವಾಗುವುದಿಲ್ಲ. ಇನ್ನೊಂದೆಡೆ ಸಣ್ಣ ವಯಸ್ಸಿನಲ್ಲೇ ಒತ್ತಡ, ಖಿನ್ನತೆ ಇತ್ಯಾದಿ ಮನಸಿಕ ಸಮಸ್ಯೆಯನ್ನು ಉಂಟು ಮಾಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಪೋಷಕರು ಮಕ್ಕಳ ಎದುರು ಜಗಳವಾಡಲೇಬಾರದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ