ರೋಗಗಳು ನಿಮ್ಮನ್ನು ಆವರಿಸಬಾರದೆಂದರೆ ತಪ್ಪದೆ ಈ ಕೆಲವು ಅಭ್ಯಾಸಗಳನ್ನು ಪಾಲಿಸಿ
ಅನಾರೋಗ್ಯಕ್ಕೆ ತುತ್ತಾಗಿ ಪದೇ ಪದೇ ಆಸ್ಪತ್ರೆಗೆ ಹೋಗುವಂತಹ ಪರಿಸ್ಥಿತಿ ಬರಲೇಬಾರದು ಎಂದು ಎಲ್ಲರೂ ಬೇಡಿಕೊಳ್ಳುತ್ತಾರೆ. ಆದರೆ ಕೆಲವೊಂದು ಅಭ್ಯಾಸಗಳ ಕಾರಣ ನಾವು ಪದೇ ಪದೇ ರೋಗಕ್ಕೆ ತುತ್ತಾಗುತ್ತಿರುತ್ತೇವೆ. ಹೀಗಿರುವಾಗ ಈ ಕೆಲವೊಂದಿಷ್ಟು ಆರೋಗ್ಯಕರ ಜೀವನಶೈಲಿಯನ್ನು ನೀವು ಪಾಲಿಸುವ ಮೂಲಕ ಆರೋಗ್ಯಕರ ಜೀವನವನ್ನು ನಡೆಸಬಹುದು. ಆ ಅಭ್ಯಾಸಗಳು ಯಾವುದೆಂಬುದನ್ನು ನೋಡೋಣ ಬನ್ನಿ.

ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ಎಂದು ಹೇಳುವಂತೆ ನಿಮ್ಮ ಜೀವನಶೈಲಿಯಲ್ಲಿ (Lifestyle) ಒಂದಷ್ಟು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಆಸ್ಪತ್ರೆಗೆ ಕಾಲಿಡುವುದನ್ನು ತಪ್ಪಿಸಬಹುದು. ರೋಗನಿರೋಧಕ ಶಕ್ತಿಯ ಕೊರತೆ, ಅನಾರೋಗ್ಯಕರ ಆಹಾರ ಪದ್ಧತಿ, ಅನಾರೋಗ್ಯಕರ ಜೀವನಶೈಲಿಯ ಪಾಲನೆಯ ಕಾರಣದಿಂದ ಹಲವರು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗಿ, ಆಸ್ಪತ್ರೆಗೆ ರಾಶಿ ರಾಶಿ ದುಡ್ಡು ಸುರಿಯುತ್ತಾರೆ. ಹೀಗಿರುವಾಗ ದೈನಂದಿನ ಜೀವನಶೈಲಿಯಲ್ಲಿ (Tips for healthy life) ಒಂದಷ್ಟು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀವು ನಿಮ್ಮನ್ನು ಅನಾರೋಗ್ಯಕ್ಕೆ ತುತ್ತಾಗದಂತೆ ನೋಡಿಕೊಳ್ಳಬಹುದು. ಹಾಗಿದ್ರೆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.
ಆರೋಗ್ಯಕರ ಜೀವನಕ್ಕಾಗಿ ನೀವು ಅಳವಡಿಸಿಕೊಳ್ಳಬೇಕಾದ ಅಭ್ಯಾಸಗಳಿವು:
ನಿದ್ರೆ- ರೋಗನಿರೋಧಕ ಶಕ್ತಿಗಾಗಿ: ಆರೋಗ್ಯಕರವಾಗಿರಲು ಅನುಸರಿಸಬೇಕಾದ ಮೊದಲ ಸಲಹೆಯೆಂದರೆ ಉತ್ತಮ ನಿದ್ರೆ ಪಡೆಯುವುದು. ಪ್ರತಿರಾತ್ರಿ ಬೇಗ ಮಲಗಿ, ಬೇಗ ಏಳಿ, ಜೊತೆಗೆ ಉತ್ತಮವಾದ ಗುಣಮಟ್ಟದ ನಿದ್ರೆಯನ್ನು ಪಡೆಯಿರಿ. ಏಕೆಂದರೆ ನೀವು ಸರಿಯಾಗಿ ನಿದ್ರೆ ಮಾಡದೆ ಹೋದರೆ ನಿಮ್ಮ ರೋಗನಿರೋಧಕ ಶಕ್ತಿಯೂ ಕುಂಠಿತಗೊಳ್ಳುತ್ತದೆ. ಇದರಿಂದ ನೀವು ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತೀರಿ.
ಬೆಚ್ಚಗಿನ ನೀರು- ವಿಷಯವನ್ನು ಹೊರ ಹಾಕಲು: ಪ್ರತಿದಿನ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವನೆ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಏಕೆಂದರೆ ಬೆಚ್ಚಗಿನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮತ್ತು ಇದು ದೇಹದಿಂದ ವಿಷವನ್ನು ಹೊರ ಹಾಕಲು ಸಹಕಾರಿ. ಈ ಅಭ್ಯಾಸದಿಂದ ನೀವು ಆರೋಗ್ಯವಂತರಾಗಿರುತ್ತೀರಿ.
ಧ್ಯಾನ-ಮಾನಸಿನ ಶಾಂತಿಗಾಗಿ: ಪ್ರತಿದಿನ ಹತ್ತು ನಿಮಿಷಗಳ ಕಾಲ ಧ್ಯಾನ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಒತ್ತಡದ ಹಾರ್ಮೋನುಗಳು ನಿಯಂತ್ರಣದಲ್ಲಿರುತ್ತದೆ, ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಈ ಅಭ್ಯಾಸ ನಿಮ್ಮ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.
ನಡಿಗೆ-ಸಕ್ಕರೆ ನಿಯಂತ್ರಣ: ಊಟದ ನಂತರ ಕನಿಷ್ಠ ಹತ್ತು ನಿಮಿಷಗಳ ಕಾಲ ನಡೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಈ ರೀತಿ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುವುದನ್ನು ತಡೆಯಬಹುದು. ಹೀಗೆ ಸಕ್ಕರೆಯ ಮಟ್ಟ ನಿಯಂತ್ರದಲ್ಲಿದ್ದರೆ ಮಧುಮೇಹ ಕಾಯಿಲೆಯಿಂದ ದೂರವಿರಬಹುದು. ಜೊತೆಗೆ ನಡೆಯುವುದರಿಂದ ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ.
ವ್ಯಾಯಾಮ- ಒಟ್ಟಾರೆ ಆರೋಗ್ಯಕ್ಕಾಗಿ: ನೀವು ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಬೇಕು. ವಾಕಿಂಗ್, ಜಾಗಿಂಗ್, ಈಜು, ನೃತ್ಯದಂತಹ ಯಾವುದೇ ಚಟುವಟಿಕೆಗಳನ್ನು ಮಾಡುವುದು ಒಟ್ಟಾರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಲ್ಲದೆ ಇದು ದೇಹಕ್ಕೆ ಶಕ್ತಿಯನ್ನು ಒದಗಿಸುವುದರ ಜೊತೆಗೆ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ.
ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ 5 ಗಂಟೆಗೆ ಏಳುವುದರಿಂದ ಏನಾಗುತ್ತೆ ಗೊತ್ತಾ?
ಆರೋಗ್ಯಕರ ಆಹಾರ: ನೀವು ತಿನ್ನುವಂತಹ ಆಹಾರವೂ ಸಹ ನಿಮ್ಮ ಆರೋಗ್ಯ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಯಾವಾಗಲೂ ಆರೋಗ್ಯಕರ ಆಹಾರವನ್ನೇ ಸೇವನೆ ಮಾಡಬೇಕು. ಹಣ್ಣು, ತರಕಾರಿಗಳನ್ನು ಸೇವನೆ ಮಾಡುವುದರ ಜೊತೆಗೆ ಡ್ರೈ ಫ್ರೂಟ್ಸ್, ನಟ್ಸ್, ದ್ವಿದಳ ಧಾನ್ಯ, ಮೊಟ್ಟೆ, ಮೀನು, ಮೊಳಕೆಯೊಡೆದ ಕಾಳುಗಳು ಇತ್ಯಾದಿ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಹಾಗೂ ಸಂಸ್ಕರಿಸಿದ, ಜಂಕ್, ಎಣ್ಣೆಯಲ್ಲಿ ಕರಿದ ಆಹಾರಗಳ ಸೇವನೆಯನ್ನು ಸಾಧ್ಯವಾದಷ್ಟು ತಪ್ಪಿಸಿ.
ಹೆಚ್ಚಿನ ಸಲಹೆ:ನೀವು ಪ್ರತಿದಿನ ತಣ್ಣೀರಿನಲ್ಲಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನೀವು ದಿನವಿಡೀ ಚಟುವಟಿಕೆಯಿಂದ ಇರುತ್ತೀರಿ. ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ದಿನಕ್ಕೆರಡು ಬಾರಿ ಹಲ್ಲುಜ್ಜುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಅದೇ ರೀತಿ ಊಟಕ್ಕೆ ಮೊದಲು ಮತ್ತು ಶೌಚಾಲಯಕ್ಕೆ ಹೋಗಿ ಬಂದ ನಂತರ ತಪ್ಪದೆ ಕೈ ತೊಳೆಯಿರಿ. ಹೀಗೆ ಮಾಡುವುದರಿಂದ ನೀವು ಸೋಂಕುಗಳಿಂದ ದೂರವಿರಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








